Sunday, August 7, 2022

ಆಸ್ತಿ, ಹಣಕ್ಕಿಂತ ತಂದೆ-ತಾಯಿ ಪ್ರೀತಿ, ಮಮತೆ ದೊಡ್ಡದು : ಶ್ರೀ ಡಾ. ಗುರುಬಸವ ಸ್ವಾಮೀಜಿ

ಭದ್ರಾವತಿ ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಅಖಿಲ ಭಾರತ ಶರಣ ಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ ಅವರ ತಂದೆ-ತಾಯಿ ಮಂಜಪ್ಪ-ಲಕ್ಕಮ್ಮ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ದತ್ತಿ ಸ್ವೀಕಾರ ಕಾರ್ಯಕ್ರಮವನ್ನು ಕಮ್ಮತ್ತಹಳ್ಳಿ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು. 
    ಭದ್ರಾವತಿ, ಆ. ೭: ಶರಣರ ಬದುಕು, ಚಿಂತನೆ, ಆದರ್ಶಗಳು ನಮ್ಮ ಮಕ್ಕಳ ಭವಿಷ್ಯದ ದಾರಿ ದೀಪಗಳಾಗಿವೆ. ಪ್ರಸ್ತುತ ಮಕ್ಕಳಿಗೆ ಆಸ್ತಿ, ಹಣಕ್ಕಿಂತ ಮುಖ್ಯವಾಗಿ ಉತ್ತಮ ಸಂಸ್ಕಾರ ಅಗತ್ಯವಿದೆ ಎಂದು ಕಮ್ಮತ್ತಹಳ್ಳಿ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ಹೇಳಿದರು.
    ಅವರು ಭಾನುವಾರ ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಅಖಿಲ ಭಾರತ ಶರಣ ಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ ಅವರ ತಂದೆ-ತಾಯಿ ಮಂಜಪ್ಪ-ಲಕ್ಕಮ್ಮ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ದತ್ತಿ ಸ್ವೀಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
    ತಾಯಿ ಮಮತೆಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಯೊಬ್ಬರ ಬದುಕಿನಲ್ಲಿ ಮೊದಲ ಸ್ಥಾನ ತಾಯಿ, ನಂತರ ಸ್ಥಾನ ಅಪ್ಪ ಎಂಬುದನ್ನು ಮರೆಯಬಾರದು. ಇಂದು ನಾವೆಲ್ಲರೂ ಹಣದ ವ್ಯಾಮೋಹದ ಹಿಂದೆ ಬಿದ್ದಿದ್ದೇವೆ. ಹಣ, ಆಸ್ತಿ ಎಷ್ಟು ಸಂಪಾದಿಸಿರೂ ಸಹ ತೃಪ್ತಿ ಎಂಬುದು ಇಲ್ಲವಾಗಿದೆ. ಇದರಿಂದಾಗಿ ಬಹಳಷ್ಟು ಮಕ್ಕಳು ತಮ್ಮ ವಯಸ್ಸಾದ ತಂದೆ-ತಾಯಿಯನ್ನು  ದೂರ ಮಾಡಿಕೊಳ್ಳುತ್ತಿದ್ದಾರೆ.  ತಮ್ಮ ಕೊನೆಯ ಅವಧಿಯಲ್ಲಿ ಏನನ್ನು ಸಹ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ತಂದೆ-ತಾಯಿ ಪ್ರೀತಿ, ಮಮತೆ ಮುಂದೆ ಯಾವುದೇ ಸಹ ದೊಡ್ಡದಲ್ಲ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇಂತಹ ಬದುಕಿನ ಸಂಸ್ಕಾರಗಳಿಗೆ ಶರಣರ ಬದುಕು, ಚಿಂತನೆ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿ, ಶರಣ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಜನರಲ್ಲಿ ಬಲವಂತವಾಗಿ ಹೇರಿದ ಸಾಹಿತ್ಯಗಳಲ್ಲ ಬದಲಾಗಿ ಜನರು ಒಪ್ಪಿಕೊಂಡ ಸಾಹಿತ್ಯಗಳಾಗಿವೆ. ಶರಣರ ವಾಸ್ತವ ಬದುಕಿನ ಅನುಭವಗಳು ಈ ಸಾಹಿತ್ಯಗಳಾಗಿವೆ. ಶರಣರು ತಮ್ಮ ಕಾಲಾವಧಿಯಲ್ಲಿಯೇ ಕಾಯಕ, ದಾಸೋಹದ ಮಹತ್ವ ಸಾರಿದರು. ಸಮಾಜದಲ್ಲಿ ಸಮಾನತೆ ಪರಿಕಲ್ಪನೆ ಮೂಡಿಸಿದರು. ಇಂತಹ ಶರಣ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.
    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್ ಆಶಯ ನುಡಿಗಳನ್ನಾಡಿದರು.
    ಬಸವಕೇಂದ್ರದ ಅಧ್ಯಕ್ಷ ಜಗದೀಶ್ ಕವಿ, ಸುವರ್ಣಮ್ಮ ಹಿರೇಮಠ್ ಉಪಸ್ಥಿತರಿದ್ದರು. ಕತ್ತಲಗೆರೆ ತಿಮ್ಮಪ್ಪ, ಮಲ್ಲಿಕಾರ್ಜುನ್ ನಿರೂಪಿಸಿದರು. ಎಂ. ವಿರುಪಾಕ್ಷಪ್ಪ ತಂದೆ-ತಾಯಿ ಸ್ಮರಣಾರ್ಥ ಶರಣ ಸಾಹಿತ್ಯ ಪರಿಷತ್‌ಗೆ ೫೦ ಸಾವಿರ ರು. ದೇಣಿಗೆ ನೀಡಿದರು.

No comments:

Post a Comment