ಭದ್ರಾವತಿಯಲ್ಲಿ ಬುಧವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಹಾಗು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಳ್ಳಲಾಯಿತು.
ಭದ್ರಾವತಿ: ಮಹಿಳೆಯರು ಆಧ್ಯಾತ್ಮಿಕವಾಗಿ ಸಹ ಉನ್ನತಿ ಹೊಂದಬೇಕು. ಆಧ್ಯಾತ್ಮಿಕದೊಂದಿಗೆ ಧ್ಯಾನ-ಯೋಗ ನಮ್ಮ ಎಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡುವ ಶಕ್ತಿ ಹೊಂದಿವೆ. ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ಚುಂಚಾದ್ರಿ ಮಹಿಲಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು.
ಅವರು ಬುಧವಾರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಹಾಗು ಚಿಂತನ ಮಂಥನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಮಹಿಳೆಯರು ಪ್ರಸ್ತುತ ಕೃಷಿ, ಕೈಗಾರಿಕೆ, ಶಿಕ್ಷಣ, ಸಾಮಾಜಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆಂಬುದು ಹೆಮ್ಮೆಯ ವಿಚಾರವಾಗಿದೆ. ಸ್ವಂತ ಆರ್ಥಿಕ ಬಲದ ಮೇಲೆ ಮುನ್ನಡೆಯುತ್ತಿರುವ ಮಹಿಳೆಯರು ಸಾಮಾಜಿಕ ಸೇವಾ ಕಾರ್ಯಗಳು, ಹೋರಾಟಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸೀಮಿತಗೊಳ್ಳಬಾರದು ಆಧ್ಯಾತ್ಮಿಕವಾಗಿ ಸಹ ಬಲಗೊಳ್ಳಬೇಕು. ಆಧ್ಯಾತ್ಮಿಕತೆ ಎಂದರೆ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ದೇವರನ್ನು ಕಾಣುವುದಾಗಿದೆ. ಆದರೆ ಧಾರ್ಮಿಕತೆ ಮೂಲಕ ನಾವೆಲ್ಲರೂ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ಧಾರ್ಮಿಕತೆಯ ಮೂಲ ಅರಿವು ತಿಳಿದುಕೊಳ್ಳಬೇಕು. ಮೌಡ್ಯದಿಂದ ಹೊರಬರಬೇಕು ಎಂದರು.
ಅಷಾಡ ಮಾಸ ಪವಿತ್ರವಾದ ಮಾಸವಾಗಿದ್ದು, ಬಹುತೇಕ ಜನರು ಈ ಮಾಸ ಕುರಿತು ತಪ್ಪು ಅರಿವು ಹೊಂದಿದ್ದಾರೆ. ಈ ಮಾಸ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇದರ ಕುರಿತು ಮಹಿಳೆಯರು ತಿಳಿದುಕೊಳ್ಳುವ ಮೂಲಕ ಇತರರಿಗೆ ತಿಳಿಸಬೇಕೆಂದರು.
ಹುಬ್ಬಳ್ಳಿಯ ಸ್ವಯಂ ಸೇವಾ ಸಂಸ್ಥೆಯ ಮಾಣಿಕ್ಯ ಚಿಲ್ಲೂರು, ಹಾಸನದ ಜವಳಿ ಉದ್ಯಮಿ ಸುಧಾರಾಣಿ, ಬಯೋಟೆಕ್ ಸಂಸ್ಥೆಯ ತಾರಾಮಣಿ ಮತ್ತು ಶಿವಮೊಗ್ಗ ಅಂಭ್ರಣಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಗಾಯಿತ್ರಿ ಮತ್ತು ಚಿಕ್ಕಮಗಳೂರಿನ ಕೃಷ್ಣವೇಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತ ಅನಂತಕುಮಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು. ಪ್ರತಿಭಾ ಸ್ವಾಗತಿಸಿ, ಶೀಲಾ ರವಿ ವಂದಿಸಿದರು.