ಏಕಾಂಗಿ ಹೋರಾಟದ ಮೂಲಕ ಗಮನ ಸೆಳೆದ ಜಿಲ್ಲಾ ಪ್ರಧಾನ ಕರ್ಯದರ್ಶಿ ಎಂ. ನಾರಾಯಣ
![](https://blogger.googleusercontent.com/img/b/R29vZ2xl/AVvXsEhLijqATBqnVdgmvrTwW057DCsx67KBrcn73LV5sLqybldR2faDpdCQD-3jCi-8qviGcOVXuNdC6TT08FAeqTBf9NDjSyAJRQmrkv99zzmCB9THMInKlsp2MNe_hZWXm9TZz7XoRbYtq2I2/w400-h300-rw/D21-BDVT1-766585.jpg)
ಭದ್ರಾವತಿಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ ಶುಕ್ರವಾರ ಮನೆಗಳಲ್ಲಿ ಪ್ರತಿಭಟನೆ ವಿಶಿಷ್ಟ ಹೋರಾಟ ನಡೆಸುವ ಮೂಲಕ ಗಮನ ಸೆಳೆದರು.
ಭದ್ರಾವತಿ, ಮೇ. ೨೧: ಕೊರೋನಾ ಸೋಂಕು ೨ನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ತಕ್ಷಣ ಎಲ್ಲರಿಗೂ ಉಚಿತ ಲಸಿಕೆ ನೀಡುವ ಜೊತೆಗೆ ಲಾಕ್‌ಡೌನ್ ಪರಿಣಾಮದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರು, ರೈತರು ಮತ್ತು ಕೃಷಿ ಕೂಲಿಕಾರರಿಗೆ ೩ ತಿಂಗಳು ಕನಿಷ್ಠ ಮಾಸಿಕ ೧೦,೦೦೦ ರು. ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ವತಿಯಿಂದ ಶುಕ್ರವಾರ ಮನೆಗಳಲ್ಲಿ ಪ್ರತಿಭಟನೆ ವಿಶಿಷ್ಟ ಹೋರಾಟ ನಡೆಸಲಾಯಿತು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಗಮನ ಸೆಳೆದರು.
ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಆಟೋ, ಟ್ಯಾಕ್ಸಿ, ಗೂಡ್ಸ್ ಸೇರಿದಂತೆ ಇನ್ನಿತರ ವಾಹನಗಳ ಚಾಲಕರು, ಬೀದಿಬದಿ ವ್ಯಾಪಾರಿಗಳು, ಮನೆಗೆಲಸಗಾರರು, ಹಮಾಲಿಗಳು, ಬಿಸಿಯೂಟ ನೌಕರರು, ದಿನಗೂಲಿಗಳು, ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳು, ಮೆಕ್ಯಾನಿಕ್‌ಗಳು, ಕ್ಷೌರಿಕರು, ದೋಬಿಗಳು, ಸೆಕ್ಯೂರಿಟಿಗಳು ಸೇರಿದಂತೆ ಎಲ್ಲಾ ಅಸಂಘಟಿತ ಶ್ರಮಜೀವಿಗಳು, ಆದಾಯ ತೆರಿಗೆ ಪಾವತಿ ವ್ಯಾಪ್ತಿಯಲ್ಲಿ ಬರದಿರುವ ರೈತಕೂಲಿಕಾರರು, ಬಡರೈತರು ಹಾಗು ದಲಿತರು ಲಾಕ್‌ಡೌನ್ ಪರಿಣಾಮ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ತಕ್ಷಣ ಕನಿಷ್ಠ ಮಾಸಿಕ ೧೦,೦೦೦ ರು. ಪರಿಹಾರ ೩ ತಿಂಗಳು ನೀಡಬೇಕೆಂದು ಆಗ್ರಹಿಸಿದರು.
ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಹಾಗು ಸಂಘಟಿತ ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯಲ್ಲಿ ನೀಡಲಾಗಿರುವ ರಜೆಗಳನ್ನು ಸಂಬಳ ಸಹಿತ ರಜೆ ಎಂದು ಘೋಷಿಸಬೇಕು. ಕೃಷಿ ವಿರೋಧಿ ಕಾಯ್ದೆಗಳನ್ನು ಕೈಬಿಟ್ಟು ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಜೊತೆಗೆ ಪ್ರೋತ್ಸಾಹಧನ ನೀಡಬೇಕು. ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ೨೦೦ ದಿನ ಉದ್ಯೋಗ ನೀಡಬೇಕು. ದಿನಕೂಲಿಯನ್ನು ೭೦೦ ರು. ಗಳಿಗೆ ಹೆಚ್ಚಿಸಬೇಕು. ಇಂದಿರಾ ಕ್ಯಾಂಟಿನ್‌ಗಳಲ್ಲಿ ಪೌಷ್ಠಿಕಾಂಶಯುಳ್ಳ ಗುಣಮಟ್ಟದ ಆಹಾರ ವಿತರಿಸಬೇಕು. ಪ್ರತಿ ವ್ಯಕ್ತಿಗೆ ಮಾಸಿಕ ೧೦ ಕೆ.ಜಿ ಅಕ್ಕಿ ೬ ತಿಂಗಳು ನೀಡಬೇಕು. ಕೊರೋನಾ ಚಿಕಿತ್ಸೆಯಲ್ಲಿ ಕಂಡು ಬರುತ್ತಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿಕೊಂಡು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.