Tuesday, March 15, 2022

ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬಿ.ಇಡಿ ವಿಭಾಗದ ೩ನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ


ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯ ಬಿ.ಇಡಿ ವಿಭಾಗದ ೩ನೇ ಅಂತಸ್ತಿನ ಕಟ್ಟಡ ನಿರ್ಮಾಣ ಮತ್ತು ನವೀಕರಣ ಕಾರ್ಯಕ್ಕೆ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
    ಭದ್ರಾವತಿ, ಮಾ. ೧೫: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯ ಬಿ.ಇಡಿ ವಿಭಾಗದ ೩ನೇ ಅಂತಸ್ತಿನ ಕಟ್ಟಡ ನಿರ್ಮಾಣ ಮತ್ತು ನವೀಕರಣ ಕಾರ್ಯಕ್ಕೆ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
    ವಿದ್ಯಾಸಂಸ್ಥೆಯ ಮಹಾ ಪೋಷಕರಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷ ಸಿ.ಎಸ್ ಷಡಾಕ್ಷರಿಯವರ ಸಹಕಾರದೊಂದಿಗೆ ಮಾರು ೧ ಕೋಟಿ ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮತ್ತು ನವೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ.  
    ವಿದ್ಯಾಸಂಸ್ಥೆಯ ಪದನಿಮಿತ್ತ ಅಧ್ಯಕ್ಷ ಬಿ. ಸಿದ್ದಬಸಪ್ಪ, ಸಂಸ್ಥಾಪಕರಾದ ಬಿ.ಎಲ್. ರಂಗಸ್ವಾಮಿ ಮತ್ತು  ಡಾ. ಜಿ. ಎಂ. ನಟರಾಜ್, ಪ್ರಧಾನ ಕಾರ್ಯದರ್ಶಿ  ಡಿ.ಎಸ್ ರಾಜಪ್ಪ, ಖಜಾಂಚಿ ಎಸ್.ಕೆ ಮೋಹನ್, ಪ್ರೌಢ ಶಾಲಾ ವಿಭಾಗದ ಕಾರ್ಯದರ್ಶಿ ಪುಟ್ಟಲಿಂಗ ಮೂರ್ತಿ, ತಾಂತ್ರಿಕ ಸಲಹೆಗಾರರಾದ ಡಾ. ಮಂಜುನಾಥ್ ಮತ್ತು ಎಂ.ಎಸ್.ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

೧೭ ಮಂದಿ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಪಹಣಿ, ಮ್ಯುಟೇಷನ್ ವಿತರಣೆ


ಭದ್ರಾವತಿ ತಾಲೂಕು ಬಗರ್ ಹುಕ್ಕುಂ ಸಮಿತಿ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ತಾಲೂಕು ಕಛೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ೧೭ ಮಂದಿ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲಾಯಿತು.
    ಭದ್ರಾವತಿ, ಮಾ. ೧೫:  ತಾಲೂಕು ಬಗರ್ ಹುಕ್ಕುಂ ಸಮಿತಿ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ತಾಲೂಕು ಕಛೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ೧೭ ಮಂದಿ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲಾಯಿತು.
     ತಾಲೂಕಿನಲ್ಲಿ ಬಗರ್ ಹುಕ್ಕುಂ ಸಾಗುವಳಿದಾರರನ್ನು ಗುರುತಿಸಿ ಅವರಿಗೆ ತ್ವರಿತಗತಿಯಲ್ಲಿ ಹಕ್ಕುಪತ್ರದ ಜೊತೆಗೆ ಪಹಣಿ ಹಾಗು ಮ್ಯುಟೇಷನ್ ಸಹ ನೀಡುವಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮುಂದಿನ ೧೫ ದಿನಗಳಲ್ಲಿ ಇನ್ನೂ ೨೫ ಮಂದಿ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲು ಸಿದ್ದತೆ ಕೈಗೊಂಡಿದೆ. ಸಮಿತಿಗೆ ತಾಲೂಕು ಆಡಳಿತದಿಂದ ಅದರಲ್ಲೂ ತಹಸೀಲ್ದಾರ್‌ರವರು ಇನ್ನೂ ಹೆಚ್ಚಿನ ಸಹಕಾರ ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ಷಮತೆಯೊಂದಿಗೆ ತಾಲೂಕಿನಲ್ಲಿರುವ ಎಲ್ಲಾ ಬಗರ್ ಹುಕ್ಕುಂ ಸಾಗುವಳಿದಾರರನ್ನು ಗುರುತಿಸುವ ಕಾರ್ಯ ಕೈಗೊಳ್ಳಲಿದೆ ಎಂದು ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷ, ಅಂತರಗಂಗೆ ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ಪತ್ರಿಕೆಗೆ ಮಾಹಿತಿ ನೀಡಿದರು.
    ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್, ಸಮಿತಿ ಸದಸ್ಯರಾದ ಕರೀಗೌಡ, ಮಾಲಾನಾಯ್ಕ್ ಮತ್ತು ಸರಸ್ವತಿ ಹಾಗು ತಾಲೂಕು ಕಛೇರಿ ಸಿಬ್ಬಂದಿಗಳು ಮತ್ತು ಬಗರ್ ಹುಕ್ಕುಂ ಸಾಗುವಳಿದಾರರು ಉಪಸ್ಥಿತರಿದ್ದರು.  

ಗುಡಿಸಲಿನಲ್ಲಿ ಸಿಲಿಂಡರ್ ಸ್ಪೋಟ : ೪ ಲಕ್ಷ ರು. ನಗದು, ಚಿನ್ನಾಭರಣ ಭಸ್ಮ

ಗುಡಿಸಲಿನಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ೪ ಲಕ್ಷ ರು. ನಗದು ಹಾಗು ಚಿನ್ನಾಭರಣ ಮತ್ತು ಬಟ್ಟೆ, ಪಾತ್ರೆ ಸೇರಿದಂತೆ ದಿನಬಳಕೆ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿರುವ ಘಟನೆ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
    ಭದ್ರಾವತಿ, ಮಾ. ೧೫:  ಗುಡಿಸಲಿನಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ೪ ಲಕ್ಷ ರು. ನಗದು ಹಾಗು ಚಿನ್ನಾಭರಣ ಮತ್ತು ಬಟ್ಟೆ, ಪಾತ್ರೆ ಸೇರಿದಂತೆ ದಿನಬಳಕೆ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
    ಒಬ್ಬಂಟಿ ಮಹಿಳೆ ವಲದರಮದಿ ಎಂಬುವರಿಗೆ ಸೇರಿದ ವಾಸದ ಗುಡಿಸಲಿನಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದಿರುವಾಗ ಸಿಲಿಂಡರ್ ಸ್ಪೋಟಗೊಂಡಿದೆ. ಗುಡಿಸಲು ಸಂಪೂರ್ಣ ಸುಟ್ಟು ಹೋಗಿದ್ದು, ಬೀರುವಿನಲ್ಲಿಟ್ಟಿದ್ದ ೪ ಲಕ್ಷ ರು. ನಗದು, ೧ ತೊಲೆ ಬಂಗಾರ, ಬಟ್ಟೆ, ಪಾತ್ರೆ ಸೇರಿದಂತೆ ದಿನಬಳಕೆ ವಸ್ತುಗಳು ಸುಟ್ಟು ಹೋಗಿವೆ. ಇದರಿಂದಾಗಿ ಮಹಿಳೆ ಬದುಕು ಬೀದಿಗೆ ಬಿದ್ದಿದೆ.
    ಅಗ್ನಿ ಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್ ನೇತೃತ್ವದ ಸಿಬ್ಬಂದಿಗಳಾದ ಅಶೋಕ್‌ಕುಮಾರ್, ಸುರೇಶ್ ಆಚಾರ್, ವಿನೂತನ, ಕರಿಯಣ್ಣ, ಎಚ್. ಹರೀಶ್ ಮತ್ತು ಕೆ.ಎಚ್ ರಾಜಾ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಪಕ್ಷಾಂತರ ಪರ್ವದಿಂದ ಕಂಗೆಡದ ಜೆಡಿಎಸ್ : ನಗರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಗೆ ಒತ್ತು


ಭದ್ರಾವತಿ ನ್ಯೂಟೌನ್‌ನಲ್ಲಿರುವ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನಿವಾಸದಲ್ಲಿ ಕಳೆದ ೨ ದಿನಗಳ ಹಿಂದೆ ಜೆಡಿಎಸ್ ಪಕ್ಷದ ನಗರಸಭೆ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರ ಸಭೆ ನಡೆಸಲಾಯಿತು.
    ಭದ್ರಾವತಿ, ಮಾ. ೧೫: ಇತ್ತೀಚೆಗೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯೊಂದಿಗೆ ೨-೩ ದಶಕಗಳಿಂದ ಗುರುತಿಸಿಕೊಂಡಿದ್ದ ಪ್ರಮುಖರು ಒಂದೆಡೆ ಪಕ್ಷ ತೊರೆದಿರುವುದು ಹಿನ್ನಡೆಗೆ ಕಾರಣವಾಗಿದೆ. ಮತ್ತೊಂದೆಡೆ ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಬಿರುಸಿನ ರಾಜಕಾರಣಕ್ಕೆ ಮುನ್ನುಡಿ ಬರೆದಿದೆ.

ಇತ್ತೀಚೆಗೆ ಜೆಡಿಎಸ್ ಪಕ್ಷ ತೊರೆದಿರುವ ಕೆಲವರು ಅಪ್ಪಾಜಿ ವರ್ಚಸ್ಸಿನಲ್ಲಿ ರಾಜಕೀಯ ಮಾಡುತ್ತಿದ್ದರು. ಅವರು ವೈಯಕ್ತಿಕವಾಗಿ ಯಾವುದೇ ವರ್ಚಸ್ಸನ್ನು ಸಂಪಾದಿಸಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಶಾರದ ಅಪ್ಪಾಜಿಯವರು ಕ್ರಿಯಾಶೀಲವಾಗಿ ಮುನ್ನಡೆಯುತ್ತಿದ್ದಾರೆ. ಈಗಾಗಲೇ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಕ್ಷೇತ್ರದಲ್ಲಿ ಹಲವು ಮಂದಿ ಮುಂದಿದ್ದಾರೆ. ಆದರೆ ಅವರನ್ನು ಈಗಲೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ.  ಚುನಾವಣೆ ಸಮೀಪಿಸುತ್ತಿದ್ದಂತೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಇಬ್ರಾಹಿಂ ಸೇರ್ಪಡೆ ಪಕ್ಷಕ್ಕೆ ಲಾಭವೇ ಹೊರತು ನಷ್ಟವಿಲ್ಲ.
                                                                           - ಆರ್. ಕರುಣಾಮೂರ್ತಿ, ಅಧ್ಯಕ್ಷರು, ಜೆಡಿಎಸ್ , ಭದ್ರಾವತಿ.

    ಅಪ್ಪಾಜಿ ಅವರೊಂದಿಗೆ ೨-೩ ದಶಕಗಳಿಂದ ಗುರುತಿಸಿಕೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ನಗರಸಭೆ ಮಾಜಿ ಸದಸ್ಯ ಬದರಿನಾರಾಯಣ, ಮುಸ್ಲಿಂ ಸಮುದಾಯದ ಫೀರ್‌ಷರೀಫ್, ಶಿವಮಾಧು ಸೇರಿದಂತೆ ಇನ್ನಿತರ ಪ್ರಮುಖರು ಪಕ್ಷ ತೊರೆದಿರುವುದು ಪಕ್ಷದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯನ್ನುಂಟು ಮಾಡಿದೆ. ಇದು ಈಗಾಗಲೇ ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿರುವ ಶಾರದ ಅಪ್ಪಾಜಿಗೆ ತಲೆ ನೋವಾಗಿ ಪರಿಣಮಿಸಿದೆ. ಆದರೂ ಸಹ ಯಾವುದನ್ನು ಲೆಕ್ಕಿಸದೆ ಶಾರದ ಅಪ್ಪಾಜಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
    ಈಗಾಗಲೇ ಶಾರದ ಅಪ್ಪಾಜಿ ಗ್ರಾಮಾಂತರ ಭಾಗದಲ್ಲಿ ಪಕ್ಷ ಸಂಘಟನೆ ಜೊತೆಗೆ ೨-೩ ಬಾರಿ ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸಿದ್ದಾರೆ. ಇದೀಗ ನಗರಸಭೆ ೩೫ ವಾರ್ಡ್‌ಗಳಲ್ಲಿ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸಲು ಮುಂದಾಗಿದ್ದು, ಕಳೆದ ೨ ದಿನಗಳ ಹಿಂದೆ ಪಕ್ಷದ ನಗರಸಭೆ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಲು ಹೆಚ್ಚಿನ ಗಮನ ನೀಡುವಂತೆ ಮನವಿ ಮಾಡಿದ್ದಾರೆ.
    ಸಿ.ಎಂ ಇಬ್ರಾಹಿಂ ಸೇರ್ಪಡೆ ಯಾವುದೇ ನಷ್ಟವಿಲ್ಲ:
    ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಗೊಳ್ಳುತ್ತಿರುವುದು. ಸ್ಥಳೀಯವಾಗಿ ಹೆಚ್ಚಿನ ಪರಿಣಾಮವನ್ನುಂಟು ಮಾಡಲಿದ್ದು, ಇವರ ಸೇರ್ಪಡೆ ಪಕ್ಷ ಸಂಘಟನೆಗೆ ಯಾವುದೇ ಹಿನ್ನಡೆಯನ್ನುಂಟು ಮಾಡುವುದಿಲ್ಲ. ಬದಲಿಗೆ ಲಾಭವಾಗಲಿದೆ ಎಂಬುದು ಸ್ಥಳೀಯ ಮುಖಂಡರ ಅಭಿಪ್ರಾಯವಾಗಿದೆ.
    ಸಿ.ಎಂ ಇಬ್ರಾಹಿಂರವರು ರಾಜ್ಯಮಟ್ಟದ ನಾಯಕರಾಗಿದ್ದು, ಈಗಾಗಲೇ ಕ್ಷೇತ್ರದಲ್ಲಿ ಶಾರದ ಅಪ್ಪಾಜಿಯನ್ನು ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಇಬ್ರಾಹಿಂರವರು ಶಾರದ ಅಪ್ಪಾಜಿ ಬೆಂಬಲಿಸುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಇವರ ಅಭಿಮಾನಿಗಳು, ಹಿತೈಷಿಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾರದ ಅಪ್ಪಾಜಿ ಗೆಲುವಿಗಾಗಿ ಶ್ರಮಿಸುತ್ತಾರೆಂಬ ವಿಶ್ವಾಸವನ್ನು ಮುಖಂಡರು ಹೊಂದಿದ್ದಾರೆ.  

ಭದ್ರಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿ ಮಾ.೨೧ರಂದು ಹೋರಾಟ

ಭದ್ರಾವತಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದ ೧ನೇ ತಿರುವಿನಿಂದ ಶ್ರೀ ವಿಶ್ವ ಸ್ವರೂಪಿಣಿ ಮಾರಿಯಮ್ಮ ದೇವಸ್ಥಾನದವರೆಗೂ ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವ ಸಂಬಂಧ ಹೋರಾಟ ರೂಪಿಸಲು ಮಂಗಳವಾರ ಪದ್ಮ ನಿಲಯ ಹೋಟೆಲ್ ಸುನಂದ ಸಭಾಂಗಣದಲ್ಲಿ ಪ್ರಜಾ ರಾಜ್ಯ ದಲಿತ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಮುಖರು ಮಾತನಾಡಿದರು.
    ಭದ್ರಾವತಿ, ಮಾ. ೧೫: ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದ ೧ನೇ ತಿರುವಿನಿಂದ ಶ್ರೀ ವಿಶ್ವ ಸ್ವರೂಪಿಣಿ ಮಾರಿಯಮ್ಮ ದೇವಸ್ಥಾನದವರೆಗೂ ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವ ಸಂಬಂಧ ಹೋರಾಟ ರೂಪಿಸಲು ಮಂಗಳವಾರ ಪದ್ಮ ನಿಲಯ ಹೋಟೆಲ್ ಸುನಂದ ಸಭಾಂಗಣದಲ್ಲಿ ಪ್ರಜಾ ರಾಜ್ಯ ದಲಿತ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾ.೨೧ರಂದು ಮೊದಲ ಹಂತದಲ್ಲಿ ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
    ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ದಲಿತರು ಹೆಚ್ಚಾಗಿ ವಾಸಿಸುತ್ತಿರುವ ಮನೆಗಳಿಗೆ ನೀರು ನುಗ್ಗುತ್ತಿದ್ದು, ಇದನ್ನು ಮನಗಂಡು ಈ ಹಿಂದಿನ ಶಾಸಕರಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿಯವರು ತಡೆಗೋಡೆ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದರ ಪರಿಣಾಮ ಕರ್ನಾಟಕ ನೀರಾವರಿ ನಿಗಮಕ್ಕೆ ಕಾಮಗಾರಿ ಕೈಗೆತ್ತಿಗೊಳ್ಳಲು ೯.೫ ಕೋ. ರು. ಹಣ ಬಿಡುಗಡೆಯಾಗಿರುತ್ತದೆ. ೧ನೇ ತಿರುವಿನಿಂದ ವಿಶ್ವ ಸ್ವರೂಪಿಣಿ ಮಾರಿಯಮ್ಮ ದೇವಸ್ಥಾನದವರೆಗೂ ತಡೆಗೋಡೆ ನಿರ್ಮಿಸಬೇಕಾಗಿದೆ.  ಆದರೆ ಇದೀಗ ಈ ಕಾಮಗಾರಿಯನ್ನು ದುರುದ್ದೇಶ ಪೂರ್ವಕವಾಗಿ ಬದಲಿಸಲಾಗಿದ್ದು, ದಲಿತರಿಗೆ ಅನ್ಯಾಯವೆಸಗಲಾಗಿದೆ. ಇದಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಕಾರಣಕರ್ತರಾಗಿದ್ದು, ಮೇಲ್ವರ್ಗದವರ ಒತ್ತಾಯಕ್ಕೆ ಮಣಿದು ಕಾಮಗಾರಿ ಬದಲಿಸಿದ್ದಾರೆಂದು ಆರೋಪಿಸಿದರು.
ಕಾಮಗಾರಿಯನ್ನು ೧ನೇ ತಿರುವಿನಿಂದ ಆರಂಭಿಸಬೇಕೆಂದು ಆಗ್ರಹಿಸಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲು ತೀರ್ಮಾನಿಸಿ ಮೊದಲ ಹಂತದಲ್ಲಿ ಮಾ.೨೧ರಂದು ನಗರದ ಅಂಡರ್ ಬ್ರಿಡ್ಜ್‌ನಲ್ಲಿ ಪ್ರತಿಭಟನಾ ಹೋರಾಟಕ್ಕೆ ಕರೆ ನೀಡಲಾಯಿತು.
    ಪ್ರಜಾ ರಾಜ್ಯ ದಲಿತ ಸಂಘದ ರಾಜ್ಯಾಧ್ಯಕ್ಷ ಬಿ. ರಮೇಶ್ ಸಭೆ ಅಧ್ಯಕ್ಷತೆ ವಹಿಸಿದ್ದರು.  ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್.ಕೆ ಸುಧೀಂದ್ರ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭೆ ಮಾಜಿ ಸದಸ್ಯ ಎಚ್.ಬಿ ರವಿಕುಮಾರ್, ಸ್ಥಳೀಯ ಮುಖಂಡರಾದ ಕುಪ್ಪಸ್ವಾಮಿ, ಗಣೇಶ್, ನ್ಯೂಟೌನ್ ಬಿಪಿಎಲ್ ಸಂಘದ ಜಗದೀಶ್, ರವಿಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.