Saturday, October 14, 2023

ಭದ್ರಾವತಿ ನಗರಸಭೆ : ನಾಡಹಬ್ಬ ದಸರಾ ಆಚರಣೆಗೆ ಭರದ ಸಿದ್ಧತೆ

ಪ್ರತಿ ವರ್ಷದಂತೆ ಈ ಬಾರಿ ಸಹ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಭದ್ರಾವತಿ ನಗರಸಭೆ ಕಛೇರಿ ಕಲಾವಿದ ಗುರುರವರ ಕೈಚಳಕದಲ್ಲಿ ಕಂಗೊಳಿಸುತ್ತಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.
    ಭದ್ರಾವತಿ: ನಗರಸಭೆ ವತಿಯಿಂದ ನಾಡಹಬ್ಬ ದಸರಾ ಆಚರಣೆಗೆ ಭರದ ಸಿದ್ಧತೆಗಳು ನಡೆದಿದ್ದು, ಅ.೧೫ರಂದು ಬೆಳಿಗ್ಗೆ ಸಮಾಜ ಸೇವಕರಾದ ಪಿ. ವೆಂಕಟರಮಣ ಶೇಟ್‌ರವರು ಚಾಲನೆ ನೀಡಲಿದ್ದಾರೆ.
    ನಾಡಹಬ್ಬ ಹಿನ್ನಲೆಯಲ್ಲಿ ನಗರದ ವಿವಿಧೆಡೆ ಪ್ರಮುಖ ವೃತ್ತಗಳಲ್ಲಿ ಅಲಂಕಾರ ಕೈಗೊಳ್ಳಲಾಗಿದ್ದು, ಅದರಲ್ಲೂ ಈ ಬಾರಿ ವಿಶೇಷ ಎಂದರೆ ವಿದ್ಯುತ್ ದೀಪಗಳ ಅಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ಕಛೇರಿ ಕಲಾವಿದ ಗುರುರವರ ಕೈಚಳಕದಲ್ಲಿ ಕಂಗೊಳಿಸುತ್ತಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.


ಭದ್ರಾವತಿ ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ನೇತೃತ್ವದ ತಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರನ್ನು ಭೇಟಿಯಾಗಿ ದಸರಾ ಆಚರಣೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಲಾಗಿದೆ.
    ಬಿ.ಎಸ್.ವೈ & ಬಿ.ವೈ.ಆರ್ ಆಹ್ವಾನ:
    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ನೇತೃತ್ವದ ತಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರನ್ನು ಭೇಟಿಯಾಗಿ ದಸರಾ ಆಚರಣೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಲಾಗಿದೆ.
    ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿ, ಜಿಲ್ಲಾ ಯೋಜನಾ ನಿರ್ದೇಶಕರು ಸೇರಿದಂತೆ ಗಣ್ಯರನ್ನು ಆಹ್ವಾನಿಸಲಾಗಿದೆ. ಪೌರಾಯುಕ್ತ ಎಚ್.ಎಂ ಮನುಕುಮಾರ್, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗು ಸದಸ್ಯರು ತಂಡದಲ್ಲಿ ಪಾಲ್ಗೊಂಡಿದ್ದರು.

ಅ.೨೪ರವರೆಗೆ ನವರಾತ್ರಿ ಮಹೋತ್ಸವ

ಶ್ರೀ ಮಾರಿಯಮ್ಮ
    ಭದ್ರಾವತಿ: ನ್ಯೂಟೌನ್ ಶ್ರೀ ಮಾರಿಯಮ್ಮನವರ ದೇವಸ್ಥಾನದಲ್ಲಿ ಅ.೨೪ರವರೆಗೆ ನವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ಅಮ್ಮನವರಿಗೆ ವಿವಿಧ ಅಲಂಕಾರಗಳು ನಡೆಯಲಿವೆ.
    ಪ್ರತಿದಿನ ಬೆಳಿಗ್ಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ದೇವಿ ಪಾರಾಯಣ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ಮತ್ತು ಸಂಜೆ ೭ ಗಂಟೆಗೆ ಭಜನೆ ಮತ್ತು ಸಂಗೀತ, ೮.೩೦ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
    ಅಮ್ಮನವರಿಗೆ ಅ.೧೫ರಂದು ವಿಶಾಲಾಕ್ಷಿ, ೧೬ರಂದು ಮೀನಾಕ್ಷಿ, ೧೭ರಂದು ಕಾಮಾಕ್ಷಿ, ೧೮ರಂದು ಮೂಕಾಂಬಿಕ, ೧೯ರಂದು ಅನ್ನಪೂರ್ಣೇಶ್ವರಿ, ೨೦ರಂದು ಸರಸ್ವತಿ, ೨೧ರಂದು ಲಕ್ಷ್ಮೀ, ೨೨ರಂದು ದುರ್ಗಾ ಮತ್ತು ೨೩ರಂದು ರಾಜರಾಜೇಶ್ವರಿ ಅಲಂಕಾರ ಕೈಗೊಳ್ಳಲಾಗುವುದು. ೨೭ರಂದು ಶಾಂತಿಪೂಜೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.