ಮಂಗಳವಾರ, ಅಕ್ಟೋಬರ್ 14, 2025

ನ್ಯಾಯಮೂರ್ತಿ ಮೇಲೆ ಶೂ ಎಸೆದ ಪ್ರಕರಣ : ಡಿಎಸ್‌ಎಸ್ ಪ್ರತಿಭಟನೆ

ತಪ್ಪಿತಸ್ಥ ವಕೀಲನಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ 

 ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್ ಗವಾಯಿರವರ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಮತ್ತು ಕೃತ್ಯವೆಸಗಿದ ವಕೀಲನ ವಿರುದ್ಧ ಕಠಿಣ ಕ್ರಮಕ್ಕಾಗಿ ಆಗ್ರಹಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ : ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್ ಗವಾಯಿರವರ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಮತ್ತು ಕೃತ್ಯವೆಸಗಿದ ವಕೀಲನ ವಿರುದ್ಧ ಕಠಿಣ ಕ್ರಮಕ್ಕಾಗಿ ಆಗ್ರಹಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.  
    ಪ್ರಮುಖರು ಮಾತನಾಡಿ, ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್ ಗವಾಯಿರವರ ಮೇಲೆ ಶೂ ಎಸೆದು ಅಪಮಾನ ಮಾಡಿರುವ ವಕೀಲನ ಕೃತ್ಯ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ಈ ಕೃತ್ಯದಿಂದ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸುವಂತಾಗಿದೆ ಎಂದರು. 
    ಇದು ಸಂವಿಧಾನದ ಆಶಯಗಳಿಗೆ ಎಸೆದ ಕೃತ್ಯವಾಗಿದ್ದು, ಶೂ ಎಸೆದ ವಕೀಲನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೆ ಆತ ಸನಾತನ ಧರ್ಮದ ಬಗ್ಗೆ ಜೈಕಾರ ಕೂಗಿರುವುದನ್ನು ನೋಡಿದರೆ ನ್ಯಾಯಾಂಗ ವ್ಯವಸ್ಥೆಯನ್ನು ಯಾವುದೋ ಒಂದು ಧರ್ಮಕ್ಕೆ ಬಳಸಿಕೊಳ್ಳುವ ಹುನ್ನಾರ ಅಡಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. 
    ದೇಶದ ಪ್ರತಿಯೊಬ್ಬರು ಇಂತಹ ಕೃತ್ಯ ಧರ್ಮಬೇಧ, ಪಕ್ಷಬೇಧ ಮರೆತು ಖಂಡಿಸಬೇಕಾಗಿದೆ. ಕೃತ್ಯವೆಸಗಿರುವ ವಕೀಲನಿಗೆ ಕಠಿಣ ಶಿಕ್ಷೆಗೆ ಒಳಪಡಿಸುವ ಮೂಲಕ ಭಾರತದ ಸಂವಿಧಾನದ ಅಡಿಯಲ್ಲಿ ನ್ಯಾಯಾಂಗ ವ್ಯವಸ್ಥೆಗಳು ನಿರ್ಭೀತಿಯಿಂದ ನಿರ್ವಹಿಸುವೆಂತೆ ಮಾಡಬೇಕಾದ ಜವಾಬ್ದಾರಿ ಭಾರತದ ಪ್ರಜೆಗಳಾದ ನಮ್ಮೆಲ್ಲರ ಹೊಣೆಯಾಗಿದೆ ಎಂದರು.  ಈ ಹಿನ್ನಲೆಯಲ್ಲಿ ರಾಷ್ಟ್ರಪತಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ರಾಜ್ಯ ಕಾರ್ಯಕಾರಿ ಸಮಿತಿ ಶಿವಬಸಪ್ಪ, ಜಿಲ್ಲಾ ಸಂಚಾಲಕ ಎಂ. ಏಳುಕೋಟಿ,  ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣಪ್ಪ, ಆರ್. ತಮ್ಮಯ್ಯ, ತಾಲೂಕು ಸಂಚಾಲಕ ಎಸ್. ನಾಗರಾಜ್, ಖಜಾಂಚಿ ಜೆ. ವೆಂಕಟೇಶ್, ಬಿ. ಜಗದೀಶ್, ಮಧುಸೂಧನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

೧೩ನೇ ವರ್ಷದ ಓಣಂ ಹಬ್ಬದ ಅಂಗವಾಗಿ ವಿವಿಧ ಸ್ಪರ್ಧೆಗಳು

ಭದ್ರಾವತಿಯಲ್ಲಿ ಕೇರಳ ಸಮಾಜಂ ಮಹಿಳಾ ವಿಭಾಗ ಹಾಗೂ ಕೇರಳ ಸಮಾಜಂ ಯೂತ್ ವಿಂಗ್ ಸಹಯೋಗದಲ್ಲಿ ಅ.೧೯ರ ಭಾನುವಾರ ಆಯೋಜಿಸಲಾಗಿರುವ ಕೇರಳ ಸಮಾಜದ ೧೩ನೇ ವರ್ಷದ ಓಣಂ  ಹಬ್ಬದ ಅಂಗವಾಗಿ ಕುಟುಂಬ ಸದಸ್ಯರುಗಳಿಗೆ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕೇರಳದ ಪ್ರಸಿದ್ಧ ಹೂವಿನ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. 
    ಭದ್ರಾವತಿ:  ಕೇರಳ ಸಮಾಜಂ ಮಹಿಳಾ ವಿಭಾಗ ಹಾಗೂ ಕೇರಳ ಸಮಾಜಂ ಯೂತ್ ವಿಂಗ್ ಸಹಯೋಗದಲ್ಲಿ ಅ.೧೯ರ ಭಾನುವಾರ ಆಯೋಜಿಸಲಾಗಿರುವ ಕೇರಳ ಸಮಾಜದ ೧೩ನೇ ವರ್ಷದ ಓಣಂ  ಹಬ್ಬದ ಅಂಗವಾಗಿ ಕುಟುಂಬ ಸದಸ್ಯರುಗಳಿಗೆ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕೇರಳದ ಪ್ರಸಿದ್ಧ ಹೂವಿನ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. 
     ಸಮಾಜದ ಅಧ್ಯಕ್ಷ  ಗಂಗಾಧರ್‌ರವರು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಕ್ರೀಡೆಗಳನ್ನುದೀಪ ಬೆಳಗಿಸಿ  ಉದ್ಘಾಟಿಸಿದರು. ಸಮಾಜದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್,  ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ಬಾಲಚಂದ್ರನ್, ಯೂತ್ ವಿಂಗ್  ಅಧ್ಯಕ್ಷ ಪ್ರಸನ್ನ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅ.೧೦ರ ಭಾನುವಾರ ಆಯೋಜಿಸಲಾಗಿರುವ ಕೇರಳ ಸಮಾಜದ ೧೩ನೇ ವರ್ಷದ ಓಣಂ ಹಬ್ಬದ ಸಮಾರಂಭದಲ್ಲಿ ವಿತರಿಸಲಾಗುವುದು. 

ಪ್ರತ್ಯೇಕ ಕಾನೂನು ರಚಿಸಿ ಮಾಹಿತಿ ಹಕ್ಕು ಬಳಕೆದಾರರಿಗೆ ರಕ್ಷಣೆ ನೀಡಿ

ರಾಜ್ಯದಲ್ಲಿ ಪ್ರತಿನಿತ್ಯ ಮಾಹಿತಿ ಹಕ್ಕು ಬಳಕೆದಾರರ ಮೇಲೆ ಕೊಲೆ ಮತ್ತು ದಬ್ಬಾಳಿಕೆ ನಡೆಯುತ್ತಿದ್ದು, ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಬಳಕೆದಾರರಿಗೆ ಪ್ರತ್ಯೇಕ ಕಾನೂನು ರಚಿಸುವ   ಮೂಲಕ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಬಳಕೆದಾರರ ಹಿತರಕ್ಷಣಾ ವೇದಿಕೆಯಿಂದ ಭದ್ರಾವತಿಯಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್  ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ರಾಜ್ಯದಲ್ಲಿ ಪ್ರತಿನಿತ್ಯ ಮಾಹಿತಿ ಹಕ್ಕು ಬಳಕೆದಾರರ ಮೇಲೆ ಕೊಲೆ ಮತ್ತು ದಬ್ಬಾಳಿಕೆ ನಡೆಯುತ್ತಿದ್ದು, ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಬಳಕೆದಾರರಿಗೆ ಪ್ರತ್ಯೇಕ ಕಾನೂನು ರಚಿಸುವ   ಮೂಲಕ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಬಳಕೆದಾರರ ಹಿತರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್  ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
     ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಎಲ್ಲಾ ಮಾಹಿತಿ ತಿಳಿಯುವ ಹಕ್ಕು ಪ್ರಜೆಗಳಿಗಿದ್ದು, ಈ ಹಿನ್ನೆಲೆಯಲ್ಲಿ   ಅ.೧೨, ೨೦೦೫ ರಂದು "ಮಾಹಿತಿ ಹಕ್ಕು ಕಾಯ್ದೆ"(ಆರ್.ಟಿ.ಐ) ಯನ್ನು ಜಾರಿಗೆ ತರಲಾಗಿದೆ.  ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡಲು ಈ ದೇಶದ ಪ್ರತಿಯೊಬ್ಬರಿಗೂ ಅಧಿಕಾರ ಇದೆ. ಆದರೆ ಎಲ್ಲಾದಕ್ಕೂ ಸಾಕ್ಷಿ, ಆಧಾರಗಳು ಬೇಕು. ಇದಕ್ಕೆ ಪೂರಕವಾಗಿ ಮಾಹಿತಿ ಪಡೆಯಲು ಪ್ರಜೆಗಳಿಗೆ ಕಲ್ಪಿಸಿ ಕೊಟ್ಟಿರುವ ಏಕೈಕ ವ್ಯವಸ್ಥೆ ``ಮಾಹಿತಿ ಹಕ್ಕು ಕಾಯ್ದೆ''ಯಾಗಿದೆ. ಪ್ರಸ್ತುತ ಭ್ರಷ್ಟ ಆಡಳಿತ ವ್ಯವಸ್ಥೆಯಿಂದಾಗಿ `ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರಿಗೆ ರಕ್ಷಣೆ ಇಲ್ಲದಂತಾಗಿರುವುದು ವಿಪರ್ಯಾಸದ  ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು.
     ದೇಶದಲ್ಲಿ ಹಾಗು ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು, ವಕೀಲರ  ರಕ್ಷಣೆಗೆ ಹಾಗು ಪ್ರಾಣಿಗಳ ರಕ್ಷಣೆಗೂ ಪ್ರತ್ಯೇಕ ಕಾನೂನು ರಚಿಸಲಾಗಿದೆ. ಇದೆ ರೀತಿ ಮಾಹಿತಿ ಹಕ್ಕು ಬಳಕೆದಾರರ ಹಿತರಕ್ಷಣೆಗೂ ಪ್ರತ್ಯೇಕ ಕಾನೂನು ಜಾರಿಗೆ ತರುವಂತೆ ಆಗ್ರಹಿಸಲಾಯಿತು.
     ಪ್ರತಿಭಟನೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತೀರ್ಥೇಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ  ಬಿ. ಎನ್ ರಾಜು, ಕರ್ನಾಟಕ ಮಾಹಿತಿ ಹಕ್ಕು ವೇದಿಕೆಯ ಬಸವರಾಜ್, ವಕೀಲರಾದ ಭರತ್ ಬಿ.ಎಸ್. ಅಬ್ದುಲ್ ಖದೀರ್, ಡಿಎಸ್‌ಎಸ್ ಮುಖಂಡರಾದ ದಾಸರ ಕಲ್ಲಳ್ಳಿ ನಾಗರಾಜ್, ಇಮ್ರಾನ್, ಮಂಜುನಾಥ್, ವಿನೋದ್ ಇನ್ನಿತರರು ಪಾಲ್ಗೊಂಡಿದ್ದರು.