ಮಂಗಳವಾರ, ಅಕ್ಟೋಬರ್ 14, 2025

ನ್ಯಾಯಮೂರ್ತಿ ಮೇಲೆ ಶೂ ಎಸೆದ ಪ್ರಕರಣ : ಡಿಎಸ್‌ಎಸ್ ಪ್ರತಿಭಟನೆ

ತಪ್ಪಿತಸ್ಥ ವಕೀಲನಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ 

 ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್ ಗವಾಯಿರವರ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಮತ್ತು ಕೃತ್ಯವೆಸಗಿದ ವಕೀಲನ ವಿರುದ್ಧ ಕಠಿಣ ಕ್ರಮಕ್ಕಾಗಿ ಆಗ್ರಹಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ : ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್ ಗವಾಯಿರವರ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಮತ್ತು ಕೃತ್ಯವೆಸಗಿದ ವಕೀಲನ ವಿರುದ್ಧ ಕಠಿಣ ಕ್ರಮಕ್ಕಾಗಿ ಆಗ್ರಹಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.  
    ಪ್ರಮುಖರು ಮಾತನಾಡಿ, ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್ ಗವಾಯಿರವರ ಮೇಲೆ ಶೂ ಎಸೆದು ಅಪಮಾನ ಮಾಡಿರುವ ವಕೀಲನ ಕೃತ್ಯ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ಈ ಕೃತ್ಯದಿಂದ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸುವಂತಾಗಿದೆ ಎಂದರು. 
    ಇದು ಸಂವಿಧಾನದ ಆಶಯಗಳಿಗೆ ಎಸೆದ ಕೃತ್ಯವಾಗಿದ್ದು, ಶೂ ಎಸೆದ ವಕೀಲನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೆ ಆತ ಸನಾತನ ಧರ್ಮದ ಬಗ್ಗೆ ಜೈಕಾರ ಕೂಗಿರುವುದನ್ನು ನೋಡಿದರೆ ನ್ಯಾಯಾಂಗ ವ್ಯವಸ್ಥೆಯನ್ನು ಯಾವುದೋ ಒಂದು ಧರ್ಮಕ್ಕೆ ಬಳಸಿಕೊಳ್ಳುವ ಹುನ್ನಾರ ಅಡಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. 
    ದೇಶದ ಪ್ರತಿಯೊಬ್ಬರು ಇಂತಹ ಕೃತ್ಯ ಧರ್ಮಬೇಧ, ಪಕ್ಷಬೇಧ ಮರೆತು ಖಂಡಿಸಬೇಕಾಗಿದೆ. ಕೃತ್ಯವೆಸಗಿರುವ ವಕೀಲನಿಗೆ ಕಠಿಣ ಶಿಕ್ಷೆಗೆ ಒಳಪಡಿಸುವ ಮೂಲಕ ಭಾರತದ ಸಂವಿಧಾನದ ಅಡಿಯಲ್ಲಿ ನ್ಯಾಯಾಂಗ ವ್ಯವಸ್ಥೆಗಳು ನಿರ್ಭೀತಿಯಿಂದ ನಿರ್ವಹಿಸುವೆಂತೆ ಮಾಡಬೇಕಾದ ಜವಾಬ್ದಾರಿ ಭಾರತದ ಪ್ರಜೆಗಳಾದ ನಮ್ಮೆಲ್ಲರ ಹೊಣೆಯಾಗಿದೆ ಎಂದರು.  ಈ ಹಿನ್ನಲೆಯಲ್ಲಿ ರಾಷ್ಟ್ರಪತಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ರಾಜ್ಯ ಕಾರ್ಯಕಾರಿ ಸಮಿತಿ ಶಿವಬಸಪ್ಪ, ಜಿಲ್ಲಾ ಸಂಚಾಲಕ ಎಂ. ಏಳುಕೋಟಿ,  ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣಪ್ಪ, ಆರ್. ತಮ್ಮಯ್ಯ, ತಾಲೂಕು ಸಂಚಾಲಕ ಎಸ್. ನಾಗರಾಜ್, ಖಜಾಂಚಿ ಜೆ. ವೆಂಕಟೇಶ್, ಬಿ. ಜಗದೀಶ್, ಮಧುಸೂಧನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ