ಗುರುವಾರ, ಮೇ 29, 2025

ಗೃಹಿಣಿ ಅನುಮಾನಸ್ಪದ ಸಾವು : ಅತ್ತೆ, ಮಾವನ ವಿರುದ್ಧ ಪ್ರಕರಣ ದಾಖಲು


    ಭದ್ರಾವತಿ: ಅತ್ತೆ ಮತ್ತು ಮಾವನ ಕಿರುಕುಳದಿಂದ ಗೃಹಿಣಿಯೋರ್ವಳು ಸಾವನ್ನಪ್ಪಿರುವುದಾಗಿ ಆರೋಪಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
    ತಾಲೂಕಿನ ಕಾಗೆಕೋಡಮಗ್ಗಿಯ ನಿವಾಸಿ ಶಾಜಿಯಾ ಬಾನು(೨೪) ವಿವಾಹಿತ ಮಹಿಳೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಆಕೆಯ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ಇಬ್ಬರು ಸೇರಿ ನೀನು ಕೆಲಸಕ್ಕೆ ಹೋಗು, ಇಲ್ಲ ಹಣ ಕೊಡು ಎಂದು ಪೀಡಿಸುತ್ತಿದ್ದ ಕಾರಣ ಆಕೆ ಸಾವನ್ನಪ್ಪಿರುವುದಾಗಿ ಮೃತಳ ಕುಟುಂಬ ದೂರಿನಲ್ಲಿ ಉಲ್ಲೇಖಿಸಿದೆ. 
    ಶಾಜಿಯಾ ಬಾನು ತಿಪ್ಲಾಪುರ ಕ್ಯಾಂಪ್ ನಿವಾಸಿ ಸಮೀರ್ ಯಾನೆ ಜಮೀರ್ ಎಂಬುವರೊಂದಿಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ಮೇ.೨೭ರಂದು ತಿಪ್ಲಾಪುರದ ನಿವಾಸಿ ಸಲೀಂ ಶಾಜಿಯಾ ಬಾನು ಅವರ ಕುಟುಂಬಕ್ಕೆ ನಿಮ್ಮ ಮಗಳು ಸಾವನ್ನಪ್ಪಿದ್ದಾರೆ ಎಂದು ವಿಷಯ ಮುಟ್ಟಿಸಿದ್ದರು. ಶಾಜಿಯಾಳ ತವರು ಕುಟುಂಬ ತಿಪ್ಲಾಪುರಕ್ಕೆ ಧಾವಿಸಿದಾಗ ದಿವಾನ್ ಕಾಟ್ ಮೇಲೆ ಶಾಜಿಯಾಳ ಮೃತ ದೇಹ ಮಲಗಿಸಲಾಗಿತ್ತು.  ಎಲ್ಲರ ಸಮ್ಮುಖದಲ್ಲಿ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ಅವರನ್ನು ಪ್ರಶ್ನಿಸಿದ ಶಾಜಿಯಾಳ ಕುಟುಂಬ ಆಕೆಯಸಾವಿನ ಬಗ್ಗೆ ತಿಳಿಯಲು ಮುಂದಾಗಿದೆ. 
    ಆಗ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ಆಕೆಯ ಸಾವು ಲೋ ಬಿಪಿಯಿಂದಾಗಿದೆ ಎಂದು ಒಮ್ನೆ ಉತ್ತರಿಸಿದರೆ, ಮತ್ತೊಮ್ಮೆ ಆಕೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ಇದೇ ವೇಳೆ ಕುಟುಂಬಕ್ಕೆ ಶಾಜಿಯಾಳ ಕುತ್ತಿಗೆ ಭಾಗದಲ್ಲಿ ಕಲೆ ಕಂಡಿದೆ. ಶಾಜಿಯಾಳ ಕುತ್ತಿಗೆ ಮೇಲಿನ ಕಲೆಯನ್ನ ಪ್ರಶ್ನಿಸಿದಾಗ ಇಲ್ಲ ಆಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉತ್ತರ ನೀಡಿದ್ದಾರೆ. ಈ ಗೊಂದಲದ ಹೇಳಿಕೆಗಳು ಮೃತಳ ಸಾವಿನ ಬಗ್ಗೆ ಅನುಮಾನ ಮೂಡಿಸಿದೆ. ಈ ಹಿನ್ನಲೆಯಲ್ಲಿ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಎನ್‌ಟಿಬಿ ಕಛೇರಿಯಲ್ಲಿ ಬಿಲ್ ಪಾವತಿಸುವ ಕೌಂಟರ್, ಗ್ರಾಮೀಣ ಭಾಗದಲ್ಲಿ ಸರ್ವೀಸ್ ಸ್ಟೇಷನ್ ಪ್ರಾರಂಭಿಸಿ

ಆರ್. ವೇಣುಗೋಪಾಲ್ 
    ಭದ್ರಾವತಿ: ನಗರದ ಜನ್ನಾಪುರ ನಗರಸಭೆ ಎನ್‌ಟಿಬಿ ಶಾಖಾ ಕಛೇರಿ ಆವರಣದಲ್ಲಿ ಮೆಸ್ಕಾಂ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್ ಪುನಃ ಪ್ರಾರಂಭಿಸುವಂತೆ ಹಾಗು ತಾಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯ ಸರಿಪಡಿಸುವಂತೆ ಆಗ್ರಹಿಸಿ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. 
    ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ವೇಣುಗೋಪಾಲ್ ಮನವಿ ಸಲ್ಲಿಸಿದ್ದು,  ನಗರಸಭಾ ವ್ಯಾಪ್ತಿಯ ಜನ್ನಾಪುರ, ಎನ್.ಟಿ.ಬಿ ಕಛೇರಿ ಆವರಣದಲ್ಲಿ ಸುಮಾರು ೪೦ ವರ್ಷದಿಂದ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್ ಕಾರ್ಯ ನಿರ್ವಹಿಸುತ್ತಿದೆ. ಈ ಕೌಂಟರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ವರ್ಗದವರು ನಿವೃತ್ತಿಗೊಂಡ ಮೇಲೆ ಕೌಂಟರ್ ಸ್ಥಗಿತಗೊಂಡಿದೆ. ಈ ಭಾಗದಲ್ಲಿ ಅನೇಕ ಕೊಳಚೆ ಪ್ರದೇಶಗಳು ಬರುತ್ತಿದ್ದು, ಇವರಲ್ಲಿ ಬಹುತೇಕ ಆನಕ್ಷರಸ್ಥರಾಗಿರುವುದರಿಂದ ಇವರುಗಳಿಗೆ ಮೊಬೈಲ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸುವ ಬಗ್ಗೆ ತಿಳುವಳಿಕೆ ಇರುವುದಿಲ್ಲ.  ನಿವಾಸಿಗಳು ವಿದ್ಯುತ್ ಬಿಲ್ ಕಟ್ಟಲು ತುಂಬಾ ದೂರ ಹೋಗಬೇಕಾಗಿದೆ. ಇವರೆಲ್ಲರೂ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವನ ನಡೆಸುತ್ತಿದ್ದು, ಇವರುಗಳಿಗೆ ಮಳೆಗಾಲದಲ್ಲಿ ಹಾಗೂ ಬೇಸಿಗೆ ಕಾಲದಲ್ಲಿ ವಿದ್ಯುತ್ ಬಿಲ್ ಕಟ್ಟಲು ತುಂಬಾ ತೊಂದರೆಯಾಗುತ್ತಿದೆ ಎಂದು ಅಳಲು ತೋರ್ಪಡಿಸಿಕೊಳ್ಳಲಾಗಿದೆ. 
    ಈ ಭಾಗದ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಕೌಂಟರ್ ಪುನಃ ಪ್ರಾರಂಭಿಸುವುದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ. 
     ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಂಗನಮನೆ, ತಾವರಘಟ್ಟ ಮತ್ತು ಕಂಬದಾಳು ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ, ರೈತರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.  ಈ ಹಿನ್ನಲೆಯಲ್ಲಿ ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ  ಸೂಕ್ತವಾದ ಜಾಗದಲ್ಲಿ ತುರ್ತಾಗಿ ಸರ್ವೀಸ್ ಸ್ಟೇಷನ್ ಕಾರ್ಯಾರಂಭ ಮಾಡುವುದರ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ.