ಮಂಗಳವಾರ, ಸೆಪ್ಟೆಂಬರ್ 2, 2025

ತಮ್ಮೋಜಿರಾವ್ ನಿಧನ

ತಮ್ಮೋಜಿರಾವ್     
    ಭದ್ರಾವತಿ : ತಾಲೂಕಿನ ಯರೇಹಳ್ಳಿ ಗ್ರಾಮದ ನಿವಾಸಿ ತಮ್ಮೋಜಿರಾವ್(೭೬) ಮಂಗಳವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. 
    ಪತ್ನಿ ಸುಮಿತ್ರಾಬಾಯಿ, ಹಾಲು ವಿತರಕ ಪುತ್ರ ನವೀನ್ ಹಾಗೂ ಪುತ್ರಿ ಇದ್ದಾರೆ.  ತಮ್ಮೋಜಿರಾವ್‌ರವರು ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಪಾರ್ಥಿವ ಶರೀರ ಮಂಗಳೂರಿನಿಂದ ಗ್ರಾಮಕ್ಕೆ ತರಲಿದ್ದು, ಬುಧವಾರ ಮಧ್ಯಾಹ್ನ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
    ತಮ್ಮೋಜಿರಾವ್ ನಿಧನಕ್ಕೆ ಯರೇಹಳ್ಳಿ ಗ್ರಾಮದ ಮುಖಂಡರು, ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಎಚ್.ಎಸ್ ಮಾಯಮ್ಮರಿಗೆ ರಾಜ್ಯಮಟ್ಟದ ಜನಸಿರಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಎಚ್.ಎಸ್ ಮಾಯಮ್ಮ 
    ಭದ್ರಾವತಿ: ಜನಸಿರಿ ಫೌಂಡೇಷನ್ ತಾಲೂಕಿನ ದೇವರ ನರಸೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ಎಚ್.ಎಸ್ ಮಾಯಮ್ಮರವರ ಶಿಕ್ಷಣ ಕ್ಷೇತ್ರದ ಸಾಧನೆ ಗುರುತಿಸಿ ರಾಜ್ಯಮಟ್ಟದ ಜನಸಿರಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ. 
    ಬೆಂಗಳೂರಿನ ಶಿಕ್ಷಕರ ಸದನದ ಸಭಾಂಗಣದಲ್ಲಿ ಜನಸಿರಿ ಫೌಂಡೇಷನ್ ವತಿಯಿಂದ ನಾಗಲೇಖರವರ ಸಾರಥ್ಯದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್‌ರವರ ಅಧ್ಯಕ್ಷತೆಯಲ್ಲಿ ಜರುಗಿದ ಜನಸಿರಿ ಸಾಹಿತ್ಯ ಸಮ್ಮೇಳನದಲ್ಲಿ ಮಾಯಮ್ಮರವರು ಪ್ರಶಸ್ತಿ ಸ್ವೀಕರಿಸಿದರು. 
    ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ಚಲನಚಿತ್ರ ಹಾಸ್ಯ ನಟ ಡಿಂಗ್ರಿ ನಾಗರಾಜ್, ಮಿಮಿಕ್ರಿ ಗೋಪಿ, ಮುಖ್ಯಮಂತ್ರಿ ಚಂದ್ರು ಹಾಗೂ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. 
    ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಮಾಯಮ್ಮರವರಿಗೆ ತಾಲೂಕಿನ ಶಿಕ್ಷಕ ವೃಂದದವರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ. 

ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಆಸ್ಪತ್ರೆ-ಪೊಲೀಸ್ ಠಾಣೆ ನಿರ್ಮಿಸಿ

ಡಿಎಸ್‌ಎಸ್ ನೇತೃತ್ವದಲ್ಲಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ : ಮನವಿ 

ನಿವಾಸಿಗಳಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದು, ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘ ಸಮಿತಿ(ಸಂಯೋಜಕ) ನೇತೃತ್ವದಲ್ಲಿ ಭದ್ರಾವತಿ  ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ : ನಿವಾಸಿಗಳಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದು, ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘ ಸಮಿತಿ(ಸಂಯೋಜಕ) ನೇತೃತ್ವದಲ್ಲಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಲಾಯಿತು. 
    ತಾಲೂಕಿನ ಕಸಬಾ-೨ನೇ ಹೋಬಳಿ, ಹುಣಸೆಕಟ್ಟೆ ಬಿ.ಬಿ ಮೈನ್ಸ್ ಸರ್ವೆ ನಂ.೮ ಮತ್ತು ೧೪ರಲ್ಲಿನ ಸರ್ಕಾರಿ ಜಮೀನಿನಲ್ಲಿ ಸುಮಾರು ೧೦೦ ಮನೆಗಳಿದ್ದು, ಈ ಪೈಕಿ ಕೆಲವರಿಗೆ ಮಾತ್ರ ಹಕ್ಕು ಪತ್ರ ನೀಡಿದ್ದು, ಇನ್ನೂ ಕೆಲವರಿಗೆ ಹಕ್ಕು ಪತ್ರ ವಿತರಣೆ ಬಾಕಿ ಇರುತ್ತದೆ. ಹಕ್ಕು ಪತ್ರ ನೀಡಿರುವ ಮನೆಗಳಿಗೆ ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ತಕ್ಷಣ ಕಲ್ಪಿಸಿಕೊಡುವಂತೆ ಆಗ್ರಹಿಸಲಾಯಿತು. 
    ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ಅಗತ್ಯತೆ ಹೆಚ್ಚಾಗಿದ್ದು, ಈಗಾಗಲೇ ಮೀಸಲಿರಿಸಿರುವ ಜಾಗದಲ್ಲಿ ತಕ್ಷಣ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. 
    ತಾಲೂಕು ಕಸಬಾ ಹೋಬಳಿ ಕಾಳಿಂಗನಹಳ್ಳಿ ಸರ್ವೆ ನಂ.೧ರಲ್ಲಿ ಒಟ್ಟು ೯೭ ಎಕರೆ ಜಮೀನಿದ್ದು, ಈ ಪೈಕಿ ೬೦ ಎಕರೆ ಜಮೀನಿಗೆ ಸಾಗುವಳಿ ಚೀಟಿ ಸರ್ಕಾರದಿಂದ ನೀಡಲಾಗಿದೆ. ಆದರೆ ಇದುವರೆಗೂ ಖಾತೆ ಪಹಣಿ ಮತ್ತು ಮ್ಯುಟೇಷನ್ ದಾಖಲೆ ಮಾಡಿರುವುದಿಲ್ಲ. ತಕ್ಷಣ ಸಾಗುವಳಿ ಚೀಟಿದಾರರಿಗೆ ಖಾತೆ ಪಹಣಿ ಮತ್ತು ಮ್ಯುಟೇಷನ್ ದಾಖಲೆ ನೀಡಬೇಕು. ಉಳಿದಿರುವ ೩೭ ಎಕರೆ ಜಮೀನು ಇತ್ತೀಚೆಗೆ ಅರಣ್ಯವೆಂದು ನಮೂದಿಸಿ ಸಾಗುವಳಿದಾರರಿಗೆ ವಂಚಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಿ ಸಾಗುವಳಿದಾರರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಒತ್ತಾಯಿಸಲಾಯಿತು. 
    ತಾಲೂಕಿನಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು ಸುಮಾರು ೬೦-೭೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇವರ ಪಹಣಿಗಳನ್ನು ವಜಾ ಮಾಡಿ ವಂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಜಮೀನು ಸಂಬಂಧ ಪುನರ್ ಪರಿಶೀಲಿಸಿ ಖಾತೆ ಪಹಣಿ ಮತ್ತು ಮ್ಯುಟೇಷನ್ ಮಾಡಿಕೊಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸುವಂತೆ ಕೋರಲಾಯಿತು.  
    ಒಟ್ಟಾರೆ ಜಮೀನು ಸಂಬಂಧ ತಾಲೂಕಿನಲ್ಲಿ ಇನ್ನೂ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಲಾಯಿತು. 
    ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕರಾದ ಆರ್.ಜಗದೀಶ್, ವಿರೂಪಾಕ್ಷಪ್ಪ, ರಾಜ್ಯ ಸಮಿತಿ ಸದಸ್ಯ ಚೌಡಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್, ಗಂಗಾಧರ್, ಅಣ್ಣಾದೊರೈ, ಶಿವಕುಮಾರ್, ಗಣೇಶ್ ಸೇರಿದಂತೆ ಇನ್ನಿತರ ಮುಖಂಡರು, ನಿವಾಸಿಗಳು ಪಾಲ್ಗೊಂಡಿದ್ದರು. 

ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ : ಎ.ಟಿ ರವಿ

ಭದ್ರಾವತಿ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಏರ್ಪಡಿಸಲಾಗಿದ್ದ ಜ್ಞಾನ ವಿಕಾಸ ಕಾರ್ಯಕ್ರಮ ನ್ಯಾಯವಾದಿ ಎ.ಟಿ ರವಿ ಉದ್ಘಾಟಿಸಿದರು. 
    ಭದ್ರಾವತಿ: ಸಮಾಜದಲ್ಲಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದು ನ್ಯಾಯವಾದಿ ಎ.ಟಿ ರವಿ ಹೇಳಿದರು. 
   ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಏರ್ಪಡಿಸಲಾಗಿದ್ದ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜವನ್ನು ಸ್ವಾಸ್ಥ್ಯವಾಗಿಡಲು ಹಾಗು ಮುಂದಿನ ಆದರ್ಶ ಪ್ರಜೆಗಳಾಗಿ ರೂಪಗೊಳ್ಳಲು ಮಕ್ಕಳು ಮಾದಕ ವಸ್ತುಗಳಿಂದ ದೂರವಿರುವುದರ ಜೊತೆಗೆ ದೇಶದ ಸಂವಿಧಾನದ ಆಶಯಗಳನ್ನು ಅರಿತು, ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕಿದೆ ಎಂದರು.
     ಜ್ಞಾನ ವಿಕಾಸ ಸಮನ್ವಯಧಿಕಾರಿ ನೇತ್ರಾವತಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದರೂ ಸಹ ಧರ್ಮಬೇದವಿಲ್ಲದೆ ಸರ್ವಧರ್ಮಿಯರಿಗೂ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಧ್ಯವರ್ಜನ ಶಿಬಿರ, ಪರಿಸರ ಜಾಗೃತಿಗಳಂತಹ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು, ಅದರ ಭಾಗವಾಗಿ ಜ್ಞಾನ ವಿಕಾಸ ಕಾರ್ಯಕ್ರಮ ವನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದು, ಇದರ  ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು. 
ಸರ್ಕಾರಿ ಬಾಲಿಕಾ ಫ್ರೌಡಶಾಲೆಯ ಶಿಕ್ಷಕ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಜಾನ್ಸಿ ಪ್ರಾರ್ಥಿಸಿ, ಶಿಕ್ಷಕಿ ಮಂಜುಳಾ ಸ್ವಾಗತಿಸಿ, ಸೇವಾ ಪ್ರತಿನಿಧಿ ಆರ್. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.