Tuesday, November 15, 2022

ಎಲ್ಲರಿಗೂ ಹಕ್ಕುಪತ್ರ ಕೊಡಿಸಲು ಪ್ರಾಮಾಣಿಕ ಪ್ರಯತ್ನ : ಬಿ.ಕೆ ಸಂಗಮೇಶ್ವರ್

೯೪ ಸಿಸಿ ಯೋಜನೆಯಡಿ ಹಕ್ಕು ಪತ್ರ ವಿತರಣೆ ಸಮಾರಂಭದಲ್ಲಿ ಭರವಸೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಉಜ್ಜನಿಪುರದಲ್ಲಿ ತಾಲೂಕು ಆಡಳಿತ ಕಂದಾಯ ಇಲಾಖೆ ಹಾಗು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಸುಮಾರು ೩೦೦ ಕುಟುಂಬಗಳಿಗೆ  ಹಕ್ಕು ಪತ್ರಗಳನ್ನು ವಿತರಿಸಲಾಯಿತು.
    ಭದ್ರಾವತಿ, ನ. ೧೫: ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವವರಿಗೂ ಸಹ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಲಭಿಸಬಹುದಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
    ಅವರು ನಗರಸಭೆ ವ್ಯಾಪ್ತಿಯ ಉಜ್ಜನಿಪುರದಲ್ಲಿ ಸುಮಾರು ೩೦೦ ಕುಟುಂಬಗಳಿಗೆ  ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದರು. ಹಕ್ಕು ಪತ್ರ ಹೊಂದಿಲ್ಲದ ನಿವಾಸಿಗಳು ಆತಂಕಪಡುವ ಅಗತ್ಯವಿಲ್ಲ. ಎಲ್ಲರಿಗೂ ಹಕ್ಕುಪತ್ರ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಸರ್ಕಾರಿ ಜಾಗಗಳಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿ ಕೊಡಲು ಅವಕಾಶಗಳಿದ್ದಲ್ಲಿ ಪ್ರಾಮಾಣಿಕವಾಗಿ ಕಲ್ಪಿಸಿ ಕೊಡಲಾಗುವುದು. ಅಲ್ಲದೆ ಹಕ್ಕುಪತ್ರ ಕೊಡಿಸಲು ಸಹ ಶಕ್ತಿ ಮೀರಿ ಶ್ರಮಿಸುವುದಾಗಿ ಭರವಸೆ ನೀಡಿದರು.
    ತಾಲೂಕು ಆಡಳಿತ ಕಂದಾಯ ಇಲಾಖೆ ವತಿಯಿಂದ ೯೪ ಸಿಸಿ ಯೋಜನೆಯಡಿ ಸುಮಾರು ೨೫೩ ಕುಟುಂಬಗಳಿಗೆ ಹಾಗು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಸುಮಾರು ೪೫ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು.
    ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ಮಣಿ ಎಎನ್‌ಎಸ್, ಲತಾ ಚಂದ್ರಶೇಖರ್, ಅನ್ನಪೂರ್ಣ, ಮಾಜಿ ಸದಸ್ಯರಾದ ವೆಂಕಟಯ್ಯ, ಆಂಜನಪ್ಪ, ನಗರಸಭೆ ಕಂದಾಯ ಶಾಖೆ ಅಧಿಕಾರಿ ಓಂಕಾರಪ್ಪ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಭಿಯಂತರ ಚಂದ್ರಹಾಸ್, ಮಂಜಪ್ಪ, ಉಪತಹಸೀಲ್ದಾರ್‌ಗಳಾದ ಮಂಜನಾಯ್ಕ, ರಾಜ್‌ಅರಸು, ರಾಜಸ್ವ ನಿರೀಕ್ಷಕ ಸತೀಶ್, ಗ್ರಾಮ ಲೆಕ್ಕಿಗರಾದ ಶಿವಣ್ಣ, ಪ್ರಶಾಂತ್, ಅರ್ಪಿತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನಕ ಜಯಂತಿ ಆಚರಣೆ ಮಾಡದ ಗ್ರಾಮ ಪಂಚಾಯಿತಿ ವಿರುದ್ಧ ಪ್ರತಿಭಟನೆ

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

ಭದ್ರಾವತಿ ತಾಲೂಕಿನ ಎರೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಮಾಡದೆ ನಿರ್ಲಕ್ಷ್ಯತನದಿಂದ ವರ್ತಿಸುವ ಮೂಲಕ ಅವಮಾನ ಮಾಡಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ನ. ೧೫: ತಾಲೂಕಿನ ಎರೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಮಾಡದೆ ನಿರ್ಲಕ್ಷ್ಯತನದಿಂದ ವರ್ತಿಸುವ ಮೂಲಕ ಅವಮಾನ ಮಾಡಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಛೇರಿಗಳಲ್ಲೂ ಕಡ್ಡಾಯವಾಗಿ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಿಸಬೇಕು. ಆದರೆ ಈ ಗ್ರಾಮ ಪಂಚಾಯಿತಿಯಲ್ಲಿ ಕನಕ ಜಯಂತಿ ಆಚರಣೆ ಮಾಡದೆ ನಿರ್ಲಕ್ಷ್ಯತನದಿಂದ ವರ್ತಿಸಲಾಗಿದೆ. ಗ್ರಾಮಸ್ಥರು ಕಛೇರಿಯಲ್ಲಿ ಕನಕ ಜಯಂತಿ ಆಚರಣೆ ಮಾಡುತ್ತಾರೆಂದು ಬೆಳಿಗ್ಗೆಯಿಂದ ಸಂಜೆವರೆಗೂ ಎದುರು ನೋಡುತ್ತಿದ್ದರು. ಆದರೆ ಅಂದು ಕಛೇರಿಗೆ ಯಾರು ಸಹ ಬಾರದೆ, ಕಛೇರಿ ಬೀಗವನ್ನು ಸಹ ತೆಗೆಯದೆ ಕನಕ ಜಯಂತಿ ಆಚರಣೆ ಮಾಡದೆ ಅವಮಾನಗೊಳಿಸಲಾಗಿದೆ ಎಂದು ಪ್ರತಿಭಟನೆಯಲ್ಲಿ ದೂರಲಾಯಿತು.


    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಶಾಖೆ ಉಪ ಕಾರ್ಯದರ್ಶಿ ಕೆ. ಜಯಲಕ್ಷ್ಮೀ ಮತ್ತು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಸ್. ಉಪೇಂದ್ರರವರಿಗೆ ಮನವಿ ಸಲ್ಲಿಸಿ ತಕ್ಷಣ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
    ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಪ್ರಸನ್ನಕುಮಾರ್, ಲಿಂಗೇಶ್, ಚಂದ್ರಶೇಖರ್, ವಾಸುದೇವ, ಮಂಜುನಾಥ್, ಧನಂಜಯ, ಉಮೇಶ್, ಚಿಕ್ಕಣ್ಣ ರಾಜೇಶ್ ಹಾಗು ಮಹಿಳೆಯರು ಮತ್ತು ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್, ಉಪಾಧ್ಯಕ್ಷ ಬಿ.ಎಸ್ ಮಂಜುನಾಥ್, ಖಜಾಂಚಿ ಬಿ.ಎಚ್ ವಸಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅರಬಿಳಚಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ, ಹೈಟೆಕ್ ಶೌಚಾಲಯ ಉದ್ಘಾಟನೆ

ಭದ್ರಾವತಿ ತಾಲೂಕಿನ ಅರಬಿಳಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗು ಹೈಟೆಕ್ ಶೌಚಾಲಯ ಉದ್ಘಾಟನೆ ಕಾರ್ಯಕ್ರಮಗಳು ಜರುಗಿದವು.
    ಭದ್ರಾವತಿ, ನ. ೧೫: ತಾಲೂಕಿನ ಅರಬಿಳಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗು ಹೈಟೆಕ್ ಶೌಚಾಲಯ ಉದ್ಘಾಟನೆ ಕಾರ್ಯಕ್ರಮಗಳು ಜರುಗಿದವು.
      ಅರಬಿಳಚಿ ಗ್ರಾಮಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ(ನರೇಗಾ)ಯಡಿ ಶಾಲಾ ಆವರಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ(ಎಸ್‌ಡಿಎಂಸಿ) ಹಾಗು ಭೂದಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಶೌಚಾಲಯ ಉದ್ಘಾಟಿಸಿದರು.
      ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ಮಾತನಾಡಿ, ಹೈಟೆಕ್ ಶೌಚಾಲಯದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ವಿದ್ಯಾರ್ಥಿಗಳು ಸುತ್ತಮುತ್ತಲ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದರು.
      ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಹಲವಾರು ಸೌಲಭ್ಯಗಳಿದ್ದು, ಇವುಗಳ ಕುರಿತು ತಿಳಿದುಕೊಳ್ಳುವ ಜೊತೆಗೆ ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಮದ ಅಭಿವೃದ್ಧಿಗೆ ಎಲ್ಲರು ಕೈ ಜೋಡಿಸಬೇಕೆಂದರು.
       ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಂಚಾಯತಿ ಸದಸ್ಯರು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

69ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿದ ಶಾಸಕ ಬಿ.ಕೆ ಸಂಗಮೇಶ್ವರ್

    ಭದ್ರಾವತಿ, ನ. 15: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಸಹಕಾರಿ ಹಾಲು ಒಕ್ಕೂಟ, ಸಹಕಾರ ಇಲಾಖೆ ಹಾಗು ತಾಲೂಕಿನ ಎಲ್ಲಾ ರೀತಿಯ ಸಹಕಾರ ಸಂಘ ಮತ್ತು ಬ್ಯಾಂಕುಗಳ ವತಿಯಿಂದ ಮಂಗಳವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಿದರು. 
    ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಅಧ್ಯಕ್ಷ ಎಂ.ಬಿ ಚನ್ನವೀರಪ್ಪ, ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಪ್ರಮುಖರಾದ ಕೆ.ಎನ್ ಬೈರಪ್ಪ ಗೌಡ, ಎಚ್.ಎಲ್ ಷಡಕ್ಷರಿ, ಡಿ. ಆನಂದ್, ಜೆ.ಪಿ ಯೋಗೇಶ್, ಟಿ.ಆರ್ ಭೀಮರಾವ್, ಗೊಂದಿ ಜಯರಾಮ್, ಎಚ್.ಎಸ್ ಸಂಜೀವಕುಮಾರ್, ಎಚ್.ಎನ್ ನಾಗರಾಜ್ ಬಲ್ಕಿಶ್ ಬಾನು, ಎಂ. ಕುಬೇಂದ್ರಪ್ಪ ಎಚ್. ಲೋಕೇಶ್, ಸಿ. ಮಲ್ಲೇಶಪ್ಪ, ಎ.ಎಸ್ ಸುರೇಶ್, ಬಿ.ಎಚ್ ವಸಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಅಧ್ಯಕ್ಷ ಕೆ.ಎಲ್ ಜಗದೀಶ್ವರ್ ಅಧ್ಯಕ್ಷತೆ ವಹಿಸಿದ್ದರು. ಟಿ.ಎಸ್ ದುಗ್ಗೇಶ್ ಸ್ವಾಗತಿಸಿ,  ಎಂ ವಿರುಪಾಕ್ಷಪ್ಪ ನಿರೂಪಿಸಿದರು.