ಜ.೨೮ರಂದು ನಗರಕ್ಕೆ ಆಗಮಿಸಲಿರುವ ಸಂಸದರು ಅಂಬೇಡ್ಕರ್ ಭವನ ಕಾಮಗಾರಿ ವೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳಲಿ
ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಬುಧವಾರ ಪತ್ರಿಕಾಗೋಷ್ಠಿ ನಡೆಸಲಾಯಿತು
ಭದ್ರಾವತಿ, ಜ. ೨೭: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.೧೧ರಿಂದ ತಾಲೂಕು ಕಛೇರಿ ಮುಂಭಾಗ ಹಗಲಿರುಳು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸಹ ಮುಖ್ಯಮಂತ್ರಿಗಳಾಗಲಿ, ಸಂಸದರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಸ್ಪಂದಿಸದಿರುವುದು ಖಂಡನೀಯ. ತಕ್ಷಣ ಧರಣಿ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಎಚ್ಚರಿಸಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದೇಶಕ್ಕೆ ಆಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ಎಷ್ಟೋ ಮುಖ್ಯವೋ, ಪ್ರಪಂಚದಲ್ಲಿ ಮನುಕುಲಕ್ಕೆ ಮಾನವೀಯತೆಯ ಸಮಾನತೆ ಸಂದೇಶ ಸಾರಿದ ಭೀಮ ಮಂದಿರಗಳು ಸಹ ಅಷ್ಟೇ ಮುಖ್ಯವಾಗಿವೆ. ಭೀಮ ಎಂದರೆ ಡಾ. ಭೀಮರಾವ್ ಅಂಬೇಡ್ಕರ್, ಭೀಮ ಮಂದಿರ ಎಂದರೆ ಶಾಲಾ-ಕಾಲೇಜುಗಳು, ಗ್ರಂಥಾಲಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಭವನಗಳು, ವಿಶ್ವವಿದ್ಯಾನಿಲಯಗಳಾಗಿವೆ ಎಂದರು.
ದಲಿತ ಚಳುವಳಿ ಹುಟ್ಟಿದ ಈ ಕ್ಷೇತ್ರದಲ್ಲಿ ಕಳೆದ ಸುಮಾರು ೨೫ ವರ್ಷಗಳಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದು, ಕೊನೆಗೂ ಹೋರಾಟಕ್ಕೆ ಒಂದು ಹಂತದಲ್ಲಿ ಫಲ ಲಭಿಸಿದ ಪರಿಣಾಮ ೨೦೧೭ರಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಆದರೆ ಕಾಮಗಾರಿ ಪೂರ್ಣಗೊಳ್ಳದೆ ಪ್ರಸ್ತುತ ಸ್ಥಗಿತಗೊಂಡಿದೆ. ಇದನ್ನು ಖಂಡಿಸಿ ಸಮಿತಿವತಿಯಿಂದ ಹೋರಾಟ ನಡೆಸಲಾಗುತ್ತಿದೆ. ತಕ್ಷಣ ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಿರುವ ೫.೫೦ ಕೋ. ರು. ಬಿಡುಗಡೆಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಮುಕ್ತಾಯಗೊಳಿಸಬೇಕು. ಅಲ್ಲದೆ ನೂತನ ಭವನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಉದ್ಘಾಟಿಸಬೇಕೆಂದು ಆಗ್ರಹಿಸಿದರು.
ತಾಲೂಕಿನ ನವಲೆ ಬಸಾಪುರ ಗ್ರಾಮದಲ್ಲಿ ಬಡವರಿಗೆ ನಿವೇಶನ ಹಾಗು ಸ್ಮಶಾಣ ಭೂಮಿ ಇಲ್ಲದಿರುವುದನ್ನು ಸಮಿತಿ ಖಂಡಿಸುತ್ತದೆ. ಅಲ್ಲದೆ ತಾಲೂಕಿನ ಹೊಳೆಹೊನ್ನೂರು ಕಲ್ಲಾಪುರದ ರಂಗಾಪುರ ಗ್ರಾಮದ ಸರ್ವೆ ನಂ.೧ರಲ್ಲಿ ೭೪ ಎಕರೆ ೧೬ ಗುಂಟೆ ಜಮೀನಿದ್ದು, ಹಲವಾರು ವರ್ಷಗಳಿಂದ ೨೪ ಕುಟುಂಬದ ರೈತರು ಸಾಗುವಳಿ ಮಾಡುತ್ತಿದ್ದು, ಇವರನ್ನು ಅಕ್ರಮವಾಗಿ ಬಂಧಿಸಿ ಜೈಲಿಗೆ ಕಳುಹಿಸುವ ಜೊತೆಗೆ ಶ್ರೀಮಂತರಿಗೆ ಜಮೀನು ಮಂಜೂರು ಮಾಡಲಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಉಳಿದಿರುವ ೪೪ ಎಕರೆ ಜಮೀನಿನಲ್ಲಿ ೨೪ ಕುಟುಂಬದ ರೈತರಿಗೆ ಜಮೀನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಗಲಿರುಳು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸಹ ಸಂಸದರು ಸ್ಪಂದಿಸದಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಧರಣಿ ಸತ್ಯಾಗ್ರಹ ನಡೆಯುತ್ತಿರುವ ಸ್ಥಳದ ಸಮೀಪದಲ್ಲೇ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನ ಉದ್ಘಾಟನೆಗೆ ಜ.೨೮ರ ಗುರುವಾರ ಬೆಳಿಗ್ಗೆ ಸಂಸದರು ಆಗಮಿಸಲಿದ್ದಾರೆಂಬ ವಿಚಾರ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸಂಸದರು ಅಂಬೇಡ್ಕರ್ ಭವನ ಕಾಮಗಾರಿಯನ್ನು ವೀಕ್ಷಿಸಿ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಲು ಮುಂದಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸಮಿತಿ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಖಚಿತ ಎಂದರು.
ಸಮಿತಿ ಪ್ರಮುಖರಾದ ಆರ್. ಬಸವರಾಜ್, ಐ.ಎಲ್ ಅರುಣ್‌ಕುಮಾರ್, ಎಂ.ವಿ ಚಂದ್ರಶೇಖರ್, ಸುಬ್ಬೇಗೌಡ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
No comments:
Post a Comment