Friday, January 14, 2022

ಶಾಲಾಮಟ್ಟದ ಪ್ರತಿಭಾ ಕಾರಂಜಿ : ಬಹುಮಾನ ವಿತರಣೆ


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಶುಕ್ರವಾರ ಬಹುಮಾನಗಳನ್ನು ವಿತರಿಸಲಾಯಿತು.
    ಭದ್ರಾವತಿ, ಜ. ೧೪: ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಶುಕ್ರವಾರ ಬಹುಮಾನಗಳನ್ನು ವಿತರಿಸಲಾಯಿತು.
    ಶಿವಸಾಯಿಕೃಪ ಧಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ೧ ರಿಂದ ೫ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಲಾಯಿತು. ಶಾಲೆಯ ಪ್ರಾಂಶುಪಾಲ ಶ್ಯಾಮರಾಯ ಆಚಾರ್ ಹಾಗು ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಕೋವಿಡ್ ೩ನೇ ಅಲೆ ಭೀತಿ ನಡೆವೆಯೂ ಮಕಾರ ಸಂಕ್ರಾಂತಿ ಹಬ್ಬಕ್ಕೆ ಭರದ ಸಿದ್ದತೆ

 ವಾರಾಂತ್ಯ ಕರ್ಪ್ಯೂ ನಡುವೆಯೂ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಭರದ ಸಿದ್ದತೆಗಳು ಕಂಡು ಬರುತ್ತಿದ್ದು, ಶುಕ್ರವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
ಭದ್ರಾವತಿ, ಜ. ೧೪: ವಾರಾಂತ್ಯ ಕರ್ಪ್ಯೂ ನಡುವೆಯೂ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಭರದ ಸಿದ್ದತೆಗಳು ಕಂಡು ಬರುತ್ತಿದ್ದು, ಶುಕ್ರವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
    ಕೋವಿಡ್ ೩ನೇ ಅಲೆ ಭೀತಿ ನಡುವೆಯೂ ನಗರದೆಲ್ಲೆಡೆ ಮಕಾರ ಸಂಕ್ರಾಂತಿ ವಿಜೃಂಭಣೆಯಿಂದ ಆಚರಿಸಲು ಮುಂದಾಗಿರುವುದು  ಕಂಡು ಬರುತ್ತಿದ್ದು, ಹೂ, ಹಣ್ಣು, ಕಬ್ಬಿನ ಜೊಲ್ಲೆ ಸೇರಿದಂತೆ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳನ್ನು ಜನರು ಶುಕ್ರವಾರವೇ ಖರೀದಿಸಿಟ್ಟುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
     ಸರ್ಕಾರ ಕೋವಿಡ್ ಭೀತಿ ಹಿನ್ನಲೆಯಲ್ಲಿ ವಾರಾಂತ್ಯದ ಕರ್ಪ್ಯೂ ಘೋಷಿಸಿದೆ. ಅಲ್ಲದೆ ಮಕರ ಸಂಕ್ರಾಂತಿ ಸಂಭ್ರಮದ ಆಚರಣೆಗೆ ಕಡಿವಾಣ ಸಹ ಹಾಕಿದೆ. ಆದರೂ ಸಹ ಜನರು ಸಂಕ್ರಾಂತಿ ಸಂಭ್ರಮದ ಆಚರಣೆಗೆ ಮುಂದಾಗಿರುವುದು ತಲೆ ನೋವಾಗಿ ಪರಿಣಮಿಸಿದೆ.
    ೫ ದಿನಗಳಲ್ಲಿ ೨೦೦ರ ಗಡಿ ದಾಟಿದ ಸೋಂಕು:
ನಗರದಲ್ಲಿ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶುಕ್ರವಾರ ಒಂದೇ ದಿನ ೬೪ ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕಳೆದ ೫ ದಿನಗಳಲ್ಲಿ ಒಟ್ಟಾರೆ ೨೦೦ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜುಗಳಲ್ಲೂ ವ್ಯಾಪಕವಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದು,  ಇದರಿಂದಾಗಿ ಆತಂಕ ಎದುರಾಗಿದೆ.  
    ಮಾಂಸ ಮಾರಾಟ ನಿಷೇಧ:
    ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಜ.೧೫ರ ಶನಿವಾರ ಮತ್ತು ಸರ್ವೋದಯ ದಿನದ ಅಂಗವಾಗಿ ಜ.೩೦ರಂದು ನಗರಸಭೆ ವ್ಯಾಪ್ತಿಯಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ಮಾಡುವುದನ್ನು ಹಾಗು ಬಾರ್ & ರೆಸ್ಟೋರೆಂಟ್, ಮಾಂಸಹಾರಿ ಹೋಟೆಲ್‌ಗಳಲ್ಲಿ ಮಾಂಸಾಹಾರ ತಯಾರಿಸುವುದನ್ನು ಸಹ ನಿಷೇಧಿಸಲಾಗಿದೆ.
    ಒಂದು ವೇಳೆ ಆದೇಶ ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ನಗರಸಭೆ ಪೌರಾಯುಕ್ತರು ಕೆ. ಪರಮೇಶ್ ಎಚ್ಚರಿಸಿದ್ದಾರೆ.

ಸೇಫಕ್ ಟಕ್ರಾ ಸ್ಪರ್ಧೆ : ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದ್ವಿತೀಯ ಬಹುಮಾನ

ಕುವೆಂಪು ವಿಶ್ವ ವಿದ್ಯಾನಿಲಯ ಅಂತರ್ ಕಾಲೇಜು ಪುರುಷ ಹಾಗು ಮಹಿಳೆಯರ ಸೇಫಕ್ ಟಕ್ರಾ ಸ್ಪರ್ಧೆಯಲ್ಲಿ ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥರ್ಮ ದರ್ಜೆ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಜ. ೧೪: ಕುವೆಂಪು ವಿಶ್ವ ವಿದ್ಯಾನಿಲಯ ಅಂತರ್ ಕಾಲೇಜು ಪುರುಷ ಹಾಗು ಮಹಿಳೆಯರ ಸೇಫಕ್ ಟಕ್ರಾ ಸ್ಪರ್ಧೆಯಲ್ಲಿ ನಗರದ ಹೊಸಮನೆ ಸರ್ಕಾರಿ ಪ್ರಥರ್ಮ ದರ್ಜೆ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗು ಕುವೆಂಪು ವಿಶ್ವವಿದ್ಯಾನಿಲಯ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಪಿ. ಸುಂದರೇಶ್, ಪಿ. ಕೌಶಿಕ್, ಪಿ. ಕುಂಬರೇಶ್, ಆರ್. ಹಿತೇಶ್ ಮತ್ತು ಆರ್. ವಿಕಾಶ್ ವರ್ಣೇಕರ್ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ಎಂ.ಡಿ ವಿಶ್ವನಾಥ್ ತರಬೇತಿದಾರರಾಗಿ ತಂಡದ ನೇತೃತ್ವ ವಹಿಸಿದ್ದರು.
    ಕಾಲೇಜಿಗೆ ಬಹುಮಾನ ತಂದುಕೊಟ್ಟ ವಿಜೇತ ತಂಡವನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಸದಸ್ಯರು, ಪಾಂಶುಪಾಲರು, ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.