![](https://blogger.googleusercontent.com/img/a/AVvXsEgGplG839yLSGqnQoSIJvnxfBqRKpy4BY9RdIxwIhtrDGxrsGaQYznoXSv86wWzHB-tWs0DeqOIrrFPhg7CNnGAc3BN_AxRXuDJ1EkLBbS7AhYv6MAjIane9WcAc2j_TjOesSSCBpPNFhmTWRjOeILSPc-gurvFHqOtGQzoQrSZdU5osAXPumcylZ4i_w=w400-h179-rw)
ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೧ನೇ ಜನ್ಮ ದಿನಾಚರಣೆ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ, ಏ. ೧೪: ಅಂಬೇಡ್ಕರ್ ಎಂದರೆ ಜ್ಞಾನದ ಸಂಕೇತ. ಪ್ರತಿಯೊಬ್ಬರು ಇವರನ್ನು ಕೊನೆಯವರೆಗೂ ಸ್ಮರಣೆ ಮಾಡಿಕೊಳ್ಳಬೇಕು. ಇವರ ಸ್ಮರಣೆಯಿಂದ ಜ್ಞಾನ, ಹೋರಾಟ ಮತ್ತು ಸಂಘಟನೆ ವೃದ್ಧಿಸುತ್ತದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಗುರುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೧ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಎಂದರೆ ಮಾನವ ಹಕ್ಕುಗಳ ಉದ್ದಾರಕ. ಈ ಜಗತ್ತಿನ ಶ್ರೇಷ್ಠ ಜ್ಞಾನಿ. ಇವರ ಬಗ್ಗೆ ಇಂದಿನ ಪೀಳಿಗೆಯವರಿಗೆ ಸರಿಯಾಗಿ ಗೊತ್ತಿಲ್ಲ. ಅಂಬೇಡ್ಕರ್‌ರವರ ವಿಚಾರಧಾರೆಗಳನ್ನು, ಆದರ್ಶತನಗಳನ್ನು ಮನೆಗಳಲ್ಲಿ ಪೋಷಕರು ಮತ್ತು ಶಾಲಾ ಹಂತದಲ್ಲಿ ಶಿಕ್ಷಕರು ತಿಳಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕು. ಇವರ ಸ್ಮರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿನಿತ್ಯ ಇವರನ್ನು ಸ್ಮರಿಸಿಕೊಳ್ಳುವಂತಾಗಬೇಕೆಂದರು.
ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವಂತೆ ಈಗಾಗಲೇ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಭವನದ ಕಾಮಗಾರಿಯನ್ನು ತಕ್ಷಣ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಬೇಕೆಂದರು.
ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಕೆ. ಪರಮೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭಾ ಸದಸ್ಯರು, ವಿವಿಧ ದಲಿತಪರ ಸಂಘಟನೆಗಳ ಪ್ರಮುಖರು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಎಸ್.ವಿ ಶಶಿಕುಮಾರ್ ಉಪನ್ಯಾಸ ನಡೆಸಿಕೊಟ್ಟರು. ಸಹಾಯಕ ನಿರ್ದೇಶಕ ಎಸ್. ಗೋಪಿನಾಥ್ ಸ್ವಾಗತಿಸಿದರು. ಇದಕ್ಕೂ ಮೊದಲು ವಿವಿಧ ಕಲಾತಂಡಗಳು ಹಾಗು ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಜಗಮೋಹನ್ ರಾಮ್‌ರವರ ಭಾವಚಿತ್ರಗಳೊಂದಿಗೆ ಬಿ.ಎಚ್ ರಸ್ತೆ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಮೆರವಣಿಗೆ ನಡೆಸಲಾಯಿತು. ಸಿದ್ದಾರ್ಥ ಅಂಧರ ಕೇಂದ್ರದ ಕಲಾವಿದರಿಂದ ಗೀತಗಾಯನ ನಡೆಯಿತು.