ಶುಕ್ರವಾರ, ಜುಲೈ 25, 2025

ಸರ್ಕಾರಿ ಡಿ' ದರ್ಜೆ ನೌಕರರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ನಿಧನ


ನಂಜುಂಡಸ್ವಾಮಿ 
    ಭದ್ರಾವತಿ : ತಾಲೂಕು ಸಮಾಜ ಕಲ್ಯಾಣ ಇಲಾಖೆ ಡಿ' ದರ್ಜೆ ನೌಕರ, ನಗರದ ಬೊಮ್ಮನಕಟ್ಟೆ ನಿವಾಸಿ ನಂಜುಂಡಸ್ವಾಮಿ(೫೯) ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. 
    ಇವರಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ, ಪತ್ನಿ ನೀಲಮ್ಮ ಸೇರಿದಂತೆ ಪುತ್ರಿ ಹಾಗು ಇಬ್ಬರು ಪುತ್ರರಿದ್ದಾರೆ. ನಂಜುಂಡಸ್ವಾಮಿಯವರು ಕರ್ನಾಟಕ ರಾಜ್ಯ ಸರ್ಕಾರಿ ಡಿ' ದರ್ಜೆ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ ೧೧ ಗಂಟೆಗೆ ಬೊಮ್ಮನಕಟ್ಟೆ ರುದ್ರಭೂಮಿಯಲ್ಲಿ ನಡೆಯಲಿದೆ. ಇವರ ನಿಧನಕ್ಕೆ ಡಿ' ದರ್ಜೆ ಸರ್ಕಾರಿ ನೌಕರರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಜು.೨೭ರಂದು ಕುರುಬರ ಸಂಘಕ್ಕೆ ಚುನಾವಣೆ

    

    ಭದ್ರಾವತಿ: ಹಳೇನಗರ ಬಸವೇಶ್ವರ ವೃತ್ತದ ತಾಲೂಕು ಕುರುಬರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಜು.೨೭ರ ಭಾನುವಾರ ಬೆಳಿಗ್ಗೆ ೯ ಗಂಟೆಯಿಂದ ೪ ಗಂಟೆವರೆಗೆ ನಡೆಯಲಿದೆ. 
    ಕಾರ್ಯಕಾರಿ ಸಮಿತಿ ೩ ವರ್ಷಗಳ ಅವಧಿಗೆ ಒಟ್ಟು ೧೫ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಹಳೇನಗರ ಬಸವೇಶ್ವರ ವೃತ್ತದ ಶ್ರೀ ಕನಕ ವಿದ್ಯಾಸಂಸ್ಥೆಯಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಈ ಹಿಂದಿನ ಚುನಾವಣೆಗಳಲ್ಲಿ ಮತದಾರರು ಹೆಚ್ಚಿನ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು. ಈ ಬಾರಿ ಸಹ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭರವಸೆ ಅಭ್ಯರ್ಥಿಗಳು ಹೊಂದಿದ್ದಾರೆ. 

`ಕರ್ನಾಟಕ ಸ್ಟಾರ್ ಸಿಂಗರ್ ಸೀಸನ್-೨' ಲಾಂಛನ, ಕರಪತ್ರ ಬಿಡುಗಡೆ

ಭದ್ರಾವತಿಯಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ `ಕರ್ನಾಟಕ ಸ್ಟಾರ್ ಸಿಂಗರ್ ಸೀಸನ್-೨' ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಕಾರ್ಯಕ್ರಮದ ಲಾಂಛನ ಮತ್ತು ಕರಪತ್ರ ಸರ್ಕಾರದ ೫ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಬಿಡುಗಡೆಗೊಳಿಸಿದರು. 
    ಭದ್ರಾವತಿ: ಯುವ ಗಾಯಕರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ(ಎಸ್‌ಡಿಸಿಎಎ)ದ ವತಿಯಿಂದ ಆಯೋಜಿಸಿಕೊಂಡು ಬರುತ್ತಿರುವ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ `ಕರ್ನಾಟಕ ಸ್ಟಾರ್ ಸಿಂಗರ್' ಕಾರ್ಯಕ್ರಮ ಈ ಬಾರಿ ಸಹ ಆಯೋಜಿಸಲಾಗಿದೆ. 
    ಸಂಘದ ಅಧ್ಯಕ್ಷ, ಗಾಯಕ ಬಿ.ಎ ಮಂಜುನಾಥ್‌ರವರ ನೇತೃತ್ವದಲ್ಲಿ ಆಗಸ್ಟ್ ತಿಂಗಳಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈ ಸಂಬಂಧ ರೂಪಿಸಲಾಗಿರುವ `ಕರ್ನಾಟಕ ಸ್ಟಾರ್ ಸಿಂಗರ್ ಸೀಸನ್-೨' ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ  ಕಾರ್ಯಕ್ರಮದ ಲಾಂಛನ ಮತ್ತು ಕರಪತ್ರ ಸರ್ಕಾರದ ೫ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಬಿಡುಗಡೆಗೊಳಿಸಿದರು. 
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೃಹ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಲಾಂಛನ ಮತ್ತು ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್, ಪದಾಧಿಕಾರಿಗಳಾದ ವೈ.ಕೆ ಹನುಮಂತಯ್ಯ, ಚರಣ್ ಕವಾಡ್, ಪ್ರಶಾಂತ್, ಚಿದಾನಂದ್, ರಾಮು, ಬಾಬು, ದೇವರಾಜ್, ಮುರುಗೇಶ್ ಮತ್ತು ಸ್ಟಾರ್ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹೃದಯಾಘಾತಕ್ಕೆ ೩೪ ವರ್ಷದ ವ್ಯಕ್ತಿ ಬಲಿ

ದಿನೇಶ್ 
    ಭದ್ರಾವತಿ :  ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ತಾಲೂಕಿನ ಮತ್ತಿಘಟ್ಟ ಗ್ರಾಮದ ೩೪ ವರ್ಷ ವಯೋಮಾನದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 
    ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಿನೇಶ್ ಮೃತಪಟ್ಟಿದ್ದು, ರಾತ್ರಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಇವರನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾರೆ. ಇವರಿಗೆ ಮದುವೆಯಾಗಿದ್ದು, ಎರಡು ಚಿಕ್ಕ ಮಕ್ಕಳಿದ್ದಾರೆ. 
    ಇತ್ತೀಚೆಗೆ ಎಲ್ಲಾ ವಯೋಮಾನದವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಎಲ್ಲೆಡೆ ಆತಂಕ ಎದುರಾಗಿದ್ದು, ಹೃದಯಾಘಾತಕ್ಕೆ ನಿಖರ ಕಾರಣಗಳು ತಿಳಿದು ಬರುತ್ತಿಲ್ಲ.

ಸಮಾಜದ ಸುಧಾರಣೆಯಲ್ಲಿ ತೊಡಗಿರುವ ಪತ್ರಕರ್ತರಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಿ: ಬಿ.ಕೆ ಸಂಗಮೇಶ್ವರ

ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ: ಸಮಾಜದ ಸುಧಾರಣೆಯಲ್ಲಿ ಸದಾ ಕಾಲ ತೊಡಗಿಸಿಕೊಂಡಿರುವ ಪತ್ರಕರ್ತರ ಶ್ರಮ ಹೆಚ್ಚಿನದ್ದಾಗಿದ್ದು, ಸಮಾಜದ ಪ್ರತಿಯೊಬ್ಬರೂ ಇವರಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ, ಶಾಸಕ ಬಿ.ಕೆ ಸಂಗಮೇಶ್ವರ್ ಕರೆನೀಡಿದರು.  
    ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  
    ಪತ್ರಿಕೆಗಳು ಆರಂಭವಾದಾಗಿನಿಂದಲೂ ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ನೀಡುವ ಜೊತೆಗೆ ಸಮಾಜದ ರಕ್ಷಣೆಯಲ್ಲಿ ತೊಡಗಿಸಿಕೊಂಡಿವೆ. ಈ ನಿಟ್ಟಿನಲ್ಲಿ ಪತ್ರಕರ್ತರ ಶ್ರಮ ಹೆಚ್ಚಿನದ್ದಾಗಿದೆ ಎಂದರು. 


ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಷಾಮಹಿ ಪತ್ರಿಕೆ ಸಂಪಾದಕರಾದ ಶಾಂತಿ ಕಣ್ಣಪ್ಪ ದಂಪತಿ ೫೦ ವರ್ಷಗಳ ದಾಂಪತ್ಯ ಜೀವನ ಯಶಸ್ವಿಯಾಗಿ ಪೂರೈಸಿರುವ ಹಿನ್ನಲೆಯಲ್ಲಿ ಸಂಘದ ವತಿಯಿಂದ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು. 
    ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರು, ಹಿರಿಯ ಪತ್ರಕರ್ತರಾದ ಕಣ್ಣಪ್ಪ ಮಾತನಾಡಿ, ಪತ್ರಕರ್ತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಇದೀಗ ಸಂಕಷ್ಟದಲ್ಲಿರುವ ಪತ್ರಕರ್ತರ ಹಿತರಕ್ಷಣೆಗಾಗಿ ತಾಲೂಕು ಪತ್ರಕರ್ತರ ಸಂಘ ನಿಧಿ ಸ್ಥಾಪಿಸಿದೆ. ಈಗಾಗಲೇ ಮೂಲ ಧನ ಸಂಗ್ರಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಪ್ರಯೋಜನಕಾರಿಯಾಗಲಿದೆ ಎಂದರು. 
ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಕಾರ್ಯಕ್ರಮ ಮಾಡಲು ಅನುಕೂಲವಾಗುವಂತೆ ಪತ್ರಿಕಾ ಭವನವನ್ನು ಜನಪ್ರತಿನಿಧಿಗಳು ಹಾಗು ಹಲವಾರು ದಾನಿಗಳಿಂದ ನಿರ್ಮಾಣ ಮಾಡಿದ್ದು, ಪತ್ರಿಕಾ ಭವನ ಜನಸ್ನೇಹಿಯಾಗಿ ಜನತೆಗೆ ಆನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಜನಪ್ರತಿನಿಧಿಗಳು ಇನ್ನೂ ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.  
       ಉಷಾಮಹಿ ಪತ್ರಿಕೆ ಸಂಪಾದಕರಾದ ಶಾಂತಿ ಕಣ್ಣಪ್ಪ ದಂಪತಿ ೫೦ ವರ್ಷಗಳ ದಾಂಪತ್ಯ ಜೀವನ ಯಶಸ್ವಿಯಾಗಿ ಪೂರೈಸಿರುವ ಹಿನ್ನಲೆಯಲ್ಲಿ ಸಂಘದ ವತಿಯಿಂದ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಅಲ್ಲದೆ ಸುಮಾರು ೩೫ ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಸುದರ್ಶನ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. 
  ವೇದಿಕೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ ಅರುಣ್, ಕಾರ್ಯದರ್ಶಿ ದೀಪಕ್ ಸಾಗರ್, ಪತ್ರಿಕಾಭವನ ಟ್ರಸ್ಟ್ ಕಾರ್ಯದರ್ಶಿ ಕೆ.ಎನ್ ಶ್ರೀಹರ್ಷ, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಹಿರಿಯ ನಗರಸಭಾ ಸದಸ್ಯ ವಿ. ಕದಿರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ದೆ ಸುಮಾರು ೩೫ ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಹಿರಿಯ ಪತ್ರಕರ್ತ ಸುದರ್ಶನ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್ ಬದರಿನಾರಯಣ ಶ್ರೇಷ್ಠಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಂಡಿದ್ದರು. ಪತ್ರಕರ್ತ ರಂಗನಾಥರಾವ್‌ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.  ಹಿರಿಯ ಪತ್ರಕರ್ತರಾದ ಎಚ್.ಕೆ ಶಿವಶಂಕರ್, ಗಂಗಾನಾಯ್ಕ ಗೊಂದಿ, ಶೈಲೇಶ್ ಕೋಠಿ, ಸಯ್ಯದ್ ಖಾನ್, ಕೆ.ಎಸ್ ಸುಧೀಂದ್ರ, ಕೆ.ಆರ್ ಶಂಕರ್, ಕಿರಣ್ ಕುಮಾರ್, ಪ್ರಶಾಂತ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು. 
    ಪ್ರಧಾನ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿ, ಕಾರ್ಯದರ್ಶಿ ಆರ್. ಫಿಲೋಮಿನಾ ನಿರೂಪಿಸಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಭಾಷ್ ರಾವ್ ಸಿಂಧ್ಯಾ ಪ್ರಸ್ತಾವಿಕ ನುಡಿಗಳನ್ನಾಡಿದರು. ಖಜಾಂಚಿ ಅನಂತಕುಮಾರ್ ವಂದಿಸಿದರು.