ಶನಿವಾರ, ಮೇ 10, 2025

ಭದ್ರಾ ನದಿ ಕಾಲುವೆಯಲ್ಲಿ ಕಾಡುಕೋಣದ ಮೃತದೇಹ ತುಂಡು ಮಾಡಿ ಎಸೆದು ನಿರ್ಲಕ್ಷ್ಯತನ

ತಪ್ಪಿತಸ್ಥ ಅರಣ್ಯ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ : ಶಿವಕುಮಾರ್ ಆಗ್ರಹ 

 ಅರಣ್ಯ ಇಲಾಖೆ ಸಿಬ್ಬಂದಿಗಳು ಭದ್ರಾವತಿ ತಾಲೂಕಿನ ಶಿವಪುರ ಗ್ರಾಮದ ಭದ್ರಾ ನಾಲೆಯಲ್ಲಿ ಮೃತಪಟ್ಟ ಕಾಡುಕೋಣದ ದೇಹ ಜೆಸಿಬಿ ಯಂತ್ರ ಬಳಸಿ ತುಂಡು ಮಾಡಿ ಭದ್ರಾ ನದಿ ಕಾಲುವೆಗೆ ಎಸೆದಿರುವುದು. 
    ಭದ್ರಾವತಿ: ಮೃತಪಟ್ಟ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸದೆ ಹಾಗು ಮೃತದೇಹ ತುಂಡು ಮಾಡಿ ಭದ್ರಾ ನದಿ ಕಾಲುವೆಗೆ ಎಸೆದು ಅರಣ್ಯ ಇಲಾಖೆ ಸಿಬ್ಬಂದಿಗಳು ನಿರ್ಲಕ್ಷ್ಯತನದಿಂದ ವರ್ತಿಸಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಆಗ್ರಹಿಸಿದ್ದಾರೆ. 
    ಅರಣ್ಯ ಇಲಾಖೆ ಸಿಬ್ಬಂದಿಗಳು ತಾಲೂಕಿನ ಶಿವಪುರ ಗ್ರಾಮದ ಭದ್ರಾ ನಾಲೆಯಲ್ಲಿ ಮೃತಪಟ್ಟ ಕಾಡುಕೋಣದ ದೇಹ ಜೆಸಿಬಿ ಯಂತ್ರ ಬಳಸಿ ತುಂಡು ಮಾಡಿ ಮೇ.೬ರಂದು ಬೆಳಗ್ಗೆ ೮ ಗಂಟೆ ಸಮಯದಲ್ಲಿ ಕಾಲುವೆಯಿಂದ ಎಸೆದಿದ್ದು, ಇದನ್ನು ಸ್ಥಳೀಯರು ಗಮನಿಸಿ ಚಿತ್ರೀಕರಿಸಿಕೊಂಡಿದ್ದಾರೆ.  ಮೇ.೭ರಂದು ಮಧ್ಯಾಹ್ನ೩ ಗಂಟೆ ಸಮಯದಲ್ಲಿ ಚಿತ್ರೀಕರಿಸಿಕೊಂಡಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಗಮನಿಸಿದ ಸಿಬ್ಬಂದಿಗಳು ತಕ್ಷಣ ಸಂಜೆ ೫ ಗಂಟೆ ಸಮಯದಲ್ಲಿ ನೀರಿನಲ್ಲಿ ಸುಮಾರು ೮ ಕಿ.ಮೀ ದೂರ ತೇಲಿಕೊಂಡು ಬಂದು ಕೆಂಚಮ್ಮನಹಳ್ಳಿ ನಾಲೆ ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ತುಂಡು ಮಾಡಿದ್ದ ದೇಹಗಳನ್ನು ಪುನಃ ಜೆಸಿಬಿ ಯಂತ್ರ ಬಳಸಿ ಹೊರ ತೆಗೆದಿದ್ದಾರೆಂದು ಶಿವಕುಮಾರ್ ಆರೋಪಿಸಿದ್ದಾರೆ. 
    ಅಲ್ಲದೆ ನಾಲೆ ಸೇತುವೆಯಿಂದ ಹೊರ ತೆಗೆದ ತುಂಡು ಮಾಡಿದ್ದ ದೇಹಗಳನ್ನು ಅಂತರಗಂಗೆ ಪಶು ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿ ತರಾತುರಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಪಸ್ಥಿತಿಯಲ್ಲಿ ಉಕ್ಕುಂದ ಗ್ರಾಮದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ. ಇದು ವನ್ಯಜೀವಿ ಕಾಯ್ದೆ ಉಲ್ಲಂಘನೆಯಾಗಿದೆ. ಅಲ್ಲದೆ ಮೃತದೇಹ ತುಂಡು ಮಾಡಿ ಕಾಲುವೆಗೆ ಎಸೆದಿರುವುದರಿಂದ ಕಾಡುಕೋಣದ ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರುವುದಿಲ್ಲ ಎಂದು ಶಿವಕುಮಾರ್ ದೂರಿದ್ದಾರೆ. 
    ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಆದೇಶಿಸುವ ಮೂಲಕ ತಪ್ಪಿತಸ್ಥ ಸಿಬ್ಬಂದಿಗಳು ಹಾಗು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಮೇ.೧೫ರವರೆಗೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಅಹ್ವಾನ

    ಭದ್ರಾವತಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಗೆ ಅನುಗುಣವಾದ ೨೦೨೫-೨೬ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ. 
    ಅಭ್ಯರ್ಥಿಗಳು ಮೆರಿಟ್ ಆಧಾರಿತ ಆನ್‌ಲೈನ್ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ಏ.೧೧ ರಿಂದ ಆಹ್ವಾನಿಸಲಾಗಿದ್ದು, ಪ್ರವೇಶ ಬಯಸುವ ಅಭ್ಯರ್ಥಿಗಳು ತಮ್ಮ ಇಚ್ಚಾನುಸಾರ ಆದ್ಯತಾ ಪಟ್ಟಿಯಲ್ಲಿ ಕೋರ್ಸುಗಳ ಆಯ್ಕೆಗಳನ್ನು ನಮೂದಿಸಿ ಒಂದೇ ಅರ್ಜಿಯನ್ನು ಸಮೀಪದ ಯಾವುದಾದರೂ ಸಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ ಸಲ್ಲಿಸುವುದು.
    ಅಭ್ಯರ್ಥಿಗಳು ನೀಡುವ ಆದ್ಯತೆ ಅನುಸಾರ ಮೆರಿಟ್ ಹಾಗೂ ರೋಸ್ಟರ್ ಅನುಗುಣವಾಗಿ ಆನ್‌ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು. ಅರ್ಜಿ ಹಾಗು ಆಷ್ಷನ್ ಎಂಟ್ರಿಗಳನ್ನು ದಾಖಲಿಸಲು ಮೇ. ೧೫ ಸಂಜೆ ೫.೩೦ ರವರೆಗೆ ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿ ಪಾಲಿಟೆಕ್ನಿಕ್ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದ್ದು, ಅಲ್ಲದೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ dtek.karnataka.gov.in or dtetech.karnataka.gov.in/kartechnical  ವೆಬ್‌ಸೈಟ್‌ಗಳನ್ನು ಸಂಪರ್ಕಿಸಬಹುದಾಗಿದೆ.
    ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರು: ೮೭೬೨೭೧೭೧೯೬/೮೮೬೧೯೩೧೫೩೯/೭೯೭೫೦೪೧೧೩೪ ಸಂಪರ್ಕಿಸಲು ಕೋರಲಾಗಿದೆ. 

ಜಾತಿ ಗಣತಿ : ಸೂಕ್ತ ಮಾಹಿತಿ ನೀಡಿ ಮೂಲ ಜಾತಿ ದಾಖಲಿಸಿ

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತ ಸಮೀಪದ ತಾಲೂಕು ಛಲವಾದಿಗಳ(ಪ.ಜಾ) ಸಮಾಜದ ಸಂಘದ ಕಛೇರಿಯಲ್ಲಿ ಜಾತಿ ಗಣತಿ ಸಂಬಂಧ ಸಭೆ ನಡೆಸಲಾಯಿತು.
    ಭದ್ರಾವತಿ : ಜಾತಿ ಗಣತಿಗಾಗಿ ಮನೆಗೆ ಬರುವವರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಮೂಲ ಜಾತಿ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಎಂದು ದಾಖಲಿಸುವಂತೆ ತಾಲೂಕು ಛಲವಾದಿಗಳ(ಪ.ಜಾ) ಸಮಾಜ ಮನವಿ ಮಾಡಿದೆ. 
    ನಗರದ ನ್ಯೂಟೌನ್ ಜಯಶ್ರೀ ವೃತ್ತ ಸಮೀಪದ ಸಂಘದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಾಜದ ಪ್ರಮುಖರು, ಈ ಹಿಂದೆ ಗಣತಿ ಕಾರ್ಯದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ(ಆದಿ ಕರ್ನಾಟಕ)ಗೆ ಸೇರಿರುವ ಛಲವಾದಿ ಸಮಾಜದವರು ಮೋಸ ಹೋಗಿದ್ದಾರೆ. ಆದರೆ ಈ ಬಾರಿ ಆ ರೀತಿಯಾಗದಂತೆ ಸಮಾಜದವರು ಎಚ್ಚರ ವಹಿಸಬೇಕಾಗಿದೆ. ಮೂಲ ಜಾತಿ ವಿಷಯದಲ್ಲಿ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಎಂಬುದನ್ನು ದಾಖಲಿಸಬಹುದಾಗಿದೆ. ರಾಜ್ಯದ ವಿವಿಧೆಡೆ ಸಮಾಜ ಬಂಧುಗಳು ಆಯಾ ಭಾಗಕ್ಕೆ ತಕ್ಕಂತೆ ಮೂಲ ಜಾತಿ ದಾಖಲಿಸಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿರುವ ಸಮಾಜ ಬಂಧುಗಳು ಸಹ ತಮ್ಮ ಇಚ್ಛೆಯಂತೆ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಈ ಮೂರು ಹೆಸರಿನಲ್ಲಿ ಯಾವುದಾದರೂ ಒಂದು ದಾಖಲಿಸುವಂತೆ ಮನವಿ ಮಾಡಿದರು. 
    ಸಮಾಜದ ಜಿಲ್ಲಾಧ್ಯಕ್ಷ ಸಿದ್ದಪ್ಪ, ತಾಲೂಕು ಅಧ್ಯಕ್ಷ ಚನ್ನಪ್ಪ, ಪ್ರಮುಖರಾದ ಸಾವಕ್ಕನವರ್, ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ, ಶ್ರೀನಿವಾಸ್(ನಂಜಾಪುರ), ನಿತ್ಯಾನಂದ, ಎಚ್.ಎಂ ಮಹಾದೇವಯ್ಯ, ಹುಚ್ಚಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.