Sunday, February 28, 2021

ಸರ್ಕಾರಿ ಶಾಲೆಗಳ ಆಧುನೀಕರಣ, ಗುಣಮಟ್ಟದ ಶಿಕ್ಷಣ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹ

ಜೆಡಿಯು ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಏಕಾಂಕಿ ಹೋರಾಟ


ಸರ್ಕಾರಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳನ್ನು ಆಧುನೀಕರಣಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಏಕಾಂಗಿ ಹೋರಾಟ ನಡೆಸಿದರು.
   ಭದ್ರಾವತಿ, ಮಾ. ೧: ಸರ್ಕಾರಿ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳನ್ನು ಆಧುನೀಕರಣಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ತಾಲೂಕು ಕಛೇರಿ ಮುಂಭಾಗ ಏಕಾಂಗಿ ಹೋರಾಟ ನಡೆಸಿದರು.
    ರಾಜ್ಯಾದ್ಯಂತ ಸುಮಾರು ೫೦ ವರ್ಷಗಳಿಗೂ ಹಳೇಯದಾದ ಸುಮಾರು ೧೪ ಸಾವಿರ ಶಾಲೆಗಳಿದ್ದು, ಈ ಶಾಲೆಗಳನ್ನು ಪುನರ್ ನಿರ್ಮಾಣ ಮಾಡುವುದು. ೨೨ ಸಾವಿರ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ತಕ್ಷಣ ಸೌಕರ್ಯಗಳನ್ನು ಕಲ್ಪಿಸಿಕೊಡುವುದು. ೮ ಸಾವಿರ ಶಾಲೆಗಳು ಮುಚ್ಚುವ ಹಂತದಲ್ಲಿದ್ದು, ಈ ಶಾಲೆಗಳನ್ನು ನವೀಕರಣಗೊಳಿಸಿ ಹಾಳಾಗದಂತೆ ನಿರ್ವಹಣೆ ಮಾಡುವುದು. ಪ್ರಾಥಮಿಕ ಹಂತದಿಂದಲೇ ಮಾತೃಭಾಷೆ ಜೊತೆಗೆ ಆಂಗ್ಲಭಾಷೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು. ಎಲ್ಲಾ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಟಿ.ವಿ ವಿತರಿಸುವುದು ಹಾಗು ಅವಶ್ಯಕತೆ ಇರುವ ಕಲಿಕಾ ಮಾಧ್ಯಮದ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿರುವ ಶಿಕ್ಷಕರನ್ನು ನೇಮಿಸಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
   ಫಲಕಗಳನ್ನು ಹಿಡಿದು ಏಕಾಂಗಿ ಹೋರಾಟ ನಡೆಸಿದ ಶಶಿಕುಮಾರ್ ಎಸ್ ಗೌಡ ಕೊನೆಯಲ್ಲಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಜಗತ್ತಿಗೆ ಆನಂದ, ಆತ್ಮತೃಪ್ತಿ ಮಾರ್ಗ ತೋರಿಸಿಕೊಟ್ಟ ದೇಶ ಭಾರತ

'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ


ಭದ್ರಾವತಿಯಲ್ಲಿ ಭಾನುವಾರ ಲಯನ್ಸ್ ಕ್ಲಬ್ ಶುಗರ್ ಟೌನ್ ತನ್ನ ೩೪ನೇ ವರ್ಷದ ಸವಿ ನೆನಪಿನಲ್ಲಿ ಹಮ್ಮಿಕೊಂಡಿದ್ದ 'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಂಡು ಮಾತನಾಡಿದರು.
   ಭದ್ರಾವತಿ, ಫೆ. ೨೮: ಜಗತ್ತಿಗೆ ಆನಂದ, ಆತ್ಮತೃಪ್ತಿ ಮಾರ್ಗ ತೋರಿಸಿಕೊಟ್ಟ ದೇಶ ಭಾರತ ಎಂಬುದನ್ನು ಎಲ್ಲರಿಗೂ ಅರಿತುಕೊಳ್ಳಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
    ಅವರು ಭಾನುವಾರ ನಗರದ ಲಯನ್ಸ್ ಕ್ಲಬ್ ಶುಗರ್ ಟೌನ್ ತನ್ನ ೩೪ನೇ ವರ್ಷದ ಸವಿ ನೆನಪಿನಲ್ಲಿ ಹಮ್ಮಿಕೊಂಡಿದ್ದ 'ಅನನ್ಯ' ಪ್ರಾಂತೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಜೀವನದ ಗುರಿ ಯಾವುದು ಎಂಬುದನ್ನು ಗುರುತಿಸಿಕೊಳ್ಳಬೇಕು. ಬದುಕಿನ ವಿವಿಧ ಹಂತಗಳನ್ನು ಯಶಸ್ವಿಯಾಗಿ ತಲುಪುವುದೇ ಜೀವನದ ಮುಖ್ಯ ಗುರಿಯಲ್ಲ. ನಮಗೆ ಆನಂದ, ಆತ್ಮತೃಪ್ತಿ ಸಿಗುವ ಮಾರ್ಗದಲ್ಲಿ ಸಾಗುವುದೇ ಜೀವನದ ಗುರಿಯಾಗಬೇಕು. ಇದನ್ನು ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ.
   ದೇವರು ನಮ್ಮಿಂದ ಯಾವುದನ್ನೂ ಸಹ ಅಪೇಕ್ಷಿಸದೆ ನಮಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾವು ಆ ದೇವರು ಕೊಟ್ಟಿರುವುದರಲ್ಲಿ ಸ್ವಲ್ಪ ಭಾಗವನ್ನು ಮತ್ತೊಬ್ಬರಿಗೆ ನೀಡುವಲ್ಲಿ ಹಿಂದೆ ಮುಂದೆ ನೋಡುತ್ತಿದ್ದೇವೆ. ನಮ್ಮ ಪರಿಸರದಲ್ಲಿ ಅಕ್ಕಪಕ್ಕದಲ್ಲಿ ಬದುಕುತ್ತಿರುವವರ ಕಷ್ಟಸುಖಗಳಿಗೆ ಸ್ಪಂದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಹಣವಂತರು ಬಡವರಿಗೆ ನೆರವಾಗಬೇಕು. ಅಕ್ಷರಸ್ಥರು ಅನಕ್ಷರಸ್ಥರಿಗೆ ನೆರವಾಗಬೇಕು ಹೀಗೆ ಎಲ್ಲಾ ರೀತಿಯಿಂದಲೂ ನಮ್ಮನ್ನು ತೊಡಗಿಸಿಕೊಂಡು ಆ ಮೂಲಕ ಆನಂದ, ಆತ್ಮತೃಪ್ತಿ ಕಂಡುಕೊಳ್ಳಬೇಕು. ಭಾರತ ದೇಶ ಹಲವು ವೈವಿಧ್ಯತೆಗಳಿಂದಾಗಿ ಜಗತ್ತಿನಲ್ಲಿ ವಿಶಿಷ್ಟ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಇಂತಹ ನೆಲದಲ್ಲಿ ನಮ್ಮ ಬದುಕು ಸಾರ್ಥಕಗೊಳ್ಳಬೇಕು. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ತನ್ನ ಸೇವಾ ಕಾರ್ಯವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.
    ಪ್ರಾಂತೀಯ ಅಧ್ಯಕ್ಷ ಕೆ. ಅನಂತಕೃಷ್ಣನಾಯಕ್ ಸಮ್ಮೇಳನ ಉದ್ಘಾಟಿಸಿದರು. ವಾಗ್ಮಿ ಪ್ರೊ. ಡಾ. ಕೆ.ಪಿ ಪುತ್ತುರಾಯ ಪಿಡಿಜಿ ದಿವಾಕರ್, ವಿಡಿಜಿ-೨ ಕೆ.ಸಿ ವೀರಭದ್ರಪ್ಪ, ಪಾಲಾಕ್ಷಪ್ಪ, ಜಿ.ಎಸ್ ಕುಮಾರ್, ಕ್ಲಬ್ ಅಧ್ಯಕ್ಷ ಬಿ. ನಿತ್ಯಾನಂದ ಪೈ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ಕಾನ್ಫರೆನ್ಸ್ ಕಮಿಟಿ ಛೇರ್‌ಮನ್ ಡಾ. ಟಿ. ನರೇಂದ್ರಭಟ್ ಸ್ವಾಗತಿಸಿದರು. ಶುಗರ್ ಟೌನ್, ಸರ್ವೋದಯ ನಗರ, ಯಡೇಹಳ್ಳಿ, ಹೊಳೆಹೊನ್ನೂರು ಮತ್ತು ಸನ್ಯಾಸಿ ಕೋಡಮಗ್ಗೆ ಪ್ರಾಂತೀಯ ವಲಯ-೧ರ ಕ್ಲಬ್‌ಗಳ ಹಾಗು ಶಿವಮೊಗ್ಗ, ಶಿವಮೊಗ್ಗ ಕಾಸ್ಮೊಪೊಲಿಟ್ಯಾನ್, ಬಿ.ಆರ್ ಪ್ರಾಜೆಕ್ಟ್, ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ಸಹ್ಯಾದ್ರಿ, ಹೊಸನಗರ ಕೊಡಚಾದ್ರಿ ಮತ್ತು ಶಿವಮೊಗ್ಗ ಶಾಂಭವಿ ಪ್ರಾಂತೀಯ ವಲಯ-೨ರ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರತಿನಿಧಿಗಳು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಕೊರೋನಾ ೩ನೇ ಹಂತದ ಲಸಿಕೆ ಅಭಿಯಾನಕ್ಕೆ ತಾಲೂಕು ಆಸ್ಪತ್ರೆ ಸಿದ್ದತೆ

ಪ್ರತಿ ದಿನ ೨೦೦ ಮಂದಿಗೆ ಲಸಿಕೆ ಹಾಕುವ ಗುರಿ : ಡಾ. ಎಂ.ವಿ ಅಶೋಕ್

ಭದ್ರಾವತಿ, ಫೆ. ೨೮: ಕೊರೋನಾ ಲಸಿಕೆ ೩ನೇ ಹಂತದ ಅಭಿಯಾನಕ್ಕೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಿದ್ದತೆಗಳನ್ನು ಕೈಗೊಂಡಿದ್ದು, ಪ್ರತಿ ದಿನ ೨೦೦ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ತಿಳಿಸಿದರು.
    ಅವರು ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿ, ಒಟ್ಟು ೪ ವಿಭಾಗಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಈ ಬಾರಿ ಮೊದಲ ವಿಭಾಗದಲ್ಲಿ ೪೯ ರಿಂದ ೫೯ ವರ್ಷದೊಳಗಿನ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ಹಾಕಲಾಗುವುದು. ಲಸಿಕೆ ಹಾಕಿಸಿಕೊಳ್ಳುವವರು ಕಡ್ಡಾಯವಾಗಿ ವೈದ್ಯರಿಂದ ತಪಾಸಣೆ ದೃಢೀಕರಣ ಪತ್ರ ತರಬೇಕು. ಉಳಿದಂತೆ ೨ನೇ ವಿಭಾಗದಲ್ಲಿ ೬೦ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುವುದು. ೩ನೇ ವಿಭಾಗದಲ್ಲಿ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಹಿಂದೆ ಲಸಿಕೆ ಪಡೆಯದವರಿಗೆ ಹಾಗು ೪ನೇ ವಿಭಾಗದಲ್ಲಿ ಇನ್ನಿತರರಿಗೆ ಲಸಿಕೆ ಹಾಕಲು ಸಿದ್ದತೆ ನಡೆಸಲಾಗಿದೆ ಎಂದರು.
    ಲಸಿಕೆ ಹಾಕುವ ಕಾರ್ಯದಲ್ಲಿ ಓರ್ವ ವೈದ್ಯ, ಓರ್ವ ಲಸಿಕೆ ಹಾಕುವವರು, ಸಹಾಯಕರು, ಪರಿಶೀಲನೆ ನಡೆಸುವವರು ಸೇರಿದಂತೆ ಒಟ್ಟು ೧೦ ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಮಾತ್ರ ಲಸಿಕೆ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಲಸಿಕೆ ಹಾಕಲಾಗುವುದು. ಆದರೆ ಈ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ ಎಂದರು.

ರಾಮ್ ಸೇನಾ ಶ್ರೀ ಲಕ್ಷ್ಮೀನರಸಿಂಹ ಘಟಕ ಉದ್ಘಾಟನೆ

ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಉಪಸ್ಥಿತಿ

ರಾಮ್ ಸೇನಾ ಶ್ರೀ ಲಕ್ಷ್ಮೀನರಸಿಂಹ ಘಟಕದ ಉದ್ಘಾಟನೆ ಭಾನುವಾರ ನಗರದ ಬಿ.ಎಚ್ ರಸ್ತೆ ಕಡದಕಟ್ಟೆ ಐಟಿಐ ಸಮೀಪದ ವಿದ್ಯಾಧಿರಾಜ ಸಭಾಭವನದಲ್ಲಿ ನಡೆಯಿತು. ಈ ಸಂಬಂಧ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ರಾಮ್ ಸೇನಾ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭದ್ರಾವತಿ, ಫೆ. ೨೮: ರಾಮ್ ಸೇನಾ ಶ್ರೀ ಲಕ್ಷ್ಮೀನರಸಿಂಹ ಘಟಕದ ಉದ್ಘಾಟನೆ ಭಾನುವಾರ ನಗರದ ಬಿ.ಎಚ್ ರಸ್ತೆ ಕಡದಕಟ್ಟೆ ಐಟಿಐ ಸಮೀಪದ ವಿದ್ಯಾಧಿರಾಜ ಸಭಾಭವನದಲ್ಲಿ ನಡೆಯಿತು.
      ಉದ್ಘಾಟನೆ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. ಸುಮಾರು ೫೦ ದಂಪತಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಪ್ರಸಾದ ವಿತರಣೆ ನಡೆಯಿತು.
ರಾಮ್ ಸೇನಾ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಶ್ರೀ ಲಕ್ಷ್ಮೀನರಸಿಂಹ ನೂತನ ಘಟಕ ಉದ್ಘಾಟಿಸಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಕಾರ್ಯಕರ್ತರನ್ನು ಅಭಿನಂದಿಸುವ ಮೂಲಕ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವಂತೆ ಕರೆ ನೀಡಿದರು.  
    ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಹಾ.ರಾಮಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ರಾಮ್‌ಸೇನಾ ರಾಜ್ಯ ಕಾರ್ಯದರ್ಶಿಗಳಾದ ಮಂಜುನಾಥ ಗುಲ್ಜಾರ್, ಸಂತೋಷ್‌ಶೆಟ್ಟಿ, ಜಿಲ್ಲಾಧ್ಯಕ್ಷ ಉಮೇಶ್‌ಗೌಡ, ಮುಖಂಡ ಬಾಬು ಶಶಿಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
           ನೂತನ ಅಧ್ಯಕ್ಷರು ಪದಾಧಿಕಾರಿಗಳು:
  ಅಧ್ಯಕ್ಷರಾಗಿ ಅವಿನಾಶ್, ಉಪಾಧ್ಯಕ್ಷರಾಗಿ ಪ್ರವೀಣ್‌ಕುಮಾರ್, ರಮೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ್, ಕಾರ್ತಿಕ್, ಸೋಷಿಯಲ್ ಮೀಡಿಯಾ ಮೇಲ್ವಿಚಾರಕರಾಗಿ ಪವನ್, ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್, ರೋಹಿತ್, ಕಾರ್ಯದರ್ಶಿಗಳಾಗಿ ಸುನಿಲ್, ಸಂಜಯ್, ಪ್ರಭಾಕರ್, ಆನಂದ್, ರಿತೀನ, ಅಭಿ, ಲೋಕೇಶ್ ಮತ್ತು ದರ್ಶನ್ ಪದಗ್ರಹಣ ಸ್ವೀಕರಿಸಿದರು.