Wednesday, June 16, 2021

ಶಿಕ್ಷಕರಿಗೆ, ಕಟ್ಟಡ ಕಾರ್ಮಿಕರಿಗೆ ಕೋವಿಡ್-೧೯ ಲಸಿಕೆ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಹಾಗು ಕಟ್ಟಡ ಕಾರ್ಮಿಕರಿಗೆ ಕೋವಿಡ್-೧೯ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಭದ್ರಾವತಿ, ಜೂ. ೧೬: ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಹಾಗು ಕಟ್ಟಡ ಕಾರ್ಮಿಕರಿಗೆ ಕೋವಿಡ್-೧೯ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
   ಶಿವ ಸಾಯಿ ಕೃಪ ಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರಿಗೆ ಹಾಗು ಕಟ್ಟಡ ಕಾರ್ಮಿಕರಿಗೆ ಲಸಿಕೆ ನೀಡಲಾಯಿತು. ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಗೌರವಾಧ್ಯಕ್ಷ ಸುರೇಶ್‌ಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಅಭಿಲಾಷ್, ಶಿವಲಿಂಗೇಗೌಡ, ಸೌಮ್ಯ ಪ್ರಭಾಕರ ಬೀರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಗಾಂಜಾ ಹಾವಳಿ ; ಸಂಸದ ಎ. ನಾರಾಯಣಸ್ವಾಮಿ ಕಳವಳ

ಸಂಸದ ಎ. ನಾರಾಯಣಸ್ವಾಮಿ
   ಭದ್ರಾವತಿ, ಜೂ. ೧೬: ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು, ಇದರಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ. ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಗಾಂಜಾ ಅಮಲಿನಲ್ಲಿ ಯುವಕರು ನಡೆಸಿರುವ ಹಲ್ಲೆ ಪರಿಣಾಮ ನಗರಸಭೆ ಗುತ್ತಿಗೆ ಪೌರ ನೌಕರ ಸುನಿಲ್ ಬಲಿಯಾಗಿದ್ದಾನೆ ಎಂಬ ವಿಚಾರ ತಿಳಿದು ಆತಂಕ ಉಂಟಾಗಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚಾಗಿರುವುದು ವಿಷಾದನೀಯ ಸಂಗತಿಯಾಗಿದೆ.  ಗಾಂಜಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆ ಕಠಿಣ ಕ್ರಮ ಅನುಸರಿಸಬೇಕು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
    ಹತ್ಯೆಯಾದ ಗುತ್ತಿಗೆ ಪೌರ ನೌಕರ ಸುನಿಲ್ ಕುಟುಂಬಕ್ಕೆ ಕೊರೊನಾ ವಾರಿಯರ್ಸ್‌ಗಳಿಗೆ ನೀಡುವಂತೆ ಸರ್ಕಾರ ೩೦ ಲಕ್ಷ ರು. ಪರಿಹಾರ ನೀಡಬೇಕು.ನಗರಸಭೆ ವತಿಯಿಂದ ಮೃತನ ಕುಟುಂಬಕ್ಕೆ ನಿವೇಶನ ಹಾಗೂ ಉದ್ಯೋಗ, ಜಿಲ್ಲಾಡಳಿತದಿಂದ ೨ ಎಕರೆ ಜಮೀನು ನೀಡುವಂತೆ ಸಂಸದರು ಒತ್ತಾಯಿಸಿದರು.
    ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ಪಿ. ಗಣೇಶ್‌ರಾವ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹತ್ಯೆಯಾದ ಪೌರ ನೌಕರ ಸುನಿಲ್ ಮನೆಗೆ ಸಂಸದ ನಾರಾಯಣಸ್ವಾಮಿ ಭೇಟಿ : ಕುಟುಂಬಸ್ಥರಿಗೆ ಸಾಂತ್ವಾನ

ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ಭದ್ರಾವತಿ ಜೈ ಭೀಮಾ ನಗರದ ನಿವಾಸಿ, ನಗರಸಭೆ ಗುತ್ತಿಗೆ ಪೌರ ನೌಕರ ಸುನಿಲ್ ಮನೆಗೆ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
    ಭದ್ರಾವತಿ, ಜೂ. ೧೬: ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ಜೈ ಭೀಮಾ ನಗರದ ನಿವಾಸಿ, ನಗರಸಭೆ ಗುತ್ತಿಗೆ ಪೌರ ನೌಕರ ಸುನಿಲ್ ಮನೆಗೆ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
   ಸುನಿಲ್ ಹತ್ಯೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಸಂಸದರು. ಸುನಿಲ್ ಕುಟುಂಬಸ್ಥರ ನೆರವಿಗೆ ಮುಂದಾಗುವುದಾಗಿ ಭರವಸೆ ನೀಡುವ ಜೊತೆಗೆ ವೈಯಕ್ತಿಕವಾಗಿ ೩೦ ಸಾವಿರ ರು. ನಗದು ನೀಡಿ ಸಾಂತ್ವಾನ ಹೇಳಿದರು.
   ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಮಾಡಿದರು. ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ಪಿ. ಗಣೇಶ್‌ರಾವ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಬ್ರಾಹ್ಮಣ ಜನಾಂಗದ ನಿಂದನೆ : ನಟ ಚೇತನ್ ವಿರುದ್ಧ ಕ್ರಮಕ್ಕೆ ಆಗ್ರಹ

ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ ಜನಾಂಗ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಚಿತ್ರ ನಟ ಚೇತನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಜೂ. ೧೬: ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ ಜನಾಂಗ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಚಿತ್ರ ನಟ ಚೇತನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
   ಚಿತ್ರನಟ ಚೇತನ್ ಯುಟೂಬ್, ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ್ಯದ ಬಗ್ಗೆ, ಬ್ರಾಹ್ಮಣ ಜನಾಂಗ ಹಾಗು ಪುರೋಹಿತರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ಬ್ರಾಹ್ಮಣ ಜನಾಂಗ ಸರ್ವನಾಶ ಮಾಡಬೇಕೆಂದು ಹೇಳಿದ್ದು, ಎಲ್ಲರೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಬ್ರಾಹ್ಮಣರನ್ನು ಈ ರೀತಿ ತುಚ್ಛವಾಗಿ ಅವಹೇಳನ ಮಾಡಿರುವುದು ಖಂಡನೀಯ.
    ಬ್ರಾಹ್ಮಣ ಜನಾಂಗದ ಕುರಿತು ಅವಹೇಳನ ಮಾಡುವವರಿಗೆ ಬಹಿರಂಗ ಬೆಂಬಲ ನೀಡುವುದು ಸಹ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರ ತಕ್ಷಣ ನಟ ಚೇತನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರ ಕೈಗೊಳ್ಳುವ ಕ್ರಮ ಮುಂದಿನ ದಿನಗಳಲ್ಲಿ ಬ್ರಾಹ್ಮಣ ಜನಾಂಗವನ್ನು ನಿಂದಿಸುವವರಿಗೆ ಒಂದು ಎಚ್ಚರಿಕೆಯ ಪಾಠವಾಗಬೇಕೆಂದು ಆಗ್ರಹಿಸಲಾಯಿತು.
   ಬ್ರಾಹ್ಮಣ ಸಭಾ ತಾಲೂಕು ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಉಪಾಧ್ಯಕ್ಷರಾದ ಜಿ. ರಮಾಕಾಂತ್, ಡಿ. ಸತ್ಯನಾರಾಯಣರಾವ್, ಪ್ರಧಾನ ಕಾರ್ಯದರ್ಶಿ ಜಿ. ರಮೇಶ್, ಖಜಾಂಚಿ ಕೆ. ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.