Saturday, August 29, 2020

ಇಂದಿಗೂ ಪರಿಶಿಷ್ಟರು ಮೌಢ್ಯಗಳಿಂದ ಹೊರಬರಲು ಸಾಧ್ಯವಾಗಿಲ್ಲ

ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಹಾಲೇಶಪ್ಪ ವಿಷಾದ

ಭದ್ರಾವತಿ ತಾಲೂಕಿನ ಅರಬಿಳಿಚಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಶಾಖೆ ಉದ್ಘಾಟನಾ ಸಮಾರಂಭ ನಡೆಯಿತು.
ಭದ್ರಾವತಿ, ಆ. ೨೯: ದೇಶದಲ್ಲಿ ಬಹುಸಂಖ್ಯಾತರಾದ ಪರಿಶಿಷ್ಟರು ೨೧ನೇ ಶತಮಾನದಲ್ಲೂ ಮೌಢ್ಯ ಆಚರಣೆಗಳಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಹಾಲೇಶಪ್ಪ ವಿಷಾದ ವ್ಯಕ್ತಪಡಿಸಿದರು.
    ಅವರು ತಾಲೂಕಿನ ಅರಬಿಳಿಚಿ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಮನುಸ್ಮೃತಿಯು ಹೇರಿದ ಮೌಢ್ಯಗಳಿಂದಾಗಿ ಪರಿಶಿಷ್ಟರು ಶೋಷಣೆಗೆ ಒಳಗಾಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ಶೋಷಣೆಗಳ ವಿರುದ್ಧ ಹೋರಾಟ ನಡೆಸುವ ಮೂಲಕ ದೇಶದಲ್ಲಿ ಎಲ್ಲರೂ ಸಮಾನವಾಗಿ ಬದುಕುವ ಸಂವಿಧಾನ ರೂಪಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಪ್ರೊ. ಬಿ. ಕೃಷ್ಣಪ್ಪನವರ ನೇತೃತ್ವದಲ್ಲಿ ಆರಂಭವಾದ ದಲಿತ ಚಳುವಳಿಗಳು ಪರಿಶಿಷ್ಟರ ಮೇಲಿನ  ದೌರ್ಜನ್ಯ, ದಬ್ಬಾಳಿಕೆಗಳನ್ನು ಎದುರಿಸುವಲ್ಲಿ ಆತ್ಮವಿಶ್ವಾಸ ಮೂಡಿಸಿದವು ಎಂದರು.
      ದೇಶದಲ್ಲಿ ಪರಿಶಿಷ್ಟರ ಮೇಲೆ ಇಂದಿಗೂ ದೌರ್ಜನ್ಯ, ದಬ್ಬಾಳಿಕೆಗಳು ಹೆಚ್ಚಾಗುತ್ತಿದ್ದು, ಇವುಗಳ ವಿರುದ್ಧ ಹೋರಾಟ ನಡೆಸಲು ಪರಿಶಿಷ್ಟರು ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಬೇಕಾಗಿದೆ ಎಂದರು.  
ಜಿಲ್ಲಾ ಸಂಘಟನಾ ಸಂಚಾಲಕರಾದ ಎಂ. ಪಳನಿರಾಜ್, ಎಂ.ಆರ್ ಶಿವಕುಮಾರ್ ಆಸ್ತಿ, ಎ.ಡಿ ಆನಂದಪ್ಪ, ಹಕ್ಕಿಪಿಕ್ಕಿ ಜನಾಂಗದ ಮುಖಂಡರಾದ ತಾಲೂಕು ಸಂಘಟನಾ ಸಂಚಾಲಕ ಜಗ್ಗು, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ಸೂಗೂರು ಪರಮೇಶ್, ಜಿಲ್ಲಾ ಸಮಿತಿ ಸದಸ್ಯರಾದ ಎಸ್.ಆರ್ ಕಲ್ಲೇಶಪ್ಪ, ಶ್ರೀನಿವಾಸ್, ಕೆಂಚಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕು  ಪ್ರಧಾನ ಸಂಚಾಲಕ ಎಂ. ಕುಬೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

No comments:

Post a Comment