Tuesday, January 7, 2025

ಅಧ್ಯಕ್ಷರಾಗಿ ಟಿ.ಎಸ್ ದುಗ್ಗೇಶ್, ಉಪಾಧ್ಯಕ್ಷರಾಗಿ ಎಂ. ಮಂಜುಳ ಅವಿರೋಧ ಆಯ್ಕೆ

ಟಿ.ಎಸ್ ದುಗ್ಗೇಶ್ 
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಭಾವಸಾರ ಕ್ಷತ್ರಿಯ ಕೋ-ಆಪರೆಟೀವ್ ಸೊಸೈಟಿ ಅಧ್ಯಕ್ಷರಾಗಿ ಟಿ.ಎಸ್ ದುಗ್ಗೇಶ್ ಹಾಗು ಉಪಾಧ್ಯಕ್ಷರಾಗಿ ಎಂ. ಮಂಜುಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ೨೦೨೫-೨೦೩೦ನೇ ಸಾಲಿನ ೫ ವರ್ಷದ ಅವಧಿಗೆ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಟಿ.ಎಸ್ ದುಗ್ಗೇಶ್ ಅಧ್ಯಕ್ಷರಾಗಿ ಸತತ ೫ನೇ ಬಾರಿಗೆ ಪುನರಾಯ್ಕೆಯಾಗಿದ್ದು, ಈ ಬಾರಿ ಉಪಾಧ್ಯಕ್ಷರಾಗಿ ಎಂ. ಮಂಜುಳಾ ಆಯ್ಕೆಯಾಗಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ ನಿರ್ದೇಶಕರು ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕ ವಿ. ಮೋತಿನಾಯ್ಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 


ಎಂ. ಮಂಜುಳ  
  ಕಾರ್ಯದರ್ಶಿ ಎ.ಎಸ್ ಜಗದೀಶ ಕುಮಾರ್, ಭಾವಸರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರರಾವ್, ಹಿರಿಯ ಮುಖಂಡರಾದ ಎಂ. ಸತೀಶ್, ಆರ್. ಜಗನ್ನಾಥ್, ಶ್ರೀಧರ, ಮಂಜುನಾಥ ಸ್ವಾಮಿ,  ಆರ್. ರಮೇಶ್ ಸೇರಿದಂತೆ ಇನ್ನಿತರರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದ್ದಾರೆ.

ಎನ್. ಶ್ರೀನಿವಾಸ್ ನಿಧನ


ಎನ್. ಶ್ರೀನಿವಾಸ್ 
    ಭದ್ರಾವತಿ: ನಗರದ ಸಿದ್ದಾಪುರ ನಿವಾಸಿ, ಛಲವಾದಿ ಸಮಾಜದ ಮುಖಂಡ ಎನ್. ಶ್ರೀನಿವಾಸ್(೬೩) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಶ್ರೀನಿವಾಸ್ ಮೈನ್ಸ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಇವರ ಅಂತ್ಯಕ್ರಿಯೆ ಬುಧವಾರ ಸಿದ್ದಾಪುರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.  
    ಶ್ರೀನಿವಾಸ್‌ರವರು ಪ್ರಸ್ತುತ ಜಿಲ್ಲಾ ಛಲವಾದಿ ಸಮಾಜದ ಗೌರವಾಧ್ಯಕ್ಷರಾಗಿದ್ದರು. ಅಲ್ಲದೆ ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 
    ಈ ಹಿಂದೆ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ಪ್ರಯತ್ನಿಸಿದ್ದರು. ಇವರ ನೇತೃತ್ವದಲ್ಲಿ ನಗರದಲ್ಲಿ ಜಿಲ್ಲಾಮಟ್ಟದ ಹಾಗು ಜಿಲ್ಲೆಯಲ್ಲಿ ರಾಜ್ಯಮಟ್ಟದ ಛಲವಾದಿಗಳ ಸಮ್ಮೇಳನ ನಡೆಸಲಾಗಿತ್ತು. ಇವರ ನಿಧನಕ್ಕೆ ತಾಲೂಕು ಛಲವಾದಿಗಳ ಮಹಾಸಭಾ ಸೇರಿದಂತೆ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಕೃಷ್ಣಮೂರ್ತಿ ನಿಧನ

ಕೃಷ್ಣಮೂರ್ತಿ 
    ಭದ್ರಾವತಿ: ತಾಲೂಕು ದೇವಾಂಗ ಸಮಾಜದ ಮಾಜಿ ಅಧ್ಯಕ್ಷರು, ಹಳೇನಗರ ಶ್ರೀ ಹಳದಮ್ಮ ದೇವಿ ದೇವಸ್ಥಾನ ಸಮೀಪದ ನಿವಾಸಿ ಕೃಷ್ಣಮೂರ್ತಿ(೫೭) ಸೋಮವಾರ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಕೃಷ್ಣಮೂರ್ತಿಯವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾಯಿ ಗುಂಡಣ್ಣ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದು, ಶ್ರೀ ಹಳದಮ್ಮ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು. 
    ಇವರ ನಿಧನಕ್ಕೆ ನಗರದ ದೇವಾಂಗ ಸಮಾಜದ ಪ್ರಮುಖರು, ಶ್ರೀ ಹಳದಮ್ಮ ದೇವಿ ದೇವಸ್ಥಾನ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.