Sunday, January 31, 2021

ಬಸವೇಶ್ವರ ವೃತ್ತದಲ್ಲಿ ೧೨ ಅಡಿ ನಂದಿ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ೧೨ ಅಡಿ ಎತ್ತರದ ನಂದಿ ಪ್ರತಿಮೆ(ಬಸವಣ್ಣ) ನಿರ್ಮಾಣಕ್ಕೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ ಭೂಮಿ ಪೂಜೆ ನೆರವೇರಿಸಿದರು.
   ಭದ್ರಾವತಿ, ಜ. ೩೧: ಹಳೇನಗರದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ೧೨ ಅಡಿ ಎತ್ತರದ ನಂದಿ ಪ್ರತಿಮೆ(ಬಸವಣ್ಣ) ನಿರ್ಮಾಣಕ್ಕೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ ಭೂಮಿ ಪೂಜೆ ನೆರವೇರಿಸಿದರು.
   ಬಸವೇಶ್ವರ ವೃತ್ತವನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸಿ ಶಿಥಿಲಗೊಂಡಿರುವ ಪ್ರತಿಮೆಯನ್ನು ತೆರವುಗೊಳಿಸಿ ಹೊಸ ಪ್ರತಿಮೆ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇದ್ದು, ಈ ಹಿನ್ನಲೆಯಲ್ಲಿ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
  ಪ್ರಮುಖರಾದ ಬಿ.ಎಸ್ ಗಣೇಶ್, ಪರಶುರಾಮ್, ಮಹೇಶ್, ರಾಜು, ರಮಾಕಾಂತ, ಹಾಲೇಶ್, ರವಿಕುಮಾರ್, ರೇವಣ್ಣ, ಗುರುರಾಜ್, ಶಿವಾನಂದ್, ಬಿ.ಪಿ ರಾಘವೇಂದ್ರ, ಅಣ್ಣೋಜಿರಾವ್, ಗುತ್ತಿಗೆದಾರ ಬಾಲಾಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಫೆ.೨೭, ೨೮ರಂದು ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಮಾದರಿ ಪಂದ್ಯಾವಳಿ

ಫೆ.೨೭, ೨೮ರಂದು ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಮಾದರಿ ಪಂದ್ಯಾವಳಿ ಭದ್ರಾವತಿಯಲ್ಲಿ ಆಯೋಜಿಸಿರುವ ಕುರಿತು ಅಂತರಾಷ್ಟ್ರೀಯ ಕಬಡ್ಡಿ ಆಟಗಾರರಾದ ಕೃಷ್ಣೇಗೌಡ ಮತ್ತು ಎಚ್.ಆರ್ ರಂಗನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
   ಭದ್ರಾವತಿ, ಜ. ೩೧: ತಾಲೂಕಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಭದ್ರಾ ಯೂತ್ ಕಬಡ್ಡಿ(ಬಿವೈಕೆ) ವತಿಯಿಂದ ಕರ್ನಾಟಕ ರಾಜ್ಯ ಅಮೆಚೂರ್ ಅಸೋಸಿಯೇಷನ್ ಹಾಗು ಜಿಲ್ಲಾ ಅಮೆಚೂರ್ ಅಸೋಸಿಯೇಷನ್ ಮತ್ತು ಶಾಸಕ ಬಿ.ಕೆ ಬಿ.ಕೆ ಸಂಗಮೇಶ್ವರ್‌ರವರ ಸಹಕಾರದೊಂದಿಗೆ ಫೆ. ೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ (ಮ್ಯಾಟ್) ಮಾದರಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಂತರಾಷ್ಟ್ರೀಯ ಕಬಡ್ಡಿ ಆಟಗಾರರಾದ ಕೃಷ್ಣೇಗೌಡ ಮತ್ತು ಎಚ್.ಆರ್ ರಂಗನಾಥ್ ತಿಳಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಕೀರ್ತಿ ತಂದಿರುವ ಕ್ರೀಡಾಪಟುಗಳಿದ್ದು, ಕಬಡ್ಡಿ ಕ್ರೀಡೆ ತನ್ನದೇ ಆದ ಹಿರಿಮೆಯನ್ನು ಹೊಂದಿದೆ.  ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
    ಈಗಾಗಲೇ ಡಿ.೨೭ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಪಟುಗಳ ಆಯ್ಕೆ ನಡೆಸಲಾಗಿದೆ. ೮ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.  ಮೊದಲ ೪ ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಪಿಗಳನ್ನು ವಿತರಿಸಲಾಗುವುದು. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾವಳಿ ಯಶಸ್ವಿಗೊಳಿಸುವಂತೆ ಕೋರಿದರು.
   ರಾಜ್ಯಮಟ್ಟದ ಆಟಗಾರರಾದ ಶ್ರೀನಿವಾಸ್, ಚಂದ್ರಶೇಖರ್, ಮಾರ್ಕಂಡಯ್ಯ, ವಿಶ್ವನಾಥ್, ಅಂತರಾಷ್ಟ್ರೀಯ ತೀರ್ಪುಗಾರರಾದ ಸಿದ್ದಯ್ಯ, ಬಸವರಾಜ್, ಜಗದೀಶ್, ದಾಸಿ, ಗೋಪಿ, ನಗರಸಭೆ ಮಾಜಿ ಸದಸ್ಯ ಚನ್ನಪ್ಪ, ನಗರ ಆಶ್ರಯ ಸಮಿತಿ ಸದಸ್ಯ ದೇವರಾಜ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.  

ಯಾರಿಗೂ ಅಧಿಕಾರ ಮುಖ್ಯವಲ್ಲ, ಬೆಳೆದು ಬಂದ ದಾರಿ ಮುಖ್ಯ : ಶಿಮೂಲ್ ಅಧ್ಯಕ್ಷ ಆನಂದ್

ಭದ್ರಾವತಿ ಜನ್ನಾಪುರ ಹುತ್ತಾಕಾಲೋನಿ ಚಂದ್ರಾಲಯದಲ್ಲಿ ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಎಂ.ಜೆ ಅಪ್ಪಾಜಿ ಒಂದು ನೆನಪು ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಶಾರದ ಅಪ್ಪಾಜಿ ಉದ್ಘಾಟಿಸಿದರು.
   ಭದ್ರಾವತಿ, ಜ. ೩೧: ಯಾರಿಗೂ ಅಧಿಕಾರ ಮುಖ್ಯವಲ್ಲ. ಬೆಳೆದು ಬಂದ ದಾರಿ, ಬೆಳೆಯಲು ಕಾರಣಕರ್ತದವರು ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕು.  ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಆನಂದ್ ಹೇಳಿದರು.
   ಅವರು ಭಾನುವಾರ ಜನ್ನಾಪುರ ಹುತ್ತಾಕಾಲೋನಿ ಚಂದ್ರಾಲಯದಲ್ಲಿ ಎಂ.ಜೆ ಅಪ್ಪಾಜಿ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಂ.ಜೆ ಅಪ್ಪಾಜಿ ಒಂದು ನೆನಪು ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರ ರಾಜಕೀಯ ಜೀವನ ವೈಶಿಷ್ಟ ಪೂರ್ಣವಾಗಿದ್ದು, ಅವರು ಎಂದಿಗೂ ಕುಟುಂಬ ರಾಜಕಾರಣ ಮಾಡಲಿಲ್ಲ. ಅವರು ನಂಬಿ ಬಂದವರನ್ನು ಅಧಿಕಾರ ಇರಲಿ, ಇಲ್ಲದಿರಲಿ ಕೊನೆಯವರೆಗೂ ಕೈಬಿಡಲಿಲ್ಲ. ತಮ್ಮದೇ ಆದ ವರ್ಚಸ್ಸು, ಅಭಿಮಾನ ಬಳಗ ಹೊಂದಿದ್ದರು. ಅವರು ನಿಧನ ಹೊಂದಿದ ನಂತರ ಕೆಲವು ಹಿಂಬಾಲಕರು ಸುಳ್ಳು ಹೇಳಿಕೆಗಳನ್ನು ನೀಡುವ ಜೊತೆಗೆ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸದಲ್ಲಿ ತೊಡಗಿದ್ದಾರೆಂದು ಹೆಸರು ಹೇಳದೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
   ನಾನು ಶಿಮೂಲ್ ಅಧ್ಯಕ್ಷನಾಗಲು ಎಂ.ಜೆ ಅಪ್ಪಾಜಿಯವರು ಕಾರಣಕರ್ತರಾಗಿದ್ದು, ಅವರ ಋಣ ತೀರಿಸಲು ಸಾಧ್ಯವಿಲ್ಲ. ಅವರು ಬದುಕಿರುವಾಗ ಅವರಿಗೆ ನೀಡುತ್ತಿದ್ದ ಗೌರವವನ್ನು ಅವರ ನಿಧನ ಹೊಂದಿದ ನಂತರವೂ ಸಹ ನೀಡುತ್ತಿದ್ದೇನೆ. ಅಭಿಮಾನಿಗಳು, ಕಾರ್ಯಕರ್ತರಲ್ಲೂ ಇದೆ ಭಾವನೆ ಇದೆ ಎಂದು ಭಾವಿಸಿರುತ್ತೇನೆ. ಆದರೆ ಅಪ್ಪಾಜಿಯವರ ನೆರವಿನಿಂದ ಇಂದು ರಾಜಕಾರಣದಲ್ಲಿ ಮುಂದೆ ಬಂದವರು ಅವರನ್ನು ಇಂದು ಅಗೌರವದಿಂದ ಕಾಣುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
  ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಮಾತನಾಡಿ, ಅಪ್ಪಾಜಿಯವರ ಹೆಸರು ಹೇಳಿಕೊಳ್ಳುವುದೇ ಒಂದೇ ದೊಡ್ಡ ಗೌರವವಾಗಿದೆ. ಈ ಗೌರವದ ಮುಂದೆ ಯಾವ ಅಧಿಕಾರವೂ ದೊಡ್ಡದಲ್ಲ. ಅಪ್ಪಾಜಿಯವರು ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ಕ್ಷೇತ್ರದ ಜನರು ಕೊನೆಯವರೆಗೂ ಮರೆಯುವುದಿಲ್ಲ. ಯಾರೋ ಕೆಲವು ಬೆಂಬಲಿಗರು ಬಿಟ್ಟು ಹೋಗಬಹುದು. ಅದಕ್ಕೆ ಯಾರು ಸಹ ಚಿಂತಿಸಬೇಕಾದ ಅಗತ್ಯವಿಲ್ಲ. ಬಿಟ್ಟು ಹೋದವರ ಪೈಕಿ ಎರಡರಷ್ಟು ಮಂದಿ ಪುನಃ ಹಿಂದಿರುಗಿ ಬರಲಿದ್ದಾರೆ. ಅಪ್ಪಾಜಿಯವರ ಕುಟುಂಬ ಪುನಃ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ. ಶಾರದ ಅಪ್ಪಾಜಿಯವರು ಎಲ್ಲಾ ಅಭಿಮಾನಿಗಳಿಗೂ, ಕಾರ್ಯಕರ್ತರಿಗೂ ಮಾರ್ಗದರ್ಶಕರಾಗಿ ಮುನ್ನಡೆಸಿಕೊಂಡು ಹೋಗುವ ವಿಶ್ವಾಸವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾರದ ಅಪ್ಪಾಜಿ, ಅಭಿಮಾನಿಗಳು, ಕಾರ್ಯಕರ್ತರು ಅಪ್ಪಾಜಿಯವರ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚಿರಋಣಿಯಾಗಿರುತ್ತೇನೆ. ಅಪ್ಪಾಜಿಯವರಿಗೆ ನೀಡುತ್ತಿದ್ದ ಸಹಕಾರ, ಪ್ರೋತ್ಸಾಹ ನಾನು ಸಹ ನಿರೀಕ್ಷಿಸುತ್ತೇನೆ. ಕೊನೆಯವರೆಗೂ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತೇನೆಂದು ಭರವಸೆ ನೀಡಿದರು.
   ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದ ಪೂರ‍್ಯಾನಾಯ್ಕ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಹಿರಿಯ ಮುಖಂಡ ಕರಿಯಪ್ಪ, ನ್ಯಾಯವಾದಿ ಎ.ಟಿ ರವಿ ಸೇರಿದಂತೆ ಇನ್ನಿತರರು ಮಾತನಾಡಿದರು.
   ನಗರಸಭಾ ಸದಸ್ಯರಾದ ಎಚ್.ಬಿ ರವಿಕುಮಾರ್, ಆನಂದ್, ಮುಖಂಡರಾದ ಬಸವರಾಜ ಆನೇಕೊಪ್ಪ, ಧರ್ಮರಾಜ್, ಕೆ. ಮಂಜುನಾಥ್, ಉಮೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ಜೆಡಿಎಸ್ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಕೃಷ್ಣರಾಜ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ನಗರಸಭಾ ಸದಸ್ಯೆ ಎಂ.ಎಸ್ ಸುಧಾಮಣಿ ವಂದಿಸಿದರು.

ಅಂಗವೈಕಲ್ಯದಿಂದ ಮುಕ್ತಿ ಹೊಂದಿ ಆರೋಗ್ಯವಂತರಾಗಿ ಬೆಳೆಯಲು ಪಲ್ಸ್ ಪೋಲಿಯೋ ಸಹಕಾರಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಭಾನುವಾರ ಆರೋಗ್ಯ ಇಲಾಖೆ ವತಿಯಿಂದ ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪೊಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.  
   ಭದ್ರಾವತಿ, ಜ. ೩೧: ಅಂಗವೈಕಲ್ಯದಿಂದ ಮುಕ್ತಿಹೊಂದುವ ಜೊತೆಗೆ ಸದೃಢವಾಗಿ ಆರೋಗ್ಯವಂತರಾಗಿ ಬೆಳೆಯಲು ಪಲ್ಸ್ ಪೋಲಿಯೋ ಹೆಚ್ಚು ಸಹಕಾರಿಯಾಗಿದ್ದು, ಪ್ರತಿಯೊಬ್ಬರು ನಿರ್ಲಕ್ಷ್ಯವಹಿಸದೆ ತಮ್ಮ ೫ ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
   ಅವರು ಭಾನುವಾರ ಆರೋಗ್ಯ ಇಲಾಖೆ ವತಿಯಿಂದ ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪೊಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೋಲಿಯೋ ದುಷ್ಪರಿಣಾಮಗಳು ಎಲ್ಲರಿಗೂ ತಿಳಿದಿದೆ. ಈ ಹಿಂದೆ ದೇಶದಲ್ಲಿ ಸಾಕಷ್ಟು ಜನರು ಅಂಗವೈಕಲ್ಯಕ್ಕೆ ಒಳಗಾಗಿ ಸಂಕಷ್ಟದ ಬದುಕು ನಡೆಸಿದ್ದರು. ಭವಿಷ್ಯದಲ್ಲಿ ಪುನಃ ಪೋಲಿಯೋ ಕಾಣಿಸಿಕೊಳ್ಳಬಾರದೆಂಬ ಧ್ಯೇಯದೊಂದಿಗೆ  ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಳು ನಡೆದು ಪಲ್ಸ್ ಪೋಲಿಯೋ ಕಂಡು ಹಿಡಿಯಲಾಯಿತು. ಆ ನಂತರ ದೇಶಾದ್ಯಂತ ನಿರಂತರವಾಗಿ ೫ ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕಲಾಗುತ್ತಿದೆ. ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ಹಾಕಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.  
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ತಾಲೂಕಿನಾದ್ಯಂತ ಪಲ್ಸ್ ಪೋಲಿಯೋ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಅಲೆಮಾರಿ ಹಾಗು ವಲಸೆ ಕಾರ್ಮಿಕ ಕುಟುಂಬಗಳನ್ನು ಗುರುತಿಸಿ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹಾಕಲಾಗುತ್ತಿದೆ. ಭಾರತ ದೇಶ ೨೦೧೧ರಲ್ಲಿಯೇ ಪೋಲಿಯೋ ಮುಕ್ತವಾಗಿದ್ದು, ಪಾಕಿಸ್ತಾನ, ಅಪ್ಘಾನಿಸ್ತಾನ ಸೇರಿದಂತೆ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಪೋಲಿಯೋ ಇನ್ನೂ ಜೀವಂತವಾಗಿದ್ದು, ಈ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ದೇಶದಲ್ಲಿ ಪಲ್ಸ್ ಪೋಲಿಯೋ ಹಾಕಲಾಗುತ್ತಿದೆ ಎಂದರು.
  ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಓ. ಮಲ್ಲಪ್ಪ, ರೇವತಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುಂದರ್‌ಬಾಬು, ರಮಾಕಾಂತ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಂ ಶಾಂತಕುಮಾರ್, ಕಾರ್ಯದರ್ಶಿ ಎಂ.ಎನ್ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.