ಭದ್ರಾವತಿಯಲ್ಲಿ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದ ವರೆಗೆ ಕಂಟೈನ್‌ಮೆಂಟ್ ವಲಯವೆಂದು ಘೋಷಿಸಲಾಗಿದ್ದು, ಶುಕ್ರವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭದ್ರಾವತಿ, ಜೂ. ೧೨: ಮಹಿಳೆಯೊಬ್ಬರಲ್ಲಿ ಗುರುವಾರ ಕೊರೋನಾ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ನಗರದ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದ ವರೆಗೆ ಕಂಟೈನ್‌ಮೆಂಟ್ ವಲಯವೆಂದು ಘೋಷಿಸಲಾಗಿದ್ದು, ಶುಕ್ರವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ವಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೈರಸ್ ಹರಡದಂತೆ ಕಟ್ಟೆಚ್ಚರ ವಹಿಸುವಂತೆ ಹಾಗೂ ನಿವಾಸಿಗಳಿಗೆ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಕಲ್ಪಿಸಿಕೊಡುವಂತೆ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಸೂಚಿಸಿದರು. ಅಲ್ಲದೆ ಜನದಟ್ಟಣೆ ಅಧಿಕವಿರುವ ತಾಲೂಕು ಕಛೇರಿ, ನ್ಯಾಯಾಲಯ ಸಂಕೀರ್ಣ, ಜೈ ಭೀಮ ನಗರ, ಸಂತೆ ಮೈದಾನ ಭಾಗಗಳಲ್ಲಿ ಪರಿಶೀಲನೆ ನಡೆಸಿದರು.
ರಸ್ತೆಯ ಎರಡು ಕಡೆ ಬ್ಯಾರಿಗೇಡ್ ಅಳವಡಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಒಟ್ಟು ೨೧ ಕುಟುಂಬಗಳಿದ್ದು, ಈ ಕುಟುಂಬಗಳ ಸದಸ್ಯರ ಮೊಬೈಲ್ ಸಂಖ್ಯೆ ಪಡೆಯಲಾಗಿದೆ. ನಗರಸಭೆ ಅಧಿಕಾರಿಗಳು ಈ ಕುಟುಂಬಗಳಿಗೆ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಪೂರೈಸಲು ಕುಟುಂಬಗಳಿಗೆ ವಾಟ್ಸಪ್ ಸಂಖ್ಯೆ ನೀಡಿದ್ದು, ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಪೂರೈಸಲಿದ್ದಾರೆ.
ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ, ನಗರವೃತ್ತ ನಿರೀಕ್ಷಕರು, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಕಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ, ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.