ಭದ್ರಾವತಿ ನಗರಸಭೆ ನೂತನ ಚುನಾಯಿತ ಪ್ರತಿನಿಧಿಗಳ ಮೊದಲ ಸಾಮಾನ್ಯ ಸಭೆ ಶನಿವಾರ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಭದ್ರಾವತಿ, ನ. ೬: ನಗರಸಭೆ ನೂತನ ಚುನಾಯಿತ ಪ್ರತಿನಿಧಿಗಳ ಮೊದಲ ಸಾಮಾನ್ಯ ಸಭೆ ಶನಿವಾರ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಮೊದಲ ಸಭೆಯಲ್ಲಿಯೇ ಒಂದೆಡೆ ವಿವಿಧ ಇಲಾಖೆಗಳ ಅಧಿಕಾರಗಳ ವಿರುದ್ಧ ಸದಸ್ಯರೆಲ್ಲರೂ ಪಕ್ಷಬೇಧ ಮರೆತು ವಾಗ್ದಾಳಿ ನಡೆಸಿದ ಹಾಗು ಮತ್ತೊಂದೆಡೆ ಪ್ರತಿಭಟನೆ ಬಿಸಿ ಎದುರಾದ ಘಟನೆಗಳು ಕಂಡು ಬಂದವು.
ಸುಮಾರು ಎರಡೂವರೆ ವರ್ಷಗಳ ನಂತರ ನಗರಸಭೆಯಲ್ಲಿ ಜರುಗಿದ ಜನಪ್ರತಿನಿಧಿಗಳ ಮೊದಲ ಸಭೆ ಹಲವು ಕುತೂಹಲಗಳಿಗೆ ಕಾರಣವಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರು ಒಳಚರಂಡಿ ಕಾಮಗಾರಿ, ಕುಡಿಯುವ ನೀರಿನ ಪೂರೈಕೆ, ಉದ್ಯಾನವನ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜೊತೆಯಲ್ಲಿ ಗಾಂಜಾ ಸೇವನೆ, ಮಟ್ಕಾ, ಇಸ್ಪೀಟ್ ಜೂಜಾಟ ಸೇರಿದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು, ಮಹಿಳೆಯರು ಒಬ್ಬಂಟಿಯಾಗಿ ಸಂಚರಿಸುವುದು ಅಸಾಧ್ಯವಾಗಿದೆ. ಅಲ್ಲದೆ ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಜನಪ್ರತಿನಿಧಿಗಳಿಗಿಂತ ಮಧ್ಯವರ್ತಿಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಹೆಚ್ಚಿನ ಗೌರವ ನೀಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹುತೇಕ ಸದಸ್ಯರು ಮೊದಲ ಬಾರಿಗೆ ಆಯ್ಕೆಯಾಗಿದ್ದರೂ ಸಹ ಸಭೆಯಲ್ಲಿ ಅನುಭವ ಹೊಂದಿರುವವರಂತೆ ಸಮಸ್ಯೆಗಳ ಕುರಿತು ಪಕ್ಷ ಬೇಧ ಮರೆತು ಚರ್ಚಿಸಿದರು.
ಈ ನಡುವೆ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ಅವರ ೧೨ ಅಡಿ ಎತ್ತರದ ಹೊಸ ಪ್ರತಿಮೆಯನ್ನು ಪ್ರತಿಷ್ಠಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್ ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.