Wednesday, October 27, 2021

ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರ ನೋವಿಗೆ ಮಿಡಿದ ಹೃದಯ

ಹುಟ್ಟುಹಬ್ಬ ಆಚರಣೆಯಿಂದ ಹಿಂದೆ ಸರಿದ ಶಾಸಕ ಸಂಗಮೇಶ್ವರ್

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಅ. ೨೭: ಕ್ಷೇತ್ರದ ಪ್ರತಿಷ್ಠಿತ ಕೈಗಾರಿಕೆಗಳಾದ ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾರ್ಖಾನೆಗಳು ಪ್ರಸ್ತುತ ಅವನತಿ ದಾರಿಯಲ್ಲಿ ಸಾಗುತ್ತಿದ್ದು, ಎರಡು ಕಾರ್ಖಾನೆಗಳ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ಸಂದರ್ಭದಲ್ಲಿ ಜನ್ಮದಿನ ಆಚರಿಸಿಕೊಳ್ಳುವ ಮನಸ್ಥಿತಿ ನನ್ನದಲ್ಲ. ಈ ಹಿನ್ನಲೆಯಲ್ಲಿ ಈ ಬಾರಿ ಅ.೨೮ರ ಗುರುವಾರ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದ್ದಾರೆ.
    ಕೇಂದ್ರ ಹಾಗು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಎರಡು ಕಾರ್ಖಾನೆಗಳು ಅವನತಿ ದಾರಿಯಲ್ಲಿ ಸಾಗುವಂತಾಗಿದೆ. ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಶಕ್ತಿ ಮೀರಿ ಪ್ರಯತ್ನಿಸಿದ್ದು, ಅಲ್ಲದೆ ಕ್ಷೇತ್ರದಲ್ಲಿ ನಿರಂತರವಾಗಿ ಹೋರಾಟಗಳು ನಡೆದರೂ ಸಹ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಇಚ್ಛಾ ಶಕ್ತಿ ತೋರಿಸದಿರುವುದು ಮನಸ್ಸಿಗೆ ನೋವುಂಟು ಮಾಡಿದೆ.
    ಎರಡು ಕಾರ್ಖಾನೆಗಳನ್ನು ನಂಬಿ ಬದುಕು ಸಾಗುತ್ತಿದ್ದ, ಸಾವಿರಾರು ಕಾರ್ಮಿಕರು, ಕುಟುಂಬ ವರ್ಗದವರು, ಕೃಷಿಕರು, ವ್ಯಾಪಾರಸ್ಥರು ಪ್ರಸ್ತುತ ಬೀದಿ ಪಾಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಬದುಕು ಸಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಈ ಹಿನ್ನಲೆಯಲ್ಲಿ ಕ್ಷೇತ್ರದ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಸೇರಿದಂತೆ ಸಮಸ್ತ ನಾಗರಿಕರು ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಡಜನರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಕೈಲಾದಷ್ಟು ನೆರವು ನೀಡುವ ಮೂಲಕ ನನಗೆ ಶುಭ ಹಾರೈಸುವಂತೆ ಕೋರಿದ್ದಾರೆ.

ಪ್ರಯೋಗಾಲಯ ತಂತ್ರಜ್ಞರು ಮುಂಚೂಣಿ ಯೋಧರು : ಡಾ. ಎಂ.ವಿ ಅಶೋಕ್

ಭದ್ರಾವತಿಯಲ್ಲಿ ಯುವ ಚೈತನ್ಯ ವೇದಿಕೆ ವತಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಪ್ರಯೋಗಾಯ ತಂತ್ರಜ್ಞರಿಗೆ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ, ಅ. ೨೭: ಕೊರೋನ ಮಹಾಮಾರಿ ಉಲ್ಬಣಗೊಂಡಿದ್ದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿರುವ ಪ್ರಯೋಗಾಲಯ ತಂತ್ರಜ್ಞರು ಮುಂಚೂಣಿ ಯೋಧರಾಗಿದ್ದು, ಇವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹೇಳಿದರು.
    ನಗರದ ಯುವ ಚೈತನ್ಯ ವೇದಿಕೆ ವತಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಯೋಗಾಯ ತಂತ್ರಜ್ಞರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  
       ಕೊರೋನ ಮಹಾಮಾರಿ ರೂಪಾಂತರ ಹೊಂದಿ ಕಾಲಿಡುತ್ತಿರುವ ಕಾರಣ ಆರೋಗ್ಯ ಸಿಬ್ಬಂದಿ ಸೇರಿದಂತೆ ಎಲ್ಲಾ ವರ್ಗದ ಜನರು ಮೈಮರೆಯದೆ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಬೇಕು. ಲಸಿಕೆ ಹಾಕಿಸಿಕೊಳ್ಳದಿರುವವರು ನಿಗದಿತ ಕೇಂದ್ರಗಳಲ್ಲಿ ಕೂಡಲೇ ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದರು.
      ಯುವ ಚೈತನ್ಯ ವೇದಿಕೆಯ ಪ್ರಮುಖರಾದ ಎಸ್.ಆರ್ ಜಗದೀಶ್ ಮಾತನಾಡಿ, ವೇದಿಕೆ ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆಯುತ್ತಿದೆ. ಯುವ ಸಮುದಾಯದವರು ವೇದಿಕೆಗೆ ಹೆಚ್ಚಿನ ಸಹಕಾರ ನೀಡುತ್ತಿದ್ದು,  ಬಸ್ ನಿಲ್ದಾಣ, ಸಾರ್ವಜನಿಕ ಗ್ರಂಥಾಲಯ, ಶಾಲಾ-ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ, ಸಸಿ ನೆಡುವ ಮೂಲಕ ವನಮಹೋತ್ಸವ ಸೇರಿದಂತೆ ಹಲವಾರು ಸೇವಾ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
    ವೇದಿಕೆಯಲ್ಲಿ ಪ್ರಯೋಗಾಲಯ ತಂತ್ರಜ್ಞರ ಸಂಘದ ಜಿಲ್ಲಾ ಉಪಾಧ್ಯಕ್ಷ ಖಾನ್, ಸರ್ಕಾರಿ ಆಸ್ಪತ್ರೆಯ ಜಿ.ಐ ಗಣಪತಿ, ಹಿರಿಯ ಪ್ರಯೋಗಾಲಯ ತಂತ್ರಜ್ಞ ಮೋಹನ್, ಯುವ ಚೈತನ್ಯ ವೇದಿಕೆಯ ವೃಷಭ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಒಟ್ಟು ೩೫ ಪ್ರಯೋಗಾಲಯ ತಂತ್ರಜ್ಞರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ನಿರ್ಮಲ ಪ್ರಾರ್ಥಿಸಿ, ಎಸ್.ಆರ್ ಜಗದೀಶ್ ಸ್ವಾಗತಿಸಿದರು. ಸರ್ಕಾರಿ ಆಸ್ಪತ್ರೆ ಪ್ರಯೋಗಾಲಯ ತಂತ್ರಜ್ಞೆ  ಶಮಾ ಬಾನು ವಂದಿಸಿದರು.