Tuesday, May 26, 2020

೩೦೦ ಮಂದಿ ಕಡುಬಡವರಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ಛಲವಾದಿ ಮಹಾಸಭಾ ವತಿಯಿಂದ ಕಡುಬಡವರಿಗೆ ದಿನಸಿ ಸಾಮಗ್ರಿ ವಿತರಿಸಲಾಯಿತು. 
ಭದ್ರಾವತಿ, ಮೇ. ೨೬: ಕೊರೋನಾ ವೈರಸ್ ಪರಿಣಾಮ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಛಲವಾದಿ ಮಹಾಸಭಾ ಮುಂದಾಗಿದ್ದು, ಸುಮಾರು ೩೦೦ ಮಂದಿ ಕಡುಬಡವರಿಗೆ ದಿನಸಿ ಸಾಮಗ್ರಿ ವಿತರಿಸಲಾಯಿತು.
ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತ ಮನೋಹರ್, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಚಾಲನೆ ನೀಡಿದರು.
  ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್, ಮುಖಂಡರಾದ ಜಯರಾಜ್, ಇ.ಪಿ ಬಸವರಾಜ್, ಮಹೇಶ್, ಆದಿತ್ಯಶಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಿವೃತ್ತ ಶಿಕ್ಷಕಿ, ಮಾಜಿ ನಗರಸಭೆ ಸದಸ್ಯೆ ಎ.ಎಸ್ ಜಯಮ್ಮ ನಿಧನ

ಎ.ಎಸ್ ಜಯಮ್ಮ 
ಭದ್ರಾವತಿ, ಮೇ. ೨೬: ಜನ್ನಾಪುರ ಎನ್‌ಟಿಬಿ ರಸ್ತೆ ನಿವಾಸಿ ದಿವಂಗತ ಎಚ್.ಎಸ್ ಗಂಗಾಧರಗೌಡರವರ ಪತ್ನಿ ನಿವೃತ್ತ ಶಿಕ್ಷಕಿ ಎ.ಎಸ್. ಜಯಮ್ಮ(೭೮) ನಿಧನ ಹೊಂದಿದರು.
ಎ.ಎಸ್ ಜಯಮ್ಮ ಈ ಹಿಂದೆ ನಗರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಮೂವರು, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು- ಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಎಂಪಿಎಂ ಬ್ಯಾಕ್‌ಲಾಗ್ ಉದ್ಯೋಗಿಗಳನ್ನು ಖಾಯಂಗೊಳಿಸಿ ಸೇವಾ ಭದ್ರತೆ ನೀಡಿ

ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ 

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬ್ಯಾಕ್‌ಲಾಗ್(ಎಸ್.ಸಿ/ಎಸ್.ಟಿ) ಉದ್ಯೋಗಿಗಳಿಗೆ ವೇತನ ಪರಿಷ್ಕರಿಸಿ ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿ ನಿಯೋಜನೆಗೊಳಿಸಿ ಖಾಯಂ ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಮಂಗಳವಾರ ತಹಸೀಲ್ದಾರ್ ಶಿವಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಮೇ. ೨೬: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬ್ಯಾಕ್‌ಲಾಗ್(ಎಸ್.ಸಿ/ಎಸ್.ಟಿ) ಉದ್ಯೋಗಿಗಳಿಗೆ ವೇತನ ಪರಿಷ್ಕರಿಸಿ ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿ ನಿಯೋಜನೆಗೊಳಿಸಿ ಖಾಯಂ ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಮಂಗಳವಾರ ತಹಸೀಲ್ದಾರ್ ಶಿವಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಬ್ಯಾಕ್‌ಲಾಗ್ ಹುದ್ದೆಗಳು ನೇರ ನೇಮಕಾತಿಯಾಗಿದ್ದು, ಕೆಲಸಕ್ಕೆ ಸೇರಿದ ದಿನದಿಂದ ಪೂರ್ಣ ಪ್ರಮಾಣದ ಮೂಲವೇತನ ಮತ್ತು ಇತರೆ ಭತ್ಯೆಗಳನ್ನು ಪಡೆಯಲು ಉದ್ಯೋಗಿಗಳು ಅರ್ಹರಾಗಿರುತ್ತಾರೆ. ಆದರೆ ಬ್ಯಾಕ್‌ಲಾಗ್ ನಿಯಮಗಳನ್ನು ಉಲ್ಲಂಘಸಿ ಕಾರ್ಖಾನೆ ಆಡಳಿತ ಮಂಡಳಿ ೨೦೦೮ರಲ್ಲಿ ನೇಮಕಗೊಂಡಿರುವ ಉದ್ಯೋಗಿಗಳಿಗೆ ತರಬೇತಿ ನಿಗದಿಪಡಿಸಿ ಶಿಷ್ಯ ವೇತನ ನೀಡುವ ಮೂಲಕ ಅನ್ಯಾಯವೆಸಗಿದೆ. ಅಲ್ಲದೆ ತರಬೇತಿ ಮುಗಿದ ನಂತರ ಅತ್ಯಂತ ಕನಿಷ್ಠ ಮೂಲ ವೇತನ ನಿಗದಿಪಡಿಸಿದೆ. ಕೆಲಸಕ್ಕೆ ಸೇರಿದ ದಿನದಿಂದ ಇದುವರೆಗೂ ಯಾವುದೇ ರೀತಿಯ ವೇತನ ಹೆಚ್ಚಳವಾಗಿಲ್ಲ. ಯಾವುದೇ ಭಡ್ತಿ ಸಹ ದೊರೆತ್ತಿಲ್ಲ. ೨೦೧೨ ಮತ್ತು ೨೦೧೭ರ ವೇತನ ಒಪ್ಪಂದಗಳು ಸಹ ಆಗಿರುವುದಿಲ್ಲ ಎಂದು ಉದ್ಯೋಗಿಗಳು ಅಳಲು ವ್ಯಕ್ತಪಡಿಸಿದರು. 
ಈ ನಡುವೆ ಕಾರ್ಖಾನೆಯನ್ನು ನಷ್ಟದ ನೆಪ್ಪವೊಡ್ಡಿ ರಾಜ್ಯ ಸರ್ಕಾರ ಖಾಸಗಿಕರಣಗೊಳಿಸಲು ಮುಂದಾಗಿ ಉದ್ಯೋಗಿಗಳಿಗೆ ವಿಆರ್‌ಎಸ್ ಮತ್ತು ವಿಎಸ್‌ಎಸ್ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಸುಮಾರು ೮೦೦ಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂ ನಿವೃತ್ತಿ ಹೊಂದಿರುತ್ತಾರೆ. ಆದರೆ ೧೧೨ ಬ್ಯಾಕ್‌ಲಾಗ್ ಉದ್ಯೋಗಿಗಳು ಕನಿಷ್ಠ ೧೦ ವರ್ಷ ಸೇವಾವಧಿ ಪೂರ್ಣಗೊಳಿಸಿರುವುದಿಲ್ಲ. ಸುಮಾರು ೧೦ ರಿಂದ ೨೦ ವರ್ಷ ಸೇವಾವಧಿ ಇದ್ದು ಈ ಹಿನ್ನಲೆಯಲ್ಲಿ ಸ್ವಯಂ ನಿವೃತ್ತಿ ಪಡೆದಿರುವುದಿಲ್ಲ. ತಕ್ಷಣ ಬ್ಯಾಕ್‌ಲಾಗ್ ಉದ್ಯೋಗಿಗಳನ್ನು ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿ ನಿಯೋಜನೆಗೊಳಿಸಿ ಉದ್ಯೋಗಿಗಳಿಗೆ ವೇತನ ಪರಿಷ್ಕರಿಸಬೇಕೆಂದು ಒತ್ತಾಯಿಸಿದರು. 
ಎಂಪಿಎಂ ಬ್ಯಾಲ್‌ಲಾಗ್ ಉದ್ಯೋಗಿಗಳ ಹೋರಾಟ ಸಮಿತಿ ಅಧ್ಯಕ್ಷ ವಿ.ಎನ್ ದೊಡ್ಡಯ್ಯ, ಉಪಾಧ್ಯಕ್ಷ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಅರ್ನುನ್ ರಾತೋಡ್, ಸಹಕಾರ್ಯದರ್ಶಿ ಆರ್. ನಾಗರಾಜ್, ಖಜಾಂಚಿ ಶಿವರಾಜ್, ಪಾರ್ವತಮ್ಮ, ಲತಾ, ಮಂಜುಳ, ಎಸ್. ರಾಜಪ್ಪ, ನರಸಿಂಹಪ್ಪ, ಓಂಕಾರಪ್ಪ, ವೆಂಕಟೇಶ್ ನಾಯ್ಕ, ಶೆಲ್ವಕುಮಾರ್, ಕೈಲಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.