Tuesday, June 3, 2025

ಕೊಲೆ ಪ್ರಕರಣ : ಆರೋಪಿಗಳಿಗೆ ಜೀವಾವಧಿ ಶಿಕ್ಷೆ

    ಭದ್ರಾವತಿ:  ಜಮೀನು ವಿವಾದ ಸಂಬಂಧ ವ್ಯಕ್ತಿಯೋರ್ವನ ಮೇಲೆ ಮರಾಣಾಂತಿಕ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣರಾಗಿದ್ದ ೭ ಆರೋಪಿಗಳಿಗೆ ನಗರದ ೪ನೇ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಲಯದ ನ್ಯಾಯಾಧೀಶಿರಾದ ಇಂದಿರಾ ಮೈಲಸ್ವಾಮಿ ಚಿಟ್ಟಿಯರ್ ಮಂಗಳವಾರ ಸಂಜೆ ಜೀವಾವಧಿ ಶಿಕ್ಷಿವಿಧಿಸಿ ತೀರ್ಪು ನೀಡಿದರು.
    ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಭದ್ರಾಪುರದ ನಿವಾಸಿ ಕರಿಯಪ್ಪ ಎಂಬುವರಿಗೆ ಕೂಡ್ಲಿಯ ಸರ್ವೆ ನಂಬರ್ ೧೯೬ರಲ್ಲಿ ಜಮೀನಿದ್ದು, ಜಮೀನಿನ ಸಂಬಂಧ ಕರಿಯಪ್ಪರಿಗೂ ಹಾಗೂ ಆರೋಪಿಗಳ ನಡುವೆ ವಿವಾದ, ಮನಸ್ಥಾಪವಿತ್ತು.
    ೫ ಮಾರ್ಚ್ ೨೦೨೦ರಂದು ರಾತ್ರಿ ೯.೩೦ರ ಸಮಯದಲ್ಲಿ ಕರಿಯಪ್ಪನ ಮಗ ನಾಗರಾಜ ಹಾಗೂ ಇವರ ಜೊತೆ ಅರುಣ ಎಂಬುವರು ಜಮೀನಿನ ಭತ್ತದಗದ್ದೆಗೆ ನೀರು ಕಟ್ಟಲು ಹೋದಾಗ ಅಲ್ಲಿಗೆ ಎರಡು ಬೈಕ್‌ಗಳಲ್ಲಿ ಬಂದ ಆರೋಪಿ ಬಡ್ಡಿ ಪರಮೇಶಿ, ಜಗದೀಶ, ರಮೇಶ್, ಗೌತಮ, ಅಭಿಷೇಕ್, ವಿಕ್ರಂ, ಸಂಜಯ್‌ಎಂಬುವವರು ಕಬ್ಬಣದ ಪೈಪು ಮತ್ತಿತರ ಮಾರಾಕಾಸ್ತ್ರಗಳಿಂದ ನಾಗರಾಜ, ಅರುಣನ ಮೇಲೆ ಹಲ್ಲೆ ನಡೆಸಿದ್ದಾರೆ, ಘಟನಾಸ್ಥಳಕ್ಕೆ ಹೋಗಿ ಆರೋಪಿಗಳನ್ನು ತಡೆಯಲು ಯತ್ನಿಸಿದ ಕರಿಯಪ್ಪರ ಮೇಲೆ ಹಾಗೂ ಉಳಿದವರ ಮೇಲೆ ಆರೋಪಿಗಳು  ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.


    ಹಲ್ಲೆಯಿಂದಾಗಿ ಗಂಭೀರವಗಿ ಗಾಯಗೊಂಡಿದ್ದ ಕರಿಯಪ್ಪರನ್ನು ಶಿವಮೊಗ್ಗ ಮೆಗ್ಹಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕರಿಯಪ್ಪ ಮೃತಪಟ್ಟಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು.  ತನಿಖೆ ನಡೆಸಿದ ಪೋಲಿಸರು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ. ೩೦೨, ೩೦೭, ೩೨೪, ೩೨೩, ೩೪೧, ೫೦೪, ೧೪೨, ೧೪೭, ೫೦೬ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವೆಸಗಿದ್ದಾರೆಂದು ೪ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರ ಹಾಗೂ ಆರೋಪಿಗಳಪರ ವಕೀಲರ ವಾದ, ಪ್ರತಿವಾದಗಳನ್ನು ಆಲಿಸಿದ ನಂತರ ಆರೋಪಿಗಳ ಪೈಕಿ ೪ನೇ ಆರೋಪಿ ಮಂಜಪ್ಪ ಮತ್ತು  ೭ನೇ ಆರೋಪಿ ಶರತ್ ಎಂಬುವವರ ಮೇಲಿನ ಆರೋಪ ಸಾಭೀತಾಗದ ಕಾರಣ ಅವರಿಬ್ಬರ ಬಿಡುಗಡೆಗೆ ಆದೇಶಿಸಿ, ಉಳಿದ ಆರೋಪಿಗಳಾದ ಬಡ್ಡಿಪರಮೇಶಿ, ಜಗದೀಶ, ರಮೇಶ, ಗೌತಮ, ಅಭಿಷೇಕ್, ವಿಕ್ರಂ ಮತ್ತು ಸಂಜಯ್ ಅವರುಗಳ ಮೇಲಿನ ಆರೋಪ ಸಾಬೀತಾದ ಕಾರಣ ೭ ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗು ದಂಡ ವಿಧಿಸಿ ಆದೇಶಿಸಿದ್ದಾರೆ. 
    ಆರೋಪಿಗಳಿಂದ ಹತ್ಯೆಗೊಳಗಾದ ಕರಿಯಪ್ಪನ ಪತ್ನಿ ಗಂಗಮ್ಮರಿಗೆ ೩ ಲಕ್ಷ ಪರಿಹಾರ ಹಾಗು ಆರೋಪಿಗಳಿಂದ ಹಲ್ಲೆಗೊಳಗಾಗಿರುವ ನಾಗರಾಜ, ಅರುಣ, ವೀರಪ್ಪ, ಮನೋಹರ ಮತ್ತು ನಾಗರಾಜ ೫ ಮಂದಿಗೆ ತಲಾ ಒಂದೊಂದು ಲಕ್ಷ ಪರಿಹಾರ ಆರೋಪಿಗಳು ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ.ರತ್ಮಮ್ಮ ವಾದ ಮಂಡಿಸಿದ್ದರು. 

ಜೂ. ೪ ಮತ್ತು ೫ ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ : ಘಟಕ ೨ ನಗರ ಉಪವಿಭಾಗ ಶಾಖಾ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ಕಂಬಗಳನ್ನು ಬದಲಾವಣೆ ಮಾಡುವ ಕೆಲಸ ಹಮ್ಮಿಕೊಂಡಿರುವುದರಿಂದ ಜೂ.೪ ಮತ್ತು ೫ ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಸಿ.ಎನ್.ರಸ್ತೆ, ಡಬ್ಬಲ್ ಟಾಕೀಸ್ ರೋಡ್, ರಂಗಪ್ಪ ಸರ್ಕಲ್, ಮಾರ್ಕೆಟ್, ಬಸವೇಶ್ವರ ವೃತ್ತ, ಎನ್‌ಎಸ್‌ಟಿ ರೋಡ್, ಭೂತನಗುಡಿ, ಮಾಧವನಗರ, ಗಾಂಧಿ ವೃತ್ತ, ಕೋಡಿಹಳ್ಳಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ. 

ಜೂ.೪ರಂದು ಮೆಸ್ಕಾಂ ಜನ ಸಂಪರ್ಕ ಸಭೆ



    ಭದ್ರಾವತಿ : ಮೆಸ್ಕಾಂ ಗ್ರಾಮೀಣ ಉಪ ವಿಭಾಗದ ವತಿಯಿಂದ ಜೂ.೪ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ. 
    ಗ್ರಾಮೀಣ ಉಪ ವಿಭಾಗದ ಕಛೇರಿಯಲ್ಲಿ ನಡೆಯಲಿರುವ ಸಭೆ ಅಧ್ಯಕ್ಷತೆಯನ್ನು ಅಧೀಕ್ಷಕ ಇಂಜಿನಿಯರ್‌ರವರು ವಹಿಸಲಿದ್ದು, ತಾಲೂಕಿನ ಕಾರೇಹಳ್ಳಿ, ಬಾರಂದೂರು, ಅಂತರಗಂಗೆ, ದೊಡ್ಡೇರಿ, ಬಿ.ಆರ್‌ಪಿ, ದೊಣಬಘಟ್ಟ, ತಡಸ, ಬಿಳಿಕಿ, ಅರಳಿಕೊಪ್ಪ, ಕಂಬದಾಳ್, ಹೊಸೂರು, ಅರಳಿಹಳ್ಳಿ, ಕೂಡ್ಲಿಗೆರೆ, ಅತ್ತಿಗುಂದ, ವೀರಾಪುರ, ಕಲ್ಲಹಳ್ಳಿ ಸುತಮುತ್ತಲಿನ ಪ್ರದೇಶಗಳ ವ್ಯಾಪ್ತಿಯ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ಕುಂದುಕೊರತೆ, ಅಹವಾಲುಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.

ಲ್ಯಾಟರಲ್ ಎಂಟ್ರಿ ಮುಖಾಂತರ ೨ನೇ/೩ನೇ ವರ್ಷದ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ


    ಭದ್ರಾವತಿ  ೨೦೨೫-೨೬ನೇ ಸಾಲಿನಲ್ಲಿ ೨ ವರ್ಷಗಳ ಐ.ಟಿ.ಐ/ ದ್ವಿತೀಯ ಪಿ.ಯು.ಸಿ.(ವಿಜ್ಞಾನ)/ದ್ವಿತೀಯ ಪಿ.ಯು.ಸಿ(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮುಖಾಂತರ ೨ನೇ /೩ನೇ ವರ್ಷದ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ನಗರದ ನ್ಯೂಟೌನ್ ವಿ.ಐ.ಎಸ್.ಎಸ್.ಜೆ ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ಆಫ್-ಲೈನ್ ಮೂಲಕ ಪ್ರವೇಶ ಅರ್ಜಿ ಆಹ್ವಾನಿಸಲಾಗಿದೆ. 
    (೧) ಸಿವಿಲ್ ಇಂಜಿನಿಯರಿಂಗ್, (೨) ಎಲೆಕ್ನಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, (೩)ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು (೪)ಮೆಟಲರ್ಜಿ ಇಂಜಿನಿಯರಿಂಗ್ ವಿಭಾಗಗಳು ಲಭ್ಯವಿರುತ್ತವೆ. ೨ ವರ್ಷಗಳ ಐ.ಟಿ.ಐ. / ದ್ವಿತೀಯ ಪಿ.ಯು.ಸಿ.(ವಿಜ್ಞಾನ)/ದ್ವಿತೀಯ ಪಿ.ಯು.ಸಿ.(ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮುಖಾಂತರ ೨ನೇ ವರ್ಷದ/೩ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ಆಫ್-ಲೈನ್ ಮೂಲಕ ಪ್ರವೇಶ ಪಡೆಯಲು ಆಹ್ವಾನಿಸಲಾಗಿದೆ. ಮೇ.೨೯ ರಿಂದ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿದ್ದು, ಇಚ್ಛೆಯುಳ್ಳ ವಿದ್ಯಾರ್ಥಿಗಳು ಪಾಲಿಟೆಕ್ನಿಕ್‌ಗೆ ಸಂಸ್ಥೆಗೆ ಖುದ್ದಾಗಿ ಬಂದು ಪ್ರವೇಶ ಅರ್ಜಿಯನ್ನು ಪಡೆದು ಜೂ. ೧೪ರೊಳಗೆ ಸಲ್ಲಿಸಲು ತಿಳಿಸಲಾಗಿದೆ.  
    ಭರ್ತಿ ಮಾಡಿದ ಅರ್ಜಿಯನ್ನು ಅಭ್ಯರ್ಥಿಗಳು ಖುದ್ದಾಗಿ ಪ್ರಾಂಶುಪಾಲರಿಗೆ ಸಲ್ಲಿಸಲು ಅಂತಿಮ ದಿನಾಂಕ ಜೂ.೧೪ರ ಸಂಜೆ ೫ ಗಂಟೆಯೊಳಗೆ ಕಾಲವಕಾಶವಿದ್ದು, ದಿನಾಂಕ ಜೂ.೧೬ ಸಂಜೆ ೫:೩೦ರ ನಂತರ ಅಂತಿಮ ಮೆರಿಟ್ ಪಟ್ಟಿ ಪ್ರಕಟಣೆಯಾಗಲಿದೆ. ಆಫ್‌ಲೈನ್ ಮೂಲಕ ಮೆರಿಟ್ ಆಧಾರದ ಮೇರೆಗೆ ನಿಯಮಗಳ ಅನುಸಾರ ಸೀಟು ಹಂಚಿಕೆ ಮಾಡಲಾಗುವುದರಿಂದ ಅಭ್ಯರ್ಥಿಗಳು ಅರ್ಹ ಮೂಲ ದಾಖಲಾತಿಗಳು ಹಾಗೂ ನಿಗದಿತ ಶುಲ್ಕದೊಂದಿಗೆ ಖುದ್ದಾಗಿ ಹಾಜರಿದ್ದು,  ಜೂ.೧೭ ಅಥವಾ ೧೮ರಂದು ಪ್ರವೇಶ ಪಡೆಯಬಹುದಾಗಿದೆ. 
    ಹೆಚ್ಚಿನ ಮಾಹಿತಿಯನ್ನು ಪಾಲಿಟೆಕ್ನಿಕ್ ಕಛೇರಿ ವೇಳೆಯಲ್ಲಿ ಪಡೆಯಬಹುದಾಗಿದೆ. ಪ್ರಾಂಶುಪಾಲರು/ಕಛೇರಿ ಮೊ: ೮೭೬೨೭೧೭೧೯೬, ೮೮೬೧೯೩೧೫೩೯, ೭೯೭೫೦೪೧೧೩೪, ೯೯೮೬೪೦೬೯೪೧, ೭೨೫೯೩೪೪೨೦೩, ೯೪೮೧೫೦೧೦೦೧, ೯೭೩೧೨೮೩೮೬೮ ಇವರನ್ನು ಸಂಪರ್ಕಿಸಬಹುದಾಗಿದೆ. 

ವೀರಶೈವ ಲಿಂಗಾಯತ ಮಹಿಳಾ ಸಮಾಜದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಭದ್ರಾವತಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಈ ಬಾರಿ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 
    ಭದ್ರಾವತಿ :  ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಈ ಬಾರಿ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 
    ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದ ಶ್ರೀ ಬನಶಂಕರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾಜದ ಸರ್ವ ಸದಸ್ಯರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಪ್ರೇರೇಪಿಸಲಾಯಿತು. 
    ಸಮಾಜದ ಗೌರವ ಸಲಹೆಗಾರರಾದ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಪ್ರತಿಭಾ ಪುರಸ್ಕಾರದ ಉದ್ದೇಶ ಹಾಗು ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. 
    ಸಮಾಜದ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ವಾಗೀಶ್ ಕೋಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರಧಾನ ಕಾರ್ಯದರ್ಶಿ ಕುಸುಮಾ ತೀರ್ಥಯ್ಯ ವಾರ್ಷಿಕ ವರದಿ ಹಾಗು ಖಜಾಂಚಿಯಾದ ಪರಿಮಳ ರೋಹಿತ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. 
    ಸಮಾಜದ ಗೌರವಾಧ್ಯಕ್ಷೆ ಆರ್ ಎಸ್ ಶೋಭಾ, ಉಪಾಧ್ಯಕ್ಷೆ ನಾಗರತ್ನ ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕವಿತಾ ಅಶೋಕ್ ಮತ್ತು ಮಮತ ಪ್ರಕಾಶ್ ಪ್ರಾರ್ಥಿಸಿದರು. ನಗರಸಭೆ ಸದಸ್ಯೆ ಅನುಪಮಾ ಚನ್ನೇಶ್ ಕಾರ್ಯಕ್ರಮ ನಿರೂಪಿಸಿ, ಶಶಿಕಲಾ ಉದಯಕುಮಾರ್ ವಂದಿಸಿದರು.