ಮಂಗಳವಾರ, ಆಗಸ್ಟ್ 12, 2025

ಆ.೧೭ರಂದು ತಾರೀಕಟ್ಟೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ತನ್ನ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ(ಸಿಎಸ್‌ಆರ್) ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ  ಆ.೧೭ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ. 
    ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗು ತಾರೀಕಟ್ಟೆ ಶ್ರೀರಾಮ ದೇವಸ್ಥಾನ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೆ ತಾರೀಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. 
    ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ನೇತ್ರ, ಹೃದಯ, ಮೂಳೆ, ದಂತ ಹಾಗು ಮಧುಮೇಹ ತಪಾಸಣೆ ಮತ್ತು ರಕ್ತದೊತ್ತಡ ತಪಾಸಣೆ ನಡೆಸಲಾಗುವುದು. ಅಲ್ಲದೆ ಉಚಿತ ಔಷಧಿ ಸಹ ವಿತರಿಸಲಾಗುವುದು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗಪಡೆದುಕೊಳ್ಳುವಂತೆ ಕಾರ್ಖಾನೆ ಸಾರ್ವಜನಿಕ ಸಂಪರ್ಕ ಇಲಾಖೆ ಮಹಾಪ್ರಬಂಧಕ ಎಲ್. ಪ್ರವೀಣ್ ಕುಮಾರ್ ಕೋರಿದ್ದಾರೆ.  

ವಿವಿಧೆಡೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ರಾಯರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. 
ಭದ್ರಾವತಿ: ನಗರದ ವಿವಿಧೆಡೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ರಾಯರ ದರ್ಶನ ಪಡೆದರು. 
ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಬೃಂದಾವನ ವಿವಿಧ ಫಲಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಸುಮಾರು ೧೧.೩೦ರ ವೇಳೆಗೆ ರಾಯರ ರಥೋತ್ಸವ ಆರಂಭಗೊಂಡು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದವರೆಗೂ ಸಾಗಿ ಪುನಃ ಮಠಕ್ಕೆ ಬಂದು ತಲುಪಿತು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ರಾಯರಿಗೆ ಜಯಘೋಷಗಳನ್ನು ಹಾಕಿ ಸಂಭ್ರಮಿಸಿದರು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನಸಂತರ್ಪಣೆ ನೆರವೇರಿತು. 


ಭದ್ರಾವತಿ ಜನ್ನಾಪುರ ಶ್ರೀಮದ್ ಜಯತೀರ್ಥಗುರುಸಾರ್ವಭೌಮರ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿ ೩ ದಿನಗಳ ಕಾಲ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ಏರ್ಪಡಿಸಲಾಗಿತ್ತು. ಮಂಗಳವಾರ ರಾಯರ ರಥೋತ್ಸವದ ನಂತರ ಶ್ರೀಮಠದಲ್ಲಿರುವ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. 
    ಶ್ರೀ ಗುರುರಾಜ ಸೇವಾಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ ಹಾಗು ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ನಿರಂಜನಾಚಾರ್ಯ, ಮಾಧುರಾವ್, ಗಿರಿ ಆಚಾರ್, ಪವನ್ ಕುಮಾರ್ ಉಡುಪ, ಪ್ರಮೋದ್ ಕುಮಾರ್, ಶುಭ ಗುರುರಾಜ್, ವಿದ್ಯಾನಂದನಾಯಕ, ಪ್ರಶಾಂತ್, ಶಶಿಧರ್, ಕೆ.ಎಸ್ ಸುಧೀಂದ್ರ ಸೇರಿದಂತೆ ಶ್ರೀ ಮಠದ ಸೇವಾಕರ್ತರು ಉಪಸ್ಥಿತರಿದ್ದರು. 
    ಹಳೇನಗರ, ಭೂತನಗುಡಿ, ಚಾಮೇಗೌಡ ಏರಿಯಾ, ಕೇಶವಪುರ ಬಡಾವಣೆ, ಮಾಧವನಗರ, ಹೊಸಮನೆ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು. 
    ಜನ್ನಾಪುರ ಶ್ರೀಮದ್ ಜಯತೀರ್ಥಗುರುಸಾರ್ವಭೌಮರ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿ ೩ ದಿನಗಳ ಕಾಲ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ಏರ್ಪಡಿಸಲಾಗಿತ್ತು. ಪ್ರತಿ ದಿನ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ-ಅಷ್ಟೋತ್ತರ ಪಾರಾಯಣ, ವಿದ್ವಾಂಸರಿಂದ ಉಪನ್ಯಾಸ, ಮಹಾಪೂಜೆ, ನೈವೇದ್ಯ, ಅಲಂಕಾರ, ಬ್ರಾಹ್ಮಣರ ಪೂಜೆ, ಹಸ್ತೋದಕ, ಮಹಾಮಂಗಳಾರತಿ, ಭಜನೆ, ಸಾಂಸ್ಕೃತಿ ಕಾರ್ಯಕ್ರಮಗಳು, ಪಲ್ಲಕ್ಕಿ ಸೇವೆ, ಅಷ್ಠಾವಧಾನ ಮತ್ತು ತೊಟ್ಟಿಲು ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನೆರವೇರಿದವು. 


ಭದ್ರಾವತಿ ಜನ್ನಾಪುರ ಶ್ರೀಮದ್ ಜಯತೀರ್ಥಗುರುಸಾರ್ವಭೌಮರ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿ ೩ ದಿನಗಳ ಕಾಲ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ಏರ್ಪಡಿಸಲಾಗಿತ್ತು. ಮಂಗಳವಾರ ರಾಯರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. 
    ಮಂಗಳವಾರ ಮಧ್ಯಾಹ್ನ ಶ್ರೀ ಗುರುರಾಜರ ದಿವ್ಯ ರಥೋತ್ಸವ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಶ್ರೀ ರಾಘವೇಂದ್ರ ಗುರುಸಾರ್ವಭೌಮ ಸೇವಾ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸೇವಾಕರ್ತರು ಉಪಸ್ಥಿತರಿದ್ದರು. 
    ಜನ್ನಾಪುರ, ಗಣೇಶ್ ಕಾಲೋನಿ, ವಿದ್ಯಾಮಂದಿರ, ಹುತ್ತಾ ಕಾಲೋನಿ, ವೇಲೂರು ಶೆಡ್, ಹುಡ್ಕೋ ಕಾಲೋನಿ, ನ್ಯೂಟೌನ್, ಆಂಜನೇಯ ಅಗ್ರಹಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 

ಮಾಜಿ ಮುಖ್ಯಮಂತ್ರಿ ಡಿ. ದೇವರಾಜಅರಸು ಜನ್ಮದಿನಾಚರಣೆ ಪೂರ್ವಭಾವಿ ಸಭೆ

ಪ್ರತಿಭಾ ಪುರಸ್ಕಾರ, ಹಿರಿಯ ಸಮಾಜವಾದಿ ಹೋರಾಟಗಾರರಿಗೆ ಸನ್ಮಾನ 

ಭದ್ರಾವತಿ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ದಿವಂಗತ ಡಿ. ದೇವರಾಜ ಅರಸು ಜನ್ಮ ದಿನಾಚರಣೆ ಅದ್ದೂರಿಯಾಗಿ ಆಚರಿಸಲು ಪೂರ್ವಭಾವಿ ಸಭೆ ನಡೆಸಲಾಯಿತು.      
ಭದ್ರಾವತಿ : ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆ.೨೦ರಂದು ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜಅರಸುರವರ ಜನ್ಮದಿನಾಚರಣೆ ಅದ್ದೂರಿಯಾಗಿ ಆಚರಿಸಿಲು ತೀರ್ಮಾನಿಸಲಾಯಿತು.
  ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲು ಹಾಗೂ ಹಿರಿಯ ಹೋರಾಟಗಾರರಾದ ಸಮಾಜವಾದಿ ಕಡಿದಾಳ ಶಾಮಣ್ಣ ಅಥವಾ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ತಾಲೂಕಿನ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಸಭೆ ನಿರ್ಣಯ ಕೈಗೊಂಡಿತು.
  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸಭೆ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಪೌರಾಯುಕ್ತ ಕೆ.ಎನ್ ಹೇಮಂತ್, ಸದಸ್ಯರಾದ ಬಿ.ಕೆ ಮೋಹನ್, ಚನ್ನಪ್ಪ, ಗ್ರೇಡ್-೨ ತಹಸೀಲ್ದಾರ್ ಮಂಜಾನಾಯ್ಕ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶೈಲಜಾ, ಪುರಸಭೆ ಮಾಜಿ ಉಪಾಧ್ಯಕ್ಷ ಟಿ. ವೆಂಕಟೇಶ್, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಈಶ್ವರಪ್ಪ, ವಿನೋದ್‌ಕುಮಾರ್, ತೀರ್ಥೇಶ್, ವೈ. ಶಶಿಕುಮಾರ್, ಶಿವುಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.