Wednesday, January 29, 2025

ವಂಶವೃಕ್ಷ ನೀಡದೆ ತೊಂದರೆ ನೀಡುತ್ತಿರುವ ಕ್ರಮ ಖಂಡಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹ

ಸುಳ್ಳು ವರದಿ ನೀಡಿರುವ ರಾಜಸ್ವ ನಿರೀಕ್ಷಕ ಸೇವೆಯಿಂದ ವಜಾಗೊಳಿಸಲು ಆಗ್ರಹ 

ಭದ್ರಾವತಿ ತಾಲೂಕಿನ ಡಿ.ಬಿ ಹಳ್ಳಿ ಗ್ರಾಮದ ಸಂಗಪ್ಪ ಎಂಬುವವರಿಗೆ ವಂಶವೃಕ್ಷ ನೀಡದೆ ತೊಂದರೆ ನೀಡುತ್ತಿರುವ ಕ್ರಮ ಖಂಡಿಸಿ ಹಾಗು ಸುಳ್ಳು ದಾಖಲೆಗಳ ಆಧಾರದ ಮೇರೆಗೆ ವಂಶವೃಕ್ಷ ನೀಡಿರುವ ರಾಜಸ್ವ ನಿರೀಕ್ಷಕನನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ತಾಲೂಕು ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಭದ್ರಾವತಿ : ತಾಲೂಕಿನ ಡಿ.ಬಿ ಹಳ್ಳಿ ಗ್ರಾಮದ ಸಂಗಪ್ಪ ಎಂಬುವವರಿಗೆ ವಂಶವೃಕ್ಷ ನೀಡದೆ ತೊಂದರೆ ನೀಡುತ್ತಿರುವ ಕ್ರಮ ಖಂಡಿಸಿ ಹಾಗು ಸುಳ್ಳು ದಾಖಲೆಗಳ ಆಧಾರದ ಮೇರೆಗೆ ವಂಶವೃಕ್ಷ ನೀಡಿರುವ ರಾಜಸ್ವ ನಿರೀಕ್ಷಕನನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ತಾಲೂಕು ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಗ್ರಾಮದ ಸರ್ವೆ ನಂ. ೭೭/೪ರಲ್ಲಿ ೩ ಎಕರೆ ೬ ಗುಂಟೆ ಜಮೀನಿನಲ್ಲಿ ೧ ಎಕರೆ ಜಮೀನು ಸಂಗಪ್ಪ ಬಿನ್ ಸಣ್ಣಪ್ಪರವರ ಹೆಸರಿನಲ್ಲಿ ಮುತ್ತಜ್ಜಿ ನಾಗಮ್ಮರವರು ಅವರ ಮಗಳಾದ ನೀಲಮ್ಮರವರಿಗೆ ಕ್ರಯಕ್ಕೆ ನೀಡಿರುತ್ತಾರೆ. ಉಳಿದ ೧ ಎಕರೆ ೧೮ ಗುಂಟೆ ಜಮೀನು ಈಗಲೂ ಸಹ ನಾಗಮ್ಮರವರ ಹೆಸರಿನಲ್ಲಿಯೇ ಇರುತ್ತದೆ. ಇದರ ವಾರಸುದಾರರು ಸಂಗಪ್ಪ ಬಿನ್ ಸಣ್ಣಪ್ಪರವರೇ ಆಗಿದ್ದು, ವಂಶವೃಕ್ಷಕ್ಕಾಗಿ ಎ.ಸಿ/ಡಿ.ಸಿ ನ್ಯಾಯಾಲಯಗಳಲ್ಲಿ ಪ್ರಕರಣ ನಡೆದು ಸ್ಥಳ ಪರಿಶೀಲನೆ ಮಾಡಿದಾಗ ಅಂದಿನ ರಾಜಸ್ವ ನಿರೀಕ್ಷಕ ಮಾನೋಜಿರಾವ್‌ರವರು ಗ್ರಾಮಸ್ಥರೆಲ್ಲರೂ ನೀಲಕ್ಕನ ತಾಯಿ ನಾಗಮ್ಮ ಇವರ ಕುಟುಂಬದ ವಾರಸುದಾರ ಸಂಗಪ್ಪ ಬಿನ್ ಸಣ್ಣಪ್ಪ ಎಂದು ತಿಳಿಸಿದ್ದು, ಅಲ್ಲದೆ ಅನೇಕ ದಾಖಲೆಗಳು ಇದ್ದರೂ ಸಹ  ಸುಳ್ಳು ವರದಿಗಳನ್ನು ಮಾಡಿರುತ್ತಾರೆಂದು ಪ್ರತಿಭಟನಾನಿರತರು ದೂರಿದರು. 
    ಈ ಸಂಬಂಧ ನಾಡಕಛೇರಿ, ತಾಲೂಕು ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು.  ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ್ದ ಉಪ ವಿಭಾಗಾಧಿಕಾರಿ ಜಿ.ಎಸ್ ಸತ್ಯನಾರಾಯಣರವರು ಶಾಲಾ ದಾಖಲೆಗಳನ್ನು ರಾಜರುಪಡಿಸಿದ್ದಲ್ಲಿ ಸಂಗಪ್ಪ ಬಿನ್ ಸಣ್ಣಪ್ಪರವರ ಕುಟುಂಬದ ವಂಶವೃಕ್ಷ ಮಾಡಿಕೊಡಿ ಎಂದು ತಹಸೀಲ್ದಾರ್/ರಾಜಸ್ವ ನಿರೀಕ್ಷಕ/ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಹಿಂದಿನ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಅಕ್ರಮ ಕಾರ್ಯ ಮುಚ್ಚಿ ಹಾಕುವ ಉದ್ದೇಶದಿಂದ ಸುಳ್ಳು ವರದಿಗಳನ್ನು ಸೃಷ್ಟಿಸಿರುತ್ತಾರೆಂದು ಆರೋಪಿಸಿದರು. 
    ಗ್ರಾಮಸ್ಥರು ಹಿಂದಿನ ತಹಸೀಲ್ದಾರ್ ನಾಗರಾಜು ಮತ್ತು ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಮತ್ತು ಉಪ ತಹಸೀಲ್ದಾರ್ ಮಂಜಾನಾಯ್ಕರವರ ಎದುರು ತಿಮ್ಮಕ್ಕ ಎಂಬ ಮಹಿಳೆ ಗ್ರಾಮದಲ್ಲಿ ವಾಸವಾಗಿರುವುದಿಲ್ಲ ಎಂದು ಸಾಕ್ಷಿ ನೀಡಿದ್ದಾರೆ. ಈ ಕುರಿತು ವಿಡಿಯೋ ಸಹ ಸಾಕ್ಷಿ ಇದೆ. ಆದರೂ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಬಡವರಿಗೆ ಮೋಸ, ವಂಚನೆ ಮಾಡಿದ್ದು, ಈತನನ್ನು ರಕ್ಷಿಸಲು ಉಳಿದ ಅಧಿಕಾರಿಗಳು ತಪ್ಪು ತಪ್ಪು ಮಾಹಿತಿಯನ್ನು ಸೇರಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ನೀಡಲು ತಡಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 
    ತಕ್ಷಣ ಮೇಲಾಧಿಕಾರಿಗಳು ತಕ್ಷಣ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಸೇವೆಯಿಂದ ವಜಾಗೊಳಿಸಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಕ್ಷಣ ನ್ಯಾಯ ದೊರಕಿಸಿ ಕೊಡಬೇಕೆಂದು ಕೋರಿದರು. 
    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರತಿಭಟನಾ ಧರಣಿ ಸತ್ಯಾಗ್ರಹ ನೇತೃತ್ವವಹಿಸಿದ್ದರು. 

ಸಂವಿಧಾನ ಸಮಾನತೆಯ ಕೊಡುಗೆ, ಮನೆ ಮನೆಗಳಲ್ಲೂ ಜಾಗೃತಿ ಮೂಡಲಿ : ಸತೀಶ್ ಜಾರಕಿಹೊಳಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಬುಧವಾರ ಭದ್ರಾವತಿ ಹಳೇನಗರದ ಶ್ರೀ ವೀರಶೈವ ಸಭಾಭವನದಲ್ಲಿ ಕ.ದ.ಸಂ.ಸ-೫೦ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಜಾಗೃತಿ ಸಮಾವೇಶ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮೈಸೂರು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ  ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನದಿಂದಾಗಿ ನಾವೆಲ್ಲರೂ ಸಮಾನತೆ ಕಾಣಲು ಸಾಧ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 
    ಅವರು ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಹಳೇನಗರದ ಶ್ರೀ ವೀರಶೈವ ಸಭಾಭವನದಲ್ಲಿ ಕ.ದ.ಸಂ.ಸ-೫೦ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 
    ಈ ದೇಶದಲ್ಲಿ ಪ್ರತಿಯೊಂದನ್ನು ಹೋರಾಟ, ಸಂಘರ್ಷದ ಮೂಲಕ ಪಡೆದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ದೇಶದ ಸಂವಿಧಾನದಿಂದಾಗಿ ನಾವೆಲ್ಲರೂ ಒಗ್ಗಟ್ಟಿನಿಂದ, ಸಮಾನತೆ ಹಾಗು ನೆಮ್ಮದಿಯಿಂದ ಬದುಕುವಂತಾಗಿದೆ. ಒಂದು ವೇಳೆ ಸಂವಿಧಾನ ರಚನೆಯಾಗದಿದ್ದಲ್ಲಿ ಈ ದೇಶದ ಜನರ ಸ್ಥಿತಿ ಕಲ್ಪಿಸಿಕೊಳ್ಳುವುದು ಅಸಾಧ್ಯವಾಗುತ್ತಿತ್ತು ಎಂದರು. 
    ಪ್ರಸ್ತುತ ನಾವುಗಳು ಸಂವಿಧಾನ ತಿಳಿದುಕೊಳ್ಳಬೇಕಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ. ಮನೆ ಮನೆಗಳಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು. 
      ಸಮಾವೇಶದ ದಿವ್ಯ ಸಾನಿಧ್ಯವಹಿಸಿದ್ದ ಮೈಸೂರು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ  ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಸಂವಿಧಾನ ಯಾಕೆ ಓದಬೇಕು ಎಂಬುದನ್ನು ಅರ್ಥಮಾಡಿಕೊಂಡಾಗ ಮಾತ್ರ ಸಂವಿಧಾನ ವಿರೋಧಿಸುವವರಿಗೆ ಉತ್ತರ ನೀಡಲು ಸಾಧ್ಯ. ಪ್ರಸ್ತುತ ಅಂಬೇಡ್ಕರ್‌ರವರ ಸಂವಿಧಾನ ಬದಲಿಸಿ ಮತ್ತೊಂದು ಸಂವಿಧಾನ ರಚಿಸುತ್ತೇವೆ ಎಂಬುವವರ ಮನಸ್ಥಿತಿಗಳನ್ನು ನಾವುಗಳು ಅರ್ಥಕೊಳ್ಳಬೇಕಾಗಿದೆ. ಮೇಲ್ವರ್ಗದವರು ಪುನಃ ಈ ದೇಶದಲ್ಲಿ ಅಸ್ಪೃಶ್ಯತೆ, ಅಸಮಾನತೆ ಹಾಗೂ ಶೋಷಣೆಯ ಬದುಕು ಎದುರು ನೋಡುತ್ತಿದ್ದಾರೆ. ಇದಕ್ಕೆ ನಾವುಗಳು ಅವಕಾಶ ನೀಡಬಾರದು. ಇನ್ನೂ ಹೆಚ್ಚು ಜಾಗೃತರಾಗಬೇಕಾಗಿದ್ದು, ಈ ಹಿನ್ನಲೆಯಲ್ಲಿ ಸಂವಿಧಾನ ಜಾಗೃತಿ ಸಮಾವೇಶಗಳು ಸಹಕಾರಿಯಾಗಿವೆ ಎಂದರು. 
    ವಿಧಾನ ಪರಿಷತ್ ಸದಸ್ಯ ಎಚ್.ಪಿ ಸುಧಾಮದಾಸ್, ಮಾಜಿ ಸಂಸದ ಚಂದ್ರಪ್ಪ, ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್, ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ, ಪ.ಜಾ ಮತ್ತು ಪಂ. ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಮುಖಂಡರಾದ ಬಿ.ಕೆ ಜಗನ್ನಾಥ್, ಎಸ್. ಕುಮಾರ್, ಬಿ.ಎಸ್ ಗಣೇಶ್, ಸಿ. ಜಯಪ್ಪ, ಕೆ.ಎ ರಾಜಕುಮಾರ್, ಈಶ್ವರಪ್ಪ, ಜಿಂಕ್‌ಲೈನ್ ಮಣಿ, ಕಾಣಿಕ್‌ರಾಜ್, ಪರಮೇಶಿ, ಎನ್ ಗೋವಿಂದ, ಎಸ್. ಉಮಾ, ಶಾಂತ, ರೇಖಾ, ಶ್ರೀಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಸಮಿತಿ ತಾಲೂಕು ಸಂಚಾಲಕ ಆರ್. ಸಂದೀಪ್ ಅಧ್ಯಕ್ಷತೆ ವಹಿಸಿದ್ದು, ಪುಷ್ಪರಾಜ್ ತಂಡದವರಿಂದ ಕ್ರಾಂತಿ ಗೀತೆ ನಡೆಯಿತು. ತಾಲೂಕು ಸಂಘಟನಾ ಸಂಚಾಲಕ ಕೆ. ಸುರೇಶ್ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಚಿನ್ನಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ಕೆ. ರಂಗನಾಥ್ ನಿರೂಪಿಸಿದರು. 
    ಸಮಾವೇಶಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆಗೆ ಸಚಿವ ಸತೀಶ್ ಜಾರಕಿಹೊಳಿ ಹಾಗು ಇನ್ನಿತರರು ಮಾಲಾರ್ಪಣೆ ಮಾಡುವ ಮೂಲಕ ಸಮಿತಿವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಜಾಗೃತಿ ಮೆರವಣಿಗೆಗೆ ಚಾಲನೆ ನೀಡಲಾಯಿತು.