Wednesday, September 29, 2021

ಬಾರಂದೂರು ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿಯಾಗಿ ಜರುಗಿದ ಪೋಷಣ್ ಅಭಿಯಾನ್

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರ ಸಹಕಾರದೊಂದಿಗೆ ಬುಧವಾರ ಪೋಷಣ್ ಅಭಿಯಾನ ಆಯೋಜಿಸಲಾಗಿತ್ತು.   
    ಭದ್ರಾವತಿ, ಸೆ. ೨೯: ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರ ಸಹಕಾರದೊಂದಿಗೆ ಬುಧವಾರ ಪೋಷಣ್ ಅಭಿಯಾನ ಆಯೋಜಿಸಲಾಗಿತ್ತು.
    ವಿಶೇಷವಾಗಿ ಆಕರ್ಷಕ ರಂಗು ರಂಗಿನ ರಂಗೋಲೆ ಮೂಲಕ ಪೋಷಣ್ ಅಭಿಯಾನದ ಮಹತ್ವ ಸಾರಲಾಯಿತು. ಜೊತೆಗೆ ಸಂಪನ್ಮೂಲ ವ್ಯಕ್ತಿಗಳು ಅಭಿಯಾನದ ಸಂಪೂರ್ಣ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು.
    ಡಾ. ಗಿರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ತಾಲೂಕು ಪಂಚಾಯಿತಿ ಸದಸ್ಯ ಪ್ರೇಮ್‌ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಾ ಪರಮೇಶ್, ಕರಾವೇ ತಾಲೂಕು ಅಧ್ಯಕ್ಷ ಬಾರಂದೂರು ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಡಕೆ ತೋಟದಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ಸಾಗುವಾನಿ ಮರದ ತುಂಡುಗಳ ಪತ್ತೆ

ಉಂಬ್ಳೆಬೈಲು ಅರಣ್ಯ ಸಿಬ್ಬಂದಿಗಳಿಂದ ಯಶಸ್ವಿ ಕಾರ್ಯಾಚರಣೆ


ಭದ್ರಾವತಿ ಭದ್ರಾವತಿ ಹುಣಸೆಕಟ್ಟೆ ಗ್ರಾಮದ ಜಾನಪ್ಪ ಖೈರು ಎಂಬುವರ ಅಡಕೆ ತೋಟದಲ್ಲಿ ಒಟ್ಟು ೧೪ ಸಾಗುವಾನಿ ಮರದ ತುಂಡುಗಳನ್ನು ಟ್ರಂಚ್ ಹೊಡೆದು ಬಚ್ಚಿಟ್ಟಿದ್ದು, ಉಂಬ್ಳೆಬೈಲು ಅರಣ್ಯ ಸಿಬ್ಬಂದಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿರುವುದು.
    ಭದ್ರಾವತಿ, ಸೆ. ೨೮: ಅಡಕೆ ತೋಟವೊಂದರಲ್ಲಿ ಟ್ರಂಚ್ ಹೊಡೆದು ಅಡಕೆ ಗರಿಗಳಿಂದ ಅಕ್ರಮವಾಗಿ ಬಚ್ಚಿಡಲಾಗಿದ್ದ ಸುಮಾರು ೮೦ ಸಾವಿರ ರು. ಮೌಲ್ಯದ ಸಾಗುವಾನಿ ಮರದ ತುಂಡುಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಘಟನೆ ಬುಧವಾರ ತಾಲೂಕಿನ ಅರಣ್ಯ ಉಪ ವಿಭಾಗದ ಉಂಬ್ಳೆಬೈಲು ವ್ಯಾಪ್ತಿಯ ಹುಣಸೇಕಟ್ಟೆ ಗ್ರಾಮದಲ್ಲಿ ನಡೆದಿದೆ.
    ಹುಣಸೆಕಟ್ಟೆ ಗ್ರಾಮದ ಜಾನಪ್ಪ ಖೈರು ಎಂಬುವರ ಅಡಕೆ ತೋಟದಲ್ಲಿ ಒಟ್ಟು ೧೪ ಸಾಗುವಾನಿ ಮರದ ತುಂಡುಗಳನ್ನು ಬಚ್ಚಿಡಲಾಗಿದ್ದು, ೧೪ ಸಾಗುವಾನಿ ಮರದ ತುಂಡುಗಳು ಒಟ್ಟು ೨೦ ಅಡಿ ಉದ್ದ ಹೊಂದಿವೆ. ಇವುಗಳ ಅಂದಾಜು ಮೌಲ್ಯ ಸುಮಾರು ೮೦ ಸಾವಿರ ರು.ಗಳಾಗಿದ್ದು, ಈ ಸಂಬಂಧ ಜಾನಪ್ಪ ಖೈರು ಮತ್ತು ಈತನ ಮಗ ಜದೀಶ್ ವಿರುದ್ದ ದೂರು ದಾಖಲಾಗಿದೆ.
    ದಾಳಿಯಲ್ಲಿ ಉಂಬ್ಳೆಬೈಲು ವ್ಯಾಪ್ತಿಯ ವಲಯ ಅರಣ್ಯಾಧಿಕಾರಿ ಟಿ.ಆರ್ ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ಅಬ್ದುಲ್ ಕರೀಂ, ಪವನ್, ಗಿರಿಸ್ವಾಮಿ, ಅರಣ್ಯ ರಕ್ಷಕರಾದ ಸುನಿಲ್, ಸೂರ್ಯವಂಶಿ ಮತ್ತು ಸುಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



ಭದ್ರಾವತಿ ಹುಣಸೆಕಟ್ಟೆ ಗ್ರಾಮದ ಜಾನಪ್ಪ ಖೈರು ಎಂಬುವರ ಅಡಕೆ ತೋಟದಲ್ಲಿ ಒಟ್ಟು ೧೪ ಸಾಗುವಾನಿ ಮರದ ತುಂಡುಗಳನ್ನು ಟ್ರಂಚ್ ಹೊಡೆದು ಬಚ್ಚಿಟ್ಟಿರುವುದು.

ಆಧುನಿಕ ಒತ್ತಡದ ಜೀವನ ಶೈಲಿ, ಆಹಾರ ಪದ್ದತಿಯಿಂದ ಅನಾರೋಗ್ಯ : ಡಾ. ಮಂಜುನಾಥ್

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಎನ್‌ಸಿಡಿ ಘಟಕ, ರೋಟರಿ ಕ್ಲಬ್ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಹೃದಯ ದಿನ' ಕಾರ್ಯಕ್ರಮದಲ್ಲಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಂಜುನಾಥ್ ಮಾತನಾಡಿದರು.
    ಭದ್ರಾವತಿ, ಸೆ. ೨೯: ಇಂದಿನ ಆಧುನಿಕ ಒತ್ತಡದ ಜೀವನ ಶೈಲಿ ಹಾಗು ಆಹಾರ ಪದ್ದತಿ ಬಹಳಷ್ಟು ರೀತಿಯ ಅನಾರೋಗ್ಯಗಳಿಗೆ ಕಾರಣಗಳಾಗುತ್ತಿವೆ ಎಂದು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಂಜುನಾಥ್ ಹೇಳಿದರು.
    ಅವರು ಬುಧವಾರ ಎನ್‌ಸಿಡಿ ಘಟಕ, ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಹೃದಯ ದಿನ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಒತ್ತಡದ ಜೀವನ ಶೈಲಿ ಜೊತೆಗೆ ಮದ್ಯಪಾನ, ಧೂಮಪಾನ ಸೇರಿದಂತೆ ಇನ್ನಿತರ ದುಶ್ಚಟಗಳು ಸಹ ಅನಾರೋಗ್ಯಕ್ಕೆ ಕಾರಣಗಳಾಗುತ್ತಿವೆ. ಇಂದು ಹೃದಯ ಸಂಬಂಧಿ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ರೋಗಗಳು ತಕ್ಷಣಕ್ಕೆ ಕಂಡು ಬರುತ್ತಿಲ್ಲ. ಉಲ್ಬಣವಾದ ನಂತರ ಕಂಡು ಬರುವುದರಿಂದ ಚಿಕಿತ್ಸೆ ನೀಡುವುದು ಬಹಳ ಕಷ್ಟ. ನಿಶ್ಯಕ್ತಿ, ನಡೆದಾಡಲು, ಮೆಟ್ಟಿಲುಗಳನ್ನು ಹತ್ತಲು ಕಷ್ಟವಾಗುವುದು ಹಾಗು ಆಯಾಸವಾಗುವ ಲಕ್ಷಣ ಕಂಡು ಬಂದಲ್ಲಿ ಅದು ನಿಶ್ಚಿತವಾಗಿ ಹೃದಯ ಖಾಯಿಲೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಾಗ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
    ಶಸ್ತ್ರ ಚಿಕಿತ್ಸಕ ಡಾ.ಶಿವಪ್ರಕಾಶ್ ಮಾತನಾಡಿ, ಹೃದಯ ಸಂಬಂಧಿ ಹಾಗು ಮಧುಮೇಹ ಈ ಎರಡು ರೋಗಗಳನ್ನು ಸಹ ಗಂಭೀರವಾಗಿ ಪರಿಗಣಿಸಬೇಕು. ಮಧುಮೇಹ ಕಾಣಿಸಿಕೊಂಡವರಲ್ಲಿ ಸಹಜವಾಗಿ ಹೃದಯ ಸಂಬಂಧಿ ರೋಗಗಳು ಸಹ ಕಾಣಿಸಿಕೊಳ್ಳಲಿವೆ. ಉತ್ತಮ ಆರೋಗ್ಯಕರ ಜೀವನ, ಹಿತಮಿತವಾದ ಆಹಾರ ಸೇವನೆ, ದುಶ್ಚಟಗಳಿಂದ ದೂರವಿರುವುದು ಇತ್ಯಾದಿ ಕ್ರಮಗಳಿಂದ ಆರೋಗ್ಯ ರಕ್ಷಿಸಿಕೊಳ್ಳಲು ಸಾಧ್ಯ ಎಂದರು.
    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಂಕರಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿದ್ದ ಸಾಂಕ್ರಾಮಿಕ ರೋಗಗಳು ಇಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಆದರೆ ಆಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವುದು ಬಹಳ ಕಳವಳಕಾರಿ ಸಂಗತಿಯಾಗಿದೆ. ರೋಗಗಳು ಕಾಣಿಸಿಕೊಂಡು ಚಿಕಿತ್ಸೆ ಪಡೆಯುವ ಬದಲು ಅವುಗಳು ಕಾಣಿಸಿಕೊಳ್ಳದಂತೆ ಎಚ್ಚರವಹಿಸುವುದು ಬಹಳ ಮುಖ್ಯ ಎಂದರು.  
    ಶ್ರಮರಹಿತ ಚಟುವಟಿಕೆಗಳು, ರಾಸಾಯನಿಕಯುಕ್ತ ಆಹಾರಗಳು, ಬೇಕರಿ ಪದಾರ್ಥಗಳ ಸೇವನೆಯಿಂದ ಹಲವಾರು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಎಚ್ಚರವಹಿಸುವುದು ಅವಶ್ಯಕ ಎಂದರು.  
    ಎನ್‌ಸಿಡಿ ಘಟಕದ ವೈದ್ಯಾಧಿಕಾರಿ ಡಾ.ಎಂ ರವೀಂದ್ರನಾಥ ಕೋಠಿ ಪ್ರಸ್ತಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ರೋಗಗಳಿಂದ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ 'ವಿಶ್ವ ಹೃದಯ ದಿನ' ಆಚರಿಸಲಾಗುತ್ತಿದೆ ಎಂದರು.
    ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ವಿ ಆದರ್ಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುಂದರ್ ಬಾಬು, ನಾಗೇಶ್, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಗಣಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ವಿಶ್ವ ಹೃದಯ ದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ರಕ್ತದೊತ್ತಡ ಹಾಗು ರಕ್ತ ತಪಾಸಣೆ ನಡೆಸಲಾಯಿತು. ಬಿ.ಆರ್ ಯಶೋಧ ಪ್ರಾರ್ಥಿಸಿದರು. ನಾಗರಾಜ ಸ್ವಾಗತಿಸಿದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ವೀರಪ್ಪ ವಂದಿಸಿದರು.