Thursday, August 11, 2022

ಮಕ್ಕಳು ಜಂತುಹುಳು ಬಾಧೆ ಬಗ್ಗೆ ಹೆಚ್ಚಿನ ಗಮನ ನೀಡಿ : ಡಾ. ಎಂ.ವಿ ಅಶೋಕ್

ಭದ್ರಾವತಿ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಜಂತುಹುಳ ನಿವಾರಣೆ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜು. ೧೧:  ಮಕ್ಕಳ ಆರೋಗ್ಯದ ಬಗ್ಗೆ ಸಹ ಹೆಚ್ಚಿನ ಕಾಳಜಿವಹಿಸಲಾಗಿದ್ದು, ಜಂತುಹುಳು ಬಾಧೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡಲಾಗುತ್ತಿದೆ. ಕಡ್ಡಾಯವಾಗಿ ಮಕ್ಕಳು ಪ್ರತಿ ೬ ತಿಂಗಳಿಗೆ ಒಂದು ಮಾತ್ರೆ ತೆಗೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಅವರು ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳ ನಿವಾರಣೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜಂತುಹುಳು ಬಾಧೆಯಿಂದಾಗಿ ಬಹಳಷ್ಟು ಮಕ್ಕಳು ಅಪೌಷ್ಠಿಕತೆ ಹಾಗು ರಕ್ತಹೀನತೆಯಿಂದ ಬಳಲುತ್ತಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿರುವ ಸರ್ಕಾರ ಜಂತುಹುಳು ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ನೀಡುತ್ತಿದೆ ಎಂದರು.
    ಜಂತುಹುಳು ಬಾಧೆ ತಡೆಗಟ್ಟಲು ಮಕ್ಕಳು ತಮ್ಮ ಸುತ್ತಮುತ್ತಲ ಪರಿಸರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಮೂಲಕ ಸ್ವಚ್ಛತೆಗೆ ಗಮನ ನೀಡಬೇಕು. ಜೊತೆಗೆ ಶುದ್ಧ ಆಹಾರ ಸೇವನೆ ಮಾಡಬೇಕೆಂದರು.
    ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಪಂಚಾಕ್ಷರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಟರಾಜ್, ನೆಹರು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಚ್ಯುತ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಬಾಯಿ ಸೇರಿದಂತೆ ಇನ್ನಿತರರು ಜಂತು ಬಾಧೆ ಹಾಗು ನಿರ್ಮೂಲನೆಗೆ ಅನುಸರಿಸಬೇಕಾದ ಕ್ರಮ ಕುರಿತು ವಿತರಿಸಿದರು.
    ಟಿಎಲ್‌ಎಚ್‌ವಿ ಪ್ರೇಮಕುಮಾರಿ, ಆಶಾ ಮೆಂಟರ್ ಬಿ.ಎಂ ವಸಂತ, ಐಸಿಡಿಎಸ್ ಶಾರದ, ದೈಹಿಕ ಶಿಕ್ಷಕಿ ಜಿ.ಕೆ ದಿವ್ಯ, ಸಹ ಶಿಕ್ಷಕರಾದ ಚಂದ್ರನಾಯ್ಕ, ಡಿ.ಎ ಅಶ್ವಥ್, ಎನ್. ಮಮತ, ಎಚ್.ಜಿ ಗೀತಾ, ಸಲ್ಮಾ, ಜಿ.ಡಿ ತಿಮ್ಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಎಂ.ಆರ್ ರವೀಂದ್ರ ಸ್ವಾಗತಿಸಿದರು. ಕವಿತಾ ವಂದಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಪೊರಕೆ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
    ಭದ್ರಾವತಿ, ಆ. ೧೧: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಅವ್ಯವಸ್ಥೆಗಳ ಆಗರವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವುದು. ಬಗರ್ ಹುಕುಂ, ನಿವೇಶನ ರಹಿತರ ಹಾಗು ಸ್ಮಶಾನ ರಹಿತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಲಾಯಿತು.
    ಇದಕ್ಕೂ ಮೊದಲು ಅಂಬೇಡ್ಕರ್ ಭವನದಿಂದ ತಾಲೂಕು ಕಛೇರಿವರೆಗೂ ಪೊರಕೆ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವ ವಹಿಸಿದ್ದರು.

ಪಿಕೆಟಿಂಗ್ ಚಳುವಳಿ ಮೂಲಕ ೩ ತಿಂಗಳ ಸೆರೆವಾಸ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ ಅವರಿಗೆ ಸನ್ಮಾನ

ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪಿಕೆಟಿಂಗ್ ಚಳುವಳಿ ಮೂಲಕ ೩ ತಿಂಗಳ ಸೆರೆವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ ಭದ್ರಾವತಿ ಕೇಶವಪುರ ಬಡಾವಣೆ ನಿವಾಸಿ ನಾಗಪ್ಪ ಅವರನ್ನು ತಾಲೂಕು ಆಡಳಿತ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಆ. ೧೧: ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪಿಕೆಟಿಂಗ್ ಚಳುವಳಿ ಮೂಲಕ ೩ ತಿಂಗಳ ಸೆರೆವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ ಅವರನ್ನು ತಾಲೂಕು ಆಡಳಿತ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
    ದೇಶದ ೭೫ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾನೀಯರನ್ನು, ದೇಶ ಭಕ್ತರನ್ನು ನೆನಪು ಮಾಡಿಕೊಳ್ಳುವುದು ನಮ್ಮಲ್ಲರ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ನಗರದ ಕೇಶವಪುರ ಬಡಾವಣೆ ನಿವಾಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ತಹಸೀಲ್ದಾರ್ ಆರ್. ಪ್ರದೀಪ್, ಕಂದಾಯ ನಿರೀಕ್ಷಕ ಪ್ರಶಾಂತ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಹೇಮಾವತಿ ವಿಶ್ವನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.