Thursday, December 3, 2020

ರೈತ ವಿರೋಧಿ ಕೃಷಿ ಮಸೂದೆಗಳನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಲಿ : ರೈತರ ಆಗ್ರಹ

ದೆಹಲಿ ರೈತರ ಹೋರಾಟ ಬೆಂಬಲಿಸಿ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಮಸೂದೆ ಹಿಂಪಡೆಯಲು ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಗುರುವಾರ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
   ಭದ್ರಾವತಿ, ಡಿ. ೩: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಮಸೂದೆ ಹಿಂಪಡೆಯಲು ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಗುರುವಾರ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
     ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಮಾತನಾಡಿ, ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆಗಳು ದೇಶದಲ್ಲಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿವೆ. ಕೃಷಿಯನ್ನು ನಂಬಿ ಬದುಕುತ್ತಿರುವ ರೈತರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಮಸೂದೆಗಳು ಬಂಡವಾಳ ಶಾಹಿಗಳಿಗೆ ನೆರವಾಗಲಿವೆ ಎಂದು ಆರೋಪಿಸಿದರು.
   ತಕ್ಷಣ ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು. ರೈತರಿಗೆ ಅಗತ್ಯವಿರುವ ನೆರವು ಕಲ್ಪಿಸಿ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.
   ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಹಿರಿಯಣ್ಣಯ್ಯ, ಡಿ.ವಿ ವೀರೇಶ್, ರಾಮಚಂದ್ರರಾವ್, ಮೋಹನ್, ಬಸವರಾಜ, ತಿಮ್ಮಣ್ಣ, ರುದ್ರೇಶ್, ವಸಂತ, ವೀರೇಶ್,  ಆಮ್ ಆದ್ಮಿ ಪಕ್ಷದ ಎಚ್. ರವಿಕುಮಾರ್, ಜೋಸೆಫ್, ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಜನಶಕ್ತಿ ಜಿ. ರಾಜು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.    

ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಕನಕಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ

ಭದ್ರಾವತಿ ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಎಲ್ಲಾ ಧರ್ಮ, ಜಾತಿ, ಜನಾಂಗದವರೊಂದಿಗೆ ಗುರುತಿಸಿಕೊಂಡಿರುವ ಬಿ.ಕೆ ಸಂಗಮೇಶ್ವರ್‌ರವರ ರಾಜಕೀಯ ಸೇವೆಯನ್ನು ಪರಿಗಣಿಸಿ ಕನಕಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಭದ್ರಾವತಿ, ಡಿ. ೩: ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಎಲ್ಲಾ ಧರ್ಮ, ಜಾತಿ, ಜನಾಂಗದವರೊಂದಿಗೆ ಗುರುತಿಸಿಕೊಂಡಿರುವ ಬಿ.ಕೆ ಸಂಗಮೇಶ್ವರ್‌ರವರ ರಾಜಕೀಯ ಸೇವೆಯನ್ನು ಪರಿಗಣಿಸಿ ಕನಕಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ ನೀಡಲಾಗಿದೆ.
      ಶಿವಮೊಗ್ಗ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಮತ್ತು ನಗರದ ಕನಕ ಯುವಪಡೆ ವತಿಯಿಂದ ೫೩೩ನೇ ಶ್ರೀ ಕನಕದಾಸರ ಜಯಂತ್ಯೋತ್ಸವ ಮತ್ತು ೨೫ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮೋತ್ಸವದ ಅಂಗವಾಗಿ ರಾಜ್ಯಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ, ತರಬೇತಿ ಕಾರ್ಯಾಗಾರ ಹಾಗೂ ಕನಕದಾಸರ ಗೀತಾಗಾಯನ, ಹಾಲುಮತ ಸಂಸ್ಕೃತಿ, ಕನಕ ಕಲಾ ವೈಭವ, ಕನಕಶ್ರೀ ಚೇತನ ಪತಂಜಲಿ ರತ್ನ ಮತ್ತು ವಿಶ್ವಕನ್ನಡ ಕಣ್ಮಣಿ ರಾಜ್ಯ ಪ್ರಶಸ್ತಿ ಸಮಾರಂಭದಲ್ಲಿ ಶಾಸಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
    ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಕಾರ್ಯದರ್ಶಿ ಪತಂಜಲಿ ಜೆ ನಾಗರಾಜ್ ಹಾಗೂ ಕನಕ ಯುವ ಪಡೆ ಉಪಾಧ್ಯಕ್ಷ ಕೆ. ಕೇಶವ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜನ್ನಾಪುರದ ವಿವಿಧೆಡೆ ಸಿಮೆಂಟ್ ರಸ್ತೆ, ಬಾಕ್ಸ್ ಡ್ರೈನೇಜ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರದ ವಿವಿಧೆಡೆ ಶಾಸಕ ಬಿ.ಕೆ ಸಂಗಮೇಶ್ವರ್ ಸಿಮೆಂಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಭದ್ರಾವತಿ, ಡಿ. ೩: ನಗರಸಭೆ ವ್ಯಾಪ್ತಿಯ ಜನ್ನಾಪುರದ ವಿವಿಧೆಡೆ ಶಾಸಕ ಬಿ.ಕೆ ಸಂಗಮೇಶ್ವರ್ ಸಿಮೆಂಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.
      ೧.೭೦ ಕೋ.ರು ವೆಚ್ಚದಲ್ಲಿ ಜನ್ನಾಪುರ ಜಯಶ್ರೀ ವೃತ್ತದಿಂದ ಗಣಪತಿ ದೇವಸ್ಥಾನದವರೆಗೆ ಮತ್ತು ೧.೮೪ ಕೋ. ರು ವೆಚ್ಚದಲ್ಲಿ ಜನ್ನಾಪುರ ಮಹಾಗಣಪತಿ ದೇವಸ್ಥಾನದಿಂದ ಶ್ರೀ ಮಲ್ಲೇಶ್ವರ ಸಮುದಾಯ ಭವನ ಸಮೀಪದ ಶ್ರೀ ಈಶ್ವರ ದೇವಸ್ಥಾನದವರೆಗೆ ಸಿಮೆಂಟ್ ರಸ್ತೆ ನಿರ್ಮಾಣ, ೫೩ ಲಕ್ಷ ರು. ವೆಚ್ಚದಲ್ಲಿ ವೆಲೂರುಶೆಡ್‌ನಿಂದ ಜಿಂಕ್‌ಲೈನ್‌ವರೆಗೆ ಸಿವೆಂಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಹಾಗು ೧೩ ಲಕ್ಷ ರು. ವೆಚ್ಚದಲ್ಲಿ ಜನ್ನಾಪುರ ಮಹಾಗಣಪತಿ ದೇವಸ್ಥಾನದಿಂದ ಬಸವೇಶ್ವರ ಶಾಲೆವರೆಗೆ ಸಿಮೆಂಟ್ ರಸ್ತೆ ನಿರ್ಮಾಣ ಹಾಗು ೬೮ ಲಕ್ಷ ರು. ವೆಚ್ಚದಲ್ಲಿ ಜನ್ನಾಪುರ ಕೆ.ಸಿ ಬ್ಲಾಕ್‌ನಿಂದ ಹಾಲಪ್ಪಶೆಡ್‌ವರೆಗೆ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
     ಪೌರಾಯುಕ್ತ ಮನೋಹರ್, ಮುಖಂಡರಾದ ಬಾಲಕೃಷ್ಣ, ಲೋಕೇಶ್, ಚನ್ನಪ್ಪ, ಕಾಂತರಾಜ್, ಆರ್. ವೇಣುಗೋಪಾಲ್, ಆಟೊ ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.