Tuesday, December 5, 2023

ಎಚ್‌ವಿಐ ವೈರಸ್ ಕರ್ನಾಟಕ ೯ನೇ ಸ್ಥಾನ : ಡಾ. ವೀಣಾ ಭಟ್ ವಿಷಾದ

ಭದ್ರಾವತಿ ನ್ಯೂಟೌನ್ ಸೇಂಟ್ ಚಾರ್ಲ್ಸ್ ಕರುಣಾ ಸೇವಾ ಕೇಂದ್ರದಲ್ಲಿ ಏಡ್ಸ್ ದಿನಾಚರಣೆ ಪ್ರಯುಕ್ತ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ :  ಎಚ್‌ಐವಿ ವೈರಸ್ ದೇಶದಲ್ಲಿ ಕರ್ನಾಟಕ ೯ನೇ ಸ್ಥಾನದಲ್ಲಿದ್ದು, ಇದು ವಿಷಾದನೀಯ ಸಂಗತಿಯಾಗಿದೆ ಎಂದು ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸ್ತ್ರೀ ರೋಗ ಹಾಗು ಪ್ರಸೂತಿ ತಜ್ಞೆ ಡಾ. ವೀಣಾ ಭಟ್ ಹೇಳಿದರು.  
    ಅವರು ನ್ಯೂಟೌನ್ ಸೇಂಟ್ ಚಾರ್ಲ್ಸ್ ಕರುಣಾ ಸೇವಾ ಕೇಂದ್ರದಲ್ಲಿ ಏಡ್ಸ್ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
    ಎಚ್‌ಐವಿ ವೈರಸ್ ೪ ವಿಧದಲ್ಲಿ ನಮ್ಮ ಶರೀರ ಪ್ರವೇಶಿಸುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಭೋಗ, ಸೋಂಕಿತ ಸಿರಿಂಜ್ ಮತ್ತು ಸೂಜಿಗಳನ್ನು ಹಂಚಿಕೊಳ್ಳುವುದು, ಕಲುಷಿತ ರಕ್ತ ಮತ್ತು ರಕ್ತದ ಉತ್ಪನ್ನಗಳೊಂದಿಗೆ ವರ್ಗಾವಣೆ ಹಾಗು ಗರ್ಭಾವಸ್ಥೆಯಲ್ಲಿ ಸೋಂಕಿತ ತಾಯಿಯ ಮೂಲಕ ವೈರಸ್ ಶರೀರ ಪ್ರವೇಶಿಸುತ್ತದೆ ಎಂದರು.
    ತಾಯಿಯಿಂದ ಮಗುವಿಗೆ ಹೆಚ್ಚಾಗಿ ಶೇ.೩೦ರಷ್ಟು ಸೋಂಕು ಹರಡುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಮುಂಜಾಗ್ರತೆ ವಹಿಸುವುದರಿಂದ ಸೋಂಕು ಹರಡದಂತೆ ತಡೆಗಟ್ಟಬಹುದು. ಹೆಚ್‌ಐವಿ ಪೀಡಿತರಿಗೆ ಮತ್ತು ಮಕ್ಕಳಿಗೆ ಅನೇಕ ಉಚಿತ ಯೋಜನೆಗಳು ಜಾರಿಯಲ್ಲಿವೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ವಿಶ್ವ ಆರೋಗ್ಯ ಸಂಸ್ಥೆ ಮುಂಬರುವ ೫ ರಿಂದ ೬ ವರ್ಷಗಳಲ್ಲಿ ಎಚ್‌ಐವಿ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಧ್ಯೇಯ ಹೊಂದಿದೆ. ಇದರ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಹಾಗೂ ಸಮುದಾಯಗಳು ಜಾಗೃತಿ ವಹಿಸಲು ಕರೆ ನೀಡಿದರು.
    ಕರುಣಾ ಸೇವಾ ಕೇಂದ್ರ ನಿರ್ದೇಶಕಿ ಸಿಸ್ಟರ್ ಹೆಲನ್ ಮೋರಸ್, ಸಿಸ್ಟರ್ ಪ್ರಭ, ಒಕ್ಕೂಟದ ಸದಸ್ಯರು, ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿ ರೇವಣ್ಣರಿಗೆ ಗೌರವ ಡಾಕ್ಟರೇಟ್

ಉದ್ಯಮಿ, ಸಮಾಜ ಸೇವಕ ರೇವಣ್ಣ ಅವರಿಗೆ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಟರ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಭದ್ರಾವತಿ: ಉದ್ಯಮಿ, ಸಮಾಜ ಸೇವಕ ರೇವಣ್ಣ ಅವರಿಗೆ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಟರ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ತಮಿಳುನಾಡು ಹೊಸೂರು ಕ್ಲಾರೆಸ್ಟ ಹೋಟೆಲ್‌ನಲ್ಲಿ ನಡೆದ ಪದವಿ ವಿತರಣಾ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ವಿಜಯನ್ ಆಕಾಡೆಮಿ ಸಂಸ್ಥಾಪಕ ಮತ್ತು ಮುಖ್ಯ ತರಬೇತಿದಾರ ಮಾಸ್ಟರ್ ವಿ. ಬಾಬು ವಿಜಯನ್, ಐಎನ್‌ಟಿಯುಸಿ ತಮಿಳುನಾಡು ಕಾರ್ಯಾಧ್ಯಕ್ಷ ಮಾಜಿ ಶಾಸಕ ಡಾ. ಕೆ.ಎ ಮನೋಕರಣ್, ಆಂಧ್ರ ಪ್ರದೇಶದ ನಿವೃತ್ತ ಸಹಾಯಕ ನ್ಯಾಯಾಧೀಶ ಡಾ. ಜೆ. ಹರಿದಾಸ್, ಚಿಕ್ಕಮ್ಯಾಗೆರಿ ಪುಣ್ಯಕ್ಷೇತ್ರ ಇಟಗಿ ಭೂ ಕೈಲಾಸ ಮೇಲುಗದ್ದಿಗೆ ಹಿರೇಮಠ ಸಂಸ್ಥಾನದ ಶ್ರೀ ಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಡಾ. ಎಂ. ರಾಜಗೋಪಾಲನ್, ಟಿ. ತ್ಯಾಗರಾಜು, ಮಂಜುಳ, ಶ್ರೀ ಬಸವ ಯೋಗಿ ಗುರೂಜಿ ಮತ್ತು ಡಾ. ರವಿಚಂದ್ರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ರೇವಣ್ಣ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರರಾಗಿದ್ದು, ಅಲ್ಲದೆ ಹಿರಿಯ ವಾಲಿಬಾಲ್ ಕೀಡಾಪಟು. ಈ ಹಿಂದೆ ಕಾರ್ಮಿಕ ಸಂಘದಲ್ಲಿ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ಇವರು ನಿವೃತ್ತಿ ಹೊಂದಿದ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದು, ವಿದೇಶದಲ್ಲಿ ನೆಲೆಸಿರುವ ಇವರ ಪುತ್ರರಾದ ಆರ್. ವಿನೋದ್‌ಕುಮಾರ್ ಜಯಕೀರ್ತಿ ಮತ್ತು ವಿನಯ್‌ಕುಮಾರ್ ಜಯಕೀರ್ತಿಯವರು ಆರಂಭಿಸಿರುವ ಸಾಫ್ಟ್‌ವೇರ್ ಕಂಪನಿಯ ಬೆಂಗಳೂರು ಶಾಖೆಯ ನಿರ್ದೇಶಕರಾಗಿದ್ದಾರೆ. ಕಂಪನಿ ವ್ಯವಹಾರದ ಜೊತೆಗೆ ಜಯಕೀರ್ತಿ ಚಾರಿಟಬಲ್ ಟ್ರಸ್ಟ್ ಮೂಲಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. 
  ಇವರು ಕೆ.ಆರ್ ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಹಾಲೇಗೌಡರ ಸುಪುತ್ರ ರಾಗಿದ್ದಾರೆ. ಇವರನ್ನು ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಹಾಗು ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ.