Thursday, January 11, 2024

ಕಾಂಗ್ರೆಸ್ ಪಕ್ಷದಿಂದ ಚಂದ್ರೇಗೌಡ, ಬಾಲಕೃಷ್ಣ ಉಚ್ಛಾಟನೆ : ಎಸ್. ಕುಮಾರ್

ಟಿ. ಚಂದ್ರೇಗೌಡ
ಭದ್ರಾವತಿ: ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಮಾಜಿ ಅಧ್ಯಕ್ಷ ಟಿ. ಚಂದ್ರೇಗೌಡ ಹಾಗೂ ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ ಅವರನ್ನು ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಪಕ್ಷದಿಂದ ೬ ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.


ಬಾಲಕೃಷ್ಣ
    ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ನಗರ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಟಿ. ಚಂದ್ರೇಗೌಡ ಮತ್ತು ಬಾಲಕೃಷ್ಣ ಅವರು ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರ ಜೊತೆ ಸೇರಿ ಕಾಂಗ್ರೆಸ್ ಪಕ್ಷದ ವಿರುದ್ಧ, ಪಕ್ಷದ ನಾಯಕರ ವಿರುದ್ಧ, ಶಾಸಕರ ಮಕ್ಕಳ ಹಾಗೂ ಪಕ್ಷದ ಅಧ್ಯಕ್ಷರ ವಿರುದ್ಧ ಸಾರ್ವಜನಿಕ ಸಭೆಗಳಲ್ಲಿ ಮತ್ತು ಸ್ಥಳಗಳಲ್ಲಿ ಇಲ್ಲ ಸಲ್ಲದ ರೀತಿಯಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿರುವ ಹಿನ್ನಲೆಯಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡಿರುವುದಾಗಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಡಾ.ಎನ್.ಕೆ ಹೇಮಕೇಶವರವರಿಗೆ ಡಾಕ್ಟರೇಟ್ ಪದವಿ

ಡಾ. ಎನ್.ಕೆ ಹೇಮಕೇಶವ
    ಭದ್ರಾವತಿ: ಶಿವಮೊಗ್ಗ ಶೆಟ್ಟಿಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಎನ್.ಕೆ ಹೇಮಕೇಶವ ಅವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
    ಹೇಮಕೇಶವರವರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರೊ. ಡಾ. ಆರ್.ಆರ್ ಬಿರಾದಾರ ಅವರ ಮಾರ್ಗದರ್ಶನದಲ್ಲಿ `ಪಬ್ಲಿಕ್ ಎಕ್ಸ್‌ಪೆಂಡಿಚರ್ ಆನ್ ಹೆಲ್ತ್‌ಕೇರ್ ಸರ್ವಿಸಸ್ ಇನ್ ಕರ್ನಾಟಕ ಎ ಸ್ಟಡಿ ಆಫ್ ಎನ್‌ಆರ್‌ಎಚ್‌ಎಂ' ವಿಷಯ ಕುರಿತು ಮಹಾಪ್ರಬಂಧ ಮಂಡಿಸಿದ್ದರು.
    ಹೇಮಕೇಶವರವರು ನಗರಸಭೆ ವಾರ್ಡ್ ನಂ.೯ರ ಭದ್ರಾಕಾಲೋನಿ ನಿವಾಸಿಗಳಾದ ದಿವಂಗತ ಕರಿಯಪ್ಪ ಮತ್ತು ಕಮಲಮ್ಮ ದಂಪತಿ ಸುಪುತ್ರರಾಗಿದ್ದಾರೆ.

ಅರಣ್ಯ ಇಲಾಖೆ ರಾಜ್ಯಮಟ್ಟದ ಕ್ರೀಡಾಕೂಟ : ಭದ್ರಾವತಿ ವಿಭಾಗದ ಕ್ರೀಡಾಪಟುಗಳಿಗೆ ಪದಕ

ಗುಲ್ಬರ್ಗದಲ್ಲಿ ನಡೆದ ಅರಣ್ಯ ಇಲಾಖೆಯ ೨೬ನೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭದ್ರಾವತಿ ಅರಣ್ಯ ವಿಭಾಗದ ಕ್ರೀಡಾಪಟುಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ: ಗುಲ್ಬರ್ಗದಲ್ಲಿ ನಡೆದ ಅರಣ್ಯ ಇಲಾಖೆಯ ೨೬ನೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭದ್ರಾವತಿ ಅರಣ್ಯ ವಿಭಾಗದ ಕ್ರೀಡಾಪಟುಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಎಸ್. ಭಾಸ್ಕರ್,  ಮಾಲತೇಶ್ ಸೂರ್ಯವಂಶಿ, ಕೆ.ವಿ ಪ್ರತಾಪ್ ಮತ್ತು ಆರ್. ರಂಗಸ್ವಾಮಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈಜು ಸ್ಪರ್ಧೆಯಲ್ಲಿ ಮಡಿವಾಳಪ್ಪ ಪ್ರಥಮ, ಜಗದೀಶ್ ದ್ವಿತೀಯ ಮತ್ತು ಸಿ. ನಾಗೇಂದ್ರ ತೃತೀಯ ಸ್ಥಾನ ಹಾಗು ಓಟದ ಸ್ಪರ್ಧೆಯಲ್ಲಿ ಸರೋಜಮ್ಮ ಪ್ರಥಮ ಸ್ಥಾನ ಹಾಗು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಸದಾಶಿವ ದ್ವಿತೀಯ ಸ್ಥಾನದೊಂದಿಗೆ ಒಟ್ಟು ೬ ಚಿನ್ನ, ೨ ಬೆಳ್ಳಿ ಹಾಗು ೧ ಕಂಚಿನ ಪದಕ ಪಡೆದುಕೊಂಡಿದ್ದಾರೆ.  
    ಈ ಕ್ರೀಡಾಪಟುಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಹಾಗು ವಲಯ ಅರಣ್ಯಾಧಿಕಾರಿ ದಿನೇಶ್ ಕುಮಾರ್ ಅಭಿನಂದಿಸಿ ಪ್ರಶಂಸಿಸಿದ್ದಾರೆ.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂತರಾಜ್

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗುರುವಾರ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ಅವರ ಸಮ್ಮುಖದಲ್ಲಿ ನೂತನ ಅಧ್ಯಕ್ಷ ಕಾಂತರಾಜ್ ಅವರನ್ನು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸೇರಿದಂತೆ ಸದಸ್ಯರು ಅಭಿನಂದಿಸಿದರು.
    ಭದ್ರಾವತಿ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಾರ್ಡ್ ನಂ. ೨೮ರ ಸದಸ್ಯ ಕಾಂತರಾಜ್ ಗುರುವಾರ ಅಧಿಕಾರ ಸ್ವೀಕರಿಸಿದರು.
    ನಗರಸಭೆ ಸಭಾಂಗಣದಲ್ಲಿ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ಅವರ ಸಮ್ಮುಖದಲ್ಲಿ ನೂತನ ಅಧ್ಯಕ್ಷ ಕಾಂತರಾಜ್ ಅವರನ್ನು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಅಭಿನಂದಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಕಾಂತರಾಜ್, ಉತ್ತಮವಾಗಿ ಕಾರ್ಯನಿರ್ವಹಿಸಲು ಎಲ್ಲಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಹಾಗು ಪೌರಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರು ಸಹಕಾರ ನೀಡುವಂತೆ ಮನವಿ ಮಾಡಿದರು.
    ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಹಿರಿಯ ಸದಸ್ಯ ಬಿ.ಟಿ.ನಾಗರಾಜ್ ಮಾತನಾಡಿ, ನಗರಸಭೆ ಕೆಲಸಗಳು ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವುದರಿಂದ ಕಳಪೆ ಕಾಮಗಾರಿ ತಡೆಯುವುದು ನಮ್ಮ ಜವಾಬ್ದಾರಿ. ಗುಣಮಟ್ಟದ ಕೆಲಸಗಳು ನಡೆದಾಗ ಜನಪ್ರತಿನಿಧಿಗಳಿಗೆ ಜನರು ತಾವಾಗಿಯೇ ಗೌರವನೀಡುತ್ತಾರೆ. ಈ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ ಎಂದರು.
    ಮಾಜಿ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ಪಕ್ಷತೀತವಾಗಿ ಎಲ್ಲಾ ಸದಸ್ಯರ ಬೆಂಬಲವಿದೆ. ಈ ಹಿನ್ನಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ, ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.
    ಸದಸ್ಯರಾದ ಮಣಿ, ಜಾರ್ಜ್, ಅನಿತಾ ಮಲ್ಲೇಶ್, ಗೀತ ರಾಜ್‌ಕುಮಾರ್, ಆರ್. ಶ್ರೇಯಸ್(ಚಿಟ್ಟೆ), ಬಿ.ಎಂ ಮಂಜುನಾಥ್, ಪ್ರೇಮ ಬದರಿ ನಾರಾಯಣ್, ಲತಾ ಚಂದ್ರಶೇಖರ್  ಸೇರಿದಂತೆ ಹಲವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.
    ಕಾಂಗ್ರೆಸ್ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಹೆಚ್ಚಿನ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಶಾಸಕ ಬಿ.ಕೆ ಸಂಗಮೇಶ್ವರ್ ಸಲಹೆಯಂತೆ ಸದಸ್ಯರು ಅಧಿಕಾರ ಹಂಚಿಕೆ ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ. ಮೀಸಲಾತಿ ಮೊದಲ ೩೦ ತಿಂಗಳ ಅವಧಿಯಲ್ಲಿ ಇದುವರೆಗೂ ಕೆ. ಸುದೀಪ್‌ಕುಮಾರ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಇದೀಗ ಕಾಂತರಾಜ್ ಅವರಿಗೆ ಬಿಟ್ಟು ಕೊಡಲಾಗಿದೆ.
    ಇದೆ ರೀತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೂ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ೩ ಮಂದಿ ಸದಸ್ಯರು ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದು, ಜ.೨೨ರಂದು ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಉಪಾಧ್ಯಕ್ಷರಾಗಿ ಈಗಾಗಲೇ ಒಬ್ಬ ಸದಸ್ಯರು ಅಧಿಕಾರ ಅನುಭವಿಸಿದ್ದು, ಪ್ರಸ್ತುತ ಉಪಾಧ್ಯಕ್ಷರ ಅವಧಿ ಇನ್ನೂ ೩ ತಿಂಗಳವರೆಗೆ ಮುಂದುವರೆಯಲಿದೆ ಎನ್ನಲಾಗಿದೆ.