ಭದ್ರಾವತಿ: ಅತ್ತೆ ಮತ್ತು ಮಾವನ ಕಿರುಕುಳದಿಂದ ಗೃಹಿಣಿಯೋರ್ವಳು ಸಾವನ್ನಪ್ಪಿರುವುದಾಗಿ ಆರೋಪಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಕಾಗೆಕೋಡಮಗ್ಗಿಯ ನಿವಾಸಿ ಶಾಜಿಯಾ ಬಾನು(೨೪) ವಿವಾಹಿತ ಮಹಿಳೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಆಕೆಯ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ಇಬ್ಬರು ಸೇರಿ ನೀನು ಕೆಲಸಕ್ಕೆ ಹೋಗು, ಇಲ್ಲ ಹಣ ಕೊಡು ಎಂದು ಪೀಡಿಸುತ್ತಿದ್ದ ಕಾರಣ ಆಕೆ ಸಾವನ್ನಪ್ಪಿರುವುದಾಗಿ ಮೃತಳ ಕುಟುಂಬ ದೂರಿನಲ್ಲಿ ಉಲ್ಲೇಖಿಸಿದೆ.
ಶಾಜಿಯಾ ಬಾನು ತಿಪ್ಲಾಪುರ ಕ್ಯಾಂಪ್ ನಿವಾಸಿ ಸಮೀರ್ ಯಾನೆ ಜಮೀರ್ ಎಂಬುವರೊಂದಿಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ಮೇ.೨೭ರಂದು ತಿಪ್ಲಾಪುರದ ನಿವಾಸಿ ಸಲೀಂ ಶಾಜಿಯಾ ಬಾನು ಅವರ ಕುಟುಂಬಕ್ಕೆ ನಿಮ್ಮ ಮಗಳು ಸಾವನ್ನಪ್ಪಿದ್ದಾರೆ ಎಂದು ವಿಷಯ ಮುಟ್ಟಿಸಿದ್ದರು. ಶಾಜಿಯಾಳ ತವರು ಕುಟುಂಬ ತಿಪ್ಲಾಪುರಕ್ಕೆ ಧಾವಿಸಿದಾಗ ದಿವಾನ್ ಕಾಟ್ ಮೇಲೆ ಶಾಜಿಯಾಳ ಮೃತ ದೇಹ ಮಲಗಿಸಲಾಗಿತ್ತು. ಎಲ್ಲರ ಸಮ್ಮುಖದಲ್ಲಿ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ಅವರನ್ನು ಪ್ರಶ್ನಿಸಿದ ಶಾಜಿಯಾಳ ಕುಟುಂಬ ಆಕೆಯಸಾವಿನ ಬಗ್ಗೆ ತಿಳಿಯಲು ಮುಂದಾಗಿದೆ.
ಆಗ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ಆಕೆಯ ಸಾವು ಲೋ ಬಿಪಿಯಿಂದಾಗಿದೆ ಎಂದು ಒಮ್ನೆ ಉತ್ತರಿಸಿದರೆ, ಮತ್ತೊಮ್ಮೆ ಆಕೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ಇದೇ ವೇಳೆ ಕುಟುಂಬಕ್ಕೆ ಶಾಜಿಯಾಳ ಕುತ್ತಿಗೆ ಭಾಗದಲ್ಲಿ ಕಲೆ ಕಂಡಿದೆ. ಶಾಜಿಯಾಳ ಕುತ್ತಿಗೆ ಮೇಲಿನ ಕಲೆಯನ್ನ ಪ್ರಶ್ನಿಸಿದಾಗ ಇಲ್ಲ ಆಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉತ್ತರ ನೀಡಿದ್ದಾರೆ. ಈ ಗೊಂದಲದ ಹೇಳಿಕೆಗಳು ಮೃತಳ ಸಾವಿನ ಬಗ್ಗೆ ಅನುಮಾನ ಮೂಡಿಸಿದೆ. ಈ ಹಿನ್ನಲೆಯಲ್ಲಿ ಅತ್ತೆ ಗುಲಾಬ್ ಮತ್ತು ಮಾವ ನಜೀರ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment