Sunday, August 7, 2022

ಭದ್ರಾವತಿ ನಗರಸಭೆ ವತಿಯಿಂದ ಮಳಿಗೆಗಳ ತೆರವು ಕಾರ್ಯಚರಣೆ


ಭದ್ರಾವತಿ ಹಳೇನಗರದ ಸಂತೆ ಮೈದಾನದಲ್ಲಿರುವ ನಗರಸಭೆಗೆ ಯಾವುದೇ ರೀತಿ ಆದಾಯವಿಲ್ಲದ ಸುಮಾರು ೭-೮ ಮಳಿಗೆಗಳನ್ನು ಸೋಮವಾರ ನಗರಸಭೆ ಪೌರಾಯುಕ್ತ ಮನು ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.
    ಭದ್ರಾವತಿ: ಹಳೇನಗರದ ಸಂತೆ ಮೈದಾನದಲ್ಲಿರುವ ನಗರಸಭೆಗೆ ಯಾವುದೇ ರೀತಿ ಆದಾಯವಿಲ್ಲದ ಸುಮಾರು ೭-೮ ಮಳಿಗೆಗಳನ್ನು ಸೋಮವಾರ ನಗರಸಭೆ ಪೌರಾಯುಕ್ತ ಮನು ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.
  ಹಲವಾರು ವರ್ಷಗಳಿಂದ ನಗರಸಭೆಗೆ ಯಾವುದೇ ಕಂದಾಯ ಪಾವತಿ ಮಾಡದೆ ಅಕ್ರಮವಾಗಿ ಮಳಿಗೆಗಳನ್ನು ನಿರ್ಮಿಸಿಕೊಂಡು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಸುಮಾರು ೨ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು. 
ತೆರವುಗೊಂಡ ಸ್ಥಳದಲ್ಲಿ ಪ್ಲಾಟ್ ಫಾರಂ ನಿರ್ಮಿಸಿ ಸಂತೆ ಮೈದಾನದಲ್ಲಿ ರಸ್ತೆ ಪಕ್ಕದಲ್ಲಿ ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ನಗರಸಭೆ ಅಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಕಿರಿಯ ಆರೋಗ್ಯ ಸಹಾಯಕಿ ಶೃತಿ, ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿಯರ್ ಪ್ರಸಾದ್, ಇಂಜಿನಿಯರ್ ಸಂತೋಷ್ ಪಾಟೀಲ್, ಪ್ರಭಾಕರ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.



೭೫ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಅದ್ಭುತ ಕಲ್ಪನೆ : ಜಿ. ಧರ್ಮಪ್ರಸಾದ್

ಭದ್ರಾವತಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಭಾರತ ಮಾತೆಯ ಭಾವಚಿತ್ರ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಆ. ೭: ದೇಶದ ೭೫ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಪ್ರಪಂಚದಲ್ಲಿ ಯಾರೂ ಸಹ ನಿರೀಕ್ಷಿಸಲು ಸಾಧ್ಯವಿಲ್ಲ. ಭವಿಷ್ಯದಲ್ಲೂ ಇಂತಹ ಆಚರಣೆ ಅಸಾಧ್ಯ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
    ಅವರು ಭಾನುವಾರ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
    ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಾರಿ ೭೫ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಭಾರತ ಮಾತೆಗೆ ಗೌರವ ತಂದುಕೊಡುವ ನಿಟ್ಟಿನಲ್ಲಿ ಪಣ ತೊಟ್ಟಿದ್ದಾರೆ. ಇಂತಹ ಆಚರಣೆ ಪ್ರಪಂಚದಲ್ಲಿ ಯಾರು ನಕಲು ಮಾಡಲು ಸಹ ಸಾಧ್ಯವಿಲ್ಲ. ಪ್ರತಿ ಮನೆ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಾಡಬೇಕೆಂಬ ಅವರ ಕಲ್ಪನೆ ಅದ್ಭುತವಾಗಿದೆ. ಇಂತಹ ಮಹತ್ಕಾರ್ಯವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬರು ಹೆಚ್ಚಿನ ಶ್ರಮವಹಿಸಬೇಕೆಂದರು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್ ಭಾರತ ಮಾತೆ ಭಾವಚಿತ್ರ ಅನಾವರಣಗೊಳಿಸಿ ಸಭೆ ಉದ್ಘಾಟಿಸಿದರು. ರಾಷ್ಟ್ರ ಧ್ವಜ ಅನಾವರಣಗೊಳಿಸುವ ಜೊತೆಗೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರುಗಳಿಗೆ ಧ್ವಜಗಳನ್ನು ವಿತರಿಸಲಾಯಿತು.
ಪಕ್ಷದ ಪ್ರಮುಖರಾದ ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ಬಿ.ಎಸ್ ನಾರಾಯಣಪ್ಪ, ಮ್ಯಾಮ್‌ಕೋಸ್ ನಿರ್ದೇಶಕ ವಿರುಪಾಕ್ಷಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಪಕ್ಷದ ಪ್ರಮುಖರಾದ ಎಸ್. ಕುಮಾರ್, ವಿ. ಕದಿರೇಶ್, ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ಚನ್ನೇಶ್, ಕೆ. ಮಂಜುನಾಥ್, ಬಿ.ಕೆ ಚಂದ್ರಪ್ಪ, ಕರೀಗೌಡ, ಜಿ. ಆನಂದಕುಮಾರ್, ಚಂದ್ರು ದೇವರನರಸೀಪುರ, ಮಂಜುನಾಥ್, ಹೇಮಾವತಿ ವಿಶ್ವನಾಥ್, ಅನ್ನಪೂರ್ಣ ಸಾವಂತ್, ಮಂಜುಳ, ಕವಿತಾ ರಾವ್, ಅನ್ನಪೂರ್ಣ, ರೇಖಾ ಪದ್ಮಾವತಿ, ನಾಗಮಣಿ  ಸೇರಿದಂತೆ ಪಕ್ಷದ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು.  ಆನಂದ್ ನಿರೂಪಿಸಿದರು.

‎ ರುದ್ರಭೂಮಿಯಲ್ಲಿ ಸಸಿ ನೆಟ್ಟು ವನಮಕೋತ್ಸವ

ಭದ್ರಾವತಿ:  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ವತಿಯಿಂದ ನಗರಸಭೆ ವಾರ್ಡ್ ನಂ. 2ರ  ಕವಲಗುಂದಿ ಹಿಂದೂ ರುದ್ರಭೂಮಿಯಲ್ಲಿ  ಭಾನುವಾರ ವನಮಹೋತ್ಸವ ಆಚರಿಸಲಾಯಿತು.
    ಬಿಳಿಕಿ ಹಿರೇಮಠ  ಪೀಠಾಧ್ಯಕ್ಷರಾದ  ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ  ದಿವ್ಯ ಸಾನಿಧ್ಯ ವಹಿಸಿದ್ದರು.  ಯುವ ಘಟಕದ ಅಧ್ಯಕ್ಷ  ಕಾರ್ಯಕ್ರಮದ  ಎಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ  ತಾಲೂಕು  ಅಧ್ಯಕ್ಷ  ಜಿ. ಸುರೇಶಯ್ಯ, ಉಪಾಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ, ಖಜಾಂಚಿ ಜಿ.ಎಂ ಮುರ್ತಿ, ಯವ ಘಟಕದ ಉಪಾಧ್ಯಕ್ಷ ಮಹಾದೇವ, ಕಾರ್ಯದರ್ಶಿ ಬಿ.ಎಂ  ಚೇತನ್, ಖಜಾಂಚಿ ಬಿ.ಎಂ ರಮೇಶ್,  ನಿರ್ದೇಶಕರಾದ ಬಿ.ಓ ಬಸವರಾಜ,  ಎಂ. ಮಂಜುನಾಥ್, ವಿನಯ್ ಮಹಿಳಾ ಘಟಕದ ಅಧ್ಯಕ್ಷೆ  ರೂಪಾ ನಾಗರಾಜ್, ಕಾರ್ಯದರ್ಶಿ ಕವಿತಾ ಸುರೇಶ್,  ಸಹ ಕಾರ್ಯದರ್ಶಿ ಉಷಾ, ಮುಖಂಡರಾದ ಮಂಗೋಟೆ ರುದ್ರೇಶ್,  ಕೃಷ್ಣರಾಜ್, ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿ ಕುಮಾರ್ ಗೌಡ, ರಾಜಣ್ಣ, ಸುರೇಶ್ ಹಾಗೂ ನಗರಸಭೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಆಸ್ತಿ, ಹಣಕ್ಕಿಂತ ತಂದೆ-ತಾಯಿ ಪ್ರೀತಿ, ಮಮತೆ ದೊಡ್ಡದು : ಶ್ರೀ ಡಾ. ಗುರುಬಸವ ಸ್ವಾಮೀಜಿ

ಭದ್ರಾವತಿ ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಅಖಿಲ ಭಾರತ ಶರಣ ಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ ಅವರ ತಂದೆ-ತಾಯಿ ಮಂಜಪ್ಪ-ಲಕ್ಕಮ್ಮ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ದತ್ತಿ ಸ್ವೀಕಾರ ಕಾರ್ಯಕ್ರಮವನ್ನು ಕಮ್ಮತ್ತಹಳ್ಳಿ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು. 
    ಭದ್ರಾವತಿ, ಆ. ೭: ಶರಣರ ಬದುಕು, ಚಿಂತನೆ, ಆದರ್ಶಗಳು ನಮ್ಮ ಮಕ್ಕಳ ಭವಿಷ್ಯದ ದಾರಿ ದೀಪಗಳಾಗಿವೆ. ಪ್ರಸ್ತುತ ಮಕ್ಕಳಿಗೆ ಆಸ್ತಿ, ಹಣಕ್ಕಿಂತ ಮುಖ್ಯವಾಗಿ ಉತ್ತಮ ಸಂಸ್ಕಾರ ಅಗತ್ಯವಿದೆ ಎಂದು ಕಮ್ಮತ್ತಹಳ್ಳಿ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ಹೇಳಿದರು.
    ಅವರು ಭಾನುವಾರ ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಅಖಿಲ ಭಾರತ ಶರಣ ಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ ಅವರ ತಂದೆ-ತಾಯಿ ಮಂಜಪ್ಪ-ಲಕ್ಕಮ್ಮ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ದತ್ತಿ ಸ್ವೀಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
    ತಾಯಿ ಮಮತೆಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಯೊಬ್ಬರ ಬದುಕಿನಲ್ಲಿ ಮೊದಲ ಸ್ಥಾನ ತಾಯಿ, ನಂತರ ಸ್ಥಾನ ಅಪ್ಪ ಎಂಬುದನ್ನು ಮರೆಯಬಾರದು. ಇಂದು ನಾವೆಲ್ಲರೂ ಹಣದ ವ್ಯಾಮೋಹದ ಹಿಂದೆ ಬಿದ್ದಿದ್ದೇವೆ. ಹಣ, ಆಸ್ತಿ ಎಷ್ಟು ಸಂಪಾದಿಸಿರೂ ಸಹ ತೃಪ್ತಿ ಎಂಬುದು ಇಲ್ಲವಾಗಿದೆ. ಇದರಿಂದಾಗಿ ಬಹಳಷ್ಟು ಮಕ್ಕಳು ತಮ್ಮ ವಯಸ್ಸಾದ ತಂದೆ-ತಾಯಿಯನ್ನು  ದೂರ ಮಾಡಿಕೊಳ್ಳುತ್ತಿದ್ದಾರೆ.  ತಮ್ಮ ಕೊನೆಯ ಅವಧಿಯಲ್ಲಿ ಏನನ್ನು ಸಹ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ತಂದೆ-ತಾಯಿ ಪ್ರೀತಿ, ಮಮತೆ ಮುಂದೆ ಯಾವುದೇ ಸಹ ದೊಡ್ಡದಲ್ಲ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇಂತಹ ಬದುಕಿನ ಸಂಸ್ಕಾರಗಳಿಗೆ ಶರಣರ ಬದುಕು, ಚಿಂತನೆ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿ, ಶರಣ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಜನರಲ್ಲಿ ಬಲವಂತವಾಗಿ ಹೇರಿದ ಸಾಹಿತ್ಯಗಳಲ್ಲ ಬದಲಾಗಿ ಜನರು ಒಪ್ಪಿಕೊಂಡ ಸಾಹಿತ್ಯಗಳಾಗಿವೆ. ಶರಣರ ವಾಸ್ತವ ಬದುಕಿನ ಅನುಭವಗಳು ಈ ಸಾಹಿತ್ಯಗಳಾಗಿವೆ. ಶರಣರು ತಮ್ಮ ಕಾಲಾವಧಿಯಲ್ಲಿಯೇ ಕಾಯಕ, ದಾಸೋಹದ ಮಹತ್ವ ಸಾರಿದರು. ಸಮಾಜದಲ್ಲಿ ಸಮಾನತೆ ಪರಿಕಲ್ಪನೆ ಮೂಡಿಸಿದರು. ಇಂತಹ ಶರಣ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.
    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್ ಆಶಯ ನುಡಿಗಳನ್ನಾಡಿದರು.
    ಬಸವಕೇಂದ್ರದ ಅಧ್ಯಕ್ಷ ಜಗದೀಶ್ ಕವಿ, ಸುವರ್ಣಮ್ಮ ಹಿರೇಮಠ್ ಉಪಸ್ಥಿತರಿದ್ದರು. ಕತ್ತಲಗೆರೆ ತಿಮ್ಮಪ್ಪ, ಮಲ್ಲಿಕಾರ್ಜುನ್ ನಿರೂಪಿಸಿದರು. ಎಂ. ವಿರುಪಾಕ್ಷಪ್ಪ ತಂದೆ-ತಾಯಿ ಸ್ಮರಣಾರ್ಥ ಶರಣ ಸಾಹಿತ್ಯ ಪರಿಷತ್‌ಗೆ ೫೦ ಸಾವಿರ ರು. ದೇಣಿಗೆ ನೀಡಿದರು.

ಕೇಂದ್ರ, ರಾಜ್ಯ ಸರ್ಕಾರಗಳಿಗೆ ಬಡವರ ಬಗ್ಗೆ ಕಾಳಜಿ ಇಲ್ಲ : ಬಿ.ವಿ ಶ್ರೀನಿವಾಸ್

ಭದ್ರಾವತಿ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು ವಿವಿಧ ಧರ್ಮಗಳ ಗುರುಗಳ ಸಮ್ಮುಖದಲ್ಲಿ ಗಂಗಾಪೂಜೆಯೊಂದಿಗೆ ಭದ್ರೆಗೆ ಬಾಗಿನ ಸಮರ್ಪಿಸಿದರು.
    ಭದ್ರಾವತಿ, ಆ. ೭:  ರಾಜ್ಯ ಹಾಗು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳಿಗೆ ಬಡ ಜನರ ಬಗ್ಗೆ ಕಾಳಜಿ ಇಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಆರೋಪಿಸಿದರು.
    ಅವರು ಭಾನುವಾರ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಂಗಾ ಪೂಜೆ ಮತ್ತು ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಬಡ ಜನರು ಬದುಕುವುದು ಅಸಾಧ್ಯವಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಶ್ರೀಮಂತರ ಪರವಾಗಿವೆ. ಪ್ರಸ್ತುತ ಬಡ ಜನರು ತಮ್ಮ ಬದುಕಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
    ಇದಕ್ಕೂ ಮೊದಲು ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರು ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೌದ್ಧ ಬಿಕ್ಕು ನ್ಯಾನಲೋಕ ಬಂತೇಜಿ, ಕ್ರೈಸ್ತ ಧರ್ಮ ಗುರು ಫಾಸ್ಟರ್ ದೇವನೇಸನ್ ಸಾಮ್ಯೂಯಲ್ ಸೇರಿದಂತೆ ವಿವಿಧ ಧರ್ಮಗಳ ಗುರುಗಳ ಸಮ್ಮುಖದಲ್ಲಿ ಬಾಗಿನ ಸಮರ್ಪಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಉದ್ಯಮಿಗಳಾದ ಬಿ.ಕೆ ಜಗನ್ನಾಥ್, ಬಿ.ಕೆ ಶಿವಕುಮಾರ್, ನಗರಸಭಾ ಸದಸ್ಯರು, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,  ರೈತರು, ಕಾರ್ಮಿಕರು, ಮಹಿಳೆಯರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.