Wednesday, July 28, 2021

ವಾಸುಕಿ ನಿಧನ

ವಾಸುಕಿ
ಭದ್ರಾವತಿ, ಜು. ೨೮: ನಗರದ ಜನ್ನಾಪುರ ನಿವಾಸಿ ವಾಸುಕಿ (೭೬) ಬುಧವಾರ ಸಂಜೆ  ನಿಧನ ಹೊಂದಿದರು.
ಪತಿ, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ಬೆಳಿಗ್ಗೆ ನಡೆಯಲಿದೆ.


ಹೆಚ್ಚಿನ ಶುಲ್ಕ ವಸೂಲಾತಿ ವಿರೋಧಿಸಿ ಎಎಪಿ ಪ್ರತಿಭಟನೆ : ತಹಸೀಲ್ದಾರ್‌ಗೆ ಮನವಿ

ಖಾಸಗಿ ಶಾಲೆಗಳಲ್ಲಿ ಸರ್ಕಾರಿ ಆದೇಶ ಉಲ್ಲಂಘಿಸಿ ಹೆಚ್ಚಿನ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಬುಧವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಜು. ೨೮: ಖಾಸಗಿ ಶಾಲೆಗಳಲ್ಲಿ ಸರ್ಕಾರಿ ಆದೇಶ ಉಲ್ಲಂಘಿಸಿ ಹೆಚ್ಚಿನ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಬುಧವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ  ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಸರ್ಕಾರಿ ಶಾಲೆಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸದ ಕಾರಣ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಇದರಿಂದಾಗಿ ಮಧ್ಯಮ ಹಾಗು ಬಡ ಕುಟುಂಬಗಳು ಸಹ ಕೋವಿಡ್-೧೯ರ ಸಂಕಷ್ಟದ ಸಂದರ್ಭದಲ್ಲೂ ಖಾಸಗಿ ಶಾಲೆಗಳನ್ನು ಅವಲಂಬಿಸುವಂತಾಗಿದೆ. ಪ್ರಸ್ತುತ ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸಮಸ್ಯೆ ಎದುರಾಗಬಾರದೆಂಬ ಉದ್ದೇಶದಿಂದ ಹಾಗು ಶಾಲೆಗಳನ್ನು ಸುಗಮವಾಗಿ ಮುನ್ನಡೆಸಿಕೊಂಡು ಹೋಗಲು ಅನುಕೂಲವಾಗುವಂತೆ ಸರ್ಕಾರ ಶೇ.೩೦ರಷ್ಟು ಶುಲ್ಕ ಕಡಿಮೆಗೊಳಿಸಿ ವಸೂಲಾತಿ ಮಾಡುವಂತೆ ಆದೇಶಿಸಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶುಲ್ಕ ವಸೂಲಾತಿ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
    ತಕ್ಷಣ ಅನುದಾನ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮುಖ್ಯಸ್ಥರ ಸಭೆ ಕರೆದು ಸರ್ಕಾರದ ಆದೇಶದಂತೆ ನಡೆದುಕೊಳ್ಳುವಂತೆ ಸೂಚಿಸಬೇಕೆಂದು ಮನವಿ ಮಾಡಲಾಯಿತು.
    ಪಕ್ಷದ ಪ್ರಮುಖರಾದ ಅಬ್ದುಲ್ ಖದೀರ್, ಎನ್.ಪಿ ಜೋಸೆಫ್, ಇಬ್ರಾಹಿಂ ಖಾನ್, ಬಿ.ಕೆ ರಮೇಶ್, ಎಚ್. ರವಿಕುಮಾರ್, ಜಾವೇದ್, ನಾಸಿಬಬೇಗಂ, ಬಸವಕುಮಾರ್, ಪರಮೆಶ್ ನಾಯ್ಕ ಮತ್ತು ರೇಷ್ಮೆ ಬಾನು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸರ್ಕಾರಿ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭದ್ರಾವತಿ ತಾಲೂಕು ಶಾಖೆಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು.
    ಭದ್ರಾವತಿ, ಜು. ೨೮: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಗೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಎ.ಜೆ ರಂಗನಾಥ ಪ್ರಸಾದ್ ಹಾಗು ಕಾರ್ಯದರ್ಶಿಯಾಗಿ ಡಿ.ಎಸ್ ರಾಜಪ್ಪ ಆಯ್ಕೆಯಾಗಿದ್ದಾರೆ.
    ಹಿರಿಯ ಉಪಾಧ್ಯಕ್ಷರಾಗಿ ಎಂ.ಎಸ್ ಬಸವರಾಜ, ಉಪಾಧ್ಯಕ್ಷರಾಗಿ ಆರ್. ಅಶೋಕ್‌ರಾವ್, ಸಿ. ಮಂಜಾನಾಯ್ಕ ಮತ್ತು ರಾಜ್‌ಕುಮಾರ್, ಜಂಟಿ ಕಾರ್ಯದರ್ಶಿಗಳಾಗಿ ಎಂ. ಪುಟ್ಟಲಿಂಗಮೂರ್ತಿ, ಜೆ. ಕಾಂತರಾಜ್ ಮತ್ತು ಬಿ.ಆರ್ ದಿನೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ಆರ್. ಜನಾರ್ಧನ, ಡಿ. ನಾಗರತ್ನ ಮತ್ತು ಎ. ರಂಗನಾಥ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಆರ್. ಶಿವಾಜಿರಾವ್ ಮತ್ತು ಕೃಷ್ಣ, ಕ್ರೀಡಾ ಕಾರ್ಯದರ್ಶಿಗಳಾಗಿ ಶ್ರೀಕಾಂತ್ ಮತ್ತು ಜಾನ್ ನಿರ್ಮಲ್  ಹಾಗು ಆಂತರಿಕ ಲೆಕ್ಕ ಪರಿಶೋಧಕರಾಗಿ ಎಚ್.ಎಂ ನಾಗರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಖೆಯ ಅಧ್ಯಕ್ಷ ಸಿದ್ದಬಸಪ್ಪ ತಿಳಿಸಿದ್ದಾರೆ.

ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಬಿ.ಎಸ್ ಮಹೇಶ್‌ಕುಮಾರ್

ಬಿ.ಎಸ್ ಮಹೇಶ್‌ಕುಮಾರ್
    ಭದ್ರಾವತಿ, ಜು. ೨೮: ೨೦೨೧-೨೨ನೇ ಸಾಲಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ನ್ಯಾಯವಾದಿ ಬಿ.ಎಸ್ ಮಹೇಶ್‌ಕುಮಾರ್ ನೇಮಕಗೊಂಡಿದ್ದಾರೆ.
     ಬಿ.ಎಸ್ ಮಹೇಶ್‌ಕುಮಾರ್ ತಾಲೂಕು ವಕೀಲರ ಸಂಘ, ಅಖಿಲ ಭಾರತ ವೀರಶೈವ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಾರ್ಯದರ್ಶಿಯಾಗಿ ಡಿ. ಶಂಕರ ಮೂರ್ತಿ ಹಾಗು ಖಜಾಂಚಿಯಾಗಿ ವಿನೋದ್ ಗಿರಿ ನೇಮಕಗೊಂಡಿದ್ದಾರೆ.
    ಲಿಯೋ ಕ್ಲಬ್ ಅಧ್ಯಕ್ಷರಾಗಿ ರಚನಾ ಎಸ್. ಪಟೇಲ್, ಕಾರ್ಯದರ್ಶಿಯಾಗಿ ಆರ್. ಶ್ರೇಷ್ಠ ಮತ್ತು ಖಜಾಂಚಿಯಾಗಿ ವಿ.ಸಿ ಸಮಿತ್ ಆಯ್ಕೆಯಾಗಿದ್ದಾರೆ.

ವಿವಿಧ ವೃತ್ತಿ ತರಗತಿಗಳಿಗೆ ಪ್ರವೇಶ ಪಡೆದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು

     ಭದ್ರಾವತಿ, ಜು. ೨೮: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ ವಿವಿಧ ವೃತ್ತಿ ತರಗತಿಗಳ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವ ಜನಾಂಗದ ವಿದ್ಯಾರ್ಥಿಗಳಿಗೆ  ಆರ್ಥಿಕ ನೆರವು ನೀಡಲು ತೀರ್ಮಾನಿಸಲಾಗಿದೆ.
      ವೈದ್ಯಕೀಯ, ತಾಂತ್ರಿಕ ಶಿಕ್ಷಣಗಳಾದ ಎಂ.ಟೆಕ್, ಬಿ.ಇ, ಎಂ.ಸಿ.ಎ, ಡಿಪ್ಲೋಮಾ, ಐಟಿಐ, ಬಿ.ಎಸ್ಸಿ, ಎ.ಜಿ ಮತ್ತು ಎಂ.ಎಸ್ಸಿ, ಎ.ಜಿ ಮತ್ತು ಮಿಡ್ವೈಡ್ ಟ್ರೈನಿಂಗ್(ಎ.ಎನ್.ಎಂ), ಸರ್ಕಾರಿ ಟೀಚರ್ ಟ್ರೈನಿಂಗ್(ಎನ್.ಟಿ.ಟಿ ಮತ್ತು ಡಿ.ಇಡಿ) ಇತ್ಯಾದಿ ವೃತ್ತಿ ತರಗತಿಗಳ ವ್ಯಾಸಂಗಕ್ಕೆ ಪ್ರವೇಶ ಪಡೆದವರು ಭದ್ರಾವತಿ ತಾಲೂಕು ಒಕ್ಕಲಿಗರ ಸಂಘ, ಕೆಂಪೇಗೌಡ ಸಮುದಾಯ ಭವನ, ಅಪ್ಪರ್ ಹುತ್ತಾ, ಭದ್ರಾವತಿ. ವಿಳಾಸದ ಸಂಘದ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
     ಇದೆ ರೀತಿ ೨೦೧೯-೨೦ ಮತ್ತು ೨೦೨೦-೨೧ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ, ವೈದ್ಯಕೀಯ ಸೇರಿದಂತೆ ವೃತ್ತಿಪರ ಶಿಕ್ಷಣಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗು ಕ್ರೀಡೆ ಹಾಗು ಇನ್ನಿತರ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ಉತ್ತಮ ಸಾಧನೆ ಮಾಡಿರುವವರನ್ನು ಸನ್ಮಾನಿಸಿ ಗೌರವಿಸಲು ತೀರ್ಮಾನಿಸಲಾಗಿದೆ. ಹೆಚ್ಚಿನ ಮಹಿತಿಗೆ ಸಂಘದ ಕಛೇರಿಯನ್ನು ಸಂಪರ್ಕಿಸಲು ಪ್ರಧಾನ ಕಾರ್ಯದರ್ಶಿ ಆರ್. ಪ್ರಕಾಶ್ ಕೋರಿದ್ದಾರೆ.