ಓರ್ವ ಗುತ್ತಿಗೆ ಕಾರ್ಮಿಕ ನೇಣುಬಿಗಿದುಕೊಂಡು ಆತ್ಮಹತ್ಯೆ, ಬೃಹತ್ ಸಹಿ ಸಂಗ್ರಹದೊಂದಿಗೆ ಪ್ರಧಾನಿಗೆ ಮನವಿ ಪತ್ರ
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಚೇತನ್‌ಕುಮಾರ್
ಭದ್ರಾವತಿ, ಫೆ. ೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಸೋಮವಾರ ೧೯ನೇ ದಿನ ಪೂರೈಸಿದ್ದು, ಈ ನಡುವೆ ಕಾರ್ಮಿಕ ವಲಯದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.
ಇದುವರೆಗೂ ೩ ಜನ ಗುತ್ತಿಗೆ ಕಾರ್ಮಿಕರು ಅಕಾಲಿಕವಾಗಿ ನಿಧನ ಹೊಂದಿದ್ದು, ಈ ಪೈಕಿ ಈ ಹಿಂದೆ ಇಬ್ಬರು ಕಾರ್ಮಿಕರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಒಬ್ಬರು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
ತಂಗಿಯ ಮದುವೆ ದಿನ ಗುತ್ತಿಗೆ ಕಾರ್ಮಿಕ ಆತ್ಮಹತ್ಯೆ :
ವಿಐಎಸ್‌ಎಲ್ ಕಾರ್ಖಾನೆಯ ಆರ್‌ಟಿಎಸ್ ವಿಭಾಗದಲ್ಲಿ ಕಳೆದ ಸುಮಾರು ೧೦ ವರ್ಷಗಳಿಂದ ಗುತ್ತಿಗೆ ಕಾರ್ಮಿಕನಾಗಿ ದುಡಿಯುತ್ತಿರುವ ತಾಲೂಕಿನ ಕೊಮಾರನಹಳ್ಳಿ ನಿವಾಸಿ ಚೇತನ್‌ಕುಮಾರ್(೩೨) ಆತ್ಯಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಇದರಿಂದಾಗಿ ಕಾರ್ಮಿಕ ವಲಯದಲ್ಲಿ ಸೂತಕದ ಛಾಯೆ ಕಂಡು ಬಂದಿತು.
ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ತಂಗಿ ಮದುವೆ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಲ್ಯಾಣ ಮಂಟಪದ ಹಿಂಭಾಗ ಚೇತನ್‌ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಆತ್ಮಹತ್ಯೆ ಕುರಿತು ಎಲ್ಲೆಡೆ ಗಾಳಿಸುದ್ದಿ ವ್ಯಾಪಕವಾಗಿ ಹರಡುತ್ತಿದ್ದು, ಕಾರ್ಮಿಕ ವಲಯದಲ್ಲಿ ಮತ್ತುಷ್ಟು ಆತಂಕ ಹೆಚ್ಚಾಗಿದೆ.
ಬೃಹತ್ ಸಹಿ ಅಭಿಯಾನ ಯಶಸ್ವಿ : ೮೦೦ ಮಂದಿ ಸಹಿ
ನಗರದ ಪತ್ರಕರ್ತ ಅನಂತಕುಮಾರ್‌ರವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಹಿ ಅಭಿಯಾನ ಯಶಸ್ವಿಯಾಗಿದ್ದು, ಸುಮಾರು ೮೦೦ ಮಂದಿ ಸಹಿ ಒಳಗೊಂಡ ಪತ್ರದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.
ಸೋಮವಾರ ಹೋರಾಟಕ್ಕೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್. ಪ್ರದೀಪ್ ಮನವಿ ಪತ್ರ ಸ್ವೀಕರಿಸಿ ವಿಶಿಷ್ಟವಾದ ಬೃಹತ್ ಸಹಿ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್, ಎಎಪಿ ಪಕ್ಷದ ಎಚ್. ರವಿಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಡಿಎಸ್‌ಎಸ್ ಮುಖಂಡ ವಿ. ವಿನೋದ್ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಹಾಗು ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು.
ಭದ್ರಾವತಿಯಲ್ಲಿ ಪತ್ರಕರ್ತ ಅನಂತಕುಮಾರ್‌ರವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಹಿ ಅಭಿಯಾನ ಯಶಸ್ವಿಯಾಗಿದ್ದು, ಸುಮಾರು ೮೦೦ ಮಂದಿ ಸಹಿ ಒಳಗೊಂಡ ಪತ್ರದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.
ಫೆ.೮ರಂದು ಹೋರಾಟಕ್ಕೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಬಲ:
ವಿಐಎಸ್‌ಎಲ್ ಹಾಗು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಮತ್ತು ಕಾರ್ಮಿಕರಿಗೆ ಬೆಂಬಲ ಸೂಚಿಸಿ ಫೆ.೮ರಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಲಿದ್ದಾರೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಕಾರ್ಖಾನೆ ಉಳಿಸಿಕೊಡುವ ಭರವಸೆ ನೀಡಿದ್ದಾರೆ. ಇದೀಗ ಡಿ.ಕೆ ಶಿವಕುಮಾರ್ ಆಗಮಿಸುತ್ತಿದ್ದು, ಹೋರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಫೆ.೮ರಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಕಾರ್ಖಾನೆ ಸಮಸ್ಯೆ ಬಗೆಹರಿಸುವ ಸಂಬಂಧ ಸಭೆ ಏರ್ಪಡಿಸಲಾಗಿದೆ.
ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್