Wednesday, October 16, 2024

ಯೇಸು ಸ್ಪರ್ಶ ತಂಡದ ಬ್ರದರ್ ಟಿ.ಕೆ ಜಾರ್ಜ್ ನಿಧನ

ಬ್ರದರ್ ಟಿ.ಕೆ ಜಾರ್ಜ್
    ಭದ್ರಾವತಿ: ನಗರದ ನಿವಾಸಿ, ಹೆಸರಾಂತ ಪ್ರಚಾರಕ, ಯೇಸು ಸ್ಪರ್ಶ ತಂಡದ ಬ್ರದರ್ ಟಿ.ಕೆ ಜಾರ್ಜ್(೬೯) ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರಿ ಇದ್ದಾರೆ. ಇವರು ಉಸಿರಾಟ ಸಮಸ್ಯೆಯಿಂದ ಕಳೆದ ಸುಮಾರು ೭೭ ದಿನಗಳಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಅ.೧೭ರಂದು ನಡೆಯಲಿದೆ.
    ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಇವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಧರ್ಮಾಧ್ಯಕ್ಷರಾದ ಡುಮಿಂಗ್ ಡಯಾಸ್ ರವರಿಂದ ದಿವ್ಯಬಲಿಪೂಜೆ ನಡೆಯಲಿದ್ದು, ಶವಸಂಸ್ಕಾರ ವಿಧಿಗಳನ್ನು ಗುರುಗಳಾದ ಫ್ರಾಂಕ್ಲಿನ್ ಡಿಸೋಜ, ಸ್ಟೀಫನ್ ಕೋಟ್ಟಕ್ಕಲ್, ಡೈಸನ್ ತರಗನ್, ಲ್ಯಾನ್ಸಿ ಡಿಸೋಜ ಮತ್ತು ಸಜೀಶ್ ಮ್ಯಾಥ್ಯೂರವರು ನಡೆಸಿಕೊಡಲಿದ್ದಾರೆ. 
    ಜಾರ್ಜ್‌ರವರ ನಿಧನಕ್ಕೆ  ಅವರ ಸಹೋದರಾದ ಸೇವಿಯರ್ ಟಿ.ವಿ, ಡೇವಿಸ್ ಟಿ.ವಿ, ಜೋಸೆಫ್ ಟಿ.ವಿ ಹಾಗೂ ಸಹೋದರಿ ರೋಸಿ ಡಿಸೋಜ ಮತ್ತು  ಕುಟುಂಬ ವರ್ಗದವರು, ವಿವಿಧ ಕ್ರೈಸ್ತ ದೇವಾಲಯಗಳ ಧರ್ಮ ಗುರುಗಳು, ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. 
    ಬ್ರದರ್ ಟಿ.ಕೆ ಜಾರ್ಜ್ ಪರಿಚಯ: 
    ಜಾರ್ಜ್ ಅವರು ಸೆಪ್ಟೆಂಬರ್ ೮, ೧೯೫೫ ರಂದು ಹುಬ್ಬಳ್ಳಿಯಲ್ಲಿ ದಿವಂಗತ ಟಿ ಕೆ ವರ್ಗೀಸ್ ಮತ್ತು ದಿವಂಗತ ಬೇಬಿ ಮೇರಿ ಅವರ ಮಗನಾಗಿ ಜನಿಸಿದರು. ಅವರು ೩ ನೇ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡರು ಅವರನ್ನು ಮಲ ತಾಯಿ ತ್ರೇಸಿಯಮ್ಮ ಅವರನ್ನು ಬೆಳೆಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಭದ್ರಾವತಿಯ ಕಾಗದ ನಗರ ಪ್ರೌಡಶಾಲೆಯಲ್ಲಿ ಮುಗಿಸಿ ನಂತರ ಹೆಚ್ಚಿನ ವ್ಯಾಸಂಗವನ್ನು ದಾವಣಗೆರೆಯಲ್ಲಿ ಮಾಡಿದರು ಹಾಗೂ ಅಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ನಲ್ಲಿ ಸೇವೆ ಸಲ್ಲಿಸಿದ್ದಾರೆ ಅವರು ತನ್ನ ಇಪ್ಪತ್ತೆರಡನೇ ವಯಸ್ಸಿನಲ್ಲಿ  ಅಲ್ಫೋನ್ಸಾರವರನ್ನು  ವಿವಾಹವಾದರು ಅವರಿಗೆ ಜಿನ್ನಿ ಎಂಬ ಮಗಳು ಇದ್ದಾಳೆ ನಂತರ ಅವರು ಕನ್ನಡದ ಹಲವಾರು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಿನುಗುವ ತಾರೆಯಾದರು. ಅಲ್ಲಿ ಅವರು ದಾವಣಗೆರೆ ಜಾರ್ಜ್ ಎಂದು ಚಿರಪರಿಚಿತರಾದರು ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹಲವಾರು ನಕಾರಾತ್ಮಕ ತಿರುವುಗಳನ್ನು ಎದುರಿಸಬೇಕಾಗಿ ಬಂದ ಕಾರಣ, ಅವರು ಸ್ವಲ್ಪ ಸಮಯದವರೆಗೆ ಖಿನ್ನತೆಗೆ ಒಳಗಾಗಿದ್ದರು.
    ಜೀವನದಲ್ಲಿ ಆಸಕ್ತಿ ಕಳೆದುಕೊಂಡ ಬ್ರ ಜಾರ್ಜ್ ಮೇ ೮, ೧೯೯೦ ರಂದು ಕೇರಳದ ಪೊಟ್ಟಾದಲ್ಲಿರುವ ಡಿವೈನ್ ರಿಟ್ರೀಟ್ ಸೆಂಟರಿಗೆ ಧ್ಯಾನಕೂಟಕ್ಕಾಗಿ ತೆರಳಿದ ವೇಳೆ ಅವರ ಜೀವನದಲ್ಲಿ ಮಹತ್ವದ ತಿರುವು ದೊರಕಿತು. ಅದರ ಬಳಿಕ ದೇವರ ವಾಕ್ಯವನ್ನು ಸಾರಲು ವಂದನೀಯ ಗುರುಗಳಾದ ಮ್ಯಾಥ್ಯೂ ನಾಯ್ಕಪರಂಬಿಲ್ ರವರೊಂದಿಗೆ ತಮ್ಮ ಆಧ್ಯಾತ್ಮಿಕ ಯಾತ್ರೆ ಪ್ರಾರಂಭಿಸಿ ಅವರು ಜಾರ್ಜ್ ತರಗನ್ ಎಂದು ಕೇರಳದಲ್ಲಿ ಪ್ರಖ್ಯಾತರಾದರು.
    ನಂತರ ಅವರು ವಂದನೀಯ ಗುರುಗಳಾದ ಫ್ರಾಂಕ್ಲಿನ್ ಡಿಸೋಜ ರವರೊಂದಿಗೆ ಯೇಸು ಸ್ಪರ್ಷ ಎಂಬ ತಂಡ ರಚಿಸಿ ಗುರುಗಳ ಮಾರ್ಗದರ್ಶನದ ಮೂಲಕ ಕರ್ನಾಟಕದ ಮೂಲೆಮೂಲೆಗಳಲ್ಲಿ ಭೋಧಿಸುವ ಮೂಲಕ ಸಾವಿರಾರು ಧ್ಯಾನಕೂಟಗಳನ್ನು ನಡೆಸಿ ಸಾವಿರಾರು ಜನರನ್ನು ಯೇಸುವಿನ ಪ್ರೀತಿಯಲ್ಲಿ ಬೆಸೆದಿದ್ದಾರೆ ಹಾಗೆ ಅವರು ಕರ್ನಾಟಕದ ಬ್ರದರ್ ಟಿ ಕೆ ಜಾರ್ಜ್ ಎಂದು ಚಿರಪರಿಚಿತರಾದರು. 
    ಟಿ. ಕೆ. ಜಾರ್ಜ್ ಅವರು ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ವಿವಿಧ ಆಧ್ಯಾತ್ಮಿಕ ಅಆಗಳು ಹಾಗೂ ಆಧ್ಯಾತ್ಮಿಕ ಗೀತೆಗಳ ಒP೩ ಗಳನ್ನು ಬಿಡುಗಡೆ ಮಾಡಿದ್ದರು. ಅವರು ಆಧ್ಯಾತ್ಮಿಕ ಡಿವಿಡಿಗಳನ್ನು ತಯಾರಿಸಿದ್ದಾರೆ, ಎರಡು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಅದರಲ್ಲಿ ಹರಿಹರದ ಆರೋಗ್ಯ ಮಾತೆ ಕರ್ನಾಟಕದ ಕ್ರೈಸ್ತರ ಬಹು ಪ್ರಖ್ಯಾತ ಚಲನಚಿತ್ರ ಮತ್ತು ಅನೇಕ ಭಾಷೆಗಳಲ್ಲಿ ಆಧ್ಯಾತ್ಮಿಕ ಪುಸ್ತಕಗಳನ್ನು ಬರೆದಿದ್ದಾರೆ.

ವಿಐಎಸ್‌ಎಲ್‌ನಲ್ಲಿ ಜಾಗೃತಾ ತಿಳುವಳಿಕೆ ಸಪ್ತಾಹ : ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು

    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ  ಅ.೨೮ ರಿಂದ ನ.೩ರ ವರೆಗೆ ಜಾಗೃತಾ ತಿಳುವಳಿಕೆ ಸಪ್ತಾಹ-2024ರ ಅಂಗವಾಗಿ `ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ' ಎಂಬ ವಿಷಯದೊಂದಿಗೆ ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ  ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
    `ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ' ವಿಷಯ ಕುರಿತು ಪ್ರಬಂಧ, ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳು ಜರುಗಲಿದ್ದು, 23 ರಂದು ಬೆಳಿಗ್ಗೆ 9.30 ರಿಂದ 11.30ರ ವರೆಗೆ ಶಾಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ 2 ವಿಭಾಗಗಳಲ್ಲಿ 5 ರಿಂದ 7ನೇ ತರಗತಿ ಮತ್ತು 8 ರಿಂದ 10ನೇ ತರಗತಿವರೆಗೆ ಹಾಗು 11.30 ರಿಂದ 1 ಗಂಟೆವರೆಗೆ 8 ರಿಂದ 10ನೇ ತರಗತಿ  ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯುವ ಸ್ಪರ್ಧೆ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. 
    25ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30ರವರೆಗೆ 8 ರಿಂದ 10ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಭಾಷಣ ಸ್ಪರ್ಧೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ 8 ರಿಂದ 10ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಭಾಷಣ ಸ್ಪರ್ಧೆ ಹಾಗು 26ರಂದು ಬೆಳಿಗ್ಗೆ 9.45ಕ್ಕೆ  8 ರಿಂದ 10ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಷ್ಟಾಚಾರ ವಿರೋಧಿ ಚಳುವಳಿಗಳು. ಅಥವಾ  ಭಷ್ಟಾಚಾರ ವಿರೋಧಿ ಹೋರಾಟದ ಏಜೆನ್ಸಿಗಳು, ಕಾನೂನುಗಳು ಮತ್ತು ನಿಯಮಗಳು. ಅಥವಾ ಭಷ್ಟಾಚಾರ ವಿರೋಧಿ ಹೋರಾಟದ ತಂತ್ರಜ್ಞಾನಗಳು. ಅಥವಾ ನೈತಿಕ ಮೌಲ್ಯಗಳು, ಸಾಮಾನ್ಯ ಜಾಗೃತಿಗಳು, ಸಾಮಾನ್ಯ ಜ್ಞಾನ, ಪ್ರಚಲಿತ ವಿಧ್ಯಮಾನ ಮತ್ತು ಇತ್ಯಾದಿಗಳ ಕುರಿತು ರಸಪ್ರಶ್ನೆ ಸ್ಪರ್ಧೆ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ನಡೆಯಲಿವೆ. 
    ಚಿತ್ರಬರೆಯುವ ಮತ್ತು ಪ್ರಬಂಧ ಸ್ಪರ್ಧೆಗಳಿಗೆ ಪ್ರತಿ ಶಾಲೆಯಿಂದ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಇರುವುದಿಲ್ಲ. ಕನ್ನಡ, ಆಂಗ್ಲ ಮತ್ತು ಹಿಂದಿ ಭಾಷಣ ಸ್ಪರ್ಧೆಗೆ ಪ್ರತಿ ಶಾಲೆಯಿಂದ ಪ್ರತಿ ಭಾಷೆಯಲ್ಲಿ ಭಾಗವಹಿಸಲು ಗರಿಷ್ಠ 2 ಸ್ಪರ್ಧಿಗಳನ್ನು ಕಳುಹಿಸತಕ್ಕದ್ದು. ರಸಪ್ರಶ್ನೆ ಸ್ಪರ್ಧೆಗಳಿಗೆ ಪ್ರತಿ ಶಾಲೆಯಿಂದ ಗರಿಷ್ಠ ಒಂದು ತಂಡದಲ್ಲಿ 2 ಸ್ಪರ್ಧಿಗಳಿರುವ 2 ತಂಡಗಳಳನ್ನು ಕಳುಹಿಸತಕ್ಕದ್ದು. ಪ್ರತಿ ಸ್ಪರ್ಧೆಯಲ್ಲಿ ೩ ಬಹುಮಾನಗಳಿದ್ದು, ಬಹುಮಾನ ವಿತರಣಾ ಸಮಾರಂಭವು ನ. 4ರ ಮಧ್ಯಾಹ್ನ 2 ಗಂಟೆಗೆ ಶ್ರೀ ಶಾರದಾ ಮಂದಿರ, ನ್ಯೂಟೌನ್, ಭದ್ರಾವತಿಯಲ್ಲಿ ನಡೆಯಲಿರುವ ಜಾಗೃತ ತಿಳುವಳಿಕೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ 9480829018/9480829211/9480829137  ಸಂಪರ್ಕಿಸಬಹುದಾಗಿದೆ. 

ಗ್ರೂಪ್ ಸೂಪರ್ ಅನ್ಯುಯೇಷನ್ ಆನ್ಯೂಟಿ ಹಣ ಹೆಚ್ಚಳಕ್ಕೆ ಆಗ್ರಹ

ಎಂಪಿಎಂ ನಿವೃತ್ತ ಕಾರ್ಮಿಕರಿಂದ ಎಲ್‌ಐಸಿ ಶಾಖಾ ಕಛೇರಿ ಮುಂಭಾಗ ಪ್ರತಿಭಟನೆ 

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ ಕಾರ್ಮಿಕರಿಗೆ ನೀಡುತ್ತಿರುವ ಗ್ರೂಪ್ ಸೂಪರ್ ಅನ್ಯುಯೇಷನ್ ಆನ್ಯೂಟಿ ಹಣ ತುಂಬಾ ಕಡಿಮೆ ಇದ್ದು, ಇದನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಬುಧವಾರ ಮೈಸೂರು ಕಾಖಾದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಾಖಾ ವ್ಯವಸ್ಥಾಪಕ ಮುರಳಿಧರರವರ ಮೂಲಕ ಎಲ್‌ಐಸಿ ಆಫ್ ಇಂಡಿಯಾ, ಪಿ & ಜಿ.ಎಸ್ ಯೂನಿಟ್, ಮಂಗಳೂರು ಕಚೇರಿಯ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ : ನಗರದ ಮೈಸೂರು ಕಾಗದ ಕಾರ್ಖಾನೆಯ ಕಾರ್ಮಿಕರಿಗೆ ನೀಡುತ್ತಿರುವ ಗ್ರೂಪ್ ಸೂಪರ್ ಅನ್ಯುಯೇಷನ್ ಆನ್ಯೂಟಿ ಹಣ ತುಂಬಾ ಕಡಿಮೆ ಇದ್ದು, ಇದನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಬುಧವಾರ ಮೈಸೂರು ಕಾಖಾದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಾಖಾ ವ್ಯವಸ್ಥಾಪಕ ಎಸ್.ಎನ್ ಮುರಳಿಧರರವರ ಮೂಲಕ ಎಲ್‌ಐಸಿ ಆಫ್ ಇಂಡಿಯಾ, ಪಿ & ಜಿ.ಎಸ್ ಯೂನಿಟ್, ಮಂಗಳೂರು ಕಚೇರಿಯ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. 
    ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕರಾದ ನಮಗೆ ಎಂಪಿಎಂ ಕಾರ್ಮಿಕರ ಗ್ರೂಪ್ ಸೂಪರ್ ಅನ್ಯುಯೇಷನ್ ಸ್ಟೀಂನ ಮಾಸ್ಟರ್ ಪಾಲಿಸಿ ಸಂ. ೫೦೮೨೧೧ ರ ಮೂಲಕ ನೀಡುತ್ತಿರುವ ಅನ್ಯುಟಿ ಹಣ ತುಂಬಾ ಕಡಿಮೆ ಇದ್ದು ಅದನ್ನು ಜಾಸ್ತಿ ಮಾಡಬೇಕೆಂದು ಅಥವಾ ನಮ್ಮ ಒಟ್ಟು ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೆ ಕಛೇರಿಯ ನಮ್ಮ ಖಾತೆಗಳಿಗೆ ವರ್ಗಾವಣೆ ಮಾಡುವಂತೆ ಕೋರಿ ಪತ್ರ ಬರೆದಿದ್ದೆವು. ನಮ್ಮ ಮನವಿಗೆ ಸ್ಪಂದಿಸದಿದ್ದುದರಿಂದ ಅನಿವಾರ್ಯವಾಗಿ ಹೋರಾಟ ಮಾಡಲಾಗುತ್ತಿದೆ ಎಂದರು. 
    ನಾವು ಈ ಹಿಂದೆ ಎರಡು ಬಾರಿ ಹೋರಾಟ ನಡೆಸಲು ಮುಂದಾದಾಗ ನಮ್ಮ ಬೇಡಿಕೆ ಬಗ್ಗೆ ಪರಿಶೀಲಿಸುತ್ತೇವೆಂದು ಸಮಯ ತೆಗೆದುಕೊಂಡು ಇಲ್ಲಿಯವರೆಗೂ ಪರಿಹರಿಸಿಲ್ಲ. ಇದೀಗ  ಅ.೧೦ರಂದು ತಾವುಗಳು ಪತ್ರವನ್ನು ನೀಡಿದ್ದು ಅದರಲ್ಲಿ ಪಾಲಿಸಿದಾರ ಬದುಕಿರುವವರೆಗೂ ಹಣ ವಾಪಸ್ ಕೊಡುವುದಕ್ಕಾಗಲೀ, ಬಡ್ಡಿ ಹೆಚ್ಚಳ ಮಾಡುವುದಕ್ಕಾಗಲೀ ಬರುವುದಿಲ್ಲವೆಂದು ಹಾಗು ಒಪ್ಪಂದ ಇದೆಯೆಂದು ಯಾವುದೋ ಭೋಗಸ್ ಪ್ರತಿಯನ್ನು ನೀಡಿದ್ದೀರಿ. ಈ ಪತ್ರಗಳಿಗೆ ಸಹಿಯೂ ಇಲ್ಲ ಮತ್ತು ಆ ತರಹ ಯಾವುದೇ ಒಪ್ಪಂದ ಇಲ್ಲವೆಂಬುದು ನಮ್ಮ ದೃಢವಾದ ನಂಬಿಕೆಯಾಗಿದೆ. ಈ ಬಗ್ಗೆ ಯಾವುದೇ ಟ್ರಸ್ಟ್ ರಚನೆಯನ್ನು ನೀವುಗಳು ಆಗಲೇ ಮಾಡಿದ್ದರೆ ನಮಗೆ ಆಡಳಿತವರ್ಗವು ಪ್ರತಿವಷ ಹಣ ಕಟ್ಟದಿದ್ದಾಗ ತಿಳಿಯುತ್ತಿತ್ತು ಎಂದರು. 
    ನೀವು ನಿಮ್ಮ ಯಾವುದೇ ಪಾಲಿಸಿಯನ್ನು ನಿಗದಿತ ಸಮಯದಲ್ಲಿ ಕಟ್ಟದಿದ್ದಾಗ ಆ ಕಂತನ್ನು ಕಟ್ಟಿಸಿಕೊಳ್ಳುವಾಗ ಅದಕ್ಕೆ ಬಡ್ಡಿಯನ್ನು ಸೇರಿಸಿ ಕಟ್ಟಿಸಿಕೊಳ್ಳುತ್ತೀರಿ. ಆದರೆ ಎಂಪಿಎಂ ಆಡಳಿತವರ್ಗ ನಿಗದಿತವಾಗಿ ಕಂತುಗಳನ್ನು ಕಟ್ಟದಿದ್ದಾಗ ಆ ಕಂತುಗಳಿಗೆ ಅವರಿಂದ ಬಡ್ಡಿಯನ್ನು ಕಟ್ಟಿಸಿಕೊಳ್ಳದೆ ನಮಗೆ ಅನ್ಯಾಯ ಮಾಡಿರುತ್ತೀರಿ. ಆದರೆ ಈಗ ನಮ್ಮ ಹಣಕ್ಕೆ ಬಹಳ ಕಡಿಮೆ ರೀತಿಯಲ್ಲಿ ಬಡ್ಡಿ ನೀಡುತ್ತಿದ್ದು, ಇದು ನಮಗೆ ಮಾಡಿರುವ ಮತ್ತೊಂದು
ಅನ್ಯಾಯವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ಈ ಕೂಡಲೇ ಇದನ್ನು ಸರಿಪಡಿಸಿಕೊಡಬೇಕು. ನಮ್ಮ ಬೇಡಿಕೆ ಪರಿಹಾರವಾಗದಿದ್ದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಅಥವಾ ಕಾನೂನು ಮೊರೆ ಹೋಗಲೇಬೇಕಾಗುತ್ತದೆ ಎಂದು ಎಚ್ಚರಿಸಿದರು. 
    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ, ಸಂಚಾಲಕರಾದ ವಿ.ಗೋವಿಂದಪ್ಪ, ಕೆ.ಜಿ ವೆಂಕಟೇಶ್ ಮೂರ್ತಿ, ಶಿವಲಿಂಗಯ್ಯ, ಆರ್.ಎ ಬಾಪು, ವಿ.ಎಸ್ ರಘುನಾಥ್, ನಿವೃತ್ತ ನೌಕರರಾದ ಚಿಕ್ಕರಾಜು, ಬಸವರಾಜ್, ಟಿ. ತಿಮ್ಮಪ್ಪ, ಟಿ.ಎಸ್ ಆನಂದಕುಮಾರ್, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.