ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಶುಶ್ರೂಷಕಿ ಅಧಿಕಾರಿ ವಿರುದ್ಧ ದೂರು
ತುರ್ತು ಚಿಕಿತ್ಸೆಗಾಗಿ ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಯುವಕನಿಗೆ ಸೂಕ್ತ ಚಿಕಿತ್ಸೆ ನೀಡದೆ ಕರ್ತವ್ಯ ಲೋಪವೆಸಗಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಭದ್ರಾವತಿ: ತುರ್ತು ಚಿಕಿತ್ಸೆಗಾಗಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಯುವಕನಿಗೆ ಸೂಕ್ತ ಚಿಕಿತ್ಸೆ ನೀಡದೆ ಕರ್ತವ್ಯ ಲೋಪವೆಸಗಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಅನಿಲ ಎಂಬ ಯುವಕನಿಗೆ ಎಂಎಲ್‌ಸಿ ಪ್ರಕರಣದಡಿಯಲ್ಲಿ ಚಿಕಿತ್ಸೆಗಾಗಿ ಸಂಜೆ ೪ ಗಂಟೆ ಸಮಯದಲ್ಲಿ ಆಸ್ಪತ್ರೆಗೆ ಕರೆ ತಂದಾಗ ಸೂಕ್ತ ಚಿಕಿತ್ಸೆಯನ್ನೂ ನೀಡದೆ, ವೈದ್ಯರಿಗೂ ತಿಳಿಸದೆ ಉದಾಸೀನವಾಗಿ ವರ್ತಿಸುವ ಜೊತೆಗೆ ಮನೆಗೆ ತೆರಳುವಂತೆ ಏರು ಧ್ವನಿಯಲ್ಲಿ ಮಾತನಾಡಿ ಕರ್ತವ್ಯ ಲೋಪವೆಸಗಿದ್ದಾರೆಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಕುಟುಂಬಸ್ಥರು ಸಮಾಜ ಸೇವಕ, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣರವರಿಗೆ ಮಾಹಿತಿ ನೀಡಿದ್ದು, ತಕ್ಷಣ ಆಸ್ಪತ್ರೆಗೆ ಆಗಮಿಸಿ ವಿಚಾರಿಸಿದಾಗ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ಸುಮಾರು ೨ ಗಂಟೆ ಸಮಯ ಚಿಕಿತ್ಸೆ ಇಲ್ಲದೆ ಯುವಕ ನರಳಾಡುವಂತೆ ಮಾಡಿದ್ದು, ಈ ಹಿನ್ನಲೆಯಲ್ಲಿ ಕರ್ತವ್ಯ ಲೋಪವೆಸಗಿ ಉದಾಸೀನವಾಗಿ ವರ್ತಿಸಿರುವ ಆಸ್ಪತ್ರೆಯ ಶುಶ್ರೂಷಕಿ ಅಧಿಕಾರಿಯಾಗಿರುವ ಸುರಾಜ್‌ಮತಿ ಎಲಿಜಬೆತ್ ಸ್ಯಾಂಡ್ರ ಪಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಅಲ್ಲದೆ ಈ ಕುರಿತು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪರವರಿಗೆ ದೂರು ಸಲ್ಲಿಸಲಾಗಿದೆ.
ಕಾರಣ ಕೇಳಿ ನೋಟಿಸ್ :
ತುರ್ತು ಚಿಕಿತ್ಸೆಗೆ ಆಗಮಿಸಿದ ಯುವಕನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ಹಾಗು ಉದಾಸೀನವಾಗಿ ವರ್ತಿಸಿ ಕರ್ತವ್ಯಲೋಪವೆಗಿರುವ ಸಂಬಂಧ ದೂರು ಬಂದಿದ್ದು, ಈ ಹಿನ್ನಲೆಯಲ್ಲಿ ಉತ್ತರಿಸುವಂತೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಸುರಾಜ್‌ಮತಿ ಎಲಿಜಬೆತ್ ಸ್ಯಾಂಡ್ರ ಪಾರವರಿಗೆ ಸೂಚಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ರೀತಿ ಪ್ರಕರಣಗಳು ಮರುಕಳುಹಿಸಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದ್ದಾರೆ.