Wednesday, March 9, 2022

ಮಾ.೧೨ರಂದು ‘ಮಧುರ ಮಿಲನ’ ಸಮ್ಮೇಳನ

ಭದ್ರಾವತಿ ಬಂಟರ ಭವನದಲ್ಲಿ ಮಾ.೧೨ರಂದು ಆಯೋಜಿಸಲಾಗಿರುವ 'ಮಧುರ ಮಿಲನ' ಸಮ್ಮೇಳನ ಕುರಿತು ಸಮ್ಮೇಳನ ಸಮಿತಿ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್ ಮಾಹಿತಿ ನೀಡಿದರು.
    ಭದ್ರಾವತಿ, ಮಾ. ೯: ದಿ ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ಲಯನ್ಸ್ ಕ್ಲಬ್ ಡಿಸ್ಟ್ರಿಕ್-೩೧೭ಸಿ ರಿಜಿಯನ್-೭ರ ಸಮ್ಮೇಳನ 'ಮಧುರ ಮಿಲನ' ಮಾ.೧೨ರಂದು ಮಧ್ಯಾಹ್ನ ೩ ಗಂಟೆಗೆ ಜನ್ನಾಪುರ ಬಂಟರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್ ಹೇಳಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಿಜಿಯನ್-೭ರ ಅಧ್ಯಕ್ಷ ಹೆಬ್ಬಂಡಿ ಬಿ. ನಾಗರಾಜ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ರಿಜಿಯನ್-೭ರ ಪ್ರಥಮ ಮಹಿಳೆ ಕೆ.ಎಚ್ ದೀಪಶ್ರೀ ಉದ್ಘಾಟಿಸುವರು ಎಂದರು.
    ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶಿಸಿರ, ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಲಯನ್ಸ್ ಕ್ಲಬ್ ಡಿಸ್ಟ್ರಿಕ್-೩೧೭ಸಿ ಗೌರ್‍ನರ್ ಡಾ. ಎಂ.ಕೆ ಭಟ್ ಮತ್ತು ರಿಜಿಯನ್-೭ರ ಮಾರ್ಗದರ್ಶಕ ಬಿ. ದಿವಾಕರ ಶೆಟ್ಟಿ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಲಯನ್ಸ್ ಕ್ಲಬ್ ಎಲ್ಲಾ ವಿಭಾಗಗಳ ಪದಾಧಿಕಾರಿಗಳು, ರಿಜಿಯನ್ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸುವಂತೆ ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್ ಮಹೇಶ್‌ಕುಮಾರ್, ಕಾರ್ಯದರ್ಶಿ ಡಿ. ಶಂಕರಮೂರ್ತಿ, ಖಜಾಂಚಿ ವಿನೋದ್ ಗಿರಿ, ವಲಯ ಸಲಹೆಗಾರ ಜಿ.ಎಸ್ ಕುಮಾರ್, ಸಮ್ಮೇಳನ ಸಮಿತಿ ಕಾರ್ಯದರ್ಶಿ ಎ.ಎನ್ ಕಾರ್ತಿಕ್, ಖಜಾಂಚಿ ಎಂ. ಪರಮೇಶ್ವರಪ್ಪ, ಜೋನ್-೧ರ ಎ.ಎಸ್ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾ.೧೨ರಂದು ಹಳೇಯ ವಿದ್ಯಾರ್ಥಿಗಳ ಸ್ನೇಹ ಕೂಟ

    ಭದ್ರಾವತಿ, ಮಾ. ೯: ತಾಲೂಕಿನ ಕೂಡ್ಲಿಗೆರೆ ಶ್ರೀ ಹರಿಹರೇಶ್ವರ ಪ್ರೌಢಶಾಲೆಯಲ್ಲಿ ೧೯೯೨-೯೩ನೇ ಸಾಲಿನ ಹಳೇಯ ವಿದ್ಯಾರ್ಥಿಗಳ ಸ್ನೇಹ ಕೂಟ ಮಾ.೧೨ರಂದು ಬೆಳಿಗ್ಗೆ ೯ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಸ್ನೇಹ ಸಮ್ಮಿಲನ ಪ್ರೇರಣ ಹೆಸರಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಹಳೇಯ ವಿದ್ಯಾರ್ಥಿಗಳು ಮತ್ತು ಉಪಾಧ್ಯಾಯರುಗಳಿಗೆ ಸನ್ಮಾನ ನಡೆಯಲಿದೆ. ಹಳೇಯ ನೆನಪುಗಳೊಂದಿಗೆ ಒಂದೆಡೆ ಸೇರಿ ಸಂಭ್ರಮಿಸುವ ಈ ಕಾರ್ಯಕ್ರಮಕ್ಕೆ ಹಳೇಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಗೆ ಅಭಿನಂದನೆ

ನೌಕರರ ಸಲಹೆ-ಸಹಕಾರ ಕೋರಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ


ಭದ್ರಾವತಿ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿರುವ ನಾಗೇಂದ್ರಪ್ಪರವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರನ್ನು ಭೇಟಿ ಮಾಡಿ ಅಭಿನಂದಿಸಿದರು.
    ಭದ್ರಾವತಿ, ಮಾ. ೯: ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿರುವ ನಾಗೇಂದ್ರಪ್ಪರವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರನ್ನು ಭೇಟಿ ಮಾಡಿ ಅಭಿನಂದಿಸಿದರು.
    ತಾಲೂಕಿನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಮಸ್ತ ನೌಕರರ ಸಲಹೆ-ಸಹಕಾರ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಪೂರಕವಾಗಿ ಸ್ಪಂದಿಸುವಂತೆ ಮನವಿ ಮಾಡಿದರು.
    ಸಿ.ಎಸ್ ಷಡಾಕ್ಷರಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಜೊತೆಗೆ ಪ್ರಸ್ತುತ ಶಿಕ್ಷಕರಿಗೆ ನಿಗದಿತ ಸಮಯಕ್ಕೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದರು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ ರುದ್ರಪ್ಪ, ಉಪಾಧ್ಯಕ್ಷ ದಿನೇಶ್, ಸಾಹಿತಿ ಅರಳೇಹಳ್ಳಿ ಅಣ್ಣಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಯು. ಮಹದೇವಪ್ಪ, ನಿರ್ದೇಶಕ ಡಿ.ಎಸ್ ಬಸವಂತರಾವ್ ದಾಳೆ, ಸಂಘದ ಸದ್ಯಸ್ಯರಾದ ಆರ್.ಟಿ ಲೋಹಿತೇಶಪ್ಪ, ಜಾನಪದ ಕಲಾವಿದ ಶಿಕ್ಷಕ ರೇವಣಪ್ಪ, ಸಿಆರ್‌ಪಿ ಚನ್ನಪ್ಪ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.

ಇಕೋ-ಕ್ಲಬ್ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ವತಿಯಿಂದ ಕೇಂದ್ರ ಸರ್ಕಾರದ ಸ್ವಚ್ಛತಾ ಕ್ರಿಯಾ ಯೋಜನೆಯಡಿಯಲ್ಲಿ ಇಕೋ-ಕ್ಲಬ್ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಬುಧವಾರ ಭದ್ರಾವತಿ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ(ಬಿಆರ್‌ಸಿ) ಆವರಣದಲ್ಲಿ ಆಯೋಜಿಸಲಾಗಿತ್ತು.    
    ಭದ್ರಾವತಿ, ಮಾ. ೯: ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ವತಿಯಿಂದ ಕೇಂದ್ರ ಸರ್ಕಾರದ ಸ್ವಚ್ಛತಾ ಕ್ರಿಯಾ ಯೋಜನೆಯಡಿಯಲ್ಲಿ ಇಕೋ-ಕ್ಲಬ್ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಬುಧವಾರ ನಗರದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ(ಬಿಆರ್‌ಸಿ) ಆವರಣದಲ್ಲಿ ಆಯೋಜಿಸಲಾಗಿತ್ತು.
    ತಾಲೂಕಿನ ಇಕೋ ಕ್ಲಬ್ ಶಾಲೆಗಳ ೮ ಮತ್ತು ೯ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದರು.
    ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಶಕ್ತಿ/ಇಂಧನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಪ್ರಬಂಧ ಸ್ಪರ್ಧೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಆಯೋಜಿಸಲಾಗಿತ್ತು.
    ಸ್ಪರ್ಧೆಯ ನೋಡಲ್ ಅಧಿಕಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಪರ್ವೀಜ್ ಅಹಮದ್ ಸ್ವಾಗತಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮನ್ಸೂರ್ ಅಹಮದ್ ವಂದಿಸಿದರು. ಶಿಕ್ಷಣ ಸಂಯೋಜಕ ರವಿಕುಮಾರ್ ಹಾಗು ಶಿಕ್ಷಕರು ಮತ್ತು ಕಛೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದದರು.

ಅನಾರೊಗ್ಯದಿಂದ ಅಂಗ ವೈಕಲ್ಯಕ್ಕೆ ತುತ್ತಾಗಿರುವ ಬಾಲಕನಿಗೆ ಸರ್ಕಾರದಿಂದ ವೇತನ ಮಂಜೂರಾತಿ

ಬಡ ಕುಟುಂಬಕ್ಕೆ ನೆರವಾಗಿ ಮಾನವೀಯತೆ ಮೆರೆದ ಸಮಾಜ ಸೇವಕ ಇಬ್ರಾಹಿಂ ಖಾನ್


ಭದ್ರಾವತಿ ಹಳೇನಗರದ ಖಾಜಿ ಮೊಹಲ್ಲಾ ನಿವಾಸಿ ಜಾಫರ್ ಮೌಲಾನಾರವರ ಪುತ್ರ ಅತಾವುಲ್ಲಾ ಹಸೇನ್ ಜಾಫ್ರಿ ಅನಾರೋಗ್ಯದಿಂದ ಅಂಗ ವೈಕಲ್ಯಕ್ಕೆ ತುತ್ತಾಗಿರುವುದು.
    ಭದ್ರಾವತಿ, ಮಾ. ೯: ಅನಾರೋಗ್ಯದಿಂದ ಅಂಗವಿಕಲಗೊಂಡಿರುವ ಬಡ ಕುಟುಂಬದ ಬಾಲಕನಿಗೆ  ಸರ್ಕಾರದಿಂದ ಅಂಗವಿಕಲ ವೇತನ ಮಂಜೂರಾತಿ ಮಾಡಿಸಿಕೊಡುವ ಮೂಲಕ ಹಳೇನಗರದ ತಾಲೂಕು ಕಛೇರಿ ರಸ್ತೆ ನಿವಾಸಿ, ಸಮಾಜ ಸೇವಕ ಇಬ್ರಾಹಿಂ ಖಾನ್ ಮಾನವೀಯತೆ ಮೆರೆದಿದ್ದಾರೆ.
    ಖಾಜಿ ಮೊಹಲ್ಲಾ ನಿವಾಸಿ ಜಾಫರ್ ಮೌಲಾನಾರವರ ಪುತ್ರ ಅತಾವುಲ್ಲಾ ಹಸೇನ್ ಜಾಫ್ರಿ ಸುಮಾರು ೫ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹಲವಾರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಸಹ ಫಲಕಾರಿಯಾಗದೆ ಅಂಗ ವೈಕಲ್ಯಕ್ಕೆ ತುತ್ತಾಗಿದ್ದಾನೆ. ಈ ಹಿನ್ನಲೆಯಲ್ಲಿ ಬಡ ಕುಟುಂಬದ ನೆರವಿಗೆ ಧಾಮಿಸಿದ ಇಬ್ರಾಹಿಂ ಖಾನ್ ಬಾಲಕನಿಗೆ ಸರ್ಕಾರದಿಂದ ಅಂಗವಿಕಲ ವೇತನ ಮಂಜೂರಾತಿ ಮಾಡಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದು, ಮಂಜೂರಾತಿ ಆದೇಶ ಪತ್ರವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.
    ಅಂಗವಿಕಲ ವೇತನ ಮಂಜೂರಾತಿ ಮಾಡಿಕೊಡುವಲ್ಲಿ ಸಹಕರಿಸಿದ ತಹಸೀಲ್ದಾರ್ ಆರ್. ಪ್ರದೀಪ್, ಕಂದಾಯಾಧಿಕಾರಿ ಪ್ರಶಾಂತ್, ರಾಜಸ್ವ ನಿರೀಕ್ಷಕ ಅನಿಲ್‌ರವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕಾಯ್ದುಕೊಳ್ಳಲು ಎಲ್ಲಾ ರೀತಿಯ ಸಿದ್ದತೆ : ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ

    ಭದ್ರಾವತಿ, ಮಾ. ೯: ಕಳೆದ ಸುಮಾರು ೨ ವರ್ಷಗಳಿಂದ ಮಹಾಮಾರಿ ಕೊರೋನಾ ಪರಿಣಾಮ ಶಾಲಾ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಅದರಲ್ಲೂ ಎಸ್‌ಎಸ್‌ಎಲ್‌ಸಿ ಮಕ್ಕಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗುವಂತಾಯಿತು. ಈ ನಡುವೆ ಸರ್ಕಾರ ಪರೀಕ್ಷೆ ಸಹ ಯಶಸ್ವಿಯಾಗಿ ನಡೆಸಿತು. ಇದೀಗ ಕೊರೋನಾ ಭೀತಿ ದೂರವಾಗಿದ್ದು, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಾವುದೇ ಆತಂಕ, ಭಯವಿಲ್ಲದೆ ಯಶಸ್ವಿಯಾಗಿ ಎದುರಿಸಬೇಕೆಂಬ ಆಶಯ ಬಹುತೇಕ ವಿದ್ಯಾರ್ಥಿಗಳು ಹೊಂದಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇದೀಗ ನೂತನವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಾಗೇಂದ್ರಪ್ಪರವರು ಅತಿ ಕಡಿಮೆ ಅವಧಿಯಲ್ಲಿ ತಮ್ಮ ಕಾರ್ಯ ಕ್ಷಮತೆ ತೋರ್ಪಡಿಸಬೇಕಾಗಿದೆ.
      ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಈ ಬಾರಿ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಈಗಾಗಲೇ ಬಹುತೇಕ ಶಾಲೆಗಳಲ್ಲಿ ಪಠ್ಯ ಪುಸ್ತಕಗಳ ಬೋಧನೆ ಮುಕ್ತಾಯಗೊಂಡಿದ್ದು, ಇದೀಗ ಕೇವಲ ೧೫ ದಿನ ಬಾಕಿ ಉಳಿದಿದ್ದು, ಶಾಲಾ ಹಂತದಲ್ಲಿಯೇ ಎಲ್ಲಾ ರೀತಿಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಅಗತ್ಯವಿರುವ ಎಲ್ಲಾ ರೀತಿಯ ತಂತ್ರಗಾರಿಕೆಗಳನ್ನು ರೂಪಿಸಿಕೊಳ್ಳುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು.
    ಈಗಾಗಲೇ ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಪೋನ್ ಇನ್ ಕಾರ್ಯಕ್ರಮದ ಮೂಲಕ ಕಲಿಕೆಯಲ್ಲಿನ ಅವರ ಸಮಸ್ಯೆಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಬಗೆಹರಿಸಲಾಗುತ್ತಿದೆ. ಅಲ್ಲದೆ ಈ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ಎಲ್ಲಾ ಶಾಲೆಗಳನ್ನು ಒಟ್ಟುಗೂಡಿಸಿ ಅಯೋಜಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಹಿಂದಿನ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಆಧಾರದ ಮೇಲೆ ಹಿಂದುಳಿದಿರುವ ಶಾಲೆಗಳನ್ನು ಗುರುತಿಸಿ ಆ ಶಾಲೆಗಳಿಗೆ ಹೆಚ್ಚಿನ ಗಮನ ಹರಿಸಲಾಗುವುದು. ಈ ಎಲ್ಲಾ ಕಾರ್ಯಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಮುಂದಿನ ೨ ದಿನಗಳಲ್ಲಿ ಸಭೆ ನಡೆಸಲಾಗುವುದು ಎಂದರು.