ಭಾನುವಾರ, ಅಕ್ಟೋಬರ್ 16, 2022

ನಗರಸಭೆ ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್‌ಗೆ ಪಿತೃ ವಿಯೋಗ

ಎಂ. ಶಿವಲಿಂಗಪ್ಪ
    ಭದ್ರಾವತಿ, ಅ. ೧೬ : ನಗರಸಭೆ ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್ ಅವರ ತಂದೆ, ವಿಐಎಸ್‌ಎಲ್ ನಿವೃತ್ತ ಉದ್ಯೋಗಿ ಎಂ. ಶಿವಲಿಂಗಪ್ಪ(೮೦) ಭಾನುವಾರ ನಿಧನ ಹೊಂದಿದರು.
    ಪತ್ನಿ ಹಾಗು ಎಂ.ಎಸ್ ರಾಜ್‌ಕುಮಾರ್ ಸೇರಿದಂತೆ ೩ ಗಂಡು ಮಕ್ಕಳು ಇದ್ದರು. ಎಂ. ಶಿವಲಿಂಗಪ್ಪನವರು ವಿಐಎಸ್‌ಎಲ್ ನ್ಯೂ ರೋಲ್ ಮಿಲ್‌ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೊರಟಿಕೆರೆಯಲ್ಲಿ ವಾಸವಾಗಿದ್ದರು.
    ಇವರ ನಿಧನಕ್ಕೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗು ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಸೇರಿದಂತೆ, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶ್ರೀರಾಮರಾಜ್ಯ ಗಣಪತಿ : ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ

ಭದ್ರಾವತಿ ನಗರದ ಪ್ರಮುಖ ವಿನಾಯಕ ಸಂಘಟನೆಗಳಲ್ಲಿ ಒಂದಾಗಿರುವ ಜನ್ನಾಪುರ ಶ್ರೀರಾಮರಾಜ್ಯ ಸಂಘಟನೆ ವತಿಯಿಂದ ಈ ಬಾರಿ ಶ್ರೀ ವಿನಾಯಕ ಪ್ರತಿಷ್ಠಾಪಿಸಲಾಗಿದ್ದು, ಭಾನುವಾರ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಅ. ೧೬ : ನಗರದ ಪ್ರಮುಖ ವಿನಾಯಕ ಸಂಘಟನೆಗಳಲ್ಲಿ ಒಂದಾಗಿರುವ ಜನ್ನಾಪುರ ಶ್ರೀರಾಮರಾಜ್ಯ ಸಂಘಟನೆ ವತಿಯಿಂದ ಈ ಬಾರಿ ಶ್ರೀ ವಿನಾಯಕ ಪ್ರತಿಷ್ಠಾಪಿಸಲಾಗಿದ್ದು, ಭಾನುವಾರ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
    ಸುಮಾರು ೫ ದಶಕಗಳಿಗೂ ಹೆಚ್ಚು ಕಾಲದಿಂದ ಶ್ರೀರಾಮರಾಜ್ಯ ಸಂಘಟನೆ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮೂಲಕ ಈ ಭಾಗದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡು ಬಂದಿದೆ.
    ಪ್ರತಿವರ್ಷ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹಲವಾರು ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದು, ಜನ್ನಾಪುರ, ಹುತ್ತಾಕಾಲೋನಿ, ವೇಲೂರು ಶೆಡ್, ವಿದ್ಯಾಮಂದಿರ, ನ್ಯೂಟೌನ್ ಸೇರಿದಂತೆ ಸುತ್ತಮುತ್ತಲ ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ.
    ಈ ಬಾರಿ ಸಮಾಜಸೇವಕ, ಆಮ್ ಆದ್ಮಿ ಪಾರ್ಟಿ ಮುಖಂಡ ಆನಂದ್(ಮೆಡಿಕಲ್)ರವರು ಅನ್ನಸಂತರ್ಪಣೆ ಸೇವಾಕಾರ್ಯ ನೆರವೇರಿಸಿದರು. ಸಂಘಟನೆ ವತಿಯಿಂದ ಪ್ರತಿವರ್ಷ ಲಕ್ಕಿ ಡ್ರಾ ಏರ್ಪಡಿಸುವ ಮೂಲಕ ವಿಜೇತರಿಗೆ ಬೆಳ್ಳಿ ಗಣಪತಿ ಬಹುಮಾನವಾಗಿ ವಿತರಿಸಲಾಗುತ್ತಿದೆ. ಈ ಬಾರಿ ೩ ಮಂದಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಸೇರಿದಂತೆ ಸಂಘಟನೆ ಪ್ರಮುಖರು ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ನಗರದ ಪ್ರಮುಖ ವಿನಾಯಕ ಸಂಘಟನೆಗಳಲ್ಲಿ ಒಂದಾಗಿರುವ ಜನ್ನಾಪುರ ಶ್ರೀರಾಮರಾಜ್ಯ ಸಂಘಟನೆ ವತಿಯಿಂದ ಈ ಬಾರಿ ಶ್ರೀ ವಿನಾಯಕ ಪ್ರತಿಷ್ಠಾಪಿಸಲಾಗಿದ್ದು, ಪ್ರತಿವರ್ಷದಂತೆ ಈ ಬಾರಿ ಸಹ ಲಕ್ಕಿ ಡ್ರಾ ಏರ್ಪಡಿಸುವ ಮೂಲಕ ವಿಜೇತರಿಗೆ ಬೆಳ್ಳಿ ಗಣಪತಿ ಬಹುಮಾನವಾಗಿ ವಿತರಿಸಲಾಯಿತು.

ಜನ್ನಾಪುರ ಲಿಂಗಾಯತರ ಬೀದಿ ವಿನಾಯಕ ಮೂರ್ತಿ ವಿಸರ್ಜನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಲಿಂಗಾಯತರ ಬೀದಿಯಲ್ಲಿ ಸ್ವಾಗತ್ ಯುವಕರ ಸಂಘದ ವತಿಯಿಂದ ೨೫ನೇ ವರ್ಷದ ಅಂಗವಾಗಿಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಅ. ೧೬ : ನಗರಸಭೆ ವ್ಯಾಪ್ತಿಯ ಜನ್ನಾಪುರ ಲಿಂಗಾಯತರ ಬೀದಿಯಲ್ಲಿ ಸ್ವಾಗತ್ ಯುವಕರ ಸಂಘದ ವತಿಯಿಂದ ೨೫ನೇ ವರ್ಷದ ಅಂಗವಾಗಿಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಭಾನುವಾರ ವಿಜೃಂಭಣೆಯಿಂದ ಜರುಗಿತು.
    ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಸಂಜೆ ಪ್ರಮುಖ ರಸ್ತೆಗಳಲ್ಲಿ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯಿತು. ನಗರದ ವಿವಿಧ ಸಂಘಟನೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಜನಪ್ರತಿನಿಧಿಗಳು, ಕಾರ್ಯಕರ್ತರು, ಸೇವಾಕರ್ತರು, ಸ್ಥಳೀಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸಂಘದ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು. ಪ್ರತಿ ವರ್ಷದಂತೆ ಈ ಬಾರಿ ಸಹ ಜನ್ನಾಪುರ ಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.
    ಅಯೋಧ್ಯೆ ಶ್ರೀರಾಮ ಮಂದಿರ ಮಾದರಿ ಭವ್ಯ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಮೂರ್ತಿ ಈ ಬಾರಿ ಭಕ್ತರ ಗಮನ ಸೆಳೆದಿತ್ತು. ಸಂಘದ ವತಿಯಿಂದ ವಿವಿಧ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಅರುಂಧತಿಯಾರ್ ಸಮುದಾಯದ ಏಳಿಗೆಗೆ ಬದ್ಧ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಸಿ.ಎನ್ ರಸ್ತೆಯಲ್ಲಿ ಅರುಂಧತಿಯಾರ್ ಕ್ಷೇಮಾಭಿವೃದ್ಧಿ ಸಂಘದ ನೂತನ ಕಛೇರಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. ಸಂಘದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಅ. ೧೬ : ಕ್ಷೇತದಲ್ಲಿ ಅತಿಹೆಚ್ಚು ಬಡ ಕುಟುಂಬಗಳನ್ನು ಹೊಂದಿರುವ ಅರುಂಧತಿಯಾರ್ ಸಮುದಾಯದವರಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಏಳಿಗೆಗೆ ಶ್ರಮಿಸುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
    ಅವರು ಭಾನುವಾರ ನಗರದ ಸಿ.ಎನ್ ರಸ್ತೆಯಲ್ಲಿ ಅರುಂಧತಿಯಾರ್ ಕ್ಷೇಮಾಭಿವೃದ್ಧಿ ಸಂಘದ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಅನುದಾನದ ಜೊತೆಗೆ ವೈಯಕ್ತಿಕವಾಗಿ ಸಹ ಆರ್ಥಿಕ ನೆರವು ಕಲ್ಪಿಸಿಕೊಡಲು ಬದ್ಧವಾಗಿದ್ದು, ಸಮುದಾಯದವರು ಸಾಮಾಜಿಕ, ಶೈಕ್ಷಣಿಕ ಹಾಗು ಆರ್ಥಿಕವಾಗಿ ಬಲಗೊಳ್ಳಬೇಕೆಂದರು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಅರುಂಧತಿಯಾರ್ ಸಮುದಾಯದವರು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅವರಿಗೆ  ಉತ್ತಮ ಶಿಕ್ಷಣ ಕೊಡಿಸುವ ಜೊತೆಗೆ ಆರ್ಥಿಕವಾಗಿ ಬಲಗೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ತಮ್ಮ ಬದುಕು ಸಹ ಉತ್ತಮಗೊಳ್ಳಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೂ ಗುರುತಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಶಾಸಕರು ಸಂಪೂರ್ಣ ಸಹಕಾರ ನೀಡಲಿದ್ದು, ನಗರಸಭೆ ಆಡಳಿತ ಸಹ ಇದಕ್ಕೆ ಪೂರಕವಾಗಿ ಸ್ಪಂದಿಸಲಿದೆ ಎಂದರು.
    ಸಂಘದ ಸಂಸ್ಥಾಪಕ ಧರ್ಮಪ್ಪ, ಗೌರವಾಧ್ಯಕ್ಷ ಕುಪ್ಪಸ್ವಾಮಿ, ಅಧ್ಯಕ್ಷ ಅಣ್ಣಾದೊರೈ, ಉಪಾಧ್ಯಕ್ಷರಾದ ಬಿ. ಪಳನಿಸ್ವಾಮಿ, ಸಿ. ಐಯ್ಯನಾರ್, ಎಲ್ ಧನಪಾಲ್, ಪ್ರಧಾನ ಕಾರ್ಯದರ್ಶಿ ಕೆ. ಶರವಣ, ಕಾರ್ಯದರ್ಶಿ ಡಿ. ರವಿಕುಮಾರ್, ಸಹಕಾರ್ಯದರ್ಶಿ ಕೆ. ರಾಜಾಂಗ, ಖಜಾಂಚಿ ಎ. ಸುಬ್ರಮಣಿ, ಸಹ ಖಜಾಂಚಿ ಡಿ. ಶಬರಿವಾಸನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.