Saturday, August 29, 2020

ಎಂಪಿಎಂ ಉದ್ಯೋಗಿ ಬಿ.ವಿ ವೆಂಕಟೇಶ್ ನಿಧನ

ಬಿ.ವಿ ವೆಂಕಟೇಶ್
ಭದ್ರಾವತಿ, ಆ. ೨೯: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಉದ್ಯೋಗಿ ಬಿ.ವಿ ವೆಂಕಟೇಶ್ ಶನಿವಾರ ಹೃದಯಾಘಾತದಿಂದ ನಿಧನ ಹೊಂದಿದರು.
    ಜನ್ನಾಪುರ ರಾಜಪ್ಪ ಲೇಔಟ್‌ನಲ್ಲಿ ವಾಸಿಸುತ್ತಿದ್ದ ಇವರನ್ನು ಎಂಎಸ್‌ಐಎಲ್‌ಗೆ ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಗಿತ್ತು. ಈ ಹಿಂದೆ ಎಂಪಿಎಂ ಸಹಕಾರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು. ಇವರ ನಿಧನಕ್ಕೆ ಎಂಪಿಎಂ ಕಾರ್ಮಿಕರು ಹಾಗೂ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇಂದಿಗೂ ಪರಿಶಿಷ್ಟರು ಮೌಢ್ಯಗಳಿಂದ ಹೊರಬರಲು ಸಾಧ್ಯವಾಗಿಲ್ಲ

ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಹಾಲೇಶಪ್ಪ ವಿಷಾದ

ಭದ್ರಾವತಿ ತಾಲೂಕಿನ ಅರಬಿಳಿಚಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಶಾಖೆ ಉದ್ಘಾಟನಾ ಸಮಾರಂಭ ನಡೆಯಿತು.
ಭದ್ರಾವತಿ, ಆ. ೨೯: ದೇಶದಲ್ಲಿ ಬಹುಸಂಖ್ಯಾತರಾದ ಪರಿಶಿಷ್ಟರು ೨೧ನೇ ಶತಮಾನದಲ್ಲೂ ಮೌಢ್ಯ ಆಚರಣೆಗಳಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಹಾಲೇಶಪ್ಪ ವಿಷಾದ ವ್ಯಕ್ತಪಡಿಸಿದರು.
    ಅವರು ತಾಲೂಕಿನ ಅರಬಿಳಿಚಿ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಮನುಸ್ಮೃತಿಯು ಹೇರಿದ ಮೌಢ್ಯಗಳಿಂದಾಗಿ ಪರಿಶಿಷ್ಟರು ಶೋಷಣೆಗೆ ಒಳಗಾಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ಶೋಷಣೆಗಳ ವಿರುದ್ಧ ಹೋರಾಟ ನಡೆಸುವ ಮೂಲಕ ದೇಶದಲ್ಲಿ ಎಲ್ಲರೂ ಸಮಾನವಾಗಿ ಬದುಕುವ ಸಂವಿಧಾನ ರೂಪಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಪ್ರೊ. ಬಿ. ಕೃಷ್ಣಪ್ಪನವರ ನೇತೃತ್ವದಲ್ಲಿ ಆರಂಭವಾದ ದಲಿತ ಚಳುವಳಿಗಳು ಪರಿಶಿಷ್ಟರ ಮೇಲಿನ  ದೌರ್ಜನ್ಯ, ದಬ್ಬಾಳಿಕೆಗಳನ್ನು ಎದುರಿಸುವಲ್ಲಿ ಆತ್ಮವಿಶ್ವಾಸ ಮೂಡಿಸಿದವು ಎಂದರು.
      ದೇಶದಲ್ಲಿ ಪರಿಶಿಷ್ಟರ ಮೇಲೆ ಇಂದಿಗೂ ದೌರ್ಜನ್ಯ, ದಬ್ಬಾಳಿಕೆಗಳು ಹೆಚ್ಚಾಗುತ್ತಿದ್ದು, ಇವುಗಳ ವಿರುದ್ಧ ಹೋರಾಟ ನಡೆಸಲು ಪರಿಶಿಷ್ಟರು ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಬೇಕಾಗಿದೆ ಎಂದರು.  
ಜಿಲ್ಲಾ ಸಂಘಟನಾ ಸಂಚಾಲಕರಾದ ಎಂ. ಪಳನಿರಾಜ್, ಎಂ.ಆರ್ ಶಿವಕುಮಾರ್ ಆಸ್ತಿ, ಎ.ಡಿ ಆನಂದಪ್ಪ, ಹಕ್ಕಿಪಿಕ್ಕಿ ಜನಾಂಗದ ಮುಖಂಡರಾದ ತಾಲೂಕು ಸಂಘಟನಾ ಸಂಚಾಲಕ ಜಗ್ಗು, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ಸೂಗೂರು ಪರಮೇಶ್, ಜಿಲ್ಲಾ ಸಮಿತಿ ಸದಸ್ಯರಾದ ಎಸ್.ಆರ್ ಕಲ್ಲೇಶಪ್ಪ, ಶ್ರೀನಿವಾಸ್, ಕೆಂಚಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕು  ಪ್ರಧಾನ ಸಂಚಾಲಕ ಎಂ. ಕುಬೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

ಆ.೩೦ರಂದು ರಕ್ತದಾನ ಶಿಬಿರ

ಭದ್ರಾವತಿ, ಆ. ೨೯: ಪಾಪ್ಯುಲರ್ ಫ್ರಂಟ್  ಆಫ್  ಇಂಡಿಯಾ ತಾಲೂಕು ಶಾಖೆ ವತಿಯಿಂದ ಆ.೩೦ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
        ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆ ವರೆಗೆ ಹಳೇನಗರದ ಜಾಮಿಯಾ ಶಾದಿಮಹಲ್ ಸಭಾಂಗಣದಲ್ಲಿ ಶಿಬಿರ ನಡೆಯಲಿದ್ದು, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪಿಎಫ್‌ಐ ತಾಲೂಕು ಶಾಖೆ ಅಧ್ಯಕ್ಷ ಮುಹಮ್ಮದ್ ಸಾಧಿಕ್‌ವುಲ್ಲಾ ಕೋರಿದ್ದಾರೆ.




ಸೆ.೧ರಂದು ಸಂಗಮೇಶ್ವರ್ ಬಾಗಿನ ಸಮರ್ಪಣೆ

ಭದ್ರಾವತಿ, ಆ. ೨೯: ಈ ಬಾರಿ ಸಹ ಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಈ ಹಿನ್ನಲೆಯಲ್ಲಿ ಸೆ.೧ರಂದು ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್ ಬಾಗಿನ ಸಮರ್ಪಿಸಲಿದ್ದಾರೆ.
   ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಗಂಗಾ ಪೂಜೆಯೊಂದಿಗೆ ಬೆಳಿಗ್ಗೆ ೧೧.೩೦ಕ್ಕೆ ಬಾಗಿನ ಸಮರ್ಪಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ಆ.೩೧ರಂದು ದೇವರಾಜ ಅರಸು, ರಾಮಕೃಷ್ಣ ಹೆಗಡೆ ಜನ್ಮದಿನಾಚರಣೆ

ಭದ್ರಾವತಿ, ಆ. ೨೯: ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಆ.೩೧ರಂದು ಸಂಜೆ ೪ ಗಂಟೆಗೆ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗು ರಾಮಕೃಷ್ಣ ಹೆಗಡೆಯವರ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ.
      ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಮುಂಭಾಗದ ಶ್ರೀ ಸರಸ್ಪತಿ ಕಾಂಪ್ಲೆಕ್ಸ್ ಮಹಡಿಯಲ್ಲಿರುವ ಸಂಘದ ಕಛೇರಿಯಲ್ಲಿ ನಡೆಯಲಿರುವ  ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತ ಮನೋಹರ್ ಉದ್ಘಾಟಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಟ್ರಸ್ಟ್ ಛೇರ‍್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕೋರಿದ್ದಾರೆ.