Wednesday, August 16, 2023

ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಗಾಯ

    ಭದ್ರಾವತಿ, ಆ. ೧೬ : ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.
    ದೇವರನರಸೀಪುರ ನಿವಾಸಿ ಕುಮಾರ್‌ರವರ ತಮ್ಮ ಜಗದೀಶ್ ತನ್ನ ಸ್ನೇಹಿತ ಹೇಮಂತ್ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹೇಮಂತ್ ಅತಿವೇಗವಾಗಿ ಹಾಗು ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ಹಿಂಬದಿಯಲ್ಲಿ ಕುಳಿತ್ತಿದ್ದ ಜಗದೀಶ್ ಕೆಳಗೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾದಕ ವಸ್ತು ಸೇವನೆ : ಪ್ರಕರಣ ದಾಖಲು


    ಭದ್ರಾವತಿ, ಆ. ೧೬: ಮಾದಕ ವಸ್ತು ಸೇವನೆ ಮಾಡಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
    ಶಿವಮೊಗ್ಗ ಹೊಸಮನೆ ಬಡಾವಣೆ ನಿವಾಸಿ ಮನು ಅಲಿಯಾಸ್ ಹರೀಶ .ಎಂ(೨೯) ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಗದನಗರದ ಮಾರ್ಕೆಟ್ ರಸ್ತೆಯಲ್ಲಿರುವ ಗೋಬಿ ವೃತ್ತದ ಸಮೀಪ ರಸ್ತೆಯ ಮೇಲೆ ಮಾದಕ ವಸ್ತು ಸೇವನೆ ಮಾಡಿ ಅಮಲಿನಲ್ಲಿದ್ದು, ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಈತನನ್ನು ವಿಚಾರಣೆ ನಡೆಸಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕುರುಬರು ದೇಶ ಭಕ್ತರು ಮಾತ್ರವಲ್ಲದೆ ನಂಬಿಕೆಗೆ ಅರ್ಹರಾದವರು : ಬಿ.ಎಂ ಸಂತೋಷ್‌

ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಯುವ ವೇದಿಕೆ ವತಿಯಿಂದ  ಸಂಗೊಳ್ಳಿರಾಯಣ್ಣ ಜನ್ಮದಿನದ ಪ್ರಯುಕ್ತ ಹಾಗೂ ೭೬ನೇ  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಿದ್ಧಾರೂಢನಗರದ ಶ್ರೀ ಧರ್ಮಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುರುಬ ಸಮಾಜದ ಮಾಜಿ ಸೈನಿಕರಿಗೆ ಗೌರವ ಸಮರ್ಪಣೆ, ಚುನಾಯಿತ ಪ್ರತಿನಿಧಿಗಳು, ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸನ್ಮಾನ ಹಾಗು ೨೦೨೨-೨೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.೮೫ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಯುವ ಮುಖಂಡ ಬಿ.ಎಸ್‌ ಗಣೇಶ್‌ ಅವರನ್ನು ಸನ್ಮಾನಿಸಲಾಯಿತು. 

    ಭದ್ರಾವತಿ, ಆ. ೧೬: ಕುರುಬ ಸಮಾಜದವರು ದೇಶ ಭಕ್ತರು ಮಾತ್ರವಲ್ಲ ನಂಬಿದವರಿಗೆ ಎಂದಿಗೂ ದ್ರೋಹ ಬಗೆಯುವವರಲ್ಲ ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಿ.ಎಂ ಸಂತೋಷ್‌ ಹೇಳಿದರು.
    ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಯುವ ವೇದಿಕೆ ವತಿಯಿಂದ  ಸಂಗೊಳ್ಳಿರಾಯಣ್ಣ ಜನ್ಮದಿನದ ಪ್ರಯುಕ್ತ ಹಾಗೂ ೭೬ನೇ  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಿದ್ಧಾರೂಢನಗರದ ಶ್ರೀ ಧರ್ಮಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುರುಬ ಸಮಾಜದ ಮಾಜಿ ಸೈನಿಕರಿಗೆ ಗೌರವ ಸಮರ್ಪಣೆ, ಚುನಾಯಿತ ಪ್ರತಿನಿಧಿಗಳು, ನಗರಸಭೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸನ್ಮಾನ ಹಾಗು ೨೦೨೨-೨೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.೮೫ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
    ದೇಶಭಕ್ತ ಸಂಗೊಳ್ಳಿರಾಯಣ್ಣ ಅವರ ಬದುಕು ಸಮಾಜಕ್ಕೆ ಹಲವು ಸಂದೇಶಗಳನ್ನು ನೀಡುತ್ತದೆ. ಬಹಳ ಮುಖ್ಯವಾಗಿ ಯಾವುದೇ ಸಂದರ್ಭದಲ್ಲೂ ದೇಶಕ್ಕಾಗಿ ಪ್ರಾಣ ಬಲಿದಾನಕ್ಕೂ ಸಿದ್ದ ಹಾಗು ನಂಬಿದವರಿಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ ಎಂಬ ಸಂದೇಶ ನಾವೆಲ್ಲರೂ ತಿಳಿದುಕೊಳ್ಳಬಹುದಾಗಿದೆ. ಇಂತಹ ಸಮುದಾಯಕ್ಕೆ ಸೇರಿದವರು ಎಂಬುದನ್ನು ನಾವುಗಳು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. ಇದರ ಜೊತೆಗೆ ಸಂಗೊಳ್ಳಿರಾಯಣ್ಣರವರು ಅಕ್ಷರಸ್ಥ ಸಮಾಜಕ್ಕೆ ಒಂದು ಸಂದೇಶ ನೀಡಿ ಹೋಗಿದ್ದಾರೆ. ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಮುಖ್ಯ ಎಂಬುದನ್ನು ಅವರ ಬದುಕಿನಲ್ಲಿ ಕಾಣಬಹುದಾಗಿದೆ. ಒಂದು ವೇಳೆ ಸಂಗೊಳ್ಳಿರಾಯಣ್ಣನವರು ಅಕ್ಷರಸ್ಥರಾಗಿದ್ದಲ್ಲಿ ಅವರ ಹೋರಾಟದ ಬದುಕು ಇನ್ನೂ ಪ್ರಬಲವಾಗಿರುತ್ತಿತ್ತು. ಕುರುಬ ಸಮಾಜದವರು ಯಾವುದೇ ಕ್ಷೇತ್ರದಲ್ಲೂ ಮುಂಚೂಣಿಗೆ ಬಂದರೂ ಸಹ ಅವರಿಗೆ ಶಿಕ್ಷಣ ಅತಿಅವಶ್ಯಕವಾಗಿದ್ದು, ಈ ಹಿನ್ನಲೆಯಲ್ಲಿ ಸಮಾಜದವರು ಹೆಚ್ಚು ಗಮನ ಹರಿಸಬೇಕೆಂದರು.
    ಕ್ಷೇತ್ರದಲ್ಲಿ ಕುರುಬ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜಕೀಯವಾಗಿ ಸಮುದಾಯದ ಹೆಚ್ಚಿನವರು ಶಾಸಕ ಬಿ.ಕೆ ಸಂಗಮೇಶ್ವರ್‌ ಅವರನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಅವರ ಗೆಲುವಿನ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಮಾಜದ ಬೇಡಿಕೆಗಳನ್ನು ಅವರು ಈಡೇರಿಸಿಕೊಡುವ ಮೂಲಕ ಹಿತಕಾಪಾಡಬೇಕೆಂದರು.
    ಯುವ ವೇದಿಕೆ ಅಧ್ಯಕ್ಷ ಅಭಿಲಾಷ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಿರೂಪಿಸಿದರು. ಯುವ ಮುಖಂಡ ಬಿ.ಎಸ್‌ ಗಣೇಶ್‌, ಕುರುಬ ಸಮಾಜದ ಪ್ರಮುಖರಾದ ಹಾ. ರಾಮಪ್ಪ, ಕರಿಯಪ್ಪ, ಸತ್ಯನಾರಾಯಣ, ಹನುಮಂತಪ್ಪ, ಶಿವಣ್ಣಗೌಡ, ಕೆ.ಪಿ ಗಿರೀಶ್‌, ಲೋಕೇಶ್‌, ಮಲ್ಲೇಶ್‌,  ಎಚ್. ರವಿಕುಮಾರ್‌, ಕುಮಾರ್, ನಗರಸಭಾ ಸದಸ್ಯರಾದ ಕಾಂತರಾಜ್‌, ಶಶಿಕಲಾ ನಾರಾಯಣಪ್ಪ, ಅನಿತಾ ಮಲ್ಲೇಶ್‌, ಮಂಜುಳ ಸುಬ್ಬಣ್ಣ ಸೇರಿದಂತೆ ಕುರುಬ ಸಮಾಜದ ನಿರ್ದೇಶಕರು, ಯುವ ವೇದಿಕೆ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಖಾಸಗಿ ಬಸ್‌ ನಿಲ್ದಾಣದಲ್ಲಿ ಜನ್ಮದಿನಾಚರಣೆ:
    ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಖಾಸಗಿ ಬಸ್‌ ನಿಲ್ದಾಣಕ್ಕೆ ಕಾಂತ್ರಿವೀರ ಸಂಗೊಳ್ಳಿರಾಯಣ್ಣ ಹೆಸರನ್ನು ನಾಮಕರಣಗೊಳಿಸುವಂತೆ ಬೇಡಿಕೆ ಇದ್ದು, ಈ ಸಂಬಂಧ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ಯುವ ವೇದಿಕೆ ವತಿಯಿಂದ ಬೆಳಿಗ್ಗೆ ನಿಲ್ದಾಣದಲ್ಲಿ ಸಂಗೊಳ್ಳಿರಾಯಣ್ಣ ಜನ್ಮದಿನ ಆಚರಿಸಲಾಯಿತು.
ಸಂಗೊಳ್ಳಿರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚಲಾಯಿತು. ಕುರುಬ ಸಮುದಾಯದ ವಿವಿಧ ಸಂಘಟನೆಗಳ ಪ್ರಮುಖರು, ಮುಖಂಡರು ಪಾಲ್ಗೊಂಡಿದ್ದರು.

ಕುವೆಂಪು ವಿ.ವಿ ಪ್ರಭಾರ ಕುಲಪತಿ ಪ್ರೊ. ಎಸ್. ವೆಂಕಟೇಶ್‌

ಪ್ರೊ. ಎಸ್. ವೆಂಕಟೇಶ್‌
    ಭದ್ರಾವತಿ, ಆ. ೧೬: ಕುವೆಂಪು  ವಿಶ್ವ ವಿದ್ಯಾಲಯದ ಪ್ರಭಾರ ಕುಲಪತಿಯಾಗಿ ವಿಶ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಡೀನ್‌ ಪ್ರೊ. ಎಸ್. ವೆಂಕಟೇಶ್‌ ಅವರನ್ನು ನೇಮಕಗೊಳಿಸಲಾಗಿದೆ.
    ಕುಲಪತಿಯಾಗಿದ್ದ ಪ್ರೊ. ಬಿ.ಪಿ ವೀರಭದ್ರಪ್ಪ ಅವರ ಹುದ್ದೆ  ಆ.೧ರಿಂದ ತೆರವುಗೊಂಡಿದ್ದು, ಈ ಹುದ್ದೆಗೆ ಇದೀಗ ಪ್ರೊ. ಎಸ್‌. ವೆಂಕಟೇಶ್‌ ಅವರನ್ನು ೧, ಮಾರ್ಚ್‌ ೨೦೨೪ರವರೆಗೆ ಪ್ರಭಾರ ಕುಲಪತಿಯಾಗಿ ನೇಮಕಗೊಳಿಸಿ ರಾಜ್ಯಪಾಲರು ಆದೇಶಿಸಿದ್ದಾರೆ.
ಈ ಸಂಬಂಧ ರಾಜ್ಯಪಾಲರ ಸಚಿವಾಲಯದ ಅಧೀನ ಕಾರ್ಯದರ್ಶಿ ಜಿ. ಪ್ರದೀಪ್‌ ಆ. ೧೪ರಂದು ಪ್ರಕಟಣೆ ಹೊರಡಿಸಿದ್ದಾರೆ.