Friday, December 31, 2021

ತಾವರಘಟ್ಟ ಗ್ರಾಮ ಪಂಚಾಯಿತಿ ಮೊದಲ ಗ್ರಾಮ ಸಭೆ

ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಯ ಮೊದಲ ಗ್ರಾಮ ಸಭೆ ಯಶಸ್ವಿಯಾಗಿ ಜರುಗಿತು.
ಭದ್ರಾವತಿ, ಡಿ. ೩೧: ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಯ ಮೊದಲ ಗ್ರಾಮ ಸಭೆ ಯಶಸ್ವಿಯಾಗಿ ಜರುಗಿತು.
ಪಂಚಾಯಿತಿ ಅಧ್ಯಕ್ಷ ಜಿ.ಎಸ್ ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೇಶನ ಹಂಚಿಕೆ, ಕೃಷಿ ಹಾಗು ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಹಾಗು ಕುಂದು ಕೊರತೆ ಬಗ್ಗೆ ಚರ್ಚೆ ನಡೆಸಲಾಯಿತು.


    ಗ್ರಾಮದ ಹಿರಿಯ ಮುಖಂಡ ತ್ಯಾಗರಾಜ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರಾಮ ಠಾಣಾ ಜಾಗಗಳನ್ನು ಸಂಘ-ಸಂಸ್ಥೆಗಳಿಗೆ ನೀಡಬಾರದು. ಬದಲಿಗೆ ನಿವೇಶನಗಳನ್ನು ನಿರ್ಮಿಸಿ ಗ್ರಾಮದ ನಿವೇಶನ ರಹಿತ ಅರ್ಹ ಬಡವರಿಗೆ ಹಂಚುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸಭೆಯಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಯಿತು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು.

ನಗರಸಭೆ ಆವರಣದಲ್ಲಿಯೇ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆ ಪ್ರತಿಷ್ಠಾಪನೆ



ನಾಡಹಬ್ಬ ದಸರಾ ಆಚರಣೆಗಾಗಿ ಭದ್ರಾವತಿ ನಗರಸಭೆ ವತಿಯಿಂದ ಕೆಲವು ವರ್ಷಗಳ ಹಿಂದೆ ಖರೀದಿಸಲಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಕೊನೆಗೂ ನಗರಸಭಾ ಆವರಣದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಯಿತು.
    ಭದ್ರಾವತಿ, ಡಿ. ೩೧: ನಾಡಹಬ್ಬ ದಸರಾ ಆಚರಣೆಗಾಗಿ ನಗರಸಭೆ ವತಿಯಿಂದ ಕೆಲವು ವರ್ಷಗಳ ಹಿಂದೆ ಖರೀದಿಸಲಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಕೊನೆಗೂ ನಗರಸಭಾ ಆವರಣದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಯಿತು.
    ಈ ಹಿಂದೆ ನಾಡಹಬ್ಬ ದಸರಾ ಆಚರಣೆಗಾಗಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗುತ್ತಿತ್ತು. ಇದರಿಂದ ನಗರಸಭೆಗೆ ಹೆಚ್ಚಿನ ಹೊರೆ ಕಂಡು ಬರುತ್ತಿತ್ತು. ಈ ಹಿಂದಿನ ಪೌರಾಯುಕ್ತರಾಗಿದ್ದ ಮನೋಹರ್‌ರವರು ಸದಸ್ಯರ ಒತ್ತಾಯದ ಮೇರೆಗೆ ನಗರಸಭೆ ವತಿಯಿಂದ ಪ್ರತಿಮೆಯನ್ನು ಖರೀದಿಸಿದ್ದರು. ಆದರೆ ಪ್ರತಿಮೆ ಪ್ರತಿಷ್ಠಾಪಿಸಲು ಸೂಕ್ತ ಸ್ಥಳವಕಾಶವಿರಲಿಲ್ಲ. ಇದರಿಂದಾಗಿ ಕೆಲವು ದಿನಗಳವರೆಗೆ ಗ್ರಾಮ ದೇವತೆ ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿಮೆ ಇಡಲಾಗಿತ್ತು. ನಂತರ ದಿನಗಳಲ್ಲಿ ಪ್ರತಿಮೆಯನ್ನು ನಗರಸಭೆ ಆವರಣಕ್ಕೆ ಸ್ಥಳಾಂತರಿಸಿ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಯಲ್ಲಿಯೇ ಇಡಲಾಗಿತ್ತು. ಇದೀಗ ಪ್ರತಿಮೆಗೆ ಪ್ರತ್ಯೇಕವಾಗಿ ಕೊಠಡಿ ನಿರ್ಮಿಸಿ ಶಾಶ್ವತ ನೆಲೆ ಕಲ್ಪಿಸಿಕೊಡಲಾಗಿದೆ.
    ಶುಕ್ರವಾರ ಪ್ರತಿಷ್ಠಾಪನೆ ಅಂಗವಾಗಿ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ಪವನ್‌ಕುಮಾರ್ ಉಡುಪ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ನಗರಸಭೆ ಅಧ್ಯಕ್ಷೆ ಗೀತಾರಾಜ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನಗರಸಭಾ ಸದಸ್ಯರು, ಸಿಬ್ಬಂದಿಗಳು, ಪೌರಕಾರ್ಮಿಕರು, ರಮಾಕಾಂತ್, ನರಸಿಂಹಚಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಹೊರ ರಾಜ್ಯಗಳಿಂದ ಕದ್ದು ತಂದ ಮೊಬೈಲ್‌ಗಳ ಮಾರಾಟ : ಓರ್ವನ ಸೆರೆ


ಹೊರ ರಾಜ್ಯಗಳಿಂದ ಕದ್ದು ತಂದ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ ಅಡ್ಡೆಯೊಂದರ ಮೇಲೆ ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಓರ್ವನನ್ನು ಬಂಧಿಸಿ ಕದ್ದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು ೬,೬೮,೪೦೦ ರು. ಮೌಲ್ಯದ ವಿವಿಧ ಕಂಪನಿಗಳ ಒಟ್ಟು ೫೫ ಮೊಬೈಲ್‌ಗಳು ವಶ

     ಭದ್ರಾವತಿ, ಡಿ. ೩೧: ಹೊರ ರಾಜ್ಯಗಳಿಂದ ಕದ್ದು ತಂದ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ ಅಡ್ಡೆಯೊಂದರ ಮೇಲೆ ನಗರದ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
      ಅನ್ವರ್ ಕಾಲೋನಿ ನಿವಾಸಿ ಸಯ್ಯದ್ ಅಲ್ವಿ (೨೫) ಎಂಬ ಯುವಕನನ್ನು ಸೆರೆ ಹಿಡಿಯಲಾಗಿದ್ದು, ಒಟ್ಟು ೬,೬೮,೪೦೦ ರು. ಮೌಲ್ಯದ ವಿವಿಧ ಕಂಪನಿಗಳ ಒಟ್ಟು ೫೫ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
      ಮಹಾರಾಷ್ಟ್ರದ ವಿವಿಧೆಡೆ ಮೊಬೈಲ್‌ಗಳನ್ನು ಕದ್ದು ತಂದು ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರದ ಮೇರೆಗೆ ಹೊಸಮನೆ ಸಂತೆ ಮೈದಾನದಲ್ಲಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರ ಪೈಕಿ ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸ್ ಉಪಾಧೀಕ್ಷಕ ಗಜಾನನ ಸುತಾರಾ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಶಾಂತಲಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮೌನೇಶ್, ಮಂಜುನಾಥ್, ರಾಜು, ಕಲ್ಲೇಶ್ ಉಪಸ್ಥಿತರಿದ್ದರು.


ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶಾಸಕರಿಗೆ ಮನವಿ

ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಭದ್ರಾವತಿಯಲ್ಲಿ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೩೧: ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ಮಧ್ಯಾಹ್ನ ೧ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸರ್ಕಾರಿ ನೌಕರರು, ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗು ಭತ್ಯೆ ಜಾರಿಗೊಳಿಸುವುದು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ ನೇತೃತ್ವ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಎ.ಜೆ ರಂಗನಾಥ ಪ್ರಸಾದ್, ಕಾರ್ಯದರ್ಶಿ ಡಿ.ಎಸ್ ರಾಜಪ್ಪ, ಉಪಾಧ್ಯಕ್ಷರಾದ ಎಂ.ಎಸ್ ಬಸವರಾಜ, ಆರ್. ಅಶೋಕ್‌ರಾವ್, ಸಿ. ಮಂಜಾನಾಯ್ಕ ಮತ್ತು ರಾಜ್‌ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಎಂ. ಪುಟ್ಟಲಿಂಗಮೂರ್ತಿ, ಜೆ. ಕಾಂತರಾಜ್ ಮತ್ತು ಬಿ.ಆರ್ ದಿನೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಆರ್. ಜನಾರ್ಧನ, ಡಿ. ನಾಗರತ್ನ ಮತ್ತು ಎ. ರಂಗನಾಥ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಆರ್. ಶಿವಾಜಿರಾವ್ ಮತ್ತು ಕೃಷ್ಣ, ಕ್ರೀಡಾ ಕಾರ್ಯದರ್ಶಿಗಳಾದ ಶ್ರೀಕಾಂತ್ ಮತ್ತು ಜಾನ್ ನಿರ್ಮಲ್  ಹಾಗು ಆಂತರಿಕ ಲೆಕ್ಕ ಪರಿಶೋಧಕ ಎಚ್.ಎಂ ನಾಗರಾಜಪ್ಪ , ಯು. ಮಹಾದೇವಪ್ಪ, ಬಸವಂತರಾವ್‌ದಾಳೆ, ಎಸ್.ಕೆ ಮೋಹನ್, ರೇವಣಪ್ಪ, ಎ. ತಿಪ್ಪೇಸ್ವಾಮಿ, ಪ್ರಕಾಶ್, ಡಾ.ಜಿ.ಎಂ ನಟರಾಜ್, ಸಿ. ಜಯಪ್ಪ, ಡಾ. ಶಿವಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.