Tuesday, April 19, 2022

ಉದ್ಯೋಗ ಖಾತ್ರಿ ಕೂಲಿ ದರ ಹೆಚ್ಚಳ : ಸದ್ಬಳಕೆಗೆ ಮನವಿ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವತಿಯಿಂದ  ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಏ. ೧೯: ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಲಿ ದರ ಹೆಚ್ಚು ಮಾಡಿದ್ದು, ಗ್ರಾಮೀಣ ಭಾಗದ ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಯೋಜನೆಯ ಸಹಾಯಕ ನಿರ್ದೇಶಕ ಚೇತನ್ ಮನವಿ ಮಾಡಿದರು.
    ಅವರು ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಉದ್ಯೋಗ ಖಾತ್ರಿ ಯೋಜನೆಯಡಿ ಗಂಡು ಮತ್ತು ಹೆಣ್ಣು ಇಬ್ಬರಿಗೂ ಸಮಾನ ವೇತನ ನೀಡಲಾಗುತ್ತಿದೆ. ಸರ್ಕಾರ ಕೂಲಿ ದರ ಹೆಚ್ಚಳ ಮಾಡಿದ್ದು, ರು.೩೦೯ ನಿಗದಿಪಡಿಸಿದೆ. ಕೂಲಿ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಬೇಸಿಗೆ ಸಮಯದಲ್ಲಿ ಹೆಚ್ಚಿನ ಉದ್ಯೋಗ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಹಾಗು ಸಿಬ್ಬಂದಿಗಳು, ಗ್ರಾಮದ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಏ.೨೨ರಂದು ‘ಬೃಹತ್ ಆರೋಗ್ಯ ಮೇಳ’ ಯಶಸ್ವಿಗೆ ಸಹಕರಿಸಿ

ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಮನವಿ

ಭದ್ರಾವತಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಏ.೨೨ರಂದು ತಾಲೂಕು ಮಟ್ಟದ  'ಬೃಹತ್ ಆರೋಗ್ಯ ಮೇಳ' ಏರ್ಪಡಿಸಲಾಗಿದ್ದು, ಮೇಳ ಯಶಸ್ವಿಗೊಳಿಸುವ ಸಂಬಂಧ ತಾಲೂಕು ಕಛೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
    ಭದ್ರಾವತಿ, ಏ. ೧೯: ಆರೋಗ್ಯ ಇಲಾಖೆ ವತಿಯಿಂದ ಏ.೨೨ರಂದು ತಾಲೂಕು ಮಟ್ಟದ  'ಬೃಹತ್ ಆರೋಗ್ಯ ಮೇಳ' ಏರ್ಪಡಿಸಲಾಗಿದ್ದು, ಮೇಳ ಯಶಸ್ವಿಗೊಳಿಸುವ ಸಂಬಂಧ ತಾಲೂಕು ಕಛೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
    ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಆರ್. ಪ್ರದೀಪ್, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ, ಎಬಿಎಆರ್‌ಕೆ (ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ) ಯೋಜನೆ ಮತ್ತು ಕ್ಷೇಮ ಕೇಂದ್ರಗಳಲ್ಲಿ ದೊರೆಯುವ ಇತರೆ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಮೇಳದಲ್ಲಿ ಅರಿವು ಮೂಡಿಸುವ ಅಗತ್ಯವಿದ್ದು, ಈ ಸಂಬಂಧ ಆರೋಗ್ಯ ಇಲಾಖೆ ಗಮನ ಹರಿಸಬೇಕೆಂದರು.
    ಮೇಳದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು, ಆಸನಗಳ ವ್ಯವಸ್ಥೆ ಕಲ್ಪಿಸಿಕೊಡುವ ಜೊತೆಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸಬೇಕು. ರೆಡ್‌ಕ್ರಾಸ್, ರೋಟರಿ, ಲಯನ್ಸ್ ಕ್ಲಬ್ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳು ಹಾಗು ಸ್ವಯಂ ಸೇವಕರ ಸಹಕಾರ ಪಡೆದುಕೊಳ್ಳುವಂತೆ ಹಾಗು ತಾಲೂಕಿನಲ್ಲಿ ಕೇಂದ್ರ ಮತ್ತು ರಾಜ್ಯ ಆರೋಗ್ಯ ಯೋಜನೆಗಳ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳ ವಿವರ ಪ್ರದರ್ಶಿಸುವಂತೆ ಸಲಹೆ ನೀಡಿದರು.
    ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಮಾತನಾಡಿ, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಮೇಳ ನಡೆಯಲಿದೆ. ತಪಾಸಣೆಗೆ ಬರುವವರನ್ನು ನೋಂದಣಿ ಮಾಡಿಸಿಕೊಂಡು ಎಬಿಎಆರ್‌ಕೆ ಕಾರ್ಡ್ ಹಾಗೂ ಡಿಜಿಟಲ್ ಹೆಲ್ತ್ ಐಡಿ ಕಾರ್ಡ್ ಗ್ಗೆ ಮಾಹಿತಿಯನ್ನು ನೀಡಲಾಗುವುದು. ಕಾರ್ಡ್ ಇಲ್ಲದವರಿಗೆ ಸ್ಥಳದಲ್ಲಿಯೇ ಕಾರ್ಡ್ ವಿತರಣೆ ಮಾಡಲಾಗುವುದು. ತಜ್ಞವೈದ್ಯರಿಂದ ತಪಾಸಣೆ ನಡೆಸಿ ಲಭ್ಯವಿರುವ ಚಿಕಿತ್ಸೆ ನೀಡಲಾಗುವುದು. ಅಲ್ಲದೆ ಆಪ್ತಸಮಾಲೋಚನೆಗೂ ಅವಕಾಶ ಕಲ್ಪಿಸಲಾಗಿದ್ದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಅವಶ್ಯಕವಿರುವ ಎಲ್ಲಾ ಔಷಧಗಳು ಹಾಗೂ ಫಾರ್ಮಸಿಸ್ಟ್, ಪ್ರಯೋಗಶಾಲಾ ತಂತ್ರಜ್ಞರ ಸೇವೆ ಲಭ್ಯವಿದೆ. ಯಾವುದೇ ರೀತಿ ತೊಂದರೆಯಾಗದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಮಾತನಾಡಿ, ಮೇಳದಲ್ಲಿ ವೈದ್ಯಕೀಯ ಶಸ್ತ್ರ ಚಿಕಿತ್ಸಕರು, ಪ್ರಸೂತಿ ಮತ್ತು ಸ್ತ್ರೀರೋಗ, ಕೀಲು, ಮೂಳೆ, ಚರ್ಮ ಮತ್ತು ಲೈಂಗಿಕ ರೋಗ, ಇಎನ್‌ಟಿ(ಕಿವಿ, ಮೂಗು ಮತ್ತು ಗಂಟಲು), ನೇತ್ರ, ದಂತ, ಮಾನಸಿಕ ರೋಗ ಮತ್ತು ಆಯುರ್ವೇದ ತಜ್ಞರು ಲಭ್ಯವಿರಲಿದ್ದಾರೆ.  ಹೆಚ್‌ಐವಿ ಆಪ್ತಸಮಾಲೋಚನೆ ಮತ್ತು ಪರೀಕ್ಷೆ, ಹದಿಹರೆಯದವರಿಗೆ ಆಪ್ತಸಮಾಲೋಚನೆ, ಪೌಷ್ಠಿಕ ಆಹಾರ ತಯಾರಿ ಪ್ರಾತ್ಯಕ್ಷತೆ, ಕ್ಷಯ ರೋಗ, ಮಲೇರಿಯಾ, ಹಿಮೋಗ್ಲೋಬಿನ್ ಪರೀಕ್ಷೆಗಳು ಮತ್ತು ಆರೋಗ್ಯ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.  
        ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಿಶು ಅಭಿವೃದ್ದಿ ಯೋಜನೆ ಅಧಿಕಾರಿ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಾಜೇಶ್ವರಿ, ವೈದ್ಯರಾದ ಡಾ. ಹೇಮಲತಾ, ಡಾ. ರವಿಶಂಕರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆನಂದ ಮೂರ್ತಿ, ಸುಂದರ್ ಬಾಬು ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.  

ಜಿಲ್ಲಾ ಯುವ ಜನತಾದಳ ಅಧ್ಯಕ್ಷರಾಗಿ ಮಧುಕುಮಾರ್ ನೇಮಕ

ಮಧುಕುಮಾರ್
    ಭದ್ರಾವತಿ, ಏ. ೧೯: ಶಿವಮೊಗ್ಗ ಜಿಲ್ಲಾ ಯುವ ಜನತಾದಳ(ಜಾತ್ಯಾತೀತ) ಅಧ್ಯಕ್ಷರಾಗಿ ಕಾಗದನಗರದ ನಿವಾಸಿ, ಯುವ ಮುಖಂಡ ಮಧುಕುಮಾರ್ ನೇಮಕಗೊಂಡಿದ್ದಾರೆ. 
ಸುಮಾರು ೨೨ ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಧುಕುಮಾರ್‌ರವರು ಪ್ರಸ್ತುತ ಯುವ ಜನತಾದಳ(ಜಾತ್ಯಾತೀತ) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಜಿಲ್ಲೆಯಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸಲು ಯುವ ಸಮುದಾಯದ ಅಗತ್ಯತೆ ಮನಗಂಡು ಇವರನ್ನು ಜಿಲ್ಲಾಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ. 
ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷದ ಯುವ ಮುಖಂಡರು ಹಾಗು ಕಾರ್ಯಕರ್ತರು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಬಲವರ್ಧನೆಗೊಳಿಸುವಂತೆ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ.  
ಮಧುಕುಮಾರ್ ನಗರಸಭೆ ಹಿರಿಯ ಸದಸ್ಯೆ ವಿಜಯರವರ ಪುತ್ರರಾಗಿದ್ದಾರೆ. ಶಿವಮೊಗ್ಗ ಜಿಲ್ಲಾ ಯುವ ಜನತಾದಳ(ಜಾತ್ಯಾತೀತ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಧುಕುಮಾರ್‌ರವರಿಗೆ ಸಹೋದರ ಅಶೋಕ್‌ಕುಮಾರ್, ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ಮಾಜಿ ಶಾಸಕಿ ಶಾರದ ಪೂರ್‍ಯಾನಾಯ್ಕ, ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ತಾಲೂಕು ಅಧ್ಯಕ್ಷ ಎಂ.ಎ ಅಜಿತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್,  ಸೇರಿದಂತೆ ಇನ್ನಿತರರು ಅಭಿನಂದನೆ ಸಲ್ಲಿಸಿದ್ದಾರೆ. 
ಜಿಲ್ಲಾಧ್ಯಕ್ಷರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಮಧುಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.