Sunday, May 23, 2021

೨ ದಿನಗಳ ಸಂಪೂರ್ಣ ಲಾಕ್‌ಡೌನ್ ಬಹುತೇಕ ಯಶಸ್ವಿ

ಭದ್ರಾವತಿಯಲ್ಲಿ ಶನಿವಾರ ಮತ್ತು ಭಾನುವಾರ ಜಾರಿಗೊಳಿಸಲಾಗಿದ್ದ ೨ ದಿನಗಳ ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ ಕಂಡು ಬಂದ ದೃಶ್ಯ.
    ಭದ್ರಾವತಿ, ಮೇ. ೨೩: ತಾಲೂಕಿನಲ್ಲಿ ಶನಿವಾರ ಮತ್ತು ಭಾನುವಾರ ಜಾರಿಗೊಳಿಸಲಾಗಿದ್ದ ೨ ದಿನಗಳ ಸಂಪೂರ್ಣ ಲಾಕ್‌ಡೌನ್ ಬಹುತೇಕ ಯಶಸ್ವಿಯಾಗಿದ್ದು, ಆದರೂ ಸೋಂಕು ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈಗಾಗಲೇ ಬಹುತೇಕ ಕಡೆ ಸೋಂಕು ವ್ಯಾಪಕವಾಗಿ ಹರಡಿರುವ ಹಿನ್ನಲೆಯಲ್ಲಿ ಆತಂಕ ಎದುರಾಗಿದೆ.
     ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ೨ ದಿನಗಳ ಸಂಪೂರ್ಣ ಲಾಕ್‌ಡೌನ್‌ಗೆ ಹೆಚ್ಚಿನ ಶ್ರಮವಹಿಸಿರುವುದು ಕಂಡು ಬಂದಿದ್ದು, ಜನ ಸಂಚಾರ ಹೆಚ್ಚಾಗಿರುವ ಪ್ರದೇಶಗಳಲ್ಲಿ ಒಳಭಾಗದ ರಸ್ತೆಗಳನ್ನು ಸಹ ಬ್ಯಾರಿಗೇಡ್‌ಗಳಿಂದ ಬಂದ್ ಮಾಡಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ತೀವ್ರಗೊಳಿಸಿ ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕ್ರಮ ಕೈಗೊಂಡರು.
    ಹಾಲು ಹಾಗು ಔಷಧ ಅಂಗಡಿಗಳು ಹೊರತುಪಡಿಸಿ ಉಳಿದ ಅಂಗಡಿ, ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು.  ಜನರು ಸಹ ಲಾಕ್‌ಡೌನ್‌ಗೆ ಪೂರಕವಾಗಿ ಸ್ಪಂದಿಸಿದರು. ಸಂಪೂರ್ಣ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಶನಿವಾರ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.
    ಸೋಮವಾರ ಬೆಳಿಗ್ಗೆ ಸಂಪೂರ್ಣ ಲಾಕ್‌ಡೌನ್ ಮುಕ್ತಾಯಗೊಳ್ಳಲಿದೆ. ಆದರೆ ಎಂದಿನಂತೆ ಲಾಕ್‌ಡೌನ್ ಮುಂದುವರೆಯಲಿದೆ. ಸರ್ಕಾರ ಪುನಃ ಲಾಕ್‌ಡೌನ್ ಮುಂದುವರೆಸಿರುವ ಕಾರಣ ಜನರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತಾಗಿದೆ.



ನಗರಸಭೆ ೧೬ನೇ ವಾರ್ಡ್ ವ್ಯಾಪ್ತಿಯಲ್ಲಿ ಸ್ಯಾನಿಟೈಜರ್ ಸಿಂಪಡಣೆ


ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಭದ್ರಾವತಿಯಲ್ಲಿ ಗಾಂಧಿನಗರ ವ್ಯಾಪ್ತಿಯನ್ನು ಒಳಗೊಂಡಿರುವ ನಗರಸಭೆ ವಾರ್ಡ್ ನಂ.೧೬ರಲ್ಲಿ ಭಾನುವಾರ ಸ್ಯಾನಿಟೈಜರ್ ಸಿಂಪಡಿಸಲಾಯಿತು.
    ಭದ್ರಾವತಿ, ಮೇ. ೨೩: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಗಾಂಧಿನಗರ ವ್ಯಾಪ್ತಿಯನ್ನು ಒಳಗೊಂಡಿರುವ ನಗರಸಭೆ ವಾರ್ಡ್ ನಂ.೧೬ರಲ್ಲಿ ಭಾನುವಾರ ಸ್ಯಾನಿಟೈಜರ್ ಸಿಂಪಡಿಸಲಾಯಿತು.
     ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಪ್ರಮುಖ ವಾರ್ಡ್‌ಗಳ ಪೈಕಿ ೧೬ನೇ ವಾರ್ಡ್ ಸಹ ಒಂದಾಗಿದ್ದು, ನಗರಸಭೆ ಸಹಕಾರದೊಂದಿಗೆ ಅಗ್ನಿಶಾಮಕ ಇಲಾಖೆವತಿಯಿಂದ ವಾರ್ಡ್‌ನ ಪ್ರತಿಯೊಂದು ರಸ್ತೆಗೂ ಸ್ಯಾನಿಟೈಜರ್ ಸಿಂಪಡಿಸಲಾಯಿತು.
     ವಾರ್ಡ್ ನೂತನ ಸದಸ್ಯ, ಹಿರಿಯ ಬಿಜೆಪಿ ಮುಖಂಡ ವಿ. ಕದಿರೇಶ್, ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್ ಹಾಗು ಸಿಬ್ಬಂದಿಗಳು ಮತ್ತು  ವಾರ್ಡ್ ಪ್ರಮುಖರು ಉಪಸ್ಥಿತರಿದ್ದರು.

ಹಿರಿಯ ಜೀವಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಮಾಜಿ ಶಾಸಕರ ಪುತ್ರ

ಭದ್ರಾವತಿಯಲ್ಲಿ ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಬಡ ಕುಟುಂಬದ ಹಿರಿಯ ಜೀವಿಗಳ ನೆರವಿಗೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ಪುತ್ರ ಎಂ.ಎ ಅಜಿತ್ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
    ಭದ್ರಾವತಿ, ಮೇ. ೨೩: ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಬಡ ಕುಟುಂಬದ ಹಿರಿಯ ಜೀವಿಗಳ ನೆರವಿಗೆ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ಪುತ್ರ ಎಂ.ಎ ಅಜಿತ್ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
     ಸಾಮಾಜಿಕ ಜಾಲತಾಣವೊಂದರ ನಿರ್ವಾಹಕರಿಂದ ಹಿರಿಯ ಜೀವಿಗಳು ಸಂಕಷ್ಟದಲ್ಲಿರುವ ಮಾಹಿತಿ ಲಭಿಸಿದ ತಕ್ಷಣ ನಗರಸಭೆ ಮಾಜಿ ಸದಸ್ಯರಾದ ಎಂ.ಎ ಅಜಿತ್ ತಕ್ಷಣ ನೆರವಿಗೆ ಧಾವಿಸಿದ್ದಾರೆ.
    ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಸ್ವತಃ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರೇ ಕ್ಷೇತ್ರದಾದ್ಯಂತ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ್ದರು. ಇದೀಗ ಅವರಿಲ್ಲದ ಸಂದರ್ಭದಲ್ಲಿ ಪುತ್ರ ಎಂ.ಎ ಅಜಿತ್ ತಮ್ಮ ಕೈಲಾದಷ್ಟು ಮಟ್ಟಿಗೆ ನೆರವಿಗೆ ಮುಂದಾಗಿದ್ದಾರೆ.

ನಾಗರತ್ನ ನಿಧನ

ನಾಗರತ್ನ
    ಭದ್ರಾವತಿ, ಮೇ. ೨೩:  ನಗರಸಭೆ ವ್ಯಾಪ್ತಿ ಜನ್ನಾಪುರ ವೇಲೂರ್ ಶೆಡ್ ೭ನೇ ತಿರುವಿನ ನಿವಾಸಿ ಎಸ್.ಎ ರಂಗನಾಥ್‌ರವರ ಪತ್ನಿ ನಾಗರತ್ನ (೬೦) ನಿಧನ ಹೊಂದಿದರು.
    ಇತ್ತೀಚೆಗೆ ನಾಗರತ್ನ ಅವರ ತಾಯಿ ತುಮಕೂರಿನಲ್ಲಿ ನಿಧನ ಹೊಂದಿದ್ದು, ಇದೆ ಕೊರಗಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಅರ್ಯವೈಶ್ಯ ಮಂಡಳಿ ಸಂತಾಪ ಸೂಚಿಸಿದೆ.

ಬಜರಂಗದಳ ಕಾರ್ಯಕರ್ತರ ಸೇವೆಗೆ ಭಾವಸಾರ ವಿಜನ್ ಇಂಡಿಯಾ ಕೃತಜ್ಞತೆ

ಕಾರ್ಯಕರ್ತರಿಗೆ ಸನ್ಮಾನಿಸಿ ಗೌರವ, ಸೇವಾ ಕಾರ್ಯಕ್ಕೆ ಆರ್ಥಿಕ ನೆರವು

ಭದ್ರಾವತಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಬಜರಂಗದಳ ಕಾರ್ಯಕರ್ತರನ್ನು ಭಾವಸಾರ ವಿಜನ್ ಇಂಡಿಯಾ ವತಿಯಿಂದ ಭಾನುವಾರ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮೇ. ೨೩: ಒಂದೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಮತ್ತೊಂದೆಡೆ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ನಡುವೆ ಕೊರೋನಾ ಸೋಂಕಿತರ ಮೃತದೇಹಗಳ ಅಂತ್ಯ ಸಂಸ್ಕಾರ ಸಹ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಕೆಲವೆಡೆ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಸಹ ಮುಂದೆ ಬರುತ್ತಿಲ್ಲ. ಉಳಿದಂತೆ ಎಲ್ಲದಕ್ಕೂ ಹಣ ನೀಡಬೇಕಾದ ಇಂದಿನ ಸಂದರ್ಭದಲ್ಲಿ ಕಡು ಬಡಕುಟುಂಬಗಳು ಅಂತ್ಯಸಂಸ್ಕಾರ ನಡೆಸಲು ಅಶಕ್ತರಾಗಿದ್ದಾರೆ. ಇಂತಹ ಹಲವು ಸಮಸ್ಯೆಗಳ ನಡುವೆ ಯಾವುದೇ ಸ್ವಾರ್ಥವಿಲ್ಲದೆ ೧೦ ಜನರ ಯುವಕರ ತಂಡ ಸೋಂಕಿತ ಮೃತದೇಹಗಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮೂಲಕ ಮಾನವೀಯತೆ ಮೆರೆದಿದೆ.
    ಬಜರಂಗದಳ ಪ್ರಮುಖರಾದ ವಡಿವೇಲು, ಸುನಿಲ್‌ಕುಮಾರ್, ಕೃಷ್ಣ, ಶಿವಶಂಕರ್, ಅರಳಿಹಳ್ಳಿ ದೇವರಾಜ್, ಕಿರಣ್, ರಂಗನಾಥ್, ಅಜಿತ್, ಶ್ರೀಕಾಂತ್, ಸವಾಯಿ ಸಿಂಗ್, ಮಣಿಕಂಠ ಮತ್ತು ರಮೇಶ್ ಸೇರಿದಂತೆ ಸುಮಾರು ೧೦ ಮಂದಿಯನ್ನು ಒಳಗೊಂಡಿರುವ ತಂಡ ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ತಂಡದ ಈ ಕಾರ್ಯವನ್ನು ನಗರದ ಭಾವಸಾರ ವಿಜನ್ ಇಂಡಿಯಾ ಅಭಿನಂದಿಸುವ ಮೂಲಕ ಕೃತಜ್ಞತೆ ಸಹ ಸಲ್ಲಿಸಿದೆ.
    ಭಾವಸಾರ ವಿಜನ್ ಇಂಡಿಯಾ ಅಧ್ಯಕ್ಷ ಹಾಗು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ  ದುಗ್ಗೇಶ್ ತೇಲ್ಕರ್ ನೇತೃತ್ವದಲ್ಲಿ ಭಾನುವಾರ ಸೇವಾ ಕಾರ್ಯದಲ್ಲಿ ತೊಡಗಿರುವ ಬಜರಂಗದಳದ ೮ ಜನ ಕಾರ್ಯಕರ್ತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಜೊತೆಗೆ ಸೇವಾ ಕಾರ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಸದಸ್ಯರಿಂದ ಸಂಗ್ರಹಿಸಲಾದ ಆರ್ಥಿಕ ನೆರವನ್ನು ಸಹ ತಂಡಕ್ಕೆ ನೀಡಲಾಯಿತು. ಅಲ್ಲದೆ ತಂಡಕ್ಕೆ ಪ್ರತಿದಿನ ಊಟದ ವ್ಯವಸ್ಥೆ ಸಹ ಕೈಗೊಳ್ಳಲಾಗಿದೆ. ಯೋಗೇಶ್‌ಕುಮಾರ್, ಲಕ್ಷ್ಮೀಕಾಂತ್ ಸೇರಿದಂತೆ ಭಾವಸಾರ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.