Wednesday, January 27, 2021

ಹಗಲಿರುಳು ಹೋರಾಟ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಸ್ಪಂದಿಸದಿರುವುದು ಖಂಡನೀಯ : ಬಿ.ಎನ್ ರಾಜು

ಜ.೨೮ರಂದು ನಗರಕ್ಕೆ ಆಗಮಿಸಲಿರುವ ಸಂಸದರು ಅಂಬೇಡ್ಕರ್ ಭವನ ಕಾಮಗಾರಿ ವೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳಲಿ

ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಬುಧವಾರ ಪತ್ರಿಕಾಗೋಷ್ಠಿ ನಡೆಸಲಾಯಿತು
ಭದ್ರಾವತಿ, ಜ. ೨೭: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.೧೧ರಿಂದ ತಾಲೂಕು ಕಛೇರಿ ಮುಂಭಾಗ ಹಗಲಿರುಳು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸಹ ಮುಖ್ಯಮಂತ್ರಿಗಳಾಗಲಿ, ಸಂಸದರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಸ್ಪಂದಿಸದಿರುವುದು ಖಂಡನೀಯ. ತಕ್ಷಣ ಧರಣಿ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಎಚ್ಚರಿಸಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದೇಶಕ್ಕೆ ಆಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ಎಷ್ಟೋ ಮುಖ್ಯವೋ,  ಪ್ರಪಂಚದಲ್ಲಿ ಮನುಕುಲಕ್ಕೆ ಮಾನವೀಯತೆಯ ಸಮಾನತೆ ಸಂದೇಶ ಸಾರಿದ ಭೀಮ ಮಂದಿರಗಳು ಸಹ ಅಷ್ಟೇ ಮುಖ್ಯವಾಗಿವೆ. ಭೀಮ ಎಂದರೆ ಡಾ. ಭೀಮರಾವ್ ಅಂಬೇಡ್ಕರ್, ಭೀಮ ಮಂದಿರ ಎಂದರೆ ಶಾಲಾ-ಕಾಲೇಜುಗಳು, ಗ್ರಂಥಾಲಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಭವನಗಳು, ವಿಶ್ವವಿದ್ಯಾನಿಲಯಗಳಾಗಿವೆ ಎಂದರು.
ದಲಿತ ಚಳುವಳಿ ಹುಟ್ಟಿದ ಈ ಕ್ಷೇತ್ರದಲ್ಲಿ ಕಳೆದ ಸುಮಾರು ೨೫ ವರ್ಷಗಳಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದು, ಕೊನೆಗೂ ಹೋರಾಟಕ್ಕೆ ಒಂದು ಹಂತದಲ್ಲಿ ಫಲ ಲಭಿಸಿದ ಪರಿಣಾಮ ೨೦೧೭ರಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಆದರೆ ಕಾಮಗಾರಿ ಪೂರ್ಣಗೊಳ್ಳದೆ ಪ್ರಸ್ತುತ ಸ್ಥಗಿತಗೊಂಡಿದೆ. ಇದನ್ನು ಖಂಡಿಸಿ ಸಮಿತಿವತಿಯಿಂದ ಹೋರಾಟ ನಡೆಸಲಾಗುತ್ತಿದೆ. ತಕ್ಷಣ ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಿರುವ ೫.೫೦ ಕೋ. ರು. ಬಿಡುಗಡೆಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಮುಕ್ತಾಯಗೊಳಿಸಬೇಕು. ಅಲ್ಲದೆ ನೂತನ ಭವನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಉದ್ಘಾಟಿಸಬೇಕೆಂದು ಆಗ್ರಹಿಸಿದರು.
ತಾಲೂಕಿನ ನವಲೆ ಬಸಾಪುರ ಗ್ರಾಮದಲ್ಲಿ ಬಡವರಿಗೆ ನಿವೇಶನ ಹಾಗು ಸ್ಮಶಾಣ ಭೂಮಿ ಇಲ್ಲದಿರುವುದನ್ನು ಸಮಿತಿ ಖಂಡಿಸುತ್ತದೆ. ಅಲ್ಲದೆ ತಾಲೂಕಿನ ಹೊಳೆಹೊನ್ನೂರು ಕಲ್ಲಾಪುರದ ರಂಗಾಪುರ ಗ್ರಾಮದ ಸರ್ವೆ ನಂ.೧ರಲ್ಲಿ ೭೪ ಎಕರೆ ೧೬ ಗುಂಟೆ ಜಮೀನಿದ್ದು, ಹಲವಾರು ವರ್ಷಗಳಿಂದ ೨೪ ಕುಟುಂಬದ ರೈತರು ಸಾಗುವಳಿ ಮಾಡುತ್ತಿದ್ದು, ಇವರನ್ನು ಅಕ್ರಮವಾಗಿ ಬಂಧಿಸಿ ಜೈಲಿಗೆ ಕಳುಹಿಸುವ ಜೊತೆಗೆ ಶ್ರೀಮಂತರಿಗೆ ಜಮೀನು ಮಂಜೂರು ಮಾಡಲಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಉಳಿದಿರುವ ೪೪ ಎಕರೆ ಜಮೀನಿನಲ್ಲಿ ೨೪ ಕುಟುಂಬದ ರೈತರಿಗೆ ಜಮೀನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಗಲಿರುಳು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸಹ ಸಂಸದರು ಸ್ಪಂದಿಸದಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಧರಣಿ ಸತ್ಯಾಗ್ರಹ ನಡೆಯುತ್ತಿರುವ ಸ್ಥಳದ ಸಮೀಪದಲ್ಲೇ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನ ಉದ್ಘಾಟನೆಗೆ ಜ.೨೮ರ ಗುರುವಾರ ಬೆಳಿಗ್ಗೆ ಸಂಸದರು ಆಗಮಿಸಲಿದ್ದಾರೆಂಬ ವಿಚಾರ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸಂಸದರು ಅಂಬೇಡ್ಕರ್ ಭವನ ಕಾಮಗಾರಿಯನ್ನು ವೀಕ್ಷಿಸಿ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಲು ಮುಂದಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸಮಿತಿ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಖಚಿತ ಎಂದರು.
ಸಮಿತಿ ಪ್ರಮುಖರಾದ ಆರ್. ಬಸವರಾಜ್, ಐ.ಎಲ್ ಅರುಣ್‌ಕುಮಾರ್, ಎಂ.ವಿ ಚಂದ್ರಶೇಖರ್, ಸುಬ್ಬೇಗೌಡ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನವೀಕರಣಗೊಂಡ ಪಿಎಲ್‌ಡಿ ಬ್ಯಾಂಕ್ ಕಟ್ಟಡ, ನೂತನ ಮಳಿಗೆ ಉದ್ಘಾಟನೆ

ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ನವೀಕರಣಗೊಂಡ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕಟ್ಟಡ ಮತ್ತು ನೂತನ ಮಳಿಗೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
     ಭದ್ರಾವತಿ, ಜ. ೨೭: ನಗರದ ಸಿ.ಎನ್ ರಸ್ತೆಯಲ್ಲಿರುವ ನವೀಕರಣಗೊಂಡ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕಟ್ಟಡ ಮತ್ತು ನೂತನ ಮಳಿಗೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
     ಬ್ಯಾಂಕಿನ ಅಧ್ಯಕ್ಷ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಲವೇಶ್‌ಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಲೋಕೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್.ಕುಮಾರ್, ಬ್ಯಾಂಕಿನ ಉಪಾಧ್ಯಕ್ಷೆ ಎ.ಬಿ ಆಶಾ, ನಿರ್ದೇಶಕರಾದ ಜಿ.ಎಂ ಚನ್ನಬಸಪ್ಪ, ವಿರೂಪಾಕ್ಷಪ್ಪ, ಕೆ. ಮಂಜಪ್ಪ, ಗೋಪಾಲಪ್ಪ ಮತ್ತು ಟಿ.ಎಸ್ ರಂಗಸ್ವಾಮಿ, ಬ್ಯಾಂಕಿನ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜ.೨೮ ನೂತನ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನ ಉದ್ಘಾಟನೆ

ಭದ್ರಾವತಿ, ಜ. ೨೭: ಹಳೇನಗರದ ವೀರಶೈವ ಸೇವಾ ಸಮಿತಿ ವತಿಯಿಂದ ಜ.೨೮ರ ಬೆಳಿಗ್ಗೆ ೧೧ ಗಂಟೆಗೆ ಕರ್ನಾಟಕ ನೀರಾವರಿ ನಿಗಮದ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದ ಉದ್ಘಾಟನೆ ನಡೆಯಲಿದೆ.
   ಬಳ್ಳಾರಿ ಜಿಲ್ಲೆಯ ಉಜ್ಜಯನಿ ಪೀಠದ ಶ್ರೀ ೧೦೦೮ ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದು, ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮತ್ತು ಹಾರ‍್ನಹಳ್ಳಿ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು.
    ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಲಿದ್ದು, ಶಾಸಕರಾದ ಬಿ.ಕೆ ಸಂಗಮೇಶ್ವರ್, ಎಸ್. ರುದ್ರೇಗೌಡ, ನಗರಸಭೆ ಪೌರಾಯುಕ್ತ ಮನೋಹರ್,  ಸೂಡಾ ಅಧ್ಯಕ್ಷ ಎಸ್.ಎಸ್  ಜ್ಯೋತಿಪ್ರಕಾಶ್, ಗಿರೀಶ್‌ಪಟೇಲ್, ಕೂಡ್ಲಿಗೆರೆ ಹಾಲೇಶ್, ಮಂಗೋಟೆ ರುದ್ರೇಶ್, ಬಿ.ಎಸ್ ನಾಗರಾಜ್, ಎಸ್. ಅಡವೀಶಯ್ಯ, ಆರ್.ಎಸ್ ಶೋಭಾ, ಕೆ.ಸಿ ವೀರಭದ್ರಪ್ಪ, ಪಿ.ಎಸ್ ಅವಿನಾಶ್, ಬಿ.ಕೆ ಜಗನ್ನಾಥ, ಎಸ್.ಎಸ್ ಜಗದೀಶ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
   ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

ಆಂಗ್ಲ ಭಾಷೆ ಕೇವಲ ವ್ಯವಹಾರಿಕ ಭಾಷೆಯಾಗಲಿ, ಕನ್ನಡ ಬದುಕಿನ ಭಾಷೆಯಾಗಲಿ

ತಾಲೂಕು ೮ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿ. ಮೇಘ ಉದ್ಘಾಟನಾ ನುಡಿ

ಭದ್ರಾವತಿ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ೮ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಈಶ್ವರಮ್ಮ ಪ್ರೌಢಶಾಲೆ ೧೦ನೇ ತರಗತಿ ವಿದ್ಯಾರ್ಥಿನಿ ಬಿ. ಮೇಘ ಉದ್ಘಾಟಿಸಿದರು.
    ಭದ್ರಾವತಿ, ಜ. ೨೭: ಆಂಗ್ಲ ಭಾಷೆಯನ್ನು ಕೇವಲ ವ್ಯವಹಾರಿಕ ಭಾಷೆಯಾಗಿ ಬಳಸಿ ಮಾತೃ ಭಾಷೆ ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ನೀಡುವ ಜೊತೆಗೆ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕೆಂದು ನಗರದ ನ್ಯೂಟೌನ್ ಈಶ್ವರಮ್ಮ ಪ್ರೌಢಶಾಲೆ ೧೦ನೇ ತರಗತಿ ವಿದ್ಯಾರ್ಥಿನಿ ಬಿ. ಮೇಘ ತಿಳಿಸಿದರು.
ಅವರು ಬುಧವಾರ  ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ೮ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
     ಕನ್ನಡ ಭಾಷೆಗೆ ತನ್ನದೇ ಆದ ಭವ್ಯ ಪರಂಪರೆ, ವಿಶಿಷ್ಟತೆ ಇದ್ದು, ನಾಡಿನಲ್ಲಿ ಅನೇಕ ಸಾಹಿತಿಗಳು, ಕವಿಗಳು, ಕಾದಂಬರಿಕಾರರು ಸೇರಿದಂತೆ ಅನೇಕ ಮಹನಿಯರು ಕನ್ನಡ ಭಾಷೆ ಮೆರಗನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳು ಮಾತೃ ಭಾಷೆ ಕನ್ನಡಕ್ಕೆ  ಹೆಚ್ಚಿನ ಒತ್ತು ನೀಡಿ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಾಗಿ ಬಳಸಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದರು.
    ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಅಥವಾ ಇನ್ನೊಬ್ಬರಿಂದ ಪ್ರಶಂಸೆಗೆ ಒಳಗಾಗಬೇಕೆಂಬ ಉದ್ದೇಶದಿಂದ ಆರಂಭಿಸಿಲ್ಲ ಬದಲಾಗಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭಿಸಲಾಗಿದೆ. ನಮ್ಮ ಪ್ರಯತ್ನ ಯಶಸ್ವಿಯಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳು ಗುರುತಿಸಿಕೊಂಡಿದ್ದಾರೆ ಎಂದರು.
ಶ್ರೀ ಕ್ಷೇತ್ರ ಆದಿಚುಂಚನಗಿರಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥಸ್ವಾಮೀಜಿ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿದ್ದರು. ಎಸ್‌ಎವಿ ಶಾಲೆ ೧೦ನೇ ತರಗತಿ ವಿದ್ಯಾರ್ಥಿನಿ ಭುವನಶ್ರೀ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.
    ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ  ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಬಿ. ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಪ್ರಾಂಶುಪಾಲೆ ಡಾ. ಹರಿಣಾಕ್ಷಿ ಸ್ವಾಗತಿಸಿದರು.