Wednesday, February 5, 2025

ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೈಯದ್ ರಿಯಾಜ್

ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ೩೦ನೇ ವಾರ್ಡ್ ಸದಸ್ಯರಾದ ಸೈಯದ್ ರಿಯಾಜ್ ಬುಧವಾರ ಅಧಿಕಾರ ಸ್ವೀಕರಿಸಿದರು. 
    ಭದ್ರಾವತಿ : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ೩೦ನೇ ವಾರ್ಡ್ ಸದಸ್ಯರಾದ ಸೈಯದ್ ರಿಯಾಜ್ ಬುಧವಾರ ಅಧಿಕಾರ ಸ್ವೀಕರಿಸಿದರು. 
    ನಗರಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಪಕ್ಷ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು, ಅದರಂತೆ ೧ ವರ್ಷದ ಅವಧಿಗೆ ವಾರ್ಡ್ ನಂ.೨೮ರ ಸದಸ್ಯರಾದ ಕಾಂತರಾಜ್‌ರವರು ಅಧಿಕಾರ ನಿರ್ವಹಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತೆರವಾಗಿದ್ದ ಸ್ಥಾನಕ್ಕೆ ಇದೀಗ ಸೈಯದ್ ರಿಯಾಜ್ ಆಯ್ಕೆಯಾಗುವ ಮೂಲಕ ಅಧಿಕಾರ ವಹಿಸಿಕೊಂಡಿದ್ದಾರೆ. 
    ನಗರಸಭೆ ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾದ ಸೈಯದ್ ರಿಯಾಜ್‌ರನ್ನು ಅಭಿನಂದಿಸಿದ್ದಾರೆ. 

ಫೆ.೭ರಂದು `ಬೆಂಗಳೂರು ಚಲೋ ಹೋರಾಟ' ಎನ್‌ಪಿಎಸ್ ನೌಕರರಿಂದ ಪತ್ರ ಚಳುವಳಿ

ಬೆಂಗಳೂರಿನಲ್ಲಿ ಫೆ.೭ರಂದು ನಡೆಯಲಿರುವ `ಬೆಂಗಳೂರು ಚಲೋ ಹೋರಾಟ'ದ ಅಂಗವಾಗಿ ಭದ್ರಾವತಿಯಲ್ಲಿ ಎನ್‌ಪಿಎಸ್ ತೊಲಗಿಸಿ ಓಪಿಎಸ್‌ಗಾಗಿ ಪತ್ರ ಚಳುವಳಿ ನಡೆಸಲಾಯಿತು. 
    ಭದ್ರಾವತಿ: ಬೆಂಗಳೂರಿನಲ್ಲಿ ಫೆ.೭ರಂದು ನಡೆಯಲಿರುವ `ಬೆಂಗಳೂರು ಚಲೋ ಹೋರಾಟ'ದ ಅಂಗವಾಗಿ ಎನ್‌ಪಿಎಸ್ ತೊಲಗಿಸಿ ಓಪಿಎಸ್‌ಗಾಗಿ ಪತ್ರ ಚಳುವಳಿ ನಡೆಸಲಾಯಿತು. 
    ನಗರದ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಮಂಗಳವಾರ ಸಂಜೆ ಸಭೆ ನಡೆಸಿದ ಎನ್‌ಪಿಎಸ್ ನೌಕರರು ಪತ್ರ ಚಳುವಳಿ ಮೂಲಕ ತಾಲೂಕಿನ ಎಲ್ಲಾ ನೌಕರರು `ಬೆಂಗಳೂರು ಚಲೋ ಹೋರಾಟ'ದಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಕೋರಿದರು. 
    ಸಭೆಯಲ್ಲಿ ಪಾಲ್ಗೊಂಡ ನೌಕರರು ನಿವೃತ್ತಿ ನಂತರ ನೆಮ್ಮದಿ ಜೀವನಕ್ಕೆ ಎನ್‌ಪಿಎಸ್ ಯಾವುದೇ ರೀತಿ ನೆರವಾಗುವುದಿಲ್ಲ. ನೆಮ್ಮದಿ ಬದುಕಿಗೆ ಪಿಂಚಣಿ ಬೇಕೇ ಬೇಕು ಇಲ್ಲದಿದ್ದರೆ ನಮ್ಮ ಮುಂದಿನ ಬದುಕು ದುಸ್ತರವಾಗುತ್ತದೆ ಎಂದು ತಮ್ಮ ಅಳಲನ್ನು ತೋರ್ಪಡಿಸಿಕೊಂಡರು. 

ರಥಸಪ್ತಮಿ ಅಂಗವಾಗಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಉತ್ಸವ ಮೆರವಣಿಗೆ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಥಸಪ್ತಮಿ ಅಂಗವಾಗಿ ಸ್ವಾಮಿಯ ಉತ್ಸವ ಜರುಗಿತು. 
    ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಥಸಪ್ತಮಿ ಅಂಗವಾಗಿ ಸ್ವಾಮಿಯ ಉತ್ಸವ ಜರುಗಿತು. 
    ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥ ಶರ್ಮರವರ ನೇತೃತ್ವದಲ್ಲಿ ಬೆಳಿಗ್ಗೆ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಸ್ವಾಮಿಯ ಉತ್ಸವ ಮೆರವಣಿಗೆ ನಡೆಯಿತು. ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಕುಂಭಮೇಳದ ಗಂಗಾ ಜಲ ವಿತರಣೆ ನಡೆಯಿತು. ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿವಾಸನ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಿ. ರಮಾಕಾಂತ್, ನರಸಿಂಹಚಾರ್, ಕೃಷ್ಣಪ್ಪ, ಶಂಕರಪ್ಪ, ರವಿ ಮಾಸ್ಟರ್, ಶರತ್, ಶ್ರೀಕಾಂತ್, ಪ್ರದೀಪ್, ಶೇಷಗಿರಿ ಮಾಸ್ಟರ್, ಡೆಕೋರೇಟ್ ಸಂಜು, ವಿವಿಧ ಭಜನಾ ತಂಡದ ಮಹಿಳೆಯರು, ವೇದ ಪಾಠ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು. 
    ರಥಬೀದಿ ರಸ್ತೆ ದುರಸ್ತಿಗೊಳಿಸಿ : 
    ದೇವಸ್ಥಾನ ಮುಂಭಾಗದ ರಥಬೀದಿ ರಸ್ತೆ ಹಲವಾರು ವರ್ಷಗಳಿಂದ ಹಾಳಾಗಿದ್ದು, ಇದರಿಂದಾಗಿ ರಥೋತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗಮನ ಹರಿಸಿ ಮುಂದಿನ ಮಹಾರಥೋತ್ಸವದೊಳಗಾಗಿ ಹಾಳಾದ ರಸ್ತೆ ದುರಸ್ತಿಗೊಳಿಸಿ ಡಾಬರೀಕರಣ ಕೈಗೊಂಡು ಅನುಕೂಲ ಮಾಡಿಕೊಡುವಂತೆ ಸ್ಥಳೀಯ ಭಕ್ತರು ಕೋರಿದ್ದಾರೆ. 

ಫೆ.೮ರಂದು ಲಯನ್ಸ್ ಪ್ರಾಂತೀಯ ಸಮ್ಮೇಳನ `ಸ್ನೇಹ ಚಂದ್ರಮ'

ಭದ್ರಾವತಿ ಲಯನ್ಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತೀಯ ಅಧ್ಯಕ್ಷ ಬಿ.ಎಸ್ ಮಹೇಶ್ ಕುಮಾರ್ ಮಾತನಾಡಿದರು.
    ಭದ್ರಾವತಿ : ಲಯನ್ಸ್ ಇಂಟರ್‌ನ್ಯಾಷನಲ್ ವಲಯ-೭, ಜಿಲ್ಲೆ-೩೧೭ಸಿ ಪ್ರಾಂತೀಯ ಸಮ್ಮೇಳನ `ಸ್ನೇಹ ಚಂದ್ರಮ' ಫೆ.೮ರಂದು ಮಧ್ಯಾಹ್ನ ೩ ಗಂಟೆಗೆ ನಗರದ ನ್ಯೂಟೌನ್ ಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂತೀಯ ಅಧ್ಯಕ್ಷ ಬಿ.ಎಸ್ ಮಹೇಶ್ ಕುಮಾರ್ ಹೇಳಿದರು. 
    ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ನಮ್ಮ ಪ್ರಾಂತೀಯ ವ್ಯಾಪ್ತಿಯಲ್ಲಿ ೪ ವಲಯಗಳು ಬರಲಿದ್ದು, ಪ್ರಾಂತೀಯ ಅಧ್ಯಕ್ಷರ ಜವಾಬ್ದಾರಿ ಹೆಚ್ಚಿನದ್ದಾಗಿದೆ. ಸಾಮಾಜಿಕವಾಗಿ ನಮ್ಮಲ್ಲಿನ ಬದ್ಧತೆ, ಸೇವಾ ಮನೋಭಾವನೆ ಇಲ್ಲಿ ಬಹುಮುಖ್ಯವಾಗಿವೆ. ನಮ್ಮನ್ನು ಹೆಚ್ಚಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. 
    `ಸ್ನೇಹ ಚಂದ್ರಮ' ಪ್ರಾಂತೀಯ ಸಮ್ಮೇಳನದಲ್ಲಿ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಕ್ಲಬ್‌ನ ಪ್ರಮುಖರು ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಕೆ ಸಂಗಮೇಶ್ವರ್, ಕುವೆಂಪು ವಿ.ವಿ ಕುಲಪತಿ ಡಾ. ಶರತ್ ಅನಂತಮೂರ್ತಿ, ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಕೆ.ಪಿ ಪುತ್ತುರಾಯ, ವಿಡಿಜಿ-೧ ಸಪ್ನ ಸುರೇಶ್, ವಿಡಿಜಿ-೨ ರಾಜೀವ್ ಕೊಟ್ಯಾನ್ ಮತ್ತು ವಲಯ ಸಲಹೆಗಾರ ಬಿ. ದಿವಾಕರ ಶೆಟ್ಟಿ ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ ಎಂದರು. 
    ವಲಯ ಕಾರ್ಯದರ್ಶಿ ಪರಮೇಶ್ವರಪ್ಪ, ಸಮ್ಮೇಳನ ಅಧ್ಯಕ್ಷ ಜಿ.ಡಿ ಪ್ರಭುದೇವ, ಸಂಚಾಲಕ ಎ.ಎನ್ ಕಾರ್ತಿಕ್, ಕಾರ್ಯದರ್ಶಿ ಹೆಬ್ಬಂಡಿ ನಾಗರಾಜ್, ಖಜಾಂಚಿ ಕೆ.ಎಚ್ ರವಿಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನಾಯ್ಡು, ಕಾರ್ಯದರ್ಶಿ ಎನ್. ಶಿವಕುಮಾರ್ ಹಾಗು ಖಜಾಂಚಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.