Sunday, December 24, 2023

ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆ : ಉಪ್ಪಾರರು ಸಂಘಟನೆಗೊಳ್ಳಲಿ, ಸಮಾಜದ ಮುನ್ನಲೆಗೆ ಬರಲಿ

ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ದೇಶಾದ್ಯಂತ ರಥಯಾತ್ರೆ

ಉಪ್ಪಾರ ಸಮುದಾಯದ ಜನಜಾಗೃತಿಗಾಗಿ ದೇಶಾದ್ಯಂತ ಹಮ್ಮಿಕೊಂಡಿರುವ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆ ಭದ್ರಾವತಿ ನಗರಕ್ಕೆ ಆಗಮಿಸಿತು. ಹಳೇನಗರದ ಬಸವೇಶ್ವರ ವೃತ್ತದಲ್ಲಿ ಉಪ್ಪಾರ ಸಮಾಜದ ಗುರುಗಳಾದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
    ಭದ್ರಾವತಿ: ಉಪ್ಪಾರ ಸಮುದಾಯದ ಜನಜಾಗೃತಿಗಾಗಿ ದೇಶಾದ್ಯಂತ ಹಮ್ಮಿಕೊಂಡಿರುವ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆ ನಗರಕ್ಕೆ ಆಗಮಿಸಿತು.
    ಗಾಂಧಿನಗರ ವೃತ್ತಕ್ಕೆ ಆಗಮಿಸಿದ ರಥಯಾತ್ರೆಯನ್ನು ಶಿವಮೊಗ್ಗ ಜಿಲ್ಲಾ ಭಗೀರಥ ಉಪ್ಪಾರ ಸಂಘ ಹಾಗು ತಾಲೂಕು ಸಂಘದ ಪದಾಧಿಕಾರಿಗಳು, ಪ್ರಮುಖರು ಸ್ವಾಗತಿಸಿದರು. ನಂತರ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಉಪ್ಪಾರ ಸಮಾಜದ ಗುರುಗಳಾದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
    ದೇಶಾದ್ಯಂತ ಸುಮಾರು ೧೧ ಕೋಟಿಗೂ ಹೆಚ್ಚಿನ ಜನಸಂಖ್ಯೆಯಲ್ಲಿರುವ ಉಪ್ಪಾರರು ವಿವಿಧ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಿಗೆ ಅನುಸಾರವಾಗಿ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಉಪ್ಪಾರರನ್ನು ಜನಜಾಗೃತಿಗೊಳಿಸಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗು ರಾಜಕೀಯವಾಗಿ ಸಮಾಜದ ಮುನ್ನಲೆಗೆ ತರುವ ಉದ್ದೇಶದಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಉಪ್ಪಾರರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಬೇಕೆಂದು ಕರೆ ನೀಡಲಾಯಿತು.  
    ಜಿಲ್ಲಾ ಸಂಘದ ಅಧ್ಯಕ್ಷ ಎಚ್.ಟಿ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ, ಖಜಾಂಚಿ ನಾಗರಾಜ್ ಕಂಕಾರಿ, ಉಪಾಧ್ಯಕ್ಷರಾದ ಬೊಮ್ಮನಕಟ್ಟೆ ಮಂಜುನಾಥ್,  ಉಮೇಶ್ ಕಟ್ಟಾ, ಜಿಲ್ಲಾ ನಿರ್ದೇಶಕ ಎಸ್. ರಾಜಶೇಖರ್, ತಾಲೂಕು ಅಧ್ಯಕ್ಷ ರವಿಕುಮಾರ್, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭಾ ಸದಸ್ಯೆ ಅನುಪಮ ಚನ್ನೇಶ್, ಸಮಾಜದ ಪ್ರಮುಖರಾದ ರವೀಶ್, ಅವಿನಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಡಿ.೨೬ರಂದು ಕನ್ನಡ ರಾಜ್ಯೋತ್ಸವ, ಅಪೇಕ್ಷ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ

    ಭದ್ರಾವತಿ: ಅಪೇಕ್ಷ ನೃತ್ಯ ಕಲಾವೃಂದ, ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಡಿ.೨೬ರ ಮಂಗಳವಾರ ಮಧ್ಯಾಹ್ನ ೩ ಗಂಟೆಗೆ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಕನ್ನಡ ರಾಜ್ಯೋತ್ಸವ, ಸಂಗೀತ ಸಂಭ್ರಮ ಹಾಗು ಅಪೇಕ್ಷ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
    ಸಂಗೀತ ಸಂಭ್ರಮ ಮಧ್ಯಾಹ್ನ ೩ ಗಂಟೆಗೆ ಆರಂಭವಾಗಲಿದ್ದು, ತಬಲ ವಾದಕ ದೇವನೂರು ರುದ್ರೇಶ್, ರಿದಮ್ ಪ್ಯಾಡ್ ವಾದಕ ಮೋಹನ್‌ಕುಮಾರ್, ಕೀ ಬೋರ್ಡ್ ವಾದಕ ಅಂತೋಣಿ ಮ್ಯಾಥ್ಯೂಸ್, ಗಾಯಕ ಡಾ. ಶ್ರೀಧರ್ ಕುಲಕರ್ಣಿ, ವಿದುಷಿ ಶೃತಿ ಕುಲಕರ್ಣಿ ಮತ್ತು  ಜ್ಯೂನಿಯರ್ ವಿಷ್ಣುವರ್ಧನ್ ಅಪೇಕ್ಷ ಮಂಜುನಾಥ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
    ಸಂಜೆ ೬ ಗಂಟೆಗೆ ವಿವಿಧ ಕ್ಷೇತ್ರದ ಸಾಧಕರಿಗೆ ಅಪೇಕ್ಷ ರಾಜ್ಯ ಪ್ರಶಸ್ತಿ ಪ್ರದಾನ ೨೦೨೨ ಹಾಗು ೨೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕುವರ/ಕುವರಿ ಪ್ರಶಸ್ತಿ ಪ್ರದಾನ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಪೇಕ್ಷ ನೃತ್ಯ ಕಲಾ ವೃಂದ ಅಧ್ಯಕ್ಷೆ ಭಾರತಿ ಗೋವಿಂದಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಮೊಗ್ಗ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸಿ.ಆರ್ ಪರಮೇಶ್ವರಪ್ಪ ಅಪೇಕ್ಷ ರಾಜ್ಯ ಪ್ರಶಸ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್ ಕನ್ನಡ ಕುವರ/ಕುವರಿ ಪ್ರಶಸ್ತಿ ಹಾಗು ಸಮಾಜ ಸೇವಕ ಸ್ನೇಹಜೀವಿ ಉಮೇಶ್ ವೀರಯೋಧ ಮುರಳಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಿವೃತ್ತ ಪ್ರಾಧ್ಯಾಪಕಿ ಪ್ರೊ.ಎಸ್.ಎಸ್ ವಿಜಯಾದೇವಿ, ನಗರಸಭೆ ಸದಸ್ಯೆ ಬಿ.ಟಿ ನಾಗರಾಜ್, ವೈದ್ಯ ಡಾ. ಶಿವಪ್ರಕಾಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಸಂಸ್ಥಾಪಕಿ ಲತಾ ರಾಬರ್ಟ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಲ್. ದೇವರಾಜು ಮತ್ತು ಡಾ. ವಿಷ್ಣು ಸೇವಾ ಸಮಿತಿ ಅಧ್ಯಕ್ಷ ಎಂ. ಶ್ರೀನಿವಾಸ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ವಿಜೃಂಭಣೆಯಿಂದ ಜರುಗಿದ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

ಭದ್ರಾವತಿ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಪ್ರತಿ ವರ್ಷದಂತೆ ಈ ಬಾರಿ ಸಹ ಭಾನುವಾರ ಅದ್ದೂರಿಯಾಗಿ ಜರುಗಿತು. . ಭಕ್ತರಿಂದ ಈಡುಕಾಯಿ ಹರಕೆ ಸಮರ್ಪಣೆ ನಡೆಯಿತು.
    ಭದ್ರಾವತಿ: ನಗರದ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಪ್ರತಿ ವರ್ಷದಂತೆ ಈ ಬಾರಿ ಸಹ ಭಾನುವಾರ ಅದ್ದೂರಿಯಾಗಿ ಜರುಗಿತು.
    ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ ಪ್ರಧಾನ ಹೋಮ, ರಥಶುದ್ಧಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಮಧ್ಯಾಹ್ನ ೧೨.೩೦ಕ್ಕೆ ಸ್ವಾಮಿಯ ರಥೋತ್ಸವ ನಡೆಯಿತು. ದೇವಸ್ಥಾನದ ಮುಂಭಾಗ ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಶ್ರೀ ಸ್ವಾಮಿಗೆ ಜಯಘೋಷಗಳನ್ನು ಹಾಕುವ ಮೂಲಕ ಸಂಭ್ರಮಿಸಿದರು. ನಗರದ ವಿವಿಧ ಭಜನೆ ತಂಡಗಳಿಂದ ಭಜನೆ ನಡೆಯಿತು.
    ರಥೋತ್ಸವ ಸರ್.ಎಂ ವಿಶ್ವೇಶ್ವರಾಯ ಆಟೋ ನಿಲ್ದಾಣದವರೆಗೆ ಬಂದು ತಲುಪಿತು. ಭಕ್ತರಿಂದ ಈಡುಕಾಯಿ ಹರಕೆ ಸಮರ್ಪಣೆ ನಡೆಯಿತು. ನಂತರ ಭಕ್ತರಿಗೆ ಸೇವಾಕರ್ತರಿಂದ ಮಜ್ಜಿಗೆ, ಪಾನಕ, ಕೋಸಂಬರಿ ಸೇರಿದಂತೆ ಇನ್ನಿತರ ಪ್ರಸಾದ ವಿತರಣೆ ನಡೆಯಿತು. ಪ್ರತಿ ವರ್ಷದಂತೆ ಈ ಬಾರಿ ಸಹ ಸೇವಾಕರ್ತರಾದ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಸಿ ದಾಸೇಗೌಡ ಅವರಿಂದ ಅನ್ನಸಂತರ್ಪಣೆ ನೆರವೇರಿತು.
    ರಥೋತ್ಸವದಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.