Thursday, May 12, 2022

ಉಡುಪಿ ಮದಗ ಅತ್ರಾಡಿ ಜೋಡಿ ಕೊಲೆ ಪ್ರಕರಣ : ಓರ್ವನ ಬಂಧನ

ಉಡುಪಿ ಮದಗ ಅತ್ರಾಡಿಯಲ್ಲಿ ಕೊಲೆಯಾಗಿರುವ ಚೆಲುವಿ ಹಾಗು ಈಕೆಯ ಮಗಳು ಪ್ರಿಯಾ.
    ಭದ್ರಾವತಿ, ಮೇ. ೧೨: ತಾಯಿ-ಮಗಳು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಹಿರಿಯಡ್ಕ ಪೊಲೀಸರು ಇಲ್ಲಿನ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ವ್ಯಕ್ತಿಯೋರ್ವನನ್ನು ಬಂಧಿಸಿರುವುದು ತಿಳಿದು ಬಂದಿದೆ.
    ಉಡುಪಿ ತಾಲೂಕಿನ ಮದಗ ಅತ್ರಾಡಿ ಗ್ರಾಮದಲ್ಲಿ ಚೆಲುವಿ ಎಂಬ ಗೃಹಿಣಿ ಹಾಗು ಈಕೆಯ ೧೦ ವರ್ಷದ ಮಗಳು ಪ್ರಿಯಾಳನ್ನು ಕೊಲೆ ಮಾಡಿರುವ ಘಟನೆ ನಡೆದಿದ್ದು,  ಈ ಸಂಬಂಧ ದೇವಿ ಎಂಬುವರು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
    ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಪ್ರಕರಣ ಭೇದಿಸಿದ್ದು, ಕೊಲೆಯಾದ ಚೆಲುವಿಯ ಸಂಬಂಧಿ ಬೊಮ್ಮನಕಟ್ಟೆ ನಿವಾಸಿ ಹರೀಶ್ ಅಲಿಯಾಸ್ ಗಣೇಶ್ ಎಂಬಾತನನ್ನು ಬಂದಿಸಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.
    ಘಟನೆ ವಿವರ:
    ಚೆಲುವಿ ಸುಮಾರು ೧೫ ವರ್ಷದ ಹಿಂದೆ ಸುಬ್ರಮಣ್ಯ ಎಂಬಾತನೊಂದಿಗೆ ಮದುವೆಯಾಗಿದ್ದು, ಈ ಸಂದರ್ಭದಲ್ಲಿ ಚೆಲುವಿ ಮಣಿಪಾಲದ ಎಣ್ಣೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಗ ರಶೀದ್ ಎಂ ವ್ಯಕ್ತಿ ಪರಿಚಯವಾಗಿದೆ. ನಂತರದ ದಿನಗಳಲ್ಲಿ ಚೆಲುವಿ ಗಂಡನನ್ನು ಬಿಟ್ಟು ರಶೀದ್‌ನೊಂದಿಗೆ ಮುಂಬೈಗೆ ತೆರಳಿದ್ದು, ಅಲ್ಲಿ ಸುಮಾರು ೨ ವರ್ಷವಿದ್ದು, ಪುನಃ ಹಿಂದಿರುಗಿ ಕಾರ್ಕಳದಲ್ಲಿ ರಶೀದ್‌ನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈ ವೇಳೆ ಈಕೆಗೆ ಪ್ರೀತಿಮ್ ಮತ್ತು ಪ್ರಿಯಾ ಎಂಬ ಇಬ್ಬರು ಮಕ್ಕಳು ಜನಿಸಿದ್ದಾರೆ. ನಂತರದ ದಿನಗಳಲ್ಲಿ ಚೆಲುವಿ ರಶೀದ್‌ನನ್ನು ಸಹ ಬಿಟ್ಟು ತನ್ನ ತಾಯಿ ಮನೆ ಮದಗ ಅತ್ರಾಡಿ ಗ್ರಾಮಕ್ಕೆ ಬಂದು ನೆಲೆಸಿದ್ದು, ಈ ನಡುವೆ ಸಂಬಂಧಿ ಹರೀಶ್ ಈಕೆಯ ಮನೆಗೆ ಬಂದು ಹೋಗುತ್ತಿದ್ದು, ಮದುವೆಯಾಗುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ. ಈ ನಡುವೆ ಇಬ್ಬರ ನಡುವೆ ಜಗಳ ಉಂಟಾಗಿ ತಾಯಿ ಮತ್ತು ಮಗಳ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ.

ಉದ್ಯಮಿ, ಸಮಾಜ ಸೇವಕ ಆನಂದ್ ಎಎಪಿ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿ ನಗರದ ಉದ್ಯಮಿ, ಸಮಾಜ ಸೇವಕ ಮಾರುತಿ ಮೆಡಿಕಲ್ ಆನಂದ್‌ರವರು ಆಮ್ ಆದ್ಮಿ ಪಾರ್ಟಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
    ಭದ್ರಾವತಿ, ಮೇ. ೧೨: ನಗರದ ಉದ್ಯಮಿ, ಸಮಾಜ ಸೇವಕ ಮಾರುತಿ ಮೆಡಿಕಲ್ ಆನಂದ್‌ರವರು ಆಮ್ ಆದ್ಮಿ ಪಾರ್ಟಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
    ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ರಾಜ್ಯ ಕಾರ್ಯದರ್ಶಿ ದರ್ಶನ್ ಜೈನ್ ಹಾಗು ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಸಮ್ಮುಖದಲ್ಲಿ ಆನಂದ್ ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
    ಆನಂದ್‌ರವರು ಈ ಹಿಂದೆ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಸ್ಪರ್ಧೆಗೆ ಅವಕಾಶ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದಾರೆ.
    ಕಳೆದ ಸುಮಾರು ೨ ವರ್ಷಗಳ ಹಿಂದೆ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ತಾಲೂಕಿನ ಸುಮಾರು ೧೦ ಸಾವಿರ ಕಡು ಬಡವರಿಗೆ ಉಚಿತವಾಗಿ ದಿನಸಿ ಸಾಮಾಗ್ರಿಗಳನ್ನು ವಿತರಿಸಿದ್ದರು.  
    ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ಪ್ರಮುಖರಾದ ಡಿ.ಎಂ ಚಂದ್ರಪ್ಪ, ಪರಮೇಶ್ವರಚಾರ್, ಎ. ಮಸ್ತಾನ್, ಜೋಸೆಫ್, ರಮೇಶ್, ರೇಷ್ಮಬಾನು, ಜಾವಿದ್, ಎನ್.ಪಿ ಜೋಸೆಫ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದಿಂಡಿ ಉತ್ಸವ : ಮೇ.೧೩ರಂದು ರಾಜಬೀದಿ ಉತ್ಸವ

    ಭದ್ರಾವತಿ, ಮೇ. ೧೨: ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ನಗರದ ಭೂತನಗುಡಿಯಲ್ಲಿರುವ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ೩ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಿಂಡಿ ಉತ್ಸವ ಅಂಗವಾಗಿ ಮೇ.೧೩ರಂದು ರಾಜಬೀದಿ ಉತ್ಸವ ನಡೆಯಲಿದೆ.
    ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧೨.೩೦ರ ವರೆಗೆ ರಾಜಬೀದಿ ಉತ್ಸವ ನಡೆಯಲಿದ್ದು, ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
    ಉತ್ಸವದ ಅಂಗವಾಗಿ ಮೊದಲ ದಿನ ಪೋತಿ ಸ್ಥಾಪನೆ ನೆರವೇರಿಸಲಾಗಿದ್ದು, ಗುರುವಾರ ಜಾಗರಣೆ ನಡೆಯಿತು. ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು, ಜನಪ್ರತಿನಿಧಿಗಳು ದಿಂಡಿ ಉತ್ಸವದಲ್ಲಿ ಪಾಲ್ಗೊಂಡು ಭಾವಸಾರ ಕ್ಷತ್ರೀಯ ಸಮಾಜದವರೊಂದಿಗೆ ಸಂಭ್ರಮ ಹಂಚಿಕೊಳ್ಳುತ್ತಿದ್ದು, ಶುಕ್ರವಾರ ನಡೆಯಲಿರುವ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರರಾವ್ ಕೋರಿದ್ದಾರೆ.