Thursday, October 8, 2020

ಎಸ್‌ಬಿಐ ನವೀಕೃತಗೊಂಡ ಶಾಖಾ ಕಛೇರಿ ಉದ್ಘಾಟನೆ


ದೇಶದ ಬಹುದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರದ ಪ್ರಧಾನ ಶಾಖಾ ಕಛೇರಿಯ ನವೀಕೃತಗೊಂಡ ಕಟ್ಟಡ ಉದ್ಘಾಟನೆ ಗುರುವಾರ ನಡೆಯಿತು.
ಭದ್ರಾವತಿ, ಅ. ೮:  ದೇಶದ ಬಹುದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರದ ಪ್ರಧಾನ ಶಾಖಾ ಕಛೇರಿಯ ನವೀಕೃತಗೊಂಡ ಕಟ್ಟಡ ಉದ್ಘಾಟನೆ ಗುರುವಾರ ನಡೆಯಿತು.
     ನಗರದ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಶಾಖಾ ಕಛೇರಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಸ್ಟೇಟ್ ಬ್ಯಾಂಕ್ ಮೈಸೂರು ಕೆಲವು ವರ್ಷಗಳ ಹಿಂದೆ ಸ್ಟೇಟ್ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನಗೊಂಡ ಹಿನ್ನಲೆಯಲ್ಲಿ ಶಿಥಿಲಗೊಂಡ ಕಟ್ಟಡವನ್ನು ನವೀಕರಣಗೊಳಿಸುವ ಕಾರ್ಯ ಕೈಗೊಳ್ಳಲಾಗಿತ್ತು.
     ನವೀಕೃತಗೊಂಡ ಕಟ್ಟಡವನ್ನು ಆರ್.ಬಿ.ಓ-೪, ಎ.ಓ-೬, ಶಿವಮೊಗ್ಗ ವಲಯ ವ್ಯವಸ್ಥಾಪಕ ಟಿ. ರಾಮರಾವ್ ಉದ್ಘಾಟಿಸಿದರು. ನವೀಕೃತಗೊಂಡ ಕಚೇರಿಯಲ್ಲಿ ಗ್ರಾಹಕರಿಗೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಒದಗಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಬ್ಯಾಂಕಿನ ಸಿಬ್ಬಂದಿಗಳು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು, ಗ್ರಾಹಕರು ಸೇರಿದಂತೆ ಎಲ್ಲರೂ ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಬೇಕೆಂದು ರಾಮರಾವ್ ಮನವಿ ಮಾಡಿದರು.
      ವಿಐಎಸ್‌ಎಲ್ ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್, ಬ್ಯಾಂಕಿನ ಉಪ ವ್ಯವಸ್ಥಾಪಕ ನಾಗರಾಜ್, ಸಿಬ್ಬಂದಿಗಳಾದ ಹೇಮಂತ್, ಸೂರಜ್, ಸರಸ, ಗೀತಾಂಜಲಿ, ರಾಘವೇಂದ್ರ ಗಡ್ಕರ್, ರಮೇಶ್, ಉಮೇಶ್‌ನಾಯ್ಕ್, ಸುಶ್ಮಿತಾ ಭಟ್, ಸುರೇಶ್‌ಕುಮಾರ್, ಭದ್ರತಾ ಸಿಬ್ಬಂದಿಗಳಾದ ಸಂಪತ್, ಗುರುರಾಜ್, ವಿನೋದ್, ಗ್ರಾಹಕರಾದ ದಾಮೋದರ ಬಾಳಿಗ, ಕೆ.ಸಿ ವೀರಭದ್ರಪ್ಪ, ತೀರ್ಥಪ್ಪ ಸೇರಿದಂತೆ ಉಪಸ್ಥಿತರಿದ್ದರು.

ಹತ್ರಾಸ್ ಅತ್ಯಾಚಾರ ಘಟನೆಗೆ ಎಸ್‌ಡಿಪಿಐ ಖಂಡನೆ :

ಉತ್ತರ ಪ್ರದೇಶ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಉತ್ತರ ಪ್ರದೇಶ ಹತ್ರಾಸ್ ಅತ್ಯಾಚಾರ ಘಟನೆಯನ್ನು ಖಂಡಿಸಿ ಗುರುವಾರ ಭದ್ರಾವತಿಯಲ್ಲಿ ತಾಲೂಕು ಕಛೇರಿ ಮುಂಭಾಗ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಶಾಖೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಅ. ೮: ಕೇಂದ್ರ ಹಾಗು ಉತ್ತರ ಪ್ರದೇಶ ಸರ್ಕಾರಗಳು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿವೆ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಮುಖಂಡರು ಆರೋಪಿಸಿದರು.
     ಉತ್ತರ ಪ್ರದೇಶ ಹತ್ರಾಸ್ ಅತ್ಯಾಚಾರ ಘಟನೆಯನ್ನು ಖಂಡಿಸಿ ಗುರುವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವ ನೆಪದಲ್ಲಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ರಕ್ಷಣೆ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಮಹಿಳೆಯರ ರಕ್ಷಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ದೇಶದಲ್ಲಿ ಒಂದು ಕೆಟ್ಟ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
        ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯದರ್ಶಿ ಮಹಮ್ಮದ್ ಗೌಸ್, ಸದಸ್ಯರಾದ ಇಮ್ರಾನ್ ಖಾನ್, ಫೈರೋಜ್, ಮುಸ್ವೀರ್ ಬಾಷಾ, ಮತೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.